ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾರ್ಥ ಸಂಚಾರ ಪ್ರಾರಂಭ

‘ನಮ್ಮ ಮೆಟ್ರೊ’: ಮಾಗಡಿ ರಸ್ತೆ– ಮೈಸೂರು ರಸ್ತೆ ಮಾರ್ಗ
Last Updated 27 ಮಾರ್ಚ್ 2015, 20:19 IST
ಅಕ್ಷರ ಗಾತ್ರ

ಬೆಂಗಳೂರು: ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗಿನ ಮಾರ್ಗದಲ್ಲಿ ‘ನಮ್ಮ ಮೆಟ್ರೊ’ ರೈಲಿನ ಪರೀಕ್ಷಾರ್ಥ ಸಂಚಾರ ಶುಕ್ರವಾರ ಪ್ರಾರಂಭವಾಯಿತು. ಈ ಮಾರ್ಗದಲ್ಲಿ ಗುರುವಾರ ನಡೆಸಿದ ಪರೀಕ್ಷಾರ್ಥ ಸಂಚಾರದ ಮೊದಲ ಯತ್ನ ಸಫಲವಾಗಿರಲಿಲ್ಲ. ತಾಂತ್ರಿಕ ತೊಂದರೆಯಿಂದಾಗಿ ಮಾರ್ಗ ಮಧ್ಯೆ ರೈಲು ನಿಂತು ಬಿಟ್ಟಿತ್ತು.

ತಾಂತ್ರಿಕ ದೋಷವನ್ನು ಸರಿಪಡಿಸಿ, ರೈಲನ್ನು ಮಧ್ಯರಾತ್ರಿ 12.30ರ ಹೊತ್ತಿಗೆ ಮೈಸೂರು ರಸ್ತೆಯ ನಾಯಂಡಹಳ್ಳಿ ನಿಲ್ದಾಣಕ್ಕೆ ಕರೆ ತರಲಾಗಿತ್ತು. ಆ ರೈಲನ್ನು ಮತ್ತೆ ಹಿಂದಿನ ನಿಲ್ದಾಣವಾದ ದೀಪಾಂಜಲಿ­ನಗರ ನಿಲ್ದಾಣಕ್ಕೆ ಓಡಿಸಿ, ಅಲ್ಲಿ ನಿಲ್ಲಿಸಲಾಗಿತ್ತು. ಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಹಾಜರುಪಡಿಸಲು ಶುಕ್ರವಾರ ಬೆಳಿಗ್ಗೆ 11ಕ್ಕೆ ದೀಪಾಂಜಲಿನಗರ ನಿಲ್ದಾಣದಿಂದ ರೈಲನ್ನು ಹೊರಡಿಸಲಾಯಿತು.

ರೈಲು 11.15ಕ್ಕೆ  ನಾಯಂಡಹಳ್ಳಿ ನಿಲ್ದಾಣ ತಲುಪಿತು. ರೈಲು ಬಂದಾಗ ನಿಗಮದ ಅಧಿಕಾರಿಗಳು, ತಂತ್ರಜ್ಞರು, ನೂರಾರು ಕಾರ್ಮಿಕರು ಹರ್ಷೋದ್ಗಾರ ವ್ಯಕ್ತಪಡಿಸಿದರು. ನಂತರ ವರದಿಗಾರರೊಂದಿಗೆ ಮಾತ­ನಾಡಿದ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ, ‘ಪ್ರಮುಖವಾದ ಈ ಮಾರ್ಗದಲ್ಲಿ ಯಾವುದೇ ಅಡೆ ತಡೆ ಇಲ್ಲದೇ ಸಂಚರಿಸಿದೆ.

ಮುಂದಿನ ಎರಡು ತಿಂಗಳ ಕಾಲ ಪರೀಕ್ಷೆ ನಡೆಸಿ, ಅಗತ್ಯ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಪೂರ್ವ ಮತ್ತು ಉತ್ತರ ಭಾಗದ ಎರಡು ಮಾರ್ಗಗಳಲ್ಲಿ ಈಗಾಗಲೇ ರೈಲು ಸಂಚಾರ ಯಶಸ್ವಿಯಾಗಿ ನಡೆದಿದೆ. ಪಶ್ಚಿಮ ಭಾಗದ ಈ ಮಾರ್ಗದಲ್ಲಿ ಆದಷ್ಟು ಬೇಗ ರೈಲು ಓಡಿಸಬೇಕಿದೆ. ದಕ್ಷಿಣ ಭಾಗದಲ್ಲಿ ನ್ಯಾಷನಲ್‌ ಕಾಲೇಜಿನಿಂದ ಪುಟ್ಟೇನಹಳ್ಳಿವರೆಗಿನ ಮಾರ್ಗದಲ್ಲಿ ಸೆಪ್ಟೆಂಬರ್‌ ವೇಳೆಗೆ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗುವುದು’ ಎಂದು ಅವರು ಹೇಳಿದರು.

ಹಿರಿಯ ರೈಲು ಚಾಲಕ ದೀನದಯಾಳು, ‘ಮೆಟ್ರೊ ರೈಲುಗಳು ಸ್ವಯಂ ಚಾಲನಾ ವ್ಯವಸ್ಥೆ ಹೊಂದಿರುವುದರಿಂದ (ನಾವು) ಚಾಲಕರು ಹೆಚ್ಚು ಕಷ್ಟಪಡಬೇಕಿಲ್ಲ. ವಿದ್ಯುತ್‌ ಪೂರೈಕೆ ಮತ್ತು ಸಿಗ್ನಲಿಂಗ್‌ ವ್ಯವಸ್ಥೆ ಸರಿಯಾಗಿದ್ದರೆ ರೈಲು ಓಡಿಸುವುದು ಆಟಿಕೆಯೊಂದಿಗೆ ಆಡಿದಂತೆ ಸುಲಭ’ ಎಂದರು.

‘ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌’ನ (ಬಿಇಎಂಎಲ್‌) ಅಧಿಕಾರಿ ಅರುಣ್‌ಪ್ರಸಾದ್‌, ‘ಒಟ್ಟು 50 ರೈಲು ಗಾಡಿಗಳನ್ನು ತಯಾರಿಸಿ, ನಿಗಮಕ್ಕೆ ಸರಬರಾಜು ಮಾಡಿದ್ದೇವೆ. ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಪ್ರಮಾಣ ಪತ್ರ ಪಡೆಯುವವರೆಗೂ ನಾವು (ಬಿಇಎಂಎಲ್‌ ಪ್ರತಿನಿಧಿಗಳು) ನಿಗಮದ ತಂತ್ರಜ್ಞರೊಂದಿಗೆ ಇರುತ್ತೇವೆ’ ಎಂದರು.

ಆಗಸ್ಟ್‌ ಅಂತ್ಯಕ್ಕೆ ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ಒಂದು ಸುರಂಗ ಸಿದ್ಧ
‘ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ಆಗಸ್ಟ್‌ ಅಂತ್ಯಕ್ಕೆ ಜೋಡಿ ಸುರಂಗದ ಪೈಕಿ ಒಂದು ಸುರಂಗದ ನಿರ್ಮಾಣ ಕಾರ್ಯ  ಪೂರ್ಣಗೊಳ್ಳಲಿದೆ’ ಎಂದು ಪ್ರದೀಪ್‌ ಸಿಂಗ್‌ ಖರೋಲಾ ಅವರು ಹೇಳಿದರು.

‘ಸಂಪಿಗೆ ರಸ್ತೆ– ಮೆಜೆಸ್ಟಿಕ್‌ ನಡುವೆ ಸುರಂಗ ನಿರ್ಮಿಸುತ್ತಿರುವ ಮಾರ್ಗರೀಟಾ ಹೆಸರಿನ ಸುರಂಗ ಕೊರೆಯುವ ಯಂತ್ರವು (ಟಿಬಿಎಂ) ಈಗಾಗಲೇ ಶೇ 70ರಷ್ಟು ಕೆಲಸವನ್ನು ಮುಗಿಸಿದೆ. 700 ಮೀಟರುಗಳಷ್ಟು ಸುರಂಗ ನಿರ್ಮಾಣ ಆಗಿದೆ. 300 ಮೀಟರುಗಳಷ್ಟು ಸುರಂಗ ನಿರ್ಮಾಣ ಆಗಬೇಕಿದೆ’ ಎಂದು ಅವರು ತಿಳಿಸಿದರು.

‘ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ ಕಡೆಗೆ ಸುರಂಗ ನಿರ್ಮಿಸುವ ಕಾರ್ಯವನ್ನು ಕಾವೇರಿ ಟಿಬಿಎಂ 15 ದಿನಗಳ ಹಿಂದೆ ಪ್ರಾರಂಭಿಸಿತು. ಈಗಾಗಲೇ 50 ಮೀಟರುಗಳಷ್ಟು ಸುರಂಗವನ್ನು ನಿರ್ಮಿಸಿದೆ. ಆಗಸ್ಟ್‌ ಅಂತ್ಯದ ಹೊತ್ತಿಗೆ ಅದು ತನ್ನ ಕಾರ್ಯವನ್ನು ಪೂರ್ಣಗೊಳಿಸಲಿದೆ.

ಸೆಪ್ಟೆಂಬರ್‌ನಲ್ಲಿ  ಸಂಪಿಗೆ ರಸ್ತೆ ಕಡೆಯಿಂದ ಸುರಂಗದ ಮೂಲಕ ನ್ಯಾಷನಲ್‌ ಕಾಲೇಜಿನ ನಿಲ್ದಾಣಕ್ಕೆ ರೈಲು ಕರೆತರಲಾಗುವುದು. ಬಳಿಕ ಅಲ್ಲಿಂದ ಪುಟ್ಟೇನಹಳ್ಳಿವರೆಗಿನ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು’ ಎಂದರು.
‘ಪೂರ್ವ– ಪಶ್ಚಿಮ ಕಾರಿಡಾರ್‌ನ ಸುರಂಗದಲ್ಲಿ ಸೆಪ್ಟೆಂಬರ್‌ನಲ್ಲಿ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ’ ಎಂದು ಅವರು ನುಡಿದರು.

ನಿಯಮಬಾಹಿರ ಹೂಡಿಕೆ: ಅಧಿಕಾರಿ ವಿರುದ್ಧ ದೂರು
‘ನಾಲ್ಕು ವರ್ಷಗಳ ಹಿಂದೆ ಅಧಿಕಾರಿಯೊಬ್ಬರು ನಿಗಮದ ಹಣವನ್ನು ನಿಯಮಬಾಹಿರವಾಗಿ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರು. ಈ ಅವ್ಯವಹಾರದಲ್ಲಿ ಕ್ರಿಮಿನಲ್‌ ಅಂಶ ಇದ್ದಂತಿದೆ. ಅವರ ವಿರುದ್ಧ ವಿಲ್ಸನ್‌ಗಾರ್ಡನ್‌ ಠಾಣೆಗೆ ಎರಡು ತಿಂಗಳ ಹಿಂದೆ ದೂರು ನೀಡಲಾಗಿದೆ’ ಎಂದು ಪ್ರದೀಪ್‌ ಸಿಂಗ್‌ ಖರೋಲಾ ಅವರು ತಿಳಿಸಿದರು.

‘ನಿಗಮದ ವಿಚಕ್ಷಣಾ ವಿಭಾಗ ಈ ಅವ್ಯವಹಾರ ಪತ್ತೆ ಮಾಡಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಹೂಡಿಕೆಯಾಗಿರುವ ಮೊತ್ತ ಮತ್ತು ಅಧಿಕಾರಿ ಹೆಸರನ್ನು ಈ ಹಂತದಲ್ಲಿ  ಹೇಳುವುದಿಲ್ಲ. ಸದ್ಯ ಆ ಅಧಿಕಾರಿ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅವರು ಹೇಳಿದರು.
‘ಮೆಟ್ರೊ ನಿಗಮದ ಅಧಿಕಾರಿಗಳ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಏನು ಆರೋಪ ಮಾಡಿದ್ದಾರೆಂಬ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ  ಉತ್ತರಿಸಿದರು.

ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗಳ ನಡುವೆ ಹೆಚ್ಚು ಜನಸಾಂದ್ರತೆ­ಯುಳ್ಳ ಬಡಾವಣೆಗಳಿವೆ. ಈ ಮಾರ್ಗದಲ್ಲಿ ಜುಲೈ­ನಲ್ಲಿ ರೈಲಿನ ವಾಣಿಜ್ಯ ಸಂಚಾರ ಆರಂಭಿ­ಸುವ ಗುರಿ ಇದೆ. - ಪ್ರದೀಪ್‌ ಸಿಂಗ್‌ ಖರೋಲಾ, ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT