ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಮಾರ್ಗ ರೂಪಿಸಿ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ರಾಮೇಶ್ವರ ಮೂಲದ ಐವರು ಮೀನುಗಾರರಿಗೆ ಶ್ರೀಲಂಕಾದ  ನ್ಯಾಯಾಲಯವೊಂದು ಮರಣದಂಡನೆ ಶಿಕ್ಷೆ ವಿಧಿಸಿರು­ವುದು ವರದಿಯಾಗಿದೆ. ಮಾದಕ ವಸ್ತುವಿನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ 2011ರಲ್ಲಿ ಇವರನ್ನು ಪಾಕ್‌ ಕೊಲ್ಲಿ ಪ್ರದೇಶದಲ್ಲಿ  ಬಂಧಿಸಲಾಗಿತ್ತು. ಭಾರತ ಮೂಲದ  ಈ ಬಂಧಿತ ಮೀನು­ಗಾ­ರರ ಮೇಲೆ ಹಿಂದೆ ಯಾವುದೇ ಕಳಂಕದ ನೆರಳಿಲ್ಲ, ಅವರು ಅಮಾಯಕರು  ಎಂದು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಜೊತೆಗೆ ಅಲ್ಲಿನ ಸುಪ್ರೀಂ ಕೋರ್ಟ್‌ಗೆ ಇದೇ 14ರ ಒಳಗೆ ಮೇಲ್ಮ­ನವಿ ಸಲ್ಲಿಸುವ ಭರವಸೆ ನೀಡಿರುವುದು ಸ್ವಾಗತಾರ್ಹ.

ಭಾರತ ಹಾಗೂ ಶ್ರೀಲಂಕಾ ನಡುವೆ ಮೀನುಗಾರರು ಅಂತರರಾಷ್ಟ್ರೀಯ ಜಲ ಗಡಿ ಉಲ್ಲಂಘಿ­ಸಿದ ಪ್ರಸಂಗಗಳು ಹಿಂದೆಯೂ ನಡೆದಿದ್ದು ಎರಡೂ ದೇಶಗಳು ಅಂಥ ಆರೋಪಿ­ಗಳನ್ನು ಬಿಡುಗಡೆ ಮಾಡಿವೆ. ಮಾತುಕತೆಗಳ ಮೂಲಕ ಇವು ಇತ್ಯರ್ಥ­ವಾಗುತ್ತಿದ್ದವು. ಆದರೆ ಪ್ರಸಕ್ತ ಮಾದಕ ವಸ್ತುಗಳ ಕಳ್ಳಸಾಗಾ­ಣಿ­ಕೆಯ ಆರೋಪ ಗಂಭೀರವಾದದ್ದು.  ಹೀಗಾಗಿ, ಭಾರತದ ಮೀನುಗಾರರ ಪರ­ವಾದ ತನ್ನ ನಿಲುವನ್ನು ಈಗಾಗಲೇ ವ್ಯಕ್ತಪಡಿಸಿರುವ ಭಾರತ, ಕಾನೂನು ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ತಮಿಳುನಾಡಿನ ಮೀನು­ಗಾರರ ಬಿಡುಗಡೆಗೆ ಪ್ರಯತ್ನ ನಡೆಸಿದೆ. ಕೇಂದ್ರ ಸರ್ಕಾರ,  ಈ ಸಂದರ್ಭದಲ್ಲಿ ಶ್ರೀಲಂಕಾದ ಮೇಲೆ ಮೃದು ಒತ್ತಡ ಹೇರುವ ಸಾಧ್ಯತೆಗಳನ್ನು ತಳ್ಳಿ­ಹಾಕು­ವಂತಿಲ್ಲ. ಜತೆಗೆ ಶ್ರೀಲಂಕಾ ಶಾಂತಿ ಬೋಧಿಸುವ ಬೌದ್ಧರ ನಾಡು ಎಂಬ ಅಂಶವೂ ಮುಖ್ಯವಾಗಬಹುದು.

ಶ್ರೀಲಂಕಾ ಮತ್ತು ಭಾರತದ ನಡುವಿನ ರಾಜಕೀಯ ಸಂಬಂಧಕ್ಕೆ ತಮಿಳು ಅಸ್ಮಿತೆಯ ಹೋರಾಟದ  ಒಂದು ಹಳೆಯ ನಂಟೂ ಇರುವುದರಿಂದ ಶಿಕ್ಷೆ ಪ್ರಕ­ರಣಕ್ಕೆ  ಅನಗತ್ಯ  ಭಾವುಕತೆ, ಉದ್ವೇಗದ ಆಯಾಮವೂ ಸೇರಬಹುದು.   ಶ್ರೀಲಂಕಾ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಈಗಾಗಲೇ ತಮಿಳು­ನಾಡಿನ ರಾಮೇಶ್ವರಂನಲ್ಲಿ ಮೀನುಗಾರರು ರಸ್ತೆ ಮತ್ತು ರೈಲು ತಡೆ ನಡೆಸಿ­ದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತಕ್ಕೆ ಅವಕಾಶವಿದ್ದೇ ಇದೆ. ಅಲ್ಲದೇ ಶ್ರೀಲಂಕಾದ ನ್ಯಾಯ ವ್ಯವಸ್ಥೆಯಲ್ಲಿ ರಾಷ್ಟ್ರಾಧ್ಯಕ್ಷರ ಕ್ಷಮಾ­ದಾನಕ್ಕೂ ಅವಕಾಶ ಇರುವುದರಿಂದ ಅಂಥ ಯಾವುದೇ ಅವಕಾಶವೂ  ಕೈತಪ್ಪಿ­ಹೋಗಲು ಬಿಡಬಾರದು. ಜತೆಗೆ ಇದನ್ನು ತಮಿಳು–ಶ್ರೀಲಂಕಾ ಅಭಿ­ಮಾನ­ಗಳ ಕಣವಾಗಿಸಿಕೊಳ್ಳಲೂ ಆಸ್ಪದ ನೀಡಬಾರದು. ಎರಡೂ ದೇಶ­ಗಳು ಇದನ್ನು ಪ್ರತಿಷ್ಠೆಯ ವಿಷಯವಾಗಿಸದೆ ನ್ಯಾಯಯುತ ಶಾಂತಿ ಸಂಧಾನ, ಪರಿಹಾರ ದಾರಿಗಳನ್ನು ಕಂಡುಕೊಳ್ಳಬೇಕು. ಅಮಾಯಕರಿಗೆ  ಶಿಕ್ಷೆ ಆಗದಂತೆ ನೋಡಿಕೊಳ್ಳಬೇಕಾದದ್ದು ಉಭಯ ರಾಷ್ಟ್ರಗಳ ಹೊಣೆಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT