ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ವ್ಯವಸ್ಥೆಗೆ ಸಜ್ಜು

ಸಾರಿಗೆ ನೌಕರರ ಮುಷ್ಕರ * ಭಾನುವಾರದಿಂದಲೇ ಬಸ್‌ ಸಂಚಾರ ಸ್ಥಗಿತ * ಎಸ್ಮಾ ಜಾರಿ ಇಲ್ಲ
Last Updated 25 ಜುಲೈ 2016, 0:00 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ನಡೆಸುವ ನಿಲುವು ಸಡಿಲಿಸದೆ  ಇರುವುದರಿಂದ ಸರ್ಕಾರಿ ಬಸ್‌ಗಳು ಭಾನುವಾರ ಸಂಜೆಯಿಂದಲೇ ರಸ್ತೆಗಿಳಿದಿಲ್ಲ. ಮಧ್ಯರಾತ್ರಿಯಿಂದ ಮುಷ್ಕರದ ಕಾವು ಏರಿದ್ದು, ಬಸ್‌ಗಳನ್ನೇ ನೆಚ್ಚಿಕೊಂಡ ಜನರು ಇನ್ನೆರಡು  ದಿನ ಪರದಾಡಬೇಕಿದೆ.

ಶೇ 35ರಷ್ಟು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಡ ಹೇರಲು ಮುಷ್ಕರಕ್ಕೆ ಕರೆ ನೀಡಿರುವ  ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾಸಮಿತಿಯು  ಸಂಧಾನಕ್ಕೆ ಬಗ್ಗಲಿಲ್ಲ. ಬೇಡಿಕೆ ಈಡೇರುವವರೆಗೆ ಬಸ್‌ ಏರುವುದಿಲ್ಲ ಎಂದು ಹಟ ಹಿಡಿದಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಪ್ರಯಾಣಕ್ಕೆ ಖಾಸಗಿ ಸಾರಿಗೆ ವಾಹನಗಳನ್ನೇ ಅವಲಂಬಿಸ ಬೇಕಾಗಿದೆ.

ಸಂಜೆಯಿಂದಲೇ ಗೈರು: ಬೆಂಗಳೂರಿನಿಂದ  ದೂರದ ಊರುಗಳಿಗೆ    ಹೋಗಬೇಕಾದ ಬಸ್ಸುಗಳು ರಾಜಧಾನಿಯಿಂದ ಹೊರಡಲಿಲ್ಲ.  ಕಲಬುರ್ಗಿ, ರಾಯಚೂರು, ಬೀದರ್, ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಗೆ ತೆರಳಬೇಕಿದ್ದ ಚಾಲಕರು, ನಿರ್ವಾಹಕರು ಗೈರು ಹಾಜರಾಗಿದ್ದರು.

ಹೀಗಾಗಿ ಆ ಭಾಗದ ಜನ ಮುಷ್ಕರ ಆರಂಭಕ್ಕೆ ಮುನ್ನವೇ ತೊಂದರೆಗೆ ಸಿಲುಕಿದರು. ಅದೇ ರೀತಿ ವಾಯುವ್ಯ, ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯೂ ಭಾನುವಾರ ಮಧ್ಯಾಹ್ನದಿಂದಲೇ ಮುಷ್ಕರ ಆರಂಭಿಸಿದರು.

ಪರ್ಯಾಯ ವ್ಯವಸ್ಥೆಗೆ ಸಭೆ:  ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಭಾನುವಾರ ತುರ್ತು ಸಭೆ ನಡೆಯಿತು.

ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು,  ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಶೇ 8ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಲಾಗಿತ್ತು.  ಶೇ 10 ರಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ, ಕಾರ್ಮಿಕ ಸಂಘಟನೆಗಳು ಮಾತುಕತೆಗೆ ಸಿದ್ಧವಾಗಿಲ್ಲ ಎಂದು ದೂರಿದರು.

ಏತನ್ಮಧ್ಯೆ, ಸರ್ಕಾರ ಮಾತುಕತೆಗೆ ತಯಾರಿಲ್ಲ ಎಂದು ದೂರಿರುವ ಕಾರ್ಮಿಕ ಸಂಘಟನೆಗಳ ಮುಖಂಡರು, ‘ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿಯೇ ತೀರು ತ್ತೇವೆ’ಎಂದು ಘೋಷಿಸಿದರು.

ಪರ್ಯಾಯ ವ್ಯವಸ್ಥೆ ಏನು? ಸರ್ಕಾರಿ ಬಸ್ಸುಗಳ ಬದಲಿಗೆ ಖಾಸಗಿ , ಟೂರಿಸ್ಟ್‌, ಗುತ್ತಿಗೆ ಆಧಾರದ (ಕಾಂಟ್ರಾಕ್ಟ್‌ ಕ್ಯಾರಿ ಯೇಜ್‌)ಮೇಲೆ ಓಡಾಡುವ ಬಸ್‌, ಕ್ಯಾಬ್‌ಗಳನ್ನು ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿದೆ.

‘ರಾಜ್ಯದಲ್ಲಿ 1.20 ಕೋಟಿ ಜನ ಪ್ರತಿನಿತ್ಯ ಸರ್ಕಾರಿ ಬಸ್‌ಗಳಲ್ಲಿ ಓಡಾಡುತ್ತಾರೆ. ಪರವಾನಗಿ ಪಡೆದ 13,000 ಖಾಸಗಿ, 3,000 ಗುತ್ತಿಗೆ ಆಧಾರ, 2,000 ಟೂರಿಸ್ಟ್‌ ಬಸ್‌ಗಳಿವೆ, 80,000 ಕ್ಯಾಬ್‌ಗಳಿವೆ. ಈ ಎಲ್ಲದರ ಸೇವೆಯನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಯಾವುದೇ ತೊಂದರೆಯಾಗದಂತೆ ಬಂದೋಬಸ್ತ್‌ ಮಾಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಗಳಿಗೆ ಸೂಚಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್ಮಾ ಜಾರಿ ಚಿಂತನೆ ಇಲ್ಲ: ಎಸ್ಮಾ ಜಾರಿ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಅವರ ಸ್ಪಷ್ಟಪಡಿಸಿದ್ದಾರೆ.

‘2012ರಲ್ಲಿ ಮುಷ್ಕರ ನಡೆಸಿದಾಗ ಶೇ 10 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಈಗಲೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಸರ್ಕಾರ ಒಪ್ಪಿಕೊಂಡಿದ್ದು, ನಾಲ್ಕು ವರ್ಷಗಳಲ್ಲಿ ₹1,550 ಕೋಟಿ ಹೊರೆ ಬೀಳಲಿದೆ. ಶೇ 30ರಷ್ಟು ಹೆಚ್ಚಳ ಮಾಡಿದರೆ ₹ 4,500 ಬೇಕಾಗುತ್ತದೆ. ಎಲ್ಲಿಂದ ತರುವುದು?  ಎಂದರು.

ಎಸ್ಮಾ ಜಾರಿಗೆ ಮಾಡಲಿ:  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತುಕತೆ ನಡೆಸುವ ಬದಲು ಎಸ್ಮಾ ಜಾರಿ ಬಗ್ಗೆ ಮಾತನಾಡಿ ಕಾರ್ಮಿಕರನ್ನು  ಪ್ರಚೋದಿಸುತ್ತಿದ್ದಾರೆ.

ಸರ್ಕಾರದ ಇಂತಹ ಬೆದರಿಕೆಗಳಿಗೆ ಜಗ್ಗುವವರು ನಾವಲ್ಲ. ತಾಕತ್ತು ಇದ್ದರೆ ಎಸ್ಮಾ ಜಾರಿ ಮಾಡಲಿ ಎಂದು   ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾಸಮಿತಿ ಸಂಚಾಲಕ,  ಎಚ್‌.ವಿ. ಅನಂತಸುಬ್ಬರಾವ್ ಹೇಳಿದ್ದಾರೆ.

ಮುಷ್ಕರ ಕೈಬಿಡಲು ಸಿಎಂ ಮನವಿ: ‘ಸಾರಿಗೆ ನೌಕರರ ಎಲ್ಲಾ ಬೇಡಿಕೆ ಹಂತಹಂತವಾಗಿ ಪರಿಶೀಲಿಸಲು ಸರ್ಕಾರ ಬದ್ಧವಾಗಿದ್ದು, ಮುಷ್ಕರ ಕೈಬಿಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

  ‘ಮುಷ್ಕರ ನಡೆಸಿದಲ್ಲಿ ಬಸ್ಸು ಗಳನ್ನೆ ನೆಚ್ಚಿಕೊಂಡಿರುವ ಬಡವರು, ವಿದ್ಯಾರ್ಥಿಗಳು, ಕಾರ್ಮಿಕರು ಅನುಭವಿಸುವ ಕಷ್ಟಗಳನ್ನು ಊಹಿಸಲೂ   ಅಸಾಧ್ಯ. ಚಿಕಿತ್ಸೆಗಾಗಿ  ಪ್ರತಿದಿನವೂ ಊರಿನಿಂದ ಊರಿಗೆ ಪ್ರಯಾಣಿಸುವವರ ಬಡಜನರನ್ನು ಒಮ್ಮೆ ನೆನಪಿಸಿಕೊಳ್ಳಿ.

ನೀವು ನಡೆಸುವ ಮುಷ್ಕರದಿಂದ ಅವರೆಲ್ಲರ ಮೇಲೆ ಆಗುವ ಪರಿಣಾಮ ನಿಮಗೆ ಸಂತಸ ತರಲು ಸಾಧ್ಯವೆ ಯೋಚಿಸಿ’ ಎಂದು ಮುಷ್ಕರಕ್ಕೆ ಮುಂದಾಗಿರುವ ನೌಕರರನ್ನು ಅವರು ಪ್ರಶ್ನಿಸಿದರು.

ಕರ್ತವ್ಯ ನಿರತರ ಮೇಲೆ ಹಲ್ಲೆ: ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್‌ಗಳಿಗೂ ಹಾನಿ ಮಾಡಿದ್ದಾರೆ. ದೊಡ್ಡಬಳ್ಳಾಪುರ ಬಳಿ ನಿರ್ವಾಹಕರೊಬ್ಬರಿಂದ ಇಟಿಎಂ (ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರ) ಮತ್ತು ನಗದು ಅಪಹರಿಸಿದ್ದಾರೆ.

ಅದೇರೀತಿ ಮಾಗಡಿ, ನಂಜನಗೂಡು, ಶ್ರೀರಂಗಪಟ್ಟಣ, ಬಳ್ಳಾರಿ, ಶಹಪುರ ಸೇರಿದಂತೆ ಹಲವೆಡೆ ಬಸ್‌ಗಳಿಗೆ ಜಖಂ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ದಿನಕ್ಕೆ 17 ಕೋಟಿ ನಷ್ಟ : ಸಾರಿಗೆ ಸಿಬ್ಬಂದಿ ಮುಷ್ಕರದಿಂದಾಗಿ ದಿನವೊಂದಕ್ಕೆ ನಾಲ್ಕು ನಿಗಮಗಳಿಂದ ₹17 ಕೋಟಿ ನಷ್ಟ ಉಂಟಾಗಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಶಾಲೆಗಳಿಗೆ ರಜೆ
ವಿದ್ಯಾರ್ಥಿಗಳು ಸರ್ಕಾರಿ ಬಸ್ಸುಗಳನ್ನೇ ನೆಚ್ಚಿಕೊಂಡಿರುವು ದರಿಂದ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕೆಲವು ಜಿಲ್ಲೆಗಳಲ್ಲಿ ಸೋಮ ವಾರ ಮಾತ್ರ ರಜೆ ಘೋಷಿಸಿದ್ದು, ಮಂಗಳವಾರ ರಜೆ ಘೋಷಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಉಳಿದಂತೆ ಆಯಾ ಜಿಲ್ಲೆಯ ಪರಿಸ್ಥಿತಿ ಆಧರಿಸಿ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲು ಮುಖ್ಯಕಾರ್ಯದರ್ಶಿ ಅರವಿಂದ್‌ ಜಾಧವ್‌ ಅವರು, ಎಲ್ಲಾ  ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮುಖ್ಯಮಂತ್ರಿ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ, ಇದೇ 25 ಮತ್ತು 26ರಂದು ಶಾಲೆ–ಕಾಲೇಜುಗಳಿಗೆ ರಜೆ ನೀಡಲು ನಿರ್ಧರಿಸಲಾಗಿತ್ತು.

ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಎಂದಿನಂತೆ ಶಾಲೆಗಳು ನಡೆಯಲಿವೆ ಎಂದು ಆಯಾ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆ ಮುಂದೂಡಿಕೆ: ಬೆಂಗಳೂರು ವಿಶ್ವವಿದ್ಯಾಲಯ ಮತ್ತು  ರಾಣಿ ಚೆನ್ನಮ್ಮ ಮಹಿಳಾ ವಿಶ್ವವಿದ್ಯಾಲಯ ಗಳು  ಇದೇ 25 ಹಾಗೂ 26 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಿವೆ.

ಉತ್ತರ, ವಾಯವ್ಯ ಕರ್ನಾಟಕದಲ್ಲಿ  ಭಾನುವಾರದಿಂದಲೇ ಮುಷ್ಕರ ಆರಂಭ!
ಹುಬ್ಬಳ್ಳಿ:
ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಇದೇ 25ರಂದು (ಸೋಮವಾರ) ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ, ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಬಹುತೇಕ ನೌಕರರು ಮುಷ್ಕರ ಆರಂಭಿಸಿದ್ದಾರೆ!

ಇದಕ್ಕೆ ಕಾರಣ ಆಡಳಿತ ಮಂಡಳಿಯ ನಿರ್ಧಾರ. ಹುಬ್ಬಳ್ಳಿ ಗ್ರಾಮಾಂತರ ಹಾಗೂ ಅವಳಿ ನಗರದಲ್ಲಿ ಸಂಸ್ಥೆಯ ನೌಕರರು (ಕಂಡಕ್ಟರ್‌, ಡ್ರೈವರ್‌) ಪ್ರತಿದಿನ ಮಧ್ಯಾಹ್ನ ಕೆಲಸ ಆರಂಭಿಸಿ, ಮರುದಿನ ಮಧ್ಯಾಹ್ನ ಮುಗಿಸಬೇಕು.

ಸೋಮವಾರ ಮುಷ್ಕರ ಆರಂಭವಾಗಲಿರುವ ಕಾರಣ ಭಾನುವಾರ ಸಂಜೆಯವರೆಗೆ ಮಾತ್ರ ಕೆಲಸ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ನೌಕರರು ವಿವಿಧ ಜಿಲ್ಲೆಗಳ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ನೌಕರರ ಈ ಮನವಿಯನ್ನು ತಳ್ಳಿ ಹಾಕಲಾಯಿತು. ಹೀಗಾಗಿ, ಮಧ್ಯಾಹ್ನದಿಂದ ಕೆಲಸಕ್ಕೆ ಹಾಜರಾಗುವುದೇ ಬೇಡ ಎಂಬ ನಿರ್ಧಾರವನ್ನು ನೌಕರರು ತೆಗೆದುಕೊಂಡರು.

ನೌಕರರ ಈ ನಿರ್ಧಾರದಿಂದಾಗಿ ಹುಬ್ಬಳ್ಳಿ ವಿಭಾಗವೊಂದರಲ್ಲೇ ಮಧ್ಯಾಹ್ನದಿಂದ ಕಾರ್ಯಾಚರಣೆಯಾಗಬೇಕಿದ್ದ 140 ಅನುಸೂಚಿಗಳನ್ನು (ರೂಟ್‌) ರದ್ದು ಮಾಡಲಾಯಿತು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಶಿರಸಿ, ಹಾವೇರಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ವಿಜಯಪುರ, ಬಳ್ಳಾರಿಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿರಲಿಲ್ಲ.

ಕಾರವಾರ ಡಿಪೊಗೆ ಸೇರಿದ ಬಸ್‌ಗಳು ಸಂಜೆಯವರೆಗೂ ಸಂಚಾರಿಸಿದವು. ಶಿರಸಿ ವಿಭಾಗದಲ್ಲಿ ಭಾನುವಾರ ಮಧ್ಯರಾತ್ರಿ ಡಿಪೊ ತಲುಪುವ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ರಾತ್ರಿ ಹೊರಟು ಬೆಳಿಗ್ಗೆ ವಿವಿಧ ನಗರಗಳನ್ನು ತಲುಪಬೇಕಿದ್ದ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿ, ಪ್ರಯಾಣಿಕರಿಗೆ ಹಣ ಮರಳಿಸಲಾಯಿತು.

ಹಾವೇರಿ ಜಿಲ್ಲೆಯಲ್ಲಿ ಸಂಜೆ ವೇಳೆ ಕೆಲವೇ ಕೆಲವು ಬಸ್‌ಗಳು ಸಂಚಾರಿಸಿದವು. ಗದಗ ಜಿಲ್ಲೆಯಲ್ಲಿ ಮಧ್ಯಾಹ್ನದಿಂದಲೇ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಗದಗ ಜಿಲ್ಲೆ ಒಂದರಲ್ಲೇ ₹ 45 ಲಕ್ಷ ಆದಾಯ ಖೋತಾ ಆಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

22 ಸಾವಿರ ಸಿಬ್ಬಂದಿ ಮುಷ್ಕರದಲ್ಲಿ ಭಾಗಿ (ಕಲಬುರ್ಗಿ ವರದಿ):  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಎನ್‌ಇಕೆಆರ್‌ಟಿಸಿ) 22 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದು, ಭಾನುವಾರ ಮಧ್ಯಾಹ್ನದಿಂದ ಡಿಪೋಗಳಿಂದ ಬಸ್‌ಗಳನ್ನು ಹೊರತೆಗೆದಿಲ್ಲ.

ವಿಜಯಪುರ, ಬಳ್ಳಾರಿ, ಕಲಬುರ್ಗಿ, ಬೀದರ್‌, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಎನ್‌ಇಕೆಆರ್‌ಟಿಸಿಗೆ ಸಂಬಂಧಿಸಿದ 47 ಡಿಪೋಗಳಲ್ಲಿ ಒಟ್ಟು 4,356 ಬಸ್‌ಗಳಿವೆ.

‘ಕೆಲವು ಸಿಬ್ಬಂದಿ ಮಧ್ಯಾಹ್ನದಿಂದಲೇ ಕರ್ತವ್ಯಕ್ಕೆ ಹಾಜರಾಗಿಲ್ಲ. ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ ಸೇರಿದಂತೆ ದೂರದ ಊರುಗಳಿಗೆ ಬಸ್‌ ಓಡಿಸಲಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು, ಇಲ್ಲವೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಮೇಲಧಿಕಾರಿಗಳು ಕೆಲವು ಬಸ್‌ ನಿರ್ವಾಹಕರಿಗೆ ಮತ್ತು ಚಾಲಕರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಸರ್ಕಾರಿ ಸಾರಿಗೆ ನೌಕರರ ಜಂಟಿ ಸಮಿತಿ ವಿಭಾಗೀಯ ಸಂಚಾಲಕ ಸಿದ್ದಪ್ಪ ಫಾಲ್ಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆದರಿಕೆ ಲೆಕ್ಕಿಸದೆ ಎಲ್ಲರೂ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಜಂಟಿ ಸಮಿತಿ ಪದಾಧಿಕಾರಿಗಳ ವಿರುದ್ಧ ನಿಗಮದ ಅಧಿಕಾರಿಗಳು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ಪೊಲೀಸರು ಪದಾಧಿಕಾರಿಗಳನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಹೇಳಿದರು.

ಕಡಿಮೆಯಾದ ಟಿಕೆಟ್‌ ಬುಕಿಂಗ್‌
ಬೆಂಗಳೂರು:
ಸಾರಿಗೆ ನೌಕರರ ಮುಷ್ಕರದಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಪ್ರಮಾಣ ಕಡಿಮೆಯಾಗಿದೆ.

‘ಭಾನುವಾರದಿಂದ ಮಂಗಳವಾರದವರೆಗೆ (ಇದೇ 26) ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಪ್ರಮಾಣದಲ್ಲಿ ಶೇ 20 ರಿಂದ 25ರಷ್ಟು ಕಡಿಮೆಯಾಗಿದೆ’ ಎಂದು ಆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

‘ರಾತ್ರಿ ಹೊರಡುವ ಬಸ್‌ಗಳು ಭಾನುವಾರ ಎಂದಿನಂತೆ ಸಂಚರಿಸಿವೆ. ರಾತ್ರಿ 10ರವರೆಗೂ ಯಾವುದೇ ಬಸ್‌ ಸಂಚಾರ ರದ್ದು ಮಾಡಿಲ್ಲ.

ಒಂದು ವೇಳೆ ಸಂಚಾರ   ರದ್ದಾದಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರ ಬ್ಯಾಂಕ್‌ ಖಾತೆಗೆ ಟಿಕೆಟ್‌ ಮೊತ್ತ ಜಮೆ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆ ಹತ್ತಿಕ್ಕುವ ಯತ್ನ: ಶೆಟ್ಟರ್‌
ಬೆಂಗಳೂರು:
ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕಾದ ಸರ್ಕಾರ,  ಎಸ್ಮಾ ಜಾರಿಗೊಳಿಸುವ ಭಯ ಹುಟ್ಟಿಸುತ್ತಿರುವುದು ಸರಿಯಲ್ಲ ಎಂದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಹೇಳಿದ್ದಾರೆ.

ಬೆಲೆ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಯ ನೌಕರರು ಸಂಕಷ್ಟಲ್ಲಿದ್ದಾರೆ. ಅವರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡದ ಸರ್ಕಾರ ಹೋರಾಟ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ ಎಂದು  ತಿಳಿಸಿದ್ದಾರೆ.

ಏಳನೆ ವೇತನ ಆಯೋಗ ರಚಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸಿದರು.  ರಾಜ್ಯದ ಪೊಲೀಸ್‌ ಸಿಬ್ಬಂದಿಗಳು ಮುಷ್ಕರಕ್ಕೆ ಇಳಿಯಲು ಮುಂದಾಗಿದ್ದರು. ಸುಳ್ಳು ಭರವಸೆ ನೀಡಿದ ಸರ್ಕಾರ, ಬೇಡಿಕೆ ಈಡೇರಿಸಲಿಲ್ಲ. ನೌಕರರ ಹಿತ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು  ದೂರಿದ್ದಾರೆ.

ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘ ಕೇಂದ್ರ ಸಮಿತಿ ಬೆಂಬಲ ಇಲ್ಲ
ಹುಬ್ಬಳ್ಳಿ:
ಸಾರಿಗೆ ಸಂಸ್ಥೆಯ ಬಹುತೇಕ ಕಾರ್ಮಿಕ ಸಂಘಟನೆಗಳು ಇದೇ 25ರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಸಿಪಿಐ ಕಾರ್ಮಿಕ ಸಂಘಟನೆ ಬೆಂಬಲಿತ ಎಐಟಿಯುಸಿ, ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌, ಸಿಪಿಐ (ಎಂ) ಕಾರ್ಮಿಕ ಸಂಘಟನೆ ಬೆಂಬಲಿತಸಿಐಟಿಯು, ಸಂಘ ಪರಿವಾರದ ಕಾರ್ಮಿಕ ಸಂಘಟನೆ ಬಿಎಂಎಸ್‌ ಹಾಗೂ ಐಎನ್‌ಟಿಯುಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿವೆ.

ಆದರೆ, ಕಾಂಗ್ರೆಸ್‌ ಮುಖಂಡ ಎಫ್‌.ಎಚ್‌. ಜಕ್ಕಪ್ಪನವರ  ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘ ಕೇಂದ್ರ ಸಮಿತಿಯು ಬೆಂಬಲ ನೀಡಿಲ್ಲ.

ಧಾರವಾಡದಲ್ಲಿ ಈ ವಿಷಯ ತಿಳಿಸಿದ ಜಕ್ಕಪ್ಪನವರ, ‘ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ 20 ದಿನಗಳ ಕಾಲಾವಕಾಶ ಕೇಳಿದ್ದಾರೆ.

ನಮ್ಮ ಸಂಘ  ಅಲ್ಲಿಯವರೆಗೆ ಕಾಯಲಿದ್ದು, ವೇತನ ಹೆಚ್ಚಳ ಆಗದಿದ್ದರೆ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ 4,800 ಬಸ್‌ಗಳಿದ್ದು, 23 ಸಾವಿರ ನೌಕರರು ಇದ್ದಾರೆ. ಬಹುತೇಕ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಟಾಫ್‌ ವರ್ಕರ್ಸ್‌ ಯೂನಿಯನ್‌ ಮುಖಂಡ ಆರ್‌.ಎಫ್‌. ಕವಳಿಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶ
23,000
ಒಟ್ಟು ಸರ್ಕಾರಿ ಬಸ್‌

1.25 ಲಕ್ಷ
ಒಟ್ಟು ಸಿಬ್ಬಂದಿ

₹ 17 ಕೋಟಿ
ದಿನದ ನಷ್ಟದ ಅಂದಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT