ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವತಾರೋಹಿಯ ದುರಂತ ಅಂತ್ಯ

ಮಿನುಗು ಮಿಂಚು
Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಅಮೆರಿಕನ್ ಪರ್ವತಾರೋಹಿ ಅಲೆಕ್ಸ್ ಲೋ ತಮ್ಮ ಜೀವಿತಾವಧಿಯಲ್ಲೇ ಶ್ರೇಷ್ಠ ಎನಿಸಿಕೊಂಡವರು. ವಿಶ್ವದ ಅತಿ ಶ್ರೇಷ್ಠ ಪರ್ವತಾರೋಹಿ ಎನಿಸಿಕೊಂಡ ಅವರು ದೈಹಿಕ ಬಲ ಹಾಗೂ ಬತ್ತದ ಉತ್ಸಾಹಕ್ಕೆ ಹೆಸರಾದವರು. ‘ದಿ ವೈಟ್‌ ನೈಟ್‌’ (ಬಿಳಿ ಬಣ್ಣದ ವೀರಯೋಧ), ‘ದಿ ಮ್ಯೂಟೆಂಟ್‌’ (ರೂಪಾಂತರಗೊಂಡವ), ‘ದಿ ಲಂಗ್‌ ವಿತ್‌ ಲೆಗ್ಸ್‌’ (ಕಾಲುಗಳಿರುವ ಶ್ವಾಸಕೋಶ) ಮೊದಲಾದ ವರ್ಣರಂಜಿತ ಅಡ್ಡಹೆಸರುಗಳಿಂದ ಅವರನ್ನು ಕರೆಯುತ್ತಾರೆ.

ಎಂಥ ಚಾರಣವೂ ಸಲೀಸು ಎನ್ನುವಂತೆ ಅವರು ಸವಾಲುಗಳನ್ನು ಎದುರಿಸುವ ರೀತಿ ನೋಡುವುದೇ ಭಾಗ್ಯ ಎಂದು ಅವರ ಆಪ್ತೇಷ್ಟರು ಹೇಳುತ್ತಾರೆ. ಬಂಡೆ, ಹಿಮಬಂಡೆಗಳನ್ನು ಹತ್ತುವುದು, ಹಿಮಾಚ್ಛಾದಿತ ಕಣಿವೆಗಳಲ್ಲಿ ಜಾರುವುದು– ಎಲ್ಲದರಲ್ಲೂ ನಿಷ್ಣಾತರು. ತಮ್ಮ ದೈಹಿಕ ಬಲ ಹಾಗೂ ಸಾಮರ್ಥ್ಯ ಕಾಪಾಡಿಕೊಳ್ಳಲು ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಆರೋಹಣಕ್ಕೆಂದು ದೀರ್ಘಾವಧಿ ಹೊರಗೆ ಹೋದಾಗಲೂ ಅಲೆಕ್ಸ್‌ ತಮ್ಮ ವ್ಯಾಯಾಮ ಪರಿಕರಗಳನ್ನು ಕೊಂಡೊಯ್ಯುವುದನ್ನು ಅವರ ಸಹಚರರು ನೆನಪಿಸಿಕೊಳ್ಳುತ್ತಾರೆ. ಹಡಗಿನಲ್ಲಿಯೋ ವಿಮಾನದಲ್ಲಿಯೋ ಪ್ರಯಾಣ ಮಾಡುವಾಗ ಸಹ ಅವರು ಉದ್ದದ ಸರಳನ್ನು ಒಯ್ಯುತ್ತಾರೆ. ಅದನ್ನು ಬಳಸಿ ಅವರು ಪುಲ್‌–ಅಪ್ಸ್‌ ಮಾಡುವುದು ನಿತ್ಯದ ರೂಢಿ.

1995ರಲ್ಲಿ ಲೋ ಅಲಾಸ್ಕದ ಡೇನಾಲಿ ಪರ್ವತ ಆರೋಹಣ ಮಾಡುವಾಗ 6,000 ಅಡಿಗಳಷ್ಟು ಎತ್ತರದಲ್ಲಿ ಕೆಲವು ಆರೋಹಿಗಳು ಸಿಲುಕಿದರು. ಅವರನ್ನು ರಕ್ಷಿಸಲು ವಿಶೇಷವಾಗಿ ಅಲೆಕ್ಸ್‌ ಅವರನ್ನು ಕರೆಸಲಾಗಿತ್ತು. ಸೇನಾ ಹೆಲಿಕಾಪ್ಟರ್‌ ಒಂದು ಲೋ ಹಾಗೂ ಇನ್ನಿಬ್ಬರು ಪರ್ವತಾರೋಹಿಗಳನ್ನು ಸಿಲುಕಿದ್ದವರಿದ್ದ ಸ್ಥಳಕ್ಕೆ ಕೊಂಡೊಯ್ದಿತು. ಉದ್ದದ ಜಾರುಬಂಡೆಯ ಬುಡದಲ್ಲಿ ಸಿಲುಕಿಹಾಕಿಕೊಂಡಿದ್ದ ಆರೋಹಿಗಳಲ್ಲಿ ಅನೇಕರು ಜ್ವರದಿಂದ ಬಳಲುತ್ತಿದ್ದರು. ಅವರನ್ನೆಲ್ಲಾ ರಕ್ಷಿಸಲು ಲೋ ಸಹಾಯ ಮಾಡಿದರು. ಪ್ರತಿಕೂಲ ಹವಾಮಾನ ಇದ್ದರೂ ಒಬ್ಬರನ್ನು ತನ್ನ ಬೆನ್ನಮೇಲೆ ಹೊತ್ತು ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದರು.

ಪ್ರತಿ ಖಂಡದಲ್ಲಿಯೂ ಹಲವಾರು ಪರ್ವತಾ­ರೋಹಣದ ಸಾಹಸಗಳನ್ನು ಅಲೆಕ್ಸ್‌ ಲೋ ಮಾಡಿದ್ದಾರೆ. ಕೆಲವು ಸಾಹಸಗಳನ್ನು ಏಕಾಂಗಿಯಾಗಿ ಮಾಡಿದ್ದು ಅಗ್ಗಳಿಕೆ. ಕೆನಡಾದ ಬಫಿನ್‌ ದ್ವೀಪದ ಗ್ರೇಟ್‌ ಸೇಲ್‌ ಶಿಖರ ಹಾಗೂ ಅಂಟಾರ್ಟಿಕಾದ ರಾಕೆನ್‌ವೇನ್‌ ಆರೋಹಣ­ವನ್ನು ಅವರು ಏಕಾಂಗಿಯಾಗಿ ಮಾಡಿದ್ದನ್ನು ಮರೆಯ–ಲಾಗದು. ನೇಪಾಳದ ವಾಂಗ್ಡೆ ಹಾಗೂ ಕುಸುಮ್‌ನಲ್ಲಿ ಹೊಸ ಮಾರ್ಗದಲ್ಲಿ ಚಾರಣ ಕೈಗೊಂಡಿದ್ದೂ ವಿಶೇಷವೇ. ಮೌಂಟ್‌ ಎವರೆಸ್ಟ್‌ ಅನ್ನು ಎರಡು ಸಲ, ಅಂಟಾರ್ಟಿಕಾದ ಮೌಂಟ್‌ ಸ್ಕಾಟ್‌ ಅನ್ನು ದಕ್ಷಿಣ ದಿಕ್ಕಿನಿಂದ ಮೊದಲ ಸಲ ಹತ್ತಿದ್ದು, ಅಮೆರಿಕದ ವ್ಯೋಮಿಂಗ್‌ನ ಗ್ರ್ಯಾಂಡ್‌ ಟೆಟಾನ್‌ ಪರ್ವತವನ್ನು ಚಳಿಗಾಲದಲ್ಲಿ ಒಬ್ಬರೇ ಹತ್ತಿದ್ದು ಅವರ ಸಾಹಸಗಳಲ್ಲಿ ಮುಖ್ಯವಾದುವು.

1999ರಲ್ಲಿ ಶಿಶಪಂಗಾಮದ ಕಡಿದಾಟ ಪರ್ವತವನ್ನು ದಕ್ಷಿಣ ದಿಕ್ಕಿನಿಂದ ಹತ್ತುತ್ತಿದ್ದಾಗ ಹಿಮ ಪ್ರಪಾತಕ್ಕೆ ಸಿಲುಕಿ ಅಲೆಕ್ಸ್‌ ಮೃತಪಟ್ಟರು. ಅವರ ಮೃತದೇಹ ಪತ್ತೆಯಾಗಲೇ ಇಲ್ಲ. ಈ ವರ್ಷ ಏಪ್ರಿಲ್‌ನಲ್ಲಿ ಶಿಶಪಂಗಾಮವನ್ನು ಹತ್ತಿದ ಇಬ್ಬರು ಪರ್ವತಾರೋಹಿಗಳಿಗೆ ಎರಡು ಮೃತದೇಹಗಳು ಕಂಡವು. ಅವು ಅರ್ಧದಷ್ಟು ಕರಗಿಹೋಗಿದ್ದವು. ಅವು ಅಲೆಕ್ಸ್‌ ಲೋ ಹಾಗೂ ಅವರ ಜೊತೆ ಪರ್ವತಾರೋಹಣ ಮಾಡಲು ಹೋಗಿದ್ದ ಡೇವಿಡ್‌ ಬ್ರಿಡ್ಜಸ್‌ ಶವಗಳು ಎಂದು ಗುರುತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT