ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟ ಉಳಿಸಿ

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಜ್ಯವೂ ಸೇರಿದಂತೆ ಆರು ರಾಜ್ಯಗಳಲ್ಲಿ ಹಾದುಹೋಗುವ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ, ಜೀವ ವೈವಿಧ್ಯವನ್ನು ಉಳಿಸುವ ಉದ್ದೇಶ­ದಿಂದ ಡಾ.ಕೆ.ಕಸ್ತೂರಿರಂಗನ್‌ ಸಮಿತಿ ನೀಡಿದ್ದ ವರದಿಗೆ ರಾಜ್ಯ ಸಚಿವ ಸಂಪುಟ ಭಾಗಶಃ ಒಪ್ಪಿಗೆ ನೀಡಿದೆ. ವರದಿಯ ಕರಡು ಅಧಿಸೂಚನೆಗೆ ಆಕ್ಷೇಪ­ಗಳನ್ನು ಸಲ್ಲಿಸಲೂ ನಿರ್ಧಾರ ಮಾಡಲಾಗಿದೆ. ಘಟ್ಟದ ಸೂಕ್ಷ್ಮ ಪರಿಸರಕ್ಕೆ ಮಾರಕವಾಗುವ  ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಹಾಗೂ ಉಷ್ಣವಿದ್ಯುತ್‌ ಸ್ಥಾವರ­ಗಳನ್ನು ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು ಎನ್ನುವ ಪ್ರಮುಖ ಅಂಶವನ್ನು ಸಮಿತಿಯು ತನ್ನ ಶಿಫಾರಸಿನಲ್ಲಿ ಪ್ರಸ್ತಾಪಿಸಿದೆ. ಆದರೆ ಕಲ್ಲು ಗಣಿ­ಗಾರಿಕೆ, ಮರಳು ಗಣಿಗಾರಿಕೆ ಮತ್ತು ಕಿರು ಜಲವಿದ್ಯುತ್‌ ಯೋಜನೆಗಳಿಗೆ ಅವ­ಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ. ಹೀಗಾಗಿ  ಕಸ್ತೂರಿರಂಗನ್‌ ಸಮಿತಿ ನೀಡಿ­ರುವ ವರದಿಯ ಮೂಲ ಉದ್ದೇಶಕ್ಕೆ ವಿರುದ್ಧವಾದ ನಿಲುವನ್ನು ತೆಗೆದು­ಕೊಳ್ಳುವ ಮೂಲಕ ಗಣಿಗಾರಿಕೆ ಲಾಬಿಗೆ ಸರ್ಕಾರ ತಲೆಬಾಗಿದೆ.

ವಾಸ್ತವವಾಗಿ 1.60 ಲಕ್ಷ ಚದರ ಕಿ.ಮೀ ಪ್ರದೇಶವನ್ನು ನಿಯಂತ್ರಿತ ಅಭಿವೃದ್ಧಿ ಪ್ರದೇಶವೆಂದು ಘೋಷಿಸಲು ಪಶ್ಚಿಮ ಘಟ್ಟದ ಸೂಕ್ಷ್ಮವೈವಿಧ್ಯ­ವನ್ನು ಅಧ್ಯಯನ ನಡೆಸಲು ನೇಮಕಗೊಂಡಿದ್ದ ಡಾ.ಮಾಧವ ಗಾಡ್ಗೀಳ್  ಸಮಿತಿಯು ಶಿಫಾರಸು ನೀಡಿತ್ತು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತ­ವಾದಾಗ ಕಸ್ತೂರಿರಂಗನ್‌ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿತು. ಈ ಸಮಿತಿಯು 60 ಸಾವಿರ ಚದರ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಮಾನ್ಯ ಮಾಡಲು ಸಲಹೆ ನೀಡಿತ್ತು. ಎರಡೂ ವರದಿಗಳನ್ನು ಮುಕ್ತಮನಸ್ಸಿನಿಂದ ಕೇಂದ್ರ ಒಪ್ಪಲಿಲ್ಲ. ಕೊನೆಗೆ ರಾಷ್ಟ್ರೀಯ ಪರಿಸರ ನ್ಯಾಯ­ಮಂಡಲಿಯು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಕಸ್ತೂರಿರಂಗನ್‌ ಸಮಿತಿಯ ಶಿಫಾರಸಿಗೆ ಒಪ್ಪಿಗೆ ನೀಡಲಾಯಿತು.

ಈ ವರ­ದಿಗೂ ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದಿಂದಲೇ ಭಾರಿ ವಿರೋಧ ವ್ಯಕ್ತವಾದಾಗ, ಕರಡು ಅಧಿಸೂಚನೆ ಪ್ರಕಟಿಸುವ ಸಂದರ್ಭದಲ್ಲಿ ಕೇರಳದ ೩೧೧೫ ಚದರ ಕಿ.ಮೀ ವ್ಯಾಪ್ತಿಯನ್ನು ಕೈಬಿಡಲಾಗಿದೆ. ಇದೀಗ ಕರ್ನಾಟಕ ಸರ್ಕಾರವೇ ಘಟ್ಟದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಬೇಕು ಎಂದು ಕೇಳುತ್ತಿರುವುದು ಸರ್ಕಾರದ ಉದ್ದೇಶವನ್ನೇ ಸಂಶಯದಿಂದ ನೋಡಬೇಕಾಗಿದೆ. ಸಮಿತಿಯ ವರದಿಯನ್ನು ಪರಿಶೀಲಿಸಲು ರಚಿಸಲಾಗಿದ್ದ ಸಚಿವ ಸಂಪುಟ ಉಪಸಮಿತಿಯಲ್ಲಿ ಸದಸ್ಯ­ರಾಗಿದ್ದ ‘ಪ್ರಭಾವಿ’ ಸಚಿವ­ರೊಬ್ಬರು ಸ್ವತಃ ಕಲ್ಲುಗಣಿ ಉದ್ಯಮಿ.

ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ  ನಡೆ­ಸಲು ಮುಕ್ತ ಅವಕಾಶ ನೀಡಬೇಕು ಎಂದು ಇಂತಹ ಸಚಿವರೂ ಇದ್ದ ಉಪಸಮಿತಿಯು ನೀಡಿರುವ ವರದಿಯಲ್ಲಿ ಉದ್ಯಮ­ವನ್ನು ರಕ್ಷಿಸುವ ಸ್ವಹಿತಾ­ಸಕ್ತಿ ಅಡಗಿದೆ ಎನ್ನಬಹುದು. ಕಲ್ಲು ಗಣಿ­ಗಾರಿಕೆಯಲ್ಲಿ ಪರಿಸರ ರಕ್ಷಣೆ ಮಾದರಿ­ಯನ್ನು ಉದ್ಯಮಿಗಳು ಅನುಸರಿ­ಸು­ತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರಕ್ಕೆ ಪಶ್ಚಿಮಘಟ್ಟದ ಮೇಲೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಇಂತಹ ಮನವಿಗಳನ್ನು ಸಲ್ಲಿಸಬಾರದು. ಒಂದು ವೇಳೆ  ದುರುದ್ದೇಶದ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೆ  ತಿರಸ್ಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT