ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವತಾರೋಹಿಗಳ ತಂಡಕ್ಕೆ ಸನ್ಮಾನ

‘ಮೌಂಟ್‌ ಎವರೆಸ್ಟ್‌ ಏರುವುದು ಒಂದು ಕ್ರೀಡೆ’
Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮೌಂಟ್‌ ಎವರೆಸ್ಟ್‌ ಹತ್ತುವಾಗ ನಮ್ಮಲ್ಲಿದ್ದ ಆಕ್ಸಿಜನ್‌ ಮುಗಿದಿತ್ತು. ಆದರೂ ನಾವು ಕಷ್ಟದಲ್ಲಿ ಹೆಜ್ಜೆ ಹಾಕಿದೆವು. ಅಲ್ಲದೆ, ಹಿಮದಿಂದಾಗಿ ನಮ್ಮಲ್ಲಿದ್ದ ಔಷಧಗಳೆಲ್ಲವೂ ಹಾಳಾಗಿದ್ದವು. ಕೊನೆಗೆ ನಮ್ಮಲ್ಲಿದ್ದ ವಿಕ್ಸ್‌ನ್ನೇ ಗಾಯಗಳಿಗೆ ಹಚ್ಚಿ ಮುಂದುವರೆದು ಎವೆರೆಸ್ಟ್‌ ತಲುಪಿದೆವು’

1965ರಲ್ಲಿ ಮೌಂಟ್‌ ಎವೆರೆಸ್ಟ್‌  ಶಿಖರ ಏರಿದ(8,848 ಮೀಟರ್)  ಭಾರತ ತಂಡದ ಸೋನಾಮ್‌ ವಂಗ್ಯಾಲ್‌   ತಮ್ಮ ಎವೆರೆಸ್ಟ್‌ ಪಯಣದ ಅನುಭವ ಹಂಚಿಕೊಂಡ ಬಗೆಯಿದು.

ನಗರದ ಹೋಟೆಲ್‌ವೊಂದರಲ್ಲಿ ಸೋಮವಾರ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜನರಲ್‌ ತಿಮ್ಮಯ್ಯ ನ್ಯಾಷನಲ್‌ ಅಕಾಡೆಮಿ  ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದಾರಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ನಮ್ಮಲ್ಲಿದ್ದ  ಆಮ್ಲಜನಕ ಖಾಲಿಯಾಗಿತ್ತು. ಇದರಿಂದ 36 ಗಂಟೆ ಆಕ್ಸಿಜನ್‌ ಇಲ್ಲದೆ ಬದುಕಿದೆವು. ಗಾಯಗಳಿಗೆ ಕಟ್ಟಿಕೊಳ್ಳಲು  ಔಷಧ ಪಟ್ಟಿ ಇರಲಿಲ್ಲ. ಇದರಿಂದಾಗಿ ನಮ್ಮ ಬನಿಯನ್‌ಗಳನ್ನು ಹರಿದು ಪಟ್ಟಿಗಳನ್ನಾಗಿ ಮಾಡಿ ಔಷಧ ಹಚ್ಚಿಕೊಂಡೆವು’ ಎಂದೂ ಅವರು ವಿವರಿಸಿದರು.

‘ಹವಾಮಾನ ವೈಪರೀತ್ಯದಿಂದಾಗಿ ನಮ್ಮ ಜೊತೆಯಿದ್ದ ಶೆರ್ಪಾಗಳು ಬೇರೆ ಕಡೆ ಹೋಗಿದ್ದರು. ಅಲ್ಲದೆ, ನಮ್ಮಲ್ಲಿದ್ದ ವಾಕಿಟಾಕಿಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಬ್ಯಾಗಿನಲ್ಲಿ ಇಟ್ಟಿದ್ದೆ. ಶಾಖದಿಂದಾಗಿ ವಾಕಿಟಾಕಿ ಮತ್ತೆ ಕೆಲಸ ಮಾಡಲು ಆರಂಭಿಸಿತು. ಆಗ  ನಮ್ಮನ್ನು  ಸಂಪರ್ಕಿಸಿದ ಶೆರ್ಪಾ,  ‘ನೀವು ಇನ್ನೂ ಜೀವಂತವಾಗಿದ್ದೀರಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ. ದೇವರ ದಯೆ ನಾನು ಇನ್ನೂ ಬದುಕಿದ್ದೇನೆ’ ಎಂದು ತಮ್ಮ ಅನುಭವ ಹಂಚಿಕೊಂಡಾಗ ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿತು.

‘ಎವೆರೆಸ್ಟ್‌ ಹತ್ತುವುದು ಒಂದು ಕ್ರೀಡೆ. ಅದರಿಂದ ನಾನು ಸಂತೋಷವಾಗಿದ್ದೇನೆ. ಇಂತಹ ಸಾಹಸಕ್ಕೆ ಕೈಹಾಕಲು ಯುವ ಮನಸ್ಸು ಬೇಕು. ಯುವಜನತೆ ದೃಢ ನಿಶ್ಚಯ ಮಾಡಿ ಕೆಲಸಕ್ಕೆ ಮುಂದಾಗಿ’ ಎಂದು ಅವರು ಸಲಹೆ ನೀಡಿದರು.
ಆರಂಭಕ್ಕೂ ಮುನ್ನ 13 ನಿಮಿಷದ ಮೌಂಟ್‌ ಎವೆರೆಸ್ಟ್‌ ಪರ್ವತಾರೋಹಣದ ಕಿರುಚಿತ್ರ ಪ್ರದರ್ಶಿಸಲಾಯಿತು.

ಭಾರತೀಯ ನೌಕಾದಳದ ಮನಮೋಹನ್‌ ಸಿಂಗ್‌ ಕೊಯ್ಲಿ, ಸೋನಾಮ್‌ ವಂಗ್ಯಾಲ್‌, ಜಿ.ಎಸ್‌.ಭಂಗು ಹಾಗೂ ಬ್ರಿಗೇಡಿಯರ್‌ ಡಾ.ಮುಲ್ಕ್‌ರಾಜ್‌ ಅವರನ್ನು  ಸನ್ಮಾನಿಸಲಾಯಿತು. 

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌. ನಾಗಾಂಬಿಕಾ ದೇವಿ ಅವರು, 1950 ದಶಕದಲ್ಲಿ ಸೌಲಭ್ಯಗಳು ಇಲ್ಲದ ವೇಳೆ ಉತ್ಕೃಷ್ಟ ಸಾಧನೆ ಮಾಡಿದ ದೇಶದ ನಾಲ್ವರು ಅದ್ಬುತ ಪ್ರತಿಭೆಗಳು ನಮ್ಮ ಎದುರಿವೆ. ಇದು ನಮ್ಮೆಲ್ಲರ ಪಾಲಿಗೆ  ಮಹತ್ತರವಾದ ದಿನ’  ಎಂದು ಹೇಳಿದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಎಸ್‌.ಎಂ.ಸೋಮಶೇಖರ್‌,  ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕ ಎಚ್.ಎಸ್‌.ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT