ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ರಂಜಾನ್‌ ಆಚರಣೆ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಮುಸ್ಲಿಮರಿಗೆ ಪವಿತ್ರ ಮಾಸ ‘ರಂಜಾನ್’. ಬೆಂಗಳೂರು ನಗರದಲ್ಲಿ ನೂರಾರು ಮಸೀದಿಗಳಿದ್ದು, ಸಂಜೆ ಇಫ್ತಾರ್‌ ಕೂಟದಲ್ಲಿ ಕನಿಷ್ಠ 100ರಿಂದ 2000ವರೆಗೆ ಜನರು ಒಟ್ಟು ಸೇರಿ ದಿನದ ಉಪವಾಸವನ್ನು ಅಂತ್ಯಗೊಳಿಸುತ್ತಾರೆ.

ಮಸೀದಿಯಲ್ಲಿ  ಇಫ್ತಾರ್‌ ಸಮಯಕ್ಕೆ ಹಣ್ಣು, ತಿಂಡಿ ಹಾಗೂ ಪಾನೀಯ ನೀಡುವುದು ಸಾಮಾನ್ಯ. ಇದಕ್ಕೆ ಬಳಸಿ ಬಿಸಾಕುವ ಪ್ಲಾಸ್ಟಿಕ್‌ ತಟ್ಟೆ, ಗ್ಲಾಸುಗಳನ್ನು ಬಳಸುತ್ತಾರೆ.  ಇದರಿಂದ  ಮಸೀದಿ ಆವರಣದಲ್ಲಿ ಕಸದ ರಾಶಿ ಹೆಚ್ಚುತ್ತಿರುವುದು ಸುಳ್ಳಲ್ಲ.

ರಂಜಾನ್‌ ಮಾಸವನ್ನು ‘ಪರಿಸರ ಸ್ನೇಹಿ’ಯನ್ನಾಗಿ ಆಚರಿಸಲು ಸಂಪಂಗಿರಾಮನಗರದ ನಾಲ್ವರು ಸ್ನೇಹಿತರು ಒಟ್ಟುಗೂಡಿ ತಮ್ಮ ಸ್ವಂತ ಹಣದಲ್ಲಿ ಶಿವಾಜಿನಗರದ ಸುತ್ತಮುತ್ತಲಿನ ಸುಮಾರು 46 ಮಸೀದಿಗಳಿಗೆ ಮರು ಬಳಕೆ ಮಾಡುವ ಪ್ಲಾಸ್ಟಿಕ್‌ ತಟ್ಟೆ, ಕಪ್‌ ಹಾಗೂ ಗ್ಲಾಸ್‌ ಸೆಟ್‌ಗಳನ್ನು ವಿತರಿಸಿದ್ದಾರೆ. 

ಎಂ.ಎಸ್‌. ಸುಫಿಯಾನ್‌,  ನವೀದ್‌ ಅಲಿ, ಶಬ್ಬೀರ್‌ ಅಹ್ಮದ್‌ ಹಾಗೂ ವಾಜೀದ್‌ ಅನ್ಸಾರಿ ದಾನಿಗಳು.

ತಂಡವು ಒಟ್ಟು ₹2 ಲಕ್ಷದ ಮೌಲ್ಯದ ಪ್ಲಾಸ್ಟಿಕ್‌ ಸೆಟ್‌ಗಳನ್ನು ಮಸೀದಿಗಳಿಗೆ ಹಂಚಿದೆ. ಈ  ನಾಲ್ವರು  ಬಾಲ್ಯ ಸ್ನೇಹಿತರಾಗಿದ್ದು, ನಗರದಲ್ಲಿ ಬೇರೆ ಬೇರೆ ಉದ್ಯಮ ನಡೆಸುತ್ತಿದ್ದಾರೆ.

‘ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ಆಗಿದೆ. ಮಸೀದಿಯಲ್ಲಿ ಇಫ್ತಾರ್‌ ಕೂಟ ಸಮಯದಲ್ಲಿ ಪ್ಲಾಸ್ಟಿಕ್‌ ಉಪಯೋಗಿಸುವುದರಿಂದ ಕಸದ ಪ್ರಮಾಣ ಹೆಚ್ಚಾಗುವುದನ್ನು ನಾವು ಪ್ರತಿ ವರ್ಷ ನೋಡುತ್ತಿದ್ದೆವು.  ಇಫ್ತಾರ್‌  ಬಳಿಕ ಉಂಟಾದ ಕಸದ ರಾಶಿಯನ್ನು ಮರುದಿನ ಬಿಬಿಎಂಪಿ ಪೌರ ಕಾರ್ಮಿಕರು ಕೊಂಡೊಯ್ಯುತ್ತಿದ್ದರು. ಹಸಿ ತ್ಯಾಜ್ಯದಿಂದಾಗಿ ಸೊಳ್ಳೆ, ನಾಯಿಗಳ ಕಾಟ ಹೆಚ್ಚಾಗುತ್ತಿತ್ತು. ಹೀಗಾಗಿ ಮಸೀದಿಗಳಲ್ಲಿ ಇಫ್ತಾರ್‌ ನಂತರ ಮರು ಬಳಕೆ ಸಾಧ್ಯವಾಗುವಂತಹ ತಟ್ಟೆ, ಗ್ಲಾಸು, ಕಪ್‌ಗಳ ಸೆಟ್‌ ನೀಡಲು ಯೋಚಿಸಿದೆವು’ ಎಂದು ಸುಫಿಯಾನ್‌ ವಿವರಿಸುತ್ತಾರೆ. 

‘ಶಿವಾಜಿನಗರದ ಒಂದು ಮಸೀದಿಯಲ್ಲಿ ಕನಿಷ್ಠವೆಂದರೂ  200 ಜನ ಇಫ್ತಾರ್‌ ಕೂಟಕ್ಕೆ ಸೇರುತ್ತಾರೆ. ಒಬ್ಬರಿಗೆ ಒಂದು ತಟ್ಟೆ, ಗ್ಲಾಸು, ಕಪ್‌ ಎಂದು ಲೆಕ್ಕ ಹಾಕಿದರೆ ನೂರು ಜನರಿಗೆ 600 ಪ್ಲಾಸ್ಟಿಕ್‌ ತ್ಯಾಜ್ಯ ಕಸದ ರಾಶಿಗೆ ಸೇರುತ್ತವೆ. ಇಲ್ಲಿನ 6 ಮಸೀದಿಗಳಲ್ಲಿ 200 ಜನರು, ಉಳಿದ ದೊಡ್ಡ ಮಸೀದಿಗಳಲ್ಲಿ 2000ದಷ್ಟು ಜನರು ಸೇರುತ್ತಾರೆ.  ನಾವು  ತಟ್ಟೆಗಳನ್ನು ವಿತರಿಸಿದ ಬಳಿಕ ಕಸದ ಪ್ರಮಾಣದಲ್ಲಿ ಭಾರಿ ಕಡಿಮೆಯಾಗಿದೆ’ ಎಂದು ತಂಡದ ಮತ್ತೊಬ್ಬ ಸದಸ್ಯ ಶಬ್ಬೀರ್‌ ಅಹ್ಮದ್‌ ಹೇಳುತ್ತಾರೆ.

ಆರಂಭದಲ್ಲಿ ವಿರೋಧ
ಪರಿಸರ ಸ್ನೇಹಿ ರಂಜಾನ್‌ ಆಚರಣೆ ಮಾಡಬೇಕೆಂಬ ತಂಡದ ಪ್ರಯತ್ನಕ್ಕೆ ಮೊದಲು ಕೊಂಚ ಮಟ್ಟಿಗೆ ವಿರೋಧ ವ್ಯಕ್ತವಾಗಿತ್ತು.  ‘ಮಸೀದಿ ಆಡಳಿತ ಮಂಡಳಿಯವರು ‘ಇದೆಲ್ಲಾ ಬೇಕಾ?’ ಎಂದು ಪ್ರಶ್ನಿಸಿದ್ದರು. 

‘ಬಳಸಿ ಬಿಸಾಕುವ ತಟ್ಟೆಗಳಿಗೆ ಮಸೀದಿ  ಸಾವಿರಾರು ರೂಪಾಯಿ ಖರ್ಚು ಮಾಡುತ್ತದೆ. ಆದರ ಬದಲಾಗಿ ಮರುಬಳಸಲು ಸಾಧ್ಯವಾಗುವ ತಟ್ಟೆ ಬಳಸಿ ಎಂದು ಮನವೊಲಿಸಲಾಯಿತು’ ಎಂದು ಸುಫಿಯಾನ್‌ ತಿಳಿಸಿದರು.

ತಂಡದ ಈ ಕಾರ್ಯಕ್ಕೆ ಬೆಂಗಳೂರು ಪೂರ್ವದ ಜಂಟಿ ಕಮಿಷನರ್‌ ಯತೀಶ್‌ ಕುಮಾರ್‌ ಹಾಗೂ ಸರ್ಫಾರಾಜ್‌ ಅವರು  ಬೆಂಬಲ ನೀಡಿದರು. ಅವರು ಎಲ್ಲಾ ಮಸೀದಿಗಳಿಗೆ ಪ್ಲಾಸ್ಟಿಕ್‌ ನಿಷೇಧಿಸುವಂತೆ ಸೂಚಿಸಿ, ಸುಫಿಯಾನ್‌ ಅವರ ತಂಡ ನೀಡುವ ತಟ್ಟೆ, ಕಪ್‌ಗಳನ್ನು ಉಪಯೋಗಿಸುವಂತೆ ಸೂಚಿಸಿದರು.

ಸಂಜೆಯೇ ಕಸ ವಿಲೇವಾರಿ
ಇಫ್ತಾರ್‌ ಕೂಟ ಆದ ಬಳಿಕ ಸಂಜೆ ಸುಮಾರು 7.30ಕ್ಕೆ ಮಸೀದಿಗಳ ಆವರಣದಿಂದ ಕಸ ವಿಲೇವಾರಿ ನಡೆಯುತ್ತದೆ.
ಬಿಬಿಎಂಪಿ ಕಸದ ಆಟೊಗಳು ಮಸೀದಿಗೆ ಬಂದು ಇಫ್ತಾರ್ ಕೂಟದ ಕಸವನ್ನು ತೆಗೆದುಕೊಂಡು ಹೋಗುತ್ತವೆ. ಈ ಆಲೋಚನೆ ಸಹ ಸುಫಿಯಾನ್ ಮತ್ತು ಅವರ ಸ್ನೇಹಿತರದು. ಅವರೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿ, ಸಂಜೆಯೇ ಕಸ ಸಾಗಿಸುವಂತೆ ವಿನಂತಿಸಿದ್ದರು.

ಸಂಜೆಯೇ ಕಸ ಸಾಗಿಸುವುದರಿಂದ ‘ಇದರಿಂದ ಆ ಪ್ರದೇಶದಲ್ಲಿ ಸೊಳ್ಳೆ, ಬೀದಿ ನಾಯಿ ಕಾಟ ಇರುವುದಿಲ್ಲ. ಮಸೀದಿ ಆವರಣವೂ ಶುಚಿಯಾಗಿರುತ್ತದೆ’ ಎಂದು ಸುಫಿಯಾನ್‌ ಹೇಳುತ್ತಾರೆ.

‘ಈಗ ಶಿವಾಜಿನಗರದ ಮಸೀದಿ ಸುತ್ತಮುತ್ತ ಕಳೆದ ವರ್ಷಕ್ಕಿಂತ ಶೇ 40–50ರಷ್ಟು ಕಸದ ಪ್ರಮಾಣ ಕಡಿಮೆಯಾಗಿದೆ’ ಎಂಬುದು ಅವರ ಸಂತಸ.
ಪ್ಲಾಸ್ಟಿಕ್‌ ಸೆಟ್‌ ಹಂಚಿದ 46 ಮಸೀದಿಗಳಿಗೆ ತಂಡದ ಸದಸ್ಯರು ಭೇಟಿ ನೀಡಿ ಪರಿಸರ ಸ್ನೇಹಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾರೆ.

ಪರಿಸರ ಸ್ನೇಹಿ ಹಬ್ಬ ಆಚರಣೆ
ಶಿವಾಜಿನಗರದಲ್ಲಿ ಕಳೆದ ಯುಗಾದಿ ಹಬ್ಬದಂದು ರಸ್ತೆ ಬದಿ ಹಾಕಿದ್ದ ಕಬ್ಬು, ಬಾಳೆ ಹಾಗೂ ಮಾವಿನ ಎಲೆ ತ್ಯಾಜ್ಯಗಳನ್ನು ಸಂಜೆ ವೇಳೆಗೆ ಸುಫಿಯಾನ್‌ ಹಾಗೂ ಅವರ ಸ್ನೇಹಿತರು ಒಂದೆಡೆ ರಾಶಿ ಹಾಕಿ ಬಿಬಿಎಂಪಿ ವಾಹನಕ್ಕೆ ತ್ಯಾಜ್ಯ ಕೊಂಡೊಯ್ಯಲು ನೆರವಾಗಿದ್ದರು.

ಇದಕ್ಕಾಗಿ ಸುಫಿಯಾನ್‌ ಅವರು ‘ಹಬ್ಬ ನಿರ್ವಹಣೆ ತಂಡ’ವೊಂದನ್ನು (ಫೆಸ್ಟಿವಲ್ ಮ್ಯಾನೇಜ್‌ಮೆಂಟ್‌ ಗ್ರೂಪ್) ರಚಿಸಿಕೊಂಡಿದ್ದಾರೆ. ಈ ತಂಡವು ಕಳೆದ ರಾಮನವಮಿಯಂದು ಶಿವಾಜಿನಗರದ ಮೂರು ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸುವಂತೆ ವಿನಂತಿಸಿಕೊಂಡಿದ್ದರು.

ಈ ಮನವಿಗೆ ಬೆಲೆ ಕೊಟ್ಟ ಶಿವಾಜಿನಗರ ಬಸ್ ನಿಲ್ದಾಣ ಸಮೀಪದ ರಾಮಾಂಜನೇಯ, ಮಾರಿಯಮ್ಮ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನಗಳ ಆಡಳಿತ ಮಂಡಳಿಗಳು ಸ್ಟೀಲ್‌ ಲೋಟ ಮತ್ತು ತಟ್ಟೆಗಳಲ್ಲಿ ಪಾನಕ, ಪ್ರಸಾದ  ವಿತರಿಸಿದರು ಎಂದು ತಂಡದ ಸದಸ್ಯರಾದ ಶಬ್ಬೀರ್‌ ಹೇಳುತ್ತಾರೆ.
ಮುಂದಿನ ಗಣೇಶೋತ್ಸವ ಹಾಗೂ ಎಲ್ಲಾ ಹಬ್ಬಗಳ  ಸಂದರ್ಭದಲ್ಲೂ ಪರಿಸರ ಸ್ನೇಹಿ ಹಬ್ಬ ಆಚರಣೆಯನ್ನು  ಪ್ರೋತ್ಸಾಹಿಸಲು ಈ ತಂಡ ಚಿಂತನೆ ನಡೆಸಿದೆ. 

ಕಸ ವಿಲೇವಾರಿಗೆ ನೆರವು
ಸುಫಿಯಾನ್‌ ಹಾಗೂ ಅವರ ಸ್ನೇಹಿತರು ಕಳೆದ ನಾಲ್ಕು ವರ್ಷಗಳಿಂದ ‘ರೆಸಿಡೆನ್ಷಿಯಲ್‌ ವೆಲ್‌ಫೇರ್ ಅಸೋಸಿಯೇಷನ್‌’ ಮೂಲಕ ಸಂಪಂಗಿರಾಮನಗರ, ಇನ್‌ಫೆಂಟ್ರಿ ರಸ್ತೆ, ಕಮರ್ಷಿಯಲ್‌ ರಸ್ತೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಜೊತೆ ಕೈ ಜೋಡಿಸಿದ್ದಾರೆ.

‘ಅಸೋಸಿಯೇಷನ್‌’ನಲ್ಲಿ ಈಗ 300ಕ್ಕೂ ಹೆಚ್ಚು ಸದಸ್ಯರಿದ್ದಾರೆ.  ಬೌರಿಂಗ್‌ ಆಸ್ಪತ್ರೆ ರಸ್ತೆ, ಕಮರ್ಷಿಯಲ್‌ ರಸ್ತೆ, ಇನ್‌ಫೆಂಟ್ರಿ ರಸ್ತೆಯ ಸುತ್ತಲಿನ 6–7  ಕಸದ ಗುಡ್ಡೆ ಹಾಕುವ ಸ್ಥಳಗಳನ್ನು ಗುರುತಿಸಿ, ಸ್ವಚ್ಛ ಮಾಡಿದ್ದಾರೆ. ‘ರೆಸಿಡೆನ್ಷಿಯಲ್‌ ವೆಲ್‌ಫೇರ್ ಅಸೋಸಿಯೇಷನ್‌’ ಬಿಬಿಎಂಪಿ ಜೊತೆ ಮನೆ ಮನೆ ಕಸ ಸಂಗ್ರಹ ಕೆಲಸಕ್ಕೂ ಕೈ ಜೋಡಿಸಿದ್ದು, ಇಲ್ಲಿನ ಜನರಿಗೆ ಕಸ ವಿಂಗಡಣೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
 
‘ನಾನು ಪ್ರತಿದಿನ ಬೆಳಗ್ಗೆ 6ರಿಂದ 7.30ರ ತನಕ ನಮ್ಮ ಬಡಾವಣೆ ಸುತ್ತ ರಾಶಿ ಬಿದ್ದಿರುವ ಕಸದ ರಾಶಿ ಬಗ್ಗೆ ಫೋಟೊ ತೆಗೆದು ಅಧಿಕಾರಿಗಳಿಗೆ ಕಳಿಸುತ್ತೇನೆ. ನಮ್ಮ ಏರಿಯಾದ ಸುತ್ತ ಕಸದ ರಾಶಿ ಕಾಣಲ್ಲ’ ಎಂದು  ಸುಫಿಯಾನ್‌ ಹೇಳುತ್ತಾರೆ.

* ವಾಟ್ಸ್‌ಆ್ಯಪ್‌ ನೆರವು
ಪರಿಸರ ಸ್ನೇಹಿ ಹಬ್ಬಗಳ ಆಚರಣೆ ಕುರಿತು ಎಂ.ಎಸ್‌. ಸುಫಿಯಾನ್‌,  ನವೀದ್‌ ಅಲಿ, ಶಬ್ಬೀರ್‌ ಅಹ್ಮದ್‌  ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ರಾಮನವಮಿ, ಯುಗಾದಿ ಸಂದರ್ಭದಲ್ಲಿ ಸಕ್ರಿಯವಾಗಿದ್ದ ಈ ತಂಡ ಇದೀಗ ‘ರಂಜಾನ್‌ ಇಕೊ ಫ್ರೆಂಡ್ಲಿ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ನಗರದ ಬೇರೆ ಬೇರೆ ಭಾಗದ ಮಸೀದಿಗಳಲ್ಲೂ ಪರಿಸರ ಸ್ನೇಹಿ ರಂಜಾನ್‌ ಕುರಿತು ಜಾಗೃತಿ ಮೂಡಿಸುತ್ತಿದೆ.


* ಶಿವಾಜಿನಗರದ ಸುತ್ತಮುತ್ತ ಮಸೀದಿಗಳಲ್ಲಿ ಸುಫಿಯಾನ್‌ ಹಾಗೂ ಅವರ ತಂಡ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಬಗ್ಗೆ ಮನವಿ ಮಾಡಿದಾಗ ಬಿಬಿಎಂಪಿ ಬೆಂಬಲ ನೀಡಿತು.

-ಯತೀಶ್‌ ಕುಮಾರ್‌
ಜಂಟಿ ಆಯುಕ್ತ, ಬಿಬಿಎಂಪಿ ಪೂರ್ವ

ಸುಫಿಯಾನ್‌ ಅವರ ಸಂಪರ್ಕ ಸಂಖ್ಯೆ: 99007 76839.

***
ಕಸ ಏನು ಮಾಡೋದು ಸಂವಾದದಲ್ಲಿ ಪಾಲ್ಗೊಳ್ಳಿ
ಬೆಂಗಳೂರಿನ ಕಸದ ಸಮಸ್ಯೆಗೆ ನಿಮ್ಮಲ್ಲಿ ಉತ್ತರವಿದೆಯೇ? ನಿಮ್ಮ ಮನೆ– ಬಡಾವಣೆಯಲ್ಲಿ ಕಸವನ್ನು ಹೇಗೆ ನಿರ್ವಹಿಸುತ್ತಿದ್ದೀರಿ?

ಕಸ ವಿಲೇವಾರಿ ಮತ್ತು ಮರುಬಳಕೆ ಬಗ್ಗೆ ಹೊಸ ಆಲೋಚನೆಗಳಿವೆಯೇ? ನಮ್ಮೊಂದಿಗೆ ಹಂಚಿಕೊಳ್ಳಿ. ವಾಟ್ಸ್‌ಆ್ಯಪ್: 9513322931,
ದೂರವಾಣಿ: 080 25880636
ಇಮೇಲ್‌: metropv@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT