ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಹಣಿ ಪಡೆಯಲು ರೈತರ ಪರದಾಟ

ಬೆಳೆ ವಿಮೆ ಮಾಡಿಸಲು ನಾಳೆ ಕೊನೆಯ ದಿನ: ಪಹಣಿ ವಿತರಣೆ ವಿಳಂಬ
Last Updated 30 ಜುಲೈ 2015, 9:50 IST
ಅಕ್ಷರ ಗಾತ್ರ

ಬೀದರ್: ಬೆಳೆ ವಿಮೆ ಮಾಡಿಸಲು ಜುಲೈ 31 ಕಡೆಯ ದಿನವಾಗಿದ್ದು, ರೈತರು ಪಹಣಿ ಪತ್ರ  ಪಡೆಯಲು ನಗರದ ತಹಶೀಲ್ದಾರ್ ಕಚೇರಿಗೆ ಧಾವಿಸುತ್ತಿದ್ದಾರೆ. ಆದರೆ, ಪಹಣಿಪತ್ರ ವಿತರಣೆ ಕಾರ್ಯ ನಿಧಾನಗತಿಯಲ್ಲಿ ಸಾಗಿರುವ ಕಾರಣ ಪರದಾಡುವಂತಾಗಿದೆ.

ತಾಲ್ಲೂಕಿನ ವಿವಿಧೆಡೆಯ ರೈತರು ಬೆಳಿಗ್ಗೆಯೇ ತಹಶೀಲ್ದಾರ್ ಕಚೇರಿಯಲ್ಲಿ ಬಂದು ಸೇರುತ್ತಿದ್ದಾರೆ. ಪಹಣಿ ಕೇಂದ್ರದ ಬಾಗಿಲು ತೆರೆಯುವ ಮುನ್ನವೇ ಸಾಲುಗಟ್ಟುತ್ತಿದ್ದಾರೆ. ಆದರೂ, ಪ್ರತಿ ದಿನ  ಬರಿಗೈಯಲ್ಲಿ ಮರಳುವಂತಾಗಿದೆ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ.
ಬೆಳೆ ವಿಮೆ ಮಾಡಿಸಲು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಕೇಂದ್ರದಲ್ಲಿ ಒಂದು ಕಂಪ್ಯೂಟರ್ ಹಾಗೂ ಇಬ್ಬರು ಸಿಬ್ಬಂದಿ ಮಾತ್ರ ಇದ್ದಾರೆ. ಹೀಗಾಗಿ ಕೇಂದ್ರಕ್ಕೆ ಬರುವ ಎಲ್ಲರಿಗೂ ಪ್ರಮಾಣ ಪತ್ರಗಳು ಸಿಗುತ್ತಿಲ್ಲ ಎಂದು ದೂರುತ್ತಾರೆ ತಾಲ್ಲೂಕಿನ ನಾಗೊರಾ ಗ್ರಾಮದ ರೈತ ಶ್ರೀನಿವಾಸ ರೆಡ್ಡಿ.

ಪಹಣಿ ಮತ್ತು ಇತರೆ ದಾಖಲೆಪತ್ರ ವಿತರಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಸರ್ವರ್ ನಿಧಾನವಾಗಿದೆ. ವಿದ್ಯುತ್ ಇಲ್ಲ. ಯಂತ್ರ ಕೈಕೊಟ್ಟಿದೆ ಎಂಬ ನೆಪ ಹೇಳಲಾಗುತ್ತಿದೆ ಎಂದು ಹೇಳುತ್ತಾರೆ.  ಮನ್ನಳ್ಳಿಯಲ್ಲಿ ಸಮಸ್ಯೆ ಇದೆ ಎಂಬ ಕಾರಣಕ್ಕೆ ಮಂಗಳವಾರ ಬೀದರ್ ನ ತಹಶೀಲ್ದಾರ್ ಕಚೇರಿಗೆ ಬಂದಿದ್ದೆ. ಸಂಜೆವರೆಗೆ ಕಾದರೂ ಪ್ರಮಾಣ ಪತ್ರ ಸಿಗದೆ ವಾಪಸ್ಸಾಗಿದ್ದೆ. ಬುಧವಾರವಂತೂ ಯಂತ್ರ ಕೆಟ್ಟಿದೆ ಎಂಬ ಕಾರಣ ನೀಡಿ ಮಧ್ಯಾಹ್ನದವರೆಗೆ ಪಹಣಿ ವಿತರಿಸಲೇ ಇಲ್ಲ ಎಂದು ಆರೋಪಿಸಿದರು.

ಮಧ್ಯವರ್ತಿಗಳ ಮೂಲಕ ಹೋದವರಿಗೆ ತಕ್ಷಣ ಪ್ರಮಾಣ ಪತ್ರ ದೊರೆಯುತ್ತಿದೆ. ಬಡ ರೈತರು ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕೇಂದ್ರದಲ್ಲಿ ಹೆಚ್ಚುವರಿ ಕಂಪ್ಯೂಟರ್ ಹಾಗೂ ಸಿಬ್ಬಂದಿ ಅಳವಡಿಸಿ ಆದಷ್ಟು ಬೇಗ ಪ್ರಮಾಣಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ. 

ಪ್ರತಿಭಟನೆ: ಈ ನಡುವೆ ಬುಧವಾರ ಪಹಣಿ ವಿತರಣೆಗೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಪ್ರಮುಖರಾದ ವಿಶ್ವನಾಥ ಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಹಣಿಗಾಗಿ ಕೇಂದ್ರದ ಎದುರು ಇಡೀ ದಿನ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಲಂಚ ನೀಡಿದವರಿಗೆ ತುರ್ತಾಗಿ ಪ್ರಮಾಣ ಪತ್ರ ಕೊಡಲಾಗುತ್ತಿದೆ ಎಂದು ಆಪಾದಿಸಿದರು. ಪಹಣಿ ಬೇಗ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮೊಡಂನಲ್ಲಿ ದೋಷ ಕಾಣಿಸಿದ್ದರಿಂದ ಬುಧವಾರ ಪಹಣಿ ವಿತರಣೆಯಲ್ಲಿ ಅಡಚಣೆ ಉಂಟಾಗಿತ್ತು. ಬಳಿಕ ಸರಿಪಡಿಸಲಾಯಿತು ಎಂದು ತಹಶೀಲ್ದಾರ್ ಲಕ್ಷ್ಮಣರಾವ್  ‘ಪ್ರಜಾವಾಣಿ’ಗೆ ತಿಳಿಸಿದರು. ಬೀದರ್ ನಗರದಲ್ಲಿರುವ ಕೇಂದ್ರದಲ್ಲಿ ಈಗಾಗಲೇ ಹೆಚ್ಚುವರಿ ಕಂಪ್ಯೂಟರ್ ಇದ್ದು, ಬೆಂಗಳೂರಿನ ಬಿಎಂಸಿಯನ್ನು ಸಂಪರ್ಕಿಸಿ ಅದಕ್ಕೂ ಸಂಪರ್ಕ ಕಲ್ಪಿಸಲಾಗಿದೆ. ಈಗ ಆ ಕಂಪ್ಯೂಟರ್‌ನಿಂದಲೂ ಪಹಣಿ ಮತ್ತು ಹೊಲ್ಡಿಂಗ್ ವಿತರಿಸಲಾಗುತ್ತಿದೆ  ಎಂದು ಹೇಳಿದರು.

ರೈತರಿಗೆ ಬೆಳೆ ವಿಮೆ ಕಟ್ಟಲು ಅನುಕೂಲವಾಗುವಂತೆ ಬೆಳಿಗ್ಗೆ 8 ರಿಂದ ರಾತ್ರಿ 9 ಗಂಟೆವರೆಗೂ ತಾಲ್ಲೂಕಿನ ಕೇಂದ್ರಗಳಲ್ಲಿ ಪಹಣಿ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬೀದರ್ ಕೇಂದ್ರದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು. ಜೆಸ್ಕಾಂನವರಿಗೆ ವಿದ್ಯುತ್ ಕಡಿತಗೊಳಿಸದಂತೆ ಕೋರಲಾಗಿದೆ. ಆದರೂ, ಅಗತ್ಯ ಬಿದ್ದರೆ ಜನರೇಟರ್ ಅಳವಡಿಸಲಾಗುವುದು.  ತೊಗರಿ ಮತ್ತು ಸೋಯಾ ಅವರೆ ಬೆಳೆಗೆ ಆಗಸ್ಟ್ 15 ರವರೆಗೆ ವಿಮೆ ಮಾಡಿಸಬಹುದಾಗಿದೆ. ಆದ್ದರಿಂದ ಈ ಬೆಳೆಗಳ ವಿಮೆ ಮಾಡಿಸಬೇಕಾದ ರೈತರು ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.

ರೈತರಿಗೆ ತ್ವರಿತವಾಗಿ ಪಹಣಿ ಹಾಗೂ ತಾಬಾಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು.  -ಲಕ್ಷ್ಮಣರಾವ್, ಬೀದರ್ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT