ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮದಿಂದ ದಕ್ಷಿಣ ಧ್ರುವಕೆ...

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮುಂಬೈನ ಥಳುಕು–ಬಳುಕಿನ ಬಾಲಿವುಡ್‌ ಲೋಕದಿಂದ ಬೆಂಗಳೂರಿನ ರಂಗು ತುಂಬಿದ ಸಭೆ–ಸಮಾರಂಭಗಳವರೆಗೂ ತಮ್ಮದೇ ಆದ ಛಾಪು ಮೂಡಿಸಿದವರು ವಿನ್ಯಾಸಕಿ ನಿಷಾ ಕುಂದನಾನಿ. ದಕ್ಷಿಣ ಭಾರತದ ಮುಂಬೈ ಹಾಗೂ ಉತ್ತರ ಭಾರತದ ಬೆಂಗಳೂರಿನ ನಡುವೆ ಇರುವ ಫ್ಯಾಷನ್‌ ಹಾಗೂ ಟ್ರೆಂಡುಗಳ ಅಂತರವನ್ನು ಅವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿದ ಬಗೆ ಇಲ್ಲಿದೆ.

‘ಬೆಂಗಳೂರು’ ಎನ್ನುವುದು ಬರೀ ಒಂದು ರಾಜಧಾನಿಯಲ್ಲ, ಒಂದು ನಗರ ಮಾತ್ರವಲ್ಲ, ಇಡೀ ಪ್ರಪಂಚದ ಸಂಸ್ಕೃತಿ–ಪದ್ಧತಿಗಳನ್ನು ಒಳಗೊಂಡಿರುವ, ಆದರೆ ಆಂತರಿಕವಾಗಿ ತನ್ನದೇ ಆದ ಮೂಲ ಪರಂಪರೆಯನ್ನು ಹುದುಗಿಸಿಟ್ಟುಕೊಂಡು, ಹೊಸದನ್ನು ಎಷ್ಟು ಬೇಕೊ ಅಷ್ಟೇ ಸೇರಿಸಿಕೊಳ್ಳುತ್ತ, ತನ್ನತನಕ್ಕೆ ಧಕ್ಕೆ ಎನಿಸಬಲ್ಲ ಅಂಶಗಳನ್ನು ಮುಲಾಜಿಲ್ಲದೇ ತಳ್ಳಿ ಹಾಕುತ್ತ, ತಾನೇ ತಾನಾಗಿ ಉಳಿದುಕೊಂಡ ಮತ್ತು ಬೆಳೆಯುತ್ತಿರುವ ವಿಶಿಷ್ಟ ನಗರ ಬೆಂಗಳೂರು ಎನ್ನುವುದು ವಿನ್ಯಾಸಕಿ ನಿಷಾ ಕುಂದನಾನಿ ಅವರ ವಿವರಣೆ.

ಬೆಂಗಳೂರಿನ ಜನರು ಯಾವುದನ್ನೂ ಕಣ್ಣು ಮುಚ್ಚಿ ಸ್ವೀಕರಿಸುವುದಿಲ್ಲ. ಫ್ಯಾಷನ್ ಎನ್ನುವ ಒಂದೇ ಕಾರಣಕ್ಕೆ ತಮಗೆ ಒಗ್ಗುವುದೊ, ಇಲ್ಲವೊ ಎನ್ನುವ ಆಲೋಚನೆಯೂ ಇಲ್ಲದೇ ಅದನ್ನು ಒಪ್ಪಿಕೊಳ್ಳುವ ಮನೋಭಾವ ಇವರದ್ದಲ್ಲ. ಅವರೂ ಅಪ್ಡೇಟ್ ಆಗಲು ಇಷ್ಟಪಡುತ್ತಾರೆ, ಹೊಸತನವನ್ನು ಮೆಚ್ಚುತ್ತಾರೆ ಎನ್ನುವುದು ನಿಜ. ಆದರೆ ಅದಕ್ಕೂ ಮುನ್ನ ಅದನ್ನು ತಮ್ಮ ಬೌಗೋಳಿಕ ಪರಿಸರ, ಪರಂಪರೆ ಹಾಗೂ ವೈಯಕ್ತಿಕ ದೇಹಾಕಾರಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವುದನ್ನು ಮಾತ್ರ ಅವರು ಮರೆಯುವುದಿಲ್ಲ.

ಸಂಸ್ಕೃತಿಯಲ್ಲಿಯೇ ವೈವಿಧ್ಯ
ಪ್ರಪಂಚದ ಎಲ್ಲಾ ಮೂಲೆಯ, ದೇಶದ ಎಲ್ಲಾ ಭಾಗದ ಜನ ಇಲ್ಲಿ ಬಂದು ಸೇರಿದ್ದಾರೆ. ಬೆಂಗಳೂರಿನ ಸಂಸ್ಕೃತಿಯಲ್ಲಿಯೇ ವೈವಿಧ್ಯ ಬೆರೆತು ಹೋಗಿದೆ. ಇದೇ ಕಾರಣದಿಂದ ಇರಬಹುದು, ಇಲ್ಲಿ ಪ್ರತಿಯೊಬ್ಬರೂ ಭಿನ್ನವಾಗಿಯೇ ಕಾಣುತ್ತಾರೆ. ಪ್ರತಿಯೊಬ್ಬರ ಫ್ಯಾಷನ್ ಅಭಿರುಚಿಯೂ ಬೇರೆ ಬೇರೆಯೇ ಇರುತ್ತದೆ.

ಮುಂಬೈಯಲ್ಲಿ ಒಂದು ಫ್ಯಾಷನ್ ಅಥವಾ ಟ್ರೆಂಡ್ ಶುರುವಾಯಿತು ಎಂದರೆ ಪ್ರತಿಯೊಬ್ಬರೂ ಅದನ್ನು ಮೈಮೇಲೆ ಎಳೆದುಕೊಂಡು ನೋಡಲು ಪೈಪೋಟಿಗೆ ನಿಲ್ಲುತ್ತಾರೆ. ಹೀಗಾಗಿ ಯಾವುದೇ ಪಾರ್ಟಿ, ಸಭೆ–ಸಮಾರಂಭಗಳಲ್ಲಿ ಅದೇ ಟ್ರೆಂಡ್‌ನ ದರ್ಶನವಾಗುತ್ತದೆ.

ಆದರೆ ಬೆಂಗಳೂರಿನಲ್ಲಿ ಒಂದೇ ಫ್ಯಾಷನ್‌ನಲ್ಲಿ ವಿವಿಧತೆಯನ್ನು ಮೆರೆಯುವ ಮನೋವೃತ್ತಿಯಿದೆ. ತಮ್ಮ ತಮ್ಮ ಮನೋಭಾವ ಹಾಗೂ ದೇಹ ಪ್ರಕೃತಿಗೆ ತಕ್ಕಂತೆ ಅವರು ಟ್ರೆಂಡ್‌ಗಳನ್ನು ಸೆಟ್ ಮಾಡಿಕೊಳ್ಳುತ್ತಾರೆ ಎನ್ನುವುದು ನಿಷಾ ಗುರುತಿಸಿದ ಫ್ಯಾಷನ್ ಅಂತರ.

ಫ್ಯಾಷನ್‌ ಮತ್ತು ಪರಂಪರೆ
ಇಲ್ಲಿನ ಜನ ಖಂಡಿತವಾಗ್ಯೂ ಫ್ಯಾಷನ್ ಪ್ರಿಯರು. ಆದರೆ ಫ್ಯಾಷನ್ ಹೆಸರಿನಲ್ಲಿ ಪರಂಪರೆಯನ್ನು ಮರೆಯಲಾರರು. ಮೊದಲು ಪರಂಪರೆ ನಂತರ ಫ್ಯಾಷನ್. ಉದಾಹರಣೆಗೆ ಮದುವೆಗಳಲ್ಲಿ ಸೀರೆಯ ಜಾಗವನ್ನು ಘಾಗ್ರಾ ಪಡೆದು ದಶಕವೇ ಸರಿದಿದೆ. ಭಾರವಾದ ಸ್ಟೋನ್‌ ಹಾಗೂ ಕುಂದನ್‌ಗಳಿಂದ ಶ್ರೀಮಂತವಾಗಿ ವಿನ್ಯಾಸಗೊಳಿಸಲಾದ ಘಾಗ್ರಾಗಳು ಮದುಮಕ್ಕಳ ಉಡುಗೆಯಾಗಿ ರೂಪುಗೊಂಡು ವರ್ಷಗಳೇ ಕಳೆದಿವೆ. ಆದರೆ ಮೂಲ ಬೆಂಗಳೂರಿನ ಜನರಿಗೆ ಮದುವೆಯಲ್ಲಿ ರೇಷ್ಮೆ ಸೀರೆಯೇ ಶೋಭೆ. ಹೀಗಾಗಿ ಘಾಗ್ರಾದಂತಹ ಉಡುಪುಗಳನ್ನು ಅವರು ಮದುವೆಯ ಹಿಂದಿನ ದಿನದ ಕಾರ್ಯಕ್ರಮಗಳಿಗೆ ಮೀಸಲಿಟ್ಟು, ಅಕ್ಷತೆಗೆ ರೇಷ್ಮೆ ಸೀರೆಯನ್ನೇ ಧರಿಸುತ್ತಾರೆ.

ಮುಂಬೈ ಟು ಬೆಂಗಳೂರು

ಮುಂಬೈ ಮೂಲದ ಪರ್ಸನಲ್ ಸ್ಟೈಲಿಸ್ಟ್ ನಿಷಾ ಕುಂದನಾನಿ ಕಳೆದ ಎಂಟು ವರ್ಷಗಳಿಂದ ಫ್ಯಾಷನ್ ವಲಯದ ಭಾವಾತರಂಗಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದನ್ನು ಜನಮನಕ್ಕೆ ಒಗ್ಗಿಸುವ ಕಾರ್ಯದಲ್ಲಿ ನಿರತರಾದವರು.

ಚಿಕ್ಕಂದಿನಿಂದಲೂ ಫ್ಯಾಷನ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ನಿಷಾ, ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ ಮಾಡಲು ಬಯಸಿದ್ದರು. ಅಲ್ಲಿ ಪ್ರವೇಶ ಸಿಗದೇ ಇದ್ದಾಗ ಪತ್ರಿಕೋದ್ಯಮ ಓದಿ, ಕೆಲ ದಿನ ಫ್ಯಾಷನ್ ಪುಟಗಳಲ್ಲಿ ಹೊಸತನ ತುಂಬುವ ಕೆಲಸ ಮಾಡಿದರು. ಆದರೆ ಫ್ಯಾಷನ್ ಬಗೆಗಿನ ತುಡಿರ ಅವರನ್ನು ‘ಪರ್ಸನಲ್ ಸ್ಟೈಲಿಸ್ಟ್’ ಎನ್ನುವ ಗುರುತಿನೊಂದಿಗೆ ಒಂದಾಗಿಸಿದೆ.
ಅನೇಕ ಬಾಲಿವುಡ್ ತಾರೆಗಳ ವೈಯಕ್ತಿಕ ಹಾಗೂ ವಿನೂತನ ಶೈಲಿಗಳಲ್ಲಿ ನಿಷಾ ಅವರ ಛಾಪು ಇದೆ. ಅಮಿರ್ ಖಾನ್, ಅನುಷ್ಕಾ ಶರ್ಮಾ, ನಂದಿತಾ ದಾಸ್, ಕಿರಣ್ ರಾವ್ ಅವರಿಂದ ಹಿಡಿದು ಕ್ರೀಡಾ ವಲಯದ ವಿಶ್ವನಾಥ್ ಆನಂದ್, ರಾಹುಲ್ ಡ್ರಾವಿಡ್ ಅವರಿಗೆ ವಿಶಿಷ್ಟ ಲುಕ್ ನೀಡುವಲ್ಲಿ ನಿಷಾ ಅವರ ಸೃಜನಶೀಲತೆ ಕೆಲಸ ಮಾಡಿದೆ.

ಅವರ ವಿಶೇಷ ಬ್ರೈಡಲ್ ಸ್ಟೈಲಿಂಗ್  ಬೆಂಗಳೂರಿನಲ್ಲೂ ಮನ್ನಣೆ ಪಡೆದಿದ್ದು, ವರ್ಷದಲ್ಲಿ ನಾಲ್ಕಾರು ಬಾರಿ ಅವರನ್ನು ಬೆಂಗಳೂರಿಗೆ ಎಳೆದು ತರುತ್ತದೆ. ಉಳಿದಂತೆ ಬೆಂಗಳೂರಿನ ಗ್ರಾಹಕರಿಗೆ ಅವರು ವರ್ಷವಿಡೀ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಸಹಾಯದಿಂದ ಆನ್‌ಲೈನ್ ಸೇವೆಯಂತೂ ಸಿಕ್ಕೇ ಸಿಗುತ್ತದೆ.

ಶಾರ್ಟ್‌ ಡ್ರೆಸ್‌ ಇಲ್ಲಿ ಗೆಲ್ಲುವುದು ಕಡಿಮೆ
ಬೆಂಗಳೂರಿನ ಹವಾಮಾನದ ಕಾರಣದಿಂದಲೋ, ಇಲ್ಲಿನ ಜನರ ಮನೋಭಾವದ ಕಾರಣದಿಂದಲೋ, ಬೇರುಮಟ್ಟದಲ್ಲಿ ತಳಊರಿರುವ ಪರಂಪರೆಯ ಕಾರಣದಿಂದಲೊ ಗೊತ್ತಿಲ್ಲ, ಯಾವುದೇ ರೂಪದ ಶಾರ್ಟ್‌ ಡ್ರೆಸ್‌ಗಳು ಇಲ್ಲಿ ಗೆದ್ದಿರುವುದು ತೀರ ಅಪರೂಪ. ಆದರೆ ಫುಲ್ ಸ್ಕರ್ಟ್, ಟೈಟ್ಸ್, ಜೀನ್ಸ್, ಲೆಗ್ಗಿನ್ಸ್‌ಗಳಲ್ಲಿ ಯಾವುದೇ ಹೊಸ ಪ್ರಯೋಗ ಬಂದರೂ ಇಲ್ಲಿ ಬಹಳ ಬೇಗ ಗೆಲ್ಲುತ್ತವೆ ಎನ್ನುವುದು ಅವರ ಗ್ರಹಿಕೆ.

ನಿಜವಾದ ಅರ್ಥದಲ್ಲಿ ಫ್ಯಾಷನ್ ಎಂದರೆ...
ನಿಮ್ಮ ದೇಹಾಕೃತಿಗೆ ಒಪ್ಪುವ, ನೀವು ವಾಸಿಸುವ ಹವಾಮಾನಕ್ಕೆ ಪೂರಕವಾದ, ನಿಮ್ಮ ಮನಸ್ಸಿಗೆ ಹಿತ ಎನಿಸುವ, ನಿಮ್ಮ ಮುಖದ ಮೇಲೆ ಆತ್ಮವಿಶ್ವಾಸದ ನಗೆ ಹೊಮ್ಮಿಸುವ  ಆಯ್ಕೆಯೇ ನಿಜವಾದ ಅರ್ಥದಲ್ಲಿ ಫ್ಯಾಷನ್ ಎನ್ನುತ್ತಾರೆ ನಿಷಾ.

ಡಿಸೈನರ್ ಸೀರೆಯ ಜಗವಿಲ್ಲಿ ಮೈಮರೆತಿದೆ
ಬೆಂಗಳೂರಿನಲ್ಲಿ ನಾನು ಕಂಡಂತೆ ಅತೀ ಹೆಚ್ಚು ಮನ್ನಣೆ ಪಡೆದಿರುವುದು ಡಿಸೈನರ್ ಸೀರೆಗಳು. ಯಾವುದೇ ಫ್ಯಾಬ್ರಿಕ್‌ನಿಂದ ಮಾಡಿದ್ದಿರಲಿ. ಸ್ವಂತಿಕೆಯೊಂದಿಗೆ ಈಗಿನ ಟ್ರೆಂಡ್‌ ಅನ್ನೂ ಮೈಗೂಡಿಸಿಕೊಂಡಿರುವ ವಿವಿಧ ಸೀರೆಗಳನ್ನು ಇಲ್ಲಿನ ಜನ ಬಹುವಾಗಿ ಮೆಚ್ಚುತ್ತಾರೆ. ಬ್ಲೌಸ್‌ಗಳಲ್ಲಿ ಸಾಕಷ್ಟು ನಾವಿನ್ಯತೆಯನ್ನು ಬಯಸುತ್ತಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಫ್ಯಾಷನ್ ಅನ್ನು ಬ್ಲೌಸ್ ಪ್ರತಿನಿಧಿಸುವಂತಿರಬೇಕು ಎನ್ನುವುದು ಬಹು ಜನರ ಬಯಕೆ ಆಗಿರುತ್ತದೆ. ಅಷ್ಟೇ ಅಲ್ಲ, ಕೊರಳಿಗೆ ಯಾವುದೇ ಆಭರಣದ ಅಗತ್ಯ ಬೀಳದಂತೆ ಬ್ಲೌಸ್‌ನ ವಿನ್ಯಾಸ ಇರಬೇಕು ಎನ್ನುವುದೂ ಅನೇಕರ ಇಂಗಿತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT