ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ರಾಜಕಾರಣ ಅಗತ್ಯ

ಸಿಪಿಐನ ಡಾ.ಸಿದ್ದನಗೌಡ ಪಾಟೀಲ ಸಲಹೆ
Last Updated 29 ಮೇ 2016, 20:21 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಹಿಡಿದು ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದು, ಇದರ ವಿರುದ್ಧ ಎಲ್ಲ ಎಡಪಕ್ಷಗಳೂ ಒಟ್ಟಾಗಿ ಜನಾಂದೋಲನದ ಮೂಲಕ ರಾಜಕೀಯ ಪರ್ಯಾಯ ವ್ಯವಸ್ಥೆ ರೂಪಿಸಬೇಕು’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ ಸಲಹೆ ನೀಡಿದರು.

ಎಡಪಕ್ಷಗಳ ಜಂಟಿ ಸಮಿತಿಯು ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪ್ರಚಾರಾಂದೋಲನ’ದ ಅಂಗವಾಗಿ ಏರ್ಪಡಿಸಿದ್ದ ‘ಜಿಲ್ಲಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರಿಗೆ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಸಂಬಂಧ ನಾಶ ಮಾಡುವ ಕಲೆ ತಿಳಿದಿದೆ. ಈ ಕೆಲಸವನ್ನು ಅವರು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದರು. ಅದೇ ಕೆಲಸವನ್ನು ಈಗ ಪ್ರಧಾನಿಯಾಗಿ ವಿಸ್ತರಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ ಮರ್ಯಾದಾ ಹತ್ಯೆಗಳು ನಡೆಯುತ್ತಿವೆ.

ಇದರ ಬಗ್ಗೆ ಸಂಘ ಪರಿವಾರವು ಚಕಾರ ಎತ್ತುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು. ‘ದೇಶದ ಗೃಹ ಕೈಗಾರಿಕೆಗಳು, ಕೃಷಿ ಕ್ಷೇತ್ರದ ನಾಶಕ್ಕೆ ಪ್ರಧಾನಿ ಮುಂದಾಗಿದ್ದಾರೆ. 

ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಶದ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಹೊರಟಿದ್ದಾರೆ. ಅದೃಷ್ಟವಶಾತ್ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸಿಗದೆ ಸುಗ್ರೀವಾಜ್ಞೆ ಜಾರಿಯಾಗಿಲ್ಲ’ ಎಂದರು.

ಸಿದ್ದರಾಮಯ್ಯ ಹೊರತಲ್ಲ: ಮೂರು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕರು, ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಸಮಸ್ಯೆಯನ್ನು  ಆಲಿಸಿಲ್ಲ. ಇವರು ಬಿಜೆಪಿಗಿಂತ ಹೇಗೆ ಭಿನ್ನರು ಎಂದು ಪ್ರಶ್ನಿಸಿದ ಅವರು, ಬಡವರು, ದಲಿತರು, ರೈತರು, ಶ್ರಮಿಕರ ಪರ ಕೆಲಸ ಮಾಡದೆ ಇದ್ದಲ್ಲಿ, ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಕುಟುಕಿದರು.

‘ಎಡಪಕ್ಷಗಳು ಒಂದಾಗಬೇಕು. ಒಂದು ಪರ್ಯಾಯ ರಾಜಕೀಯ ವ್ಯವಸ್ಥೆ ನಮಗೆ ಬೇಕಿದೆ. ಈ ವೇದಿಕೆ ಸೃಷ್ಟಿಯಾಗಿದ್ದೇ ಆದಲ್ಲಿ, ದೇವೇಗೌಡ, ಜಯಲಲಿತಾ, ಮುಲಾಯಂ ಸಿಂಗ್ ಎಲ್ಲರೂ ನಮ್ಮ ಜತೆಗೆ ಬರುತ್ತಾರೆ. ಈ ಮೂಲಕ ರಾಜಕೀಯವಾಗಿ ಹೋರಾಟಕ್ಕೆ ಇಳಿಯಬಹುದು’ ಎಂದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಬಿಹಾರ ಮತ್ತು ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ನಂತರ ದೇಶದಲ್ಲಿ ಎಡಪಕ್ಷಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ. ದೇಶಪ್ರೇಮದ ಹೆಸರಲ್ಲಿ ದಲಿತರು, ಮಹಿಳೆಯರು ಮತ್ತು  ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT