ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸರ್ 200 ಎಸ್‍ಎಸ್ ಪ್ರಬಲ ಸ್ಪರ್ಧೆಗೆ ಸಜ್ಜು

Last Updated 15 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಜಾಜ್ ಪ್ರೀಮಿಯಂ ಮೋಟರ್‌ ಸೈಕಲ್‌ ವರ್ಗಕ್ಕೆ ಒಬ್ಬ ಪ್ರಬಲ ಸ್ಪರ್ಧಿಯನ್ನು ಸೇರ್ಪಡಿಸಿದೆ.
ಭಾರತೀಯರು ಬಹಳ ನಿರೀಕ್ಷೆಯಿಂದ ಕಾದಿದ್ದ ಪಲ್ಸರ್ 200 ಎಸ್‍ಎಸ್ ಆವೃತ್ತಿ ಮಾರುಕಟ್ಟೆಗೆ ಕಾಲಿಟ್ಟು ತಿಂಗಳೂ ಕಳೆದಿಲ್ಲ. ಹೊಸ ಬೈಕ್ ಕೊಳ್ಳಲು ಯುವಕರು ಉತ್ಸಾಹದಲ್ಲಿದ್ದಾರೆ.


ಅಂಥದ್ದೇನಿದೆ ಈ ಬೈಕ್‌ನಲ್ಲಿ ಎಂಬ ಕುತೂಹಲ ನನಗೂ. ಬಜಾಜ್ ಷೋರೂಂನಲ್ಲಿ ಕೆಲಸ ಮಾಡುವ ಗೆಳೆಯ ಹರಸಾಹಸ ಪಟ್ಟು, ಆತನೇ ಬುಕ್ ಮಾಡಿದ್ದ ಬೈಕ್‍ ಅನ್ನು ನಾಲ್ಕಾರು ಕಿ.ಮೀ ಚಲಾಯಿಸುವ ಅವಕಾಶ ಸಿಕ್ಕಿತ್ತು.

ಮೊದಲ ನೋಟಕ್ಕೆ ಬೈಕ್ ತುಂಬಾ ಮಸ್ಕ್ಯುಲರ್ ಆಗಿ ಕಾಣುತ್ತದೆ. ಮುಂಭಾಗದಲ್ಲಿ ಕಡೆದಿಟ್ಟಿರುವ ಫೇರಿಂಗ್ ಬೈಕ್‌ಗೆ ಆ ಒರಟುತನ ನೀಡಿದೆ. ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಈ ವರ್ಗದ ಯಾವ ಬೈಕಿಗೂ ಈ ನೋಟವಿಲ್ಲದಿರುವುದು 200 ಎಸ್‍ಎಸ್‌ನ ಹೆಗ್ಗಳಿಕೆ.

ಬೈಕ್‍ ಮೇಲೆ ಕೂತಾಗ 200 ಎನ್‍ಎಸ್ ಮತ್ತು 200ಎಸ್‍ಎಸ್ ನಡುವೆ ಯಾವುದೇ ವ್ಯತ್ಯಾಸ ಇದ್ದಂತೆ ಅನಿಸುವುದಿಲ್ಲ. 200 ಎನ್‍ಎಸ್‌ನ ಸಂಪೂರ್ಣ ಅಂದರೆ, ವೀಲ್‌ಬೇಸ್, ಗ್ರೌಂಡ್ ಕ್ಲಿಯರೆನ್ಸ್, ಎತ್ತರ, ಹ್ಯಾಂಡಲ್ ಬಾರ್ ಪೊಸಿಷನ್, ಸೀಟಿಂಗ್ ಪೊಸಿಷನ್ ಅನ್ನು ಎಸ್‍ಎಸ್‌ನಲ್ಲೂ ಉಳಿಸಿಕೊಳ್ಳಲಾಗಿದೆ. ಯಮಾಹಾ ಎಫ್‌ಝೀ16 ಮತ್ತು ಫೇಝರ್ ನಡುವೆ ಇರಬಹುದಾದ ವ್ಯತ್ಯಾಸದಷ್ಟೇ ವ್ಯತ್ಯಾಸ ಎನ್‍ಎಸ್ ಮತ್ತು ಎಸ್‍ಎಸ್‍ ನಡುವೆ ಇದೆ.

ಎನ್‍ಎಸ್‍ ಮೀಟರ್ ಕನ್ಸೋಲ್, ಕಂಟ್ರೋಲ್ ಸ್ವಿಚ್‍ಸ್ ಎಲ್ಲವೂ ಇಲ್ಲಿದೆ. ಪಲ್ಸರ್ 220ಯಿಂದ ಮಿರರ್‌ಗಳನ್ನು ಎರವಲು ಪಡೆಯಲಾಗಿದೆ.

ಆದರೆ ಬದಿಯಿಂದ ನೋಡುವಾಗ ನೋಟ ಅಷ್ಟೇನೂ ಉತ್ತಮವಾಗಿಲ್ಲ. ಎರಡೂ ಬದಿಯಿಂದ ನೋಟ ಅತೀ ದೊಡ್ಡ ಬೈಕ್‌ನ ಅಪೀಲ್ ಕೊಡುತ್ತದೆ. ಹಿಂಬದಿ ವಿನ್ಯಾಸ ಕೆಟಿಎಂ ಡ್ಯೂಕ್ ಅನ್ನು ನೆನಪಿಸುತ್ತದೆ. 200ಎನ್‍ಎಸ್‌ನ ಹಿಂಭಾಗದ ಸೆಕ್ಸೀ ಲುಕ್ ಎಸ್‍ಎಸ್‌ನಲ್ಲಿಲ್ಲ. ಆದರೂ ಒಟ್ಟಾರೆ ನೋಟ ಉತ್ತಮವಾಗಿದೆ.

200ಎನ್‍ಎಸ್‌ನಲ್ಲಿದ್ದ ಎಂಜಿನ್ ಇಲ್ಲಿದೆ. ಆದರೆ ಇಸಿಯು ರೀಟ್ಯೂನ್ ಮಾಡಲಾಗಿದೆ. ಈ ಎಂಜಿನ್ 9700 ಆರ್‌ಪಿಎಂನಲ್ಲಿ ಗರಿಷ್ಠ 24.5 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. 8000 ಆರ್‌ಪಿಎಂನಲ್ಲಿ ಗರಿಷ್ಠ 18.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 200 ಎನ್‍ಎಸ್‌ಗಿಂತಲೂ ಅಧಿಕ (23.2 ಬಿಎಚ್‌ಪಿ). ಟಾರ್ಕ್ ಬ್ಯಾಂಡ್ ಉತ್ತಮವಾಗಿರುವುದರಿಂದ ನಗರ ಮಿತಿಯಲ್ಲಿ ವೇಗವಾಗಿ ಚಲಾಯಿಸಲು ಅಡ್ಡಿಯಿಲ್ಲ. 3 ಮತ್ತು 4ನೇ ಗಿಯರ್‌ನಲ್ಲಿ ಬೈಕ್ ತಕ್ಷಣದ ವೇಗವರ್ಧನೆಗೆ ಚೆನ್ನಾಗಿ ಸ್ಪಂದಿಸುತ್ತದೆ. ರೈಡಿಂಗ್ ಪೊಸಿಷನ್ ಉತ್ತಮವಾಗಿದ್ದರೂ, ಫುಲ್‌ಫೇರಿಂಗ್ ಇರುವುದರಿಂದ ದಟ್ಟಣೆಯಲ್ಲಿ ಬೈಕ್ ನುಗ್ಗಾಡಿಸಲು ಕೊಂಚ ಹಿಂದೇಟು ಹಾಕಬೇಕಾಗುತ್ತದೆ. ಫೇರಿಂಗ್ ಬೈಕ್‌ಗಳ ದೊಡ್ಡ ಮಿತಿಯೇ ಇದು.

ಹೆದ್ದಾರಿಯಲ್ಲಿ ವೇಗವಾಗಿ ಚಲಾಯಿಸಲು ಬೈಕ್ ಉತ್ತಮವಾಗಿದೆ. ನನಗೆ ಸಿಕ್ಕಿದ್ದ ಗೆಳೆಯನ ಬೈಕ್ ತೀರಾ ಹೊಸತಾದ್ದರಿಂದ ಗರಿಷ್ಠ ಟಾರ್ಕ್ ಮಿತಿಯನ್ನು ಮೀರದೆ ಚಲಾಯಿಸಬೇಕಾಗಿತ್ತು. ಹೀಗಿದ್ದೂ, 120ರ ವೇಗದಲ್ಲಿ ನಿರಾಯಾಸವಾಗಿ 200ಎಸ್‍ಎಸ್ ಓಡುತ್ತದೆ. ಆದರೆ ಗರಿಷ್ಠ ವೇಗವನ್ನು ಪರೀಕ್ಷಿಸಲಾಗಲಿಲ್ಲ.

ಅತಿವೇಗದಲ್ಲಿ ಫ್ರಂಟ್‌ಫೇರಿಂಗ್ ತೂರಿಬರುವ ಗಾಳಿ ಸವಾರನ ಎದೆಗೆ ಬಡಿಯುತ್ತದೆ. ಅಷ್ಟರಮಟ್ಟಿಗೆ ಏರೊಡೈನಾಮಿಕ್ ವಿನ್ಯಾಸ ಹಳಿತಪ್ಪಿದೆ. ಹೀಗಾಗಿ ದೂರದ ಪಯಣದಲ್ಲಿ ಅಲ್ಲಲ್ಲಿ ಬ್ರೇಕ್ ಕೊಡುತ್ತಾ ಬೈಕ್ ಚಲಾಯಿಸಬೇಕಾಗುತ್ತದೆ. ಬೈಕ್‌ನ ವೇಗ 155 ಕೆ.ಜಿಗಿಂತಲೂ ಹೆಚ್ಚಿರುವುದರಿಂದ ರಸ್ತೆ ಹಿಡಿತ ಉತ್ತಮವಾಗಿದೆ. ಎಬಿಎಸ್ ಆಯ್ಕೆ ಇರುವುದರಿಂದ ವೇಗದ ಪಯಣಕ್ಕೆ ಹೇಳಿ ಮಾಡಿಸಿದ ಬೈಕ್ ಇದು.

ಇದರ ಹೊರತಾಗಿ ಬ್ರೇಕಿಂಗ್, ಅಕ್ಸಲರೇಷನ್, ಹ್ಯಾಂಡ್ಲಿಂಗ್ ಎಲ್ಲದರಲ್ಲೂ 200ಎನ್‍ಎಸ್‌ಗೇ ಹೋಲಿಸಬಹುದು. ಬೈಕ್‌ನ ಭಾರ ಕೊಂಚ ಹೆಚ್ಚಿರುವುದರಿಂದ ಮತ್ತು ಬಿಎಚ್‌ಪಿ ಹೆಚ್ಚಾಗಿರುವುದರಿಂದ ಮೈಲೇಜ್ ಕೊಂಚ ಕುಗ್ಗಬಹುದು. ಅದರ ಹೊರತಾಗಿ 200ಎಸ್‍ಎಸ್‍ ಒಂದು ಉತ್ತಮ ಸ್ಪೋರ್ಟ್ಸ್ ಬೈಕ್.

ಪ್ರಬಲ ಸ್ಪರ್ಧೆ
200ಎಸ್‍ಎಸ್‌ನ ಎಕ್ಸ್ ಷೋರೂಂ ಬೆಲೆ 1.20 ಲಕ್ಷ (ನಾನ್ ಎಬಿಎಸ್), 1.31 ಲಕ್ಷ (ಎಬಿಎಸ್). ಇದು ಯಮಾಹಾ ಆರ್‍15, ಹೊಂಡಾ ಸಿಬಿಆರ್ 250 ಆರ್, 150ಆರ್, ಕೆಟಿಎಂ ಆರ್‌ಸಿ 200, ಕವಾಸಕಿ ನಿಂಜಾ 250, ಹ್ಯೂಸಂಗ್ ಜಿಟಿಆರ್ 250ಗಳಿಗಿಂತಲೂ ತೀರಾ ಕಡಿಮೆ.

ಅಲ್ಲದೆ, ಶಕ್ತಿಯೂ ಉತ್ತಮವಾಗಿರುವು ದರಿಂದ, ಈ ಎಲ್ಲಾ ಪ್ರತಿಸ್ಪರ್ಧಿಗಳಿಗೆ 200ಎಸ್‍ಎಸ್ ನೀರು ಕುಡಿಸುವುದರಲ್ಲಿ ಎರಡು ಮಾತಿಲ್ಲ ಎಂಬುದು ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ಮಾತು.

200ಎಸ್‍ಎಸ್‍  ಅನ್ನು ಅನುಸರಿಸಿ ಪಲ್ಸರ್ 400 ಎನ್ಎಸ್ ಮತ್ತು 400 ಎಸ್‍ಎಸ್‍ ತೀರಾ ರ್ಧಾತ್ಮಕ ಬೆಲೆಯಲ್ಲಿ ನಮ್ಮ ರಸ್ತೆಗಿಳಿಯಲಿವೆ ಎಂಬುದು ಪ್ರತಿಸ್ಪರ್ಧಿಗಳಿಗೆ ನಿದ್ದೆ ಕೆಡಿಸಲಿಕ್ಕೂ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT