ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯ ಆತಂಕದಲ್ಲೂ ಮೂಡಿದ ಸಿನಿಮಾ ಪ್ರೀತಿ

Last Updated 4 ಮೇ 2016, 19:30 IST
ಅಕ್ಷರ ಗಾತ್ರ

‘ನಾನು ಎಲ್ಲೆ ಇದ್ರೂ ನೀನು ಹುಡ್ಕೊಂಡು ಬಂದು ಮದ್ವಿ ಆಗ್ಬೇಕು’ –ರಾಮ ರೆಡ್ಡಿ ನಿರ್ದೇಶನದ ಅಂತರರಾಷ್ಟ್ರೀಯ ಮನ್ನಣೆ ಪಡೆದ ‘ತಿಥಿ’ ಸಿನಿಮಾದ ದೃಶ್ಯವೊಂದರಲ್ಲಿ ‘ಕಾವೇರಿ’ ಪಾತ್ರ ಹೇಳಿದ ಮಾತಿದು.

ಇನ್ನೇನು ಕಟ್ಟೆ ಒಡೆಯುವಂತಿರುವ ಕೆಂಪಡರಿದ ಕಣ್ಣುಗಳು, ಸಣ್ಣಗೆ ಕಂಪಿಸುವ ತುಟಿಗಳು, ದುಗುಡ ತುಂಬಿದ ಮುಖದ ಆ ಹುಡುಗಿ ಅಪ್ಪಣೆಯೋ, ವಿನಂತಿಯೋ ಸುಲಭಕ್ಕೆ ಗೊತ್ತಾಗದ ಧ್ವನಿಯಲ್ಲಿ ಅಭಿಗೆ ಆಡುವ ಆ ಮಾತು ಸಿನಿಮಾ ಮುಗಿದ ನಂತರವೂ ಪ್ರೇಕ್ಷಕನ ಮನಸಲ್ಲಿ ಗುಯ್‌ಗುಡುತ್ತಿರುತ್ತದೆ.

ತಮ್ಮ ಮೊದಲ ಚಿತ್ರದಲ್ಲಿಯೇ ಬೆರಗು ಹುಟ್ಟುವಷ್ಟು ಪರಿಣಾಮಕಾರಿಯಾಗಿ ನಟಿಸಿದ ಈ ಹುಡುಗಿಯ ಹೆಸರು ಪೂಜಾ ಎಸ್‌.ಎಂ. ಹಾವೇರಿಯ ರಾಣೆಬೆನ್ನೂರಿನ ಇವರು ಪಿಯುಸಿಯವರೆಗೂ ಅಲ್ಲಿಯೇ ಓದಿದವರು. ನಂತರ ಬಿಸಿಎ ಮಾಡಲಿಕ್ಕೆಂದು ಮೈಸೂರಿಗೆ ಬಂದರು.

ಪೂಜಾ ಅವರಿಗೆ ನಟನೆಯ ಗೀಳು ಹತ್ತಿದ್ದು ಗೆಳತಿ ಪ್ರಿಯಾ ಅವರಿಂದ. ಬಿಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದಾಗ ಗೆಳತಿಯೊಟ್ಟಿಗೆ ಧಾರಾವಾಹಿಯ ಆಡಿಶನ್‌ ಒಂದಕ್ಕೆ ಹಾಜರಾಗಿದ್ದರು. ಅದರಲ್ಲಿ ಆಯ್ಕೆಯಾದರೂ ಅಕಸ್ಮಾತ್‌ ಆಗಿ ಆ ಧಾರಾವಾಹಿಯೇ ನಿಂತುಹೋಯಿತು. ಅದೇ ಸಮಯದಲ್ಲಿ ಸ್ನೇಹಿತರ ಮೂಲಕ ‘ತಿಥಿ’ ಸಿನಿಮಾಕ್ಕೂ ಕಲಾವಿದರ ಆಯ್ಕೆ ನಡೆಯುತ್ತಿರುವುದು ಗೊತ್ತಾಗಿ ಅಲ್ಲಿಗೂ ಹಾಜರಾದರು.

ಹೀಗೆ ‘ತಿಥಿ’ಯಲ್ಲಿ ನಟಿಸುವ ಅವಕಾಶ ಒದಗಿಬಂದಿದ್ದು. ಕ್ಯಾಮೆರಾ ಎದುರಿಗೆ ನಿಂತು ಯಾವುದೇ ಅನುಭವ ಇಲ್ಲದಿದ್ದರೂ ಪೂಜಾಗೆ ತಾನು ನಟಿಸಬಲ್ಲೆ ಎಂಬ ಭಂಡ ಧೈರ್ಯ ಇತ್ತು.

ಈ ಚಿತ್ರದಲ್ಲಿ ಅವರು ನಿರ್ವಹಿಸಿದ ಕಾವೇರಿ ಪಾತ್ರ ಉತ್ತರ ಕರ್ನಾಟಕದ್ದು. ಪೂಜಾ ಕೂಡ  ಉತ್ತರ ಕರ್ನಾಟಕದವರಾಗಿದ್ದರಿಂದ ಭಾಷೆ ಬಳಕೆ ಸುಲಭವಾಗುತ್ತದೆ ಎಂಬ ಕಾರಣವೂ ಈ ಪಾತ್ರಕ್ಕೆ ಅವರು ಆಯ್ಕೆಯಾಗಲು ಕಾರಣವಾಯಿತು.

ಸಿನಿಮಾಕ್ಕೆ ಆಯ್ಕೆಯಾಗಿದ್ದರೂ ಚಿತ್ರೀಕರಣ ಪ್ರಾರಂಭವಾಗಿದ್ದು ಎಂಟು ತಿಂಗಳ ನಂತರ. ‘ನಾನು ಕಾವೇರಿ ಪಾತ್ರಕ್ಕೆ ಆಯ್ಕೆಯಾದ ಕೆಲವೇ ದಿನಗಳಲ್ಲಿ ನನಗೆ ಆ್ಯಕ್ಸಿಡೆಂಟ್‌ ಆಯಿತು. ಆದ್ದರಿಂದ ಚಿತ್ರೀಕರಣ ಮುಂದೂಡಬೇಕಾಯ್ತು. ನಂತರ ನನ್ನ ಪರೀಕ್ಷೆ ಇತ್ತು. ಅದಕ್ಕಾಗಿ ಮತ್ತೆರಡು ತಿಂಗಳು ಚಿತ್ರೀಕರಣದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಆದರೆ ಇದಕ್ಕೆಲ್ಲ ಏನೂ ಬೇಸರಿಸಿಕೊಳ್ಳದೇ, ರಾಮ ರೆಡ್ಡಿ ಮತ್ತು ಈರೇ ಗೌಡ ಇಬ್ಬರೂ ಆ ಪಾತ್ರಕ್ಕೆ ನಾನೇ ಬೇಕು ಎಂದು ನಿಶ್ಚಯಿಸಿ ಕಾದು ಅವಕಾಶ ಕೊಟ್ಟರು’ ಎಂದು ಅವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಹಾಗೇ ಪೂಜಾ ನೇರವಾಗಿ ಚಿತ್ರೀಕರಣಕ್ಕೆ ತೊಡಗಿಕೊಳ್ಳಲಿಲ್ಲ. ‘ತಿಥಿ’ ಸಿನಿಮಾದಲ್ಲಿ ಬರುವ ಉತ್ತರ ಕರ್ನಾಟಕದ ಪಾತ್ರಗಳು ನಿಜಜೀವನದಲ್ಲಿಯೂ ಅದೇ ಕೆಲಸದಲ್ಲಿ ತೊಡಗಿಕೊಂಡಿರುವವರು. ಹಾಗಾಗಿ ಅವರ ಜನಜೀವನ ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂದು ಚಿತ್ರೀಕರಣಕ್ಕೂ ಮುನ್ನ ಪೂಜಾ ಅವರನ್ನು ಹದಿನೈದು ದಿನಗಳ ಕಾಲ ಅವರೊಂದಿಗೆ ಬೆರೆಯಲು ಅವಕಾಶ ನೀಡಲಾಯಿತು.

ಹಾಗೆಯೇ ಪ್ರತಿ ಶಬ್ದ– ವಾಕ್ಯದ ಕುರಿತೂ ಚಿತ್ರದ ಸಂಭಾಷಣೆಕಾರ ಈರೇಗೌಡ ಅವರು ತಿಳಿಹೇಳುತ್ತಿದ್ದರು. ‘ಇಷ್ಟು  ಕಷ್ಟಪಟ್ಟಿದ್ದರಿಂದಲೇ ಚೆನ್ನಾಗಿ ನಟಿಸಲು ಸಾಧ್ಯವಾಗಿರುವುದು’ ಎನ್ನುತ್ತಾರೆ ಪೂಜಾ.

‘ತಿಥಿ’ ಸಿನಿಮಾದಲ್ಲಿ ನಟಿಸುವಾಗ ಆಗಿನ್ನೂ ಬಿಸಿಎ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಅವರ ಶೈಕ್ಷಣಿಕ ಜೀವನಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ನೋಡಿಕೊಂಡಿದ್ದನ್ನೂ ಅವರು ಸ್ಮರಿಸಿಕೊಳ್ಳುತ್ತಾರೆ.

‘ಪ್ರತಿದಿನ ಮುಂಜಾನೆ ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು.  ಸಂಜೆ ಕರೆದುಕೊಂಡು ಬಂದು ಚಿತ್ರೀಕರಣ ನಡೆಸುತ್ತಿದ್ದರು. ಚಿತ್ರೀಕರಣದ ಸ್ಥಳದಲ್ಲಿಯೇ ಬಿಡುವಿನಲ್ಲಿ ಕಾಲೇಜು ಅಸೈನ್‌ಮೆಂಟ್‌ಗಳನ್ನೆಲ್ಲ ಬರೆಯುತ್ತಿದ್ದೆ. 

ಅಲ್ಲಿಯೇ ಕುಳಿತು ಓದುತ್ತಿದ್ದೆ. ಅದಕ್ಕೆಲ್ಲಾ ಯಾವುದೇ ರೀತಿಯ ಅಡ್ಡಿ ಇರುತ್ತಿರಲಿಲ್ಲ’ ಎನ್ನುವ ಪೂಜಾ ಅವರ ಶಿಕ್ಷಣಕ್ಕೆ ರಾಮ ರೆಡ್ಡಿ ಅವರ ತಂದೆ ತಾಯಿ ತುಂಬಾ ಸಹಾಯ ಮಾಡಿದ್ದಾರೆ. ಚಿತ್ರೀಕರಣದ ವೃತ್ತಿಯಾಚೆಯೂ ಸಿನಿಮಾದ ನಟರೊಂದಿಗೆ– ಪಾತ್ರಗಳೊಂದಿಗೆ ಬೆಳೆದ ಅನನ್ಯ ಸಂಬಂಧವೂ ಪೂಜಾ ಅವರಿಗೆ ಹೊಸ ಅನುಭವ ನೀಡಿದೆ.

‘ಚಿತ್ರೀಕರಣ ನಡೆದಿದ್ದು ಬ್ಯಾಡರಹಳ್ಳಿಯಲ್ಲಿ. ಆಗ ನಾನು ಅಲ್ಲಿಯೇ ಈರೇಗೌಡರ ಮನೆಗೆ ಶಿಫ್ಟ್‌ ಆಗಿಬಿಟ್ಟೆ. ಅಲ್ಲಿನ ಜನರು ತುಂಬ ಚೆನ್ನಾಗಿ ನೋಡಿಕೊಂಡರು. ಅಲ್ಲದೇ ಪಾತ್ರಗಳೊಂದಿಗೂ ಅಷ್ಟೇ ಒಳ್ಳೆಯ ಬಾಂಧವ್ಯ ಬೆಳೆಯಿತು. ಚಿತ್ರೀಕರಣದಲ್ಲಿ ಗಡ್ಡಪ್ಪನ ಜತೆ ಆಡುತ್ತಿದ್ದ ಹುಲಿ–ಕುರಿ ಆಟ ಅದರ ನಂತರವೂ ಮುಂದುವರಿಯುತ್ತಿತ್ತು.

ಹಾಗೆಯೇ ನಮ್ಮ ಸಂಬಂಧವೂ ಚಿತ್ರೀಕರಣದ ಆಚೆಗೂ ವಿಸ್ತರಿಸಿದೆ’ ಎನ್ನುವ ಪೂಜಾ ಅವರಿಗೆ ಮುಂದೆಯೂ ನಟನಾ ಕ್ಷೇತ್ರದಲ್ಲಿಯೇ ತೊಡಗಿಕೊಳ್ಳಬೇಕು ಎಂಬ ಹಂಬಲವಿದೆ.  ‘ತಿಥಿ’ ಸಿನಿಮಾ ನೀಡಿರುವ ಅನುಭವ ಅವರ ಕನಸಿಗೆ ಆತ್ಮವಿಶ್ವಾಸದ ಗರಿಯನ್ನೂ ಮೂಡಿಸಿದೆ. ‘ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತ ಅಭಿನಯಿಸುತ್ತೇನೆ’ ಎನ್ನುವ ಅವರ ಕಣ್ಣಲ್ಲಿ ಅವಕಾಶಗಳ ನಿರೀಕ್ಷೆ ಎದ್ದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT