ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಸಾಧ್ಯ

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಬರ ಹಾಗೂ ಸರಣಿ ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸರಳ ದಸರಾ ಆಚರಣೆಗೆ ನಿರ್ಧರಿಸಿರುವುದು ಸರಿಯಷ್ಟೇ. ಆದರೆ ಪ್ರತಿ ವರುಷವೂ ಮರುಕಳಿಸುವ ಬರಕ್ಕೆ ಶಾಶ್ವತ ಪರಿಹಾರ ಎಲ್ಲಿದೆ? ರೈತರ ಸ್ಥಿತಿ ಯಥಾಪ್ರಕಾರ ಮುಂದುವರಿಯುತ್ತಲೇ ಇದೆ. ಈ ದಿಸೆಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಕೆಲವು ಪರಿಹಾರ ಮಾರ್ಗಗಳನ್ನು ಸೂಚಿಸಿದ್ದರು. ನೀರಾವರಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಿ ಸಮಗ್ರ ನೀರಾವರಿ ನೀತಿ ರೂಪಿಸಬೇಕೆಂಬ ಆಶಯ ಅವರದು. ಅದರಲ್ಲಿಯೂ ಮಳೆನೀರು ಹಾಗೂ ಅಂತರ್ಜಲದ ಪುನರುಜ್ಜೀವನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಜಾರಿಗೊಳಿಸಬೇಕಾದ ಜರೂರಿನ ಬಗೆಗೆ ಎಚ್ಚರಿಸಿದ್ದರು. ಅವರ ಕಾಳಜಿ ಇದ್ದುದು ಶೇ 80ರಷ್ಟು ಇರುವ ಮಳೆಯಾಶ್ರಿತ ಕೃಷಿಕರ ಬಗೆಗೆ.

ಇಂಥ ಯೋಜನೆಗಳಿಗೆ ತಗಲುವ ವೆಚ್ಚವನ್ನು ಭರಿಸಲು ಕೆಲವೊಂದು ಸಲಹೆಗಳನ್ನೂ ನೀಡಿದ್ದರು. ಸರ್ಕಾರದ ವತಿಯಿಂದ ನಡೆಯುವ ಕೆಲವು ಆರಾಧನಾ ಕಾರ್ಯಕ್ರಮಗಳು ಧರ್ಮಾತೀತತೆಗೆ ಧಕ್ಕೆಯನ್ನು ತಂದೊಡ್ಡುತ್ತವೆ. ಈ ಕಾರಣಕ್ಕೆ ಅಂಥ ಕಾರ್ಯಕ್ರಮಗಳನ್ನು ನಿಲ್ಲಿಸಬಹುದು. ಪ್ರವಾಸಿ ಮಂದಿರಗಳು, ಇನ್‌ಸ್ಪೆಕ್ಷನ್ ಬಂಗ್ಲೊಗಳು, ಸರ್ಕಾರಿ ಅಧಿಕಾರಿಗಳಿಗೆ ಸುಸಜ್ಜಿತ ವಸತಿ ಗೃಹಗಳನ್ನು ಕಟ್ಟಲು ಬಳಸುವ ಹಣವನ್ನು ನೀರಾವರಿಗೆಂದು ಬಳಸುವ ಕಡೆಗೆ ಚಿಂತಿಸಿದ್ದರು. ನಮ್ಮಲ್ಲಿ ಇಂಥ ಅನೇಕ ಕಟ್ಟಡಗಳು ಅನವಶ್ಯಕವಾಗಿ ನಿರ್ಮಾಣಗೊಳ್ಳುತ್ತಲೇ ಇರುತ್ತವೆ ಎಂದು ಅವರು ಭಾವಿಸಿದ್ದರು. ಅವರ ಚಿಂತನೆಗಳ ಜಾರಿಗಾಗಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ ಕಾರ್ಯಪ್ರವೃತ್ತವಾದರೆ  ಬರಗಾಲ ನಿವಾರಣೆಗೆ ಶಾಶ್ವತ ಪರಿಹಾರೋಪಾಯಗಳನ್ನು ಕಲ್ಪಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT