ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯಲ್ಲಿ ಕೃಪಾಂಕ ನೀಡಿ!

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಇಂದು ಎಲ್ಲ ಕ್ಷೇತ್ರಗಳಲ್ಲಿ ಗುಣಮಟ್ಟ ಕುಸಿದಿದೆ. ಇದರ ಬಗ್ಗೆ ಸಂಶಯವೇ ಬೇಡ. ಇದರ ಪರಿಣಾಮ ನ್ಯಾಯಾಂಗವನ್ನೂ ಬಿಟ್ಟಿಲ್ಲ ಎಂಬುದೂ ಅಷ್ಟೇ ಸತ್ಯ. ಪ್ರಕರಣಗಳ ಶೀಘ್ರ ವಿಲೇವಾರಿ ಬಗ್ಗೆ ಮಾತನಾಡುವಾಗ ನಾವು ಗುಣಮಟ್ಟದ ನ್ಯಾಯದಾನದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಇಂದು ನ್ಯಾಯಾಂಗದ ಮೇಲಿನ ಒತ್ತಡವನ್ನು ಗಮನಿಸಿದರೆ ನ್ಯಾಯಾಧೀಶರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕೋ ಅಥವಾ ಶೀಘ್ರ ವಿಲೇವಾರಿಗೆ ಆದ್ಯತೆ ನೀಡಬೇಕೋ ಎಂಬ ಸಂದಿಗ್ಧ ದೊಡ್ಡ ಪ್ರಶ್ನೆಯಾಗಿದೆ.

ಕೆಳಹಂತದ ವ್ಯವಸ್ಥೆಯಲ್ಲಿ ಜಿಲ್ಲಾ ನ್ಯಾಯಾಧೀಶರ ಪರೀಕ್ಷೆಗಳಲ್ಲಿ ಹೆಚ್ಚಿನವರು ಉತ್ತೀರ್ಣರಾಗುತ್ತಿಲ್ಲ ಎಂಬ ಕೊರಗನ್ನು ಗಮನಿಸಿದರೆ ಅದಕ್ಕೆ, ಪರೀಕ್ಷಾ ಪದ್ಧತಿಯಲ್ಲಿ ಒಂದಿಷ್ಟು ಔದಾರ್ಯ ಬೆಳೆಸಿಕೊಳ್ಳಬೇಕೇನೋ ಅನ್ನಿಸುತ್ತದೆ. ಮೊದಲು ಜಿಲ್ಲಾ ನ್ಯಾಯಾಧೀಶರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇಂದು ಇವರನ್ನೆಲ್ಲ ಪರೀಕ್ಷೆ ಮೂಲಕ ಆರಿಸಲಾಗುತ್ತಿದೆ. ಈ ಪರೀಕ್ಷೆಗಳು ಸಂಪೂರ್ಣ ಮುಕ್ತ ಹಾಗೂ ಕಟ್ಟುನಿಟ್ಟಿನ ಮಾನದಂಡಗಳಿಂದ ನಡೆಯುತ್ತಿವೆ.

ಪರೀಕ್ಷೆ ಬರೆಯುವವರೆಲ್ಲ ಪ್ರಾಕ್ಟೀಸ್ ಮಾಡುವ ವಕೀಲರೇ ಆಗಿರುವುದರಿಂದ ಅವರಲ್ಲಿ ಕೆಲವರು ಕ್ರಿಮಿನಲ್ ಪ್ರಕರಣಗಳಲ್ಲಿ ಮತ್ತೆ ಕೆಲವರು ಸಿವಿಲ್‌ ಪ್ರಕರಣಗಳಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಿರುತ್ತಾರೆ. ಹೀಗಾಗಿ ಸಾಕಷ್ಟು ಅಭ್ಯರ್ಥಿಗಳು ತಮ್ಮ ಇಷ್ಟದ ವಿಷಯಗಳ ಹೊರತಾಗಿ ಇನ್ನಿತರ ವಿಷಯಗಳಲ್ಲಿ ಕಡಿಮೆ ಅಂಕ ತೆಗೆಯುವುದು ಸಾಮಾನ್ಯ ಸಂಗತಿ. ನಿರೀಕ್ಷಿತ ಅಂಕಗಳಿಗೆ ತುಂಬಾ ಹತ್ತಿರದಲ್ಲಿ  ಇರುವ ಅಭ್ಯರ್ಥಿಗಳಿಗೆ ಸರಾಸರಿ ಮಾನದಂಡದಲ್ಲಿ 5ರಿಂದ 10 ಕೃಪಾಂಕ ನೀಡುವ ಮೂಲಕ ಈ ಫಲಿತಾಂಶವನ್ನು ಸುಧಾರಿಸಬಹುದು.

ಪ್ರತಿ ಬಾರಿಯೂ ನಾವು ನ್ಯಾಯಮೂರ್ತಿಗಳ ಕೊರತೆ ಬಗ್ಗೆ ಹಳೆಯ ಮಾತುಗಳನ್ನೇ  ಪುನರುಚ್ಚರಿಸಬೇಕಾಗಿದೆ. ಕೇವಲ ಖಾಲಿ ಸ್ಥಾನಗಳನ್ನು ತುಂಬುತ್ತಿಲ್ಲ ಎಂಬ ಕೊರಗಿನಂತೆಯೇ, ಕಾಲಕಾಲಕ್ಕೆ ಬಡ್ತಿ ಹೊಂದಬೇಕಾದವರೂ ಬಡ್ತಿ ಹೊಂದುತ್ತಿಲ್ಲ. ಜನಸಾಮಾನ್ಯರಲ್ಲಿ ಇಂದಿಗೂ ಯಾರಾದರೂ ಕೋರ್ಟ್‌ ಮೆಟ್ಟಿಲು ಹತ್ತಿದರೆ ಅವರ ಕತೆ ಮುಗಿಯಿತು ಎಂಬಂತಹ ಭಯದ ಭಾವನೆ ಉಳಿದಿದೆ. ನ್ಯಾಯಾಧೀಶರ ಕೊರತೆಯ ಜೊತೆಜೊತೆಗೇ ಕೋರ್ಟ್‌ನಲ್ಲಿ ಪ್ರಕರಣಗಳು ಬೇಗ ಮುಗಿಯುತ್ತಿಲ್ಲ ಎಂಬುದಕ್ಕೆ ವಕೀಲರನ್ನೂ ದೂಷಿಸುವುದು ಅಷ್ಟೊಂದು ಸರಿ ಅಲ್ಲ. ಈ ದೂರಿಗೆ ಅನೇಕ ಮುಖಗಳಿವೆ.  

ಹಿಂದೆ ಅಕ್ಷರಸ್ಥರ ಸಂಖ್ಯೆ ಕಡಿಮೆ ಇತ್ತು. ಅವರು ಅನ್ಯಾಯಗಳನ್ನು ಮೌನವಾಗಿ ಸಹಿಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಅಕ್ಷರಸ್ಥರ ಸಂಖ್ಯೆ ಜಾಸ್ತಿ ಆಗಿದೆ. ಕಾನೂನಿನ ಅರಿವು ಎಲ್ಲೆಡೆ ಇದೆ. ಯಾರೇ ಆಗಲಿ ತಮ್ಮ ಹಕ್ಕುಗಳನ್ನು ದನಿಯೆತ್ತಿ ಕೇಳುವ, ಸಾಂವಿಧಾನಿಕವಾಗಿ ತಮಗೆ ಕೊಡಮಾಡಿರುವ ಗೌರವಗಳೊಂದಿಗೆ ಬದುಕುವ ಇರಾದೆ ಹೊಂದಿದ್ದಾರೆ. ಹೀಗಾಗಿ ಕೋರ್ಟ್‌ಗಳಲ್ಲಿನ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇವೆಲ್ಲಾ ದೇಶದ ಪ್ರಗತಿಯ ಸಂಕೇತ.

ಒಂದು ದೇಶವು ಚೆನ್ನಾಗಿದೆ ಎಂಬುದನ್ನು ಅಲ್ಲಿನ ಶ್ರೀಮಂತರ ಸಂಖ್ಯೆಯಿಂದ ಅಳೆಯುವ ಬದಲಿಗೆ ಅಲ್ಲಿನ ಸುಶಿಕ್ಷಿತರು ಹಾಗೂ ಕಾನೂನಿನ ಅರಿವು ಹೊಂದಿದವರ ಸಂಖ್ಯೆಯಿಂದ ತಿಳಿಯಬೇಕು. ಕ್ರಿಮಿನಲ್‌ ಪ್ರಕರಣಗಳನ್ನು ಬಗೆಹರಿಸಲು ತ್ವರಿತ ವಿಲೇವಾರಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದ ಮೇಲೆ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಆದರೆ ಅದೇ ರೀತಿ ಸಿವಿಲ್‌ ಪ್ರಕರಣಗಳಲ್ಲಿ ಆಗುತ್ತಿಲ್ಲ. ಹೈಕೋರ್ಟ್‌ಗಳಲ್ಲಂತೂ ಸಿವಿಲ್‌ ಪ್ರಕರಣಗಳು ಬೇಗನೇ ವಿಲೇವಾರಿ ಆಗುತ್ತಿಲ್ಲ.

ಅಂತಿಮವಾಗಿ ಇದರಿಂದೆಲ್ಲ ಕಕ್ಷಿದಾರರಿಗೇ  ತೊಂದರೆ. ಈ ದಿಸೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳನ್ನು ತಾತ್ಕಾಲಿಕ ಎಂಬಂತೆ ಅಡ್‌ಹಾಕ್‌ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಇದಕ್ಕೆ ಸಂವಿಧಾನದ ಅನುಚ್ಛೇದ 224 ಅವಕಾಶ ಮಾಡಿಕೊಟ್ಟಿದೆ. ಅಂತೆಯೇ ಹೆಚ್ಚುವರಿಯಾಗಿ ಸಂಜೆ ನ್ಯಾಯಾಲಯಗಳನ್ನೂ ಸ್ಥಾಪನೆ ಮಾಡುವುದರಿಂದ ಪ್ರಕರಣಗಳ ವಿಲೇವಾರಿ ಶೀಘ್ರಗತಿಯಲ್ಲಿ ನೆರವೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT