ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಕಥನದಲ್ಲಿ ಭಾರತಕ್ಕೂ ಪಾಠ!

Last Updated 14 ಫೆಬ್ರುವರಿ 2016, 8:58 IST
ಅಕ್ಷರ ಗಾತ್ರ

ಧರ್ಮದ ಹೆಸರಿನಲ್ಲಿ ದೇಶದ ಬೆಳವಣಿಗೆಯ ದಾರಿಯನ್ನು ತಪ್ಪಿಸುವ ಪ್ರಯತ್ನಗಳು ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ‘ರಾಜಕೀಯ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ದೇಶದ ಸಮಾನ ನಾಗರಿಕರು’ ಎನ್ನುವ ಜಿನ್ನಾ ಕನಸು ಗಾಳಿಪಾಲಾದುದು ಏಕೆ ಮತ್ತು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಪಾಕಿಸ್ತಾನಿ ಲೇಖಕಿ ಫ಼ರ್ಹಾನಜ್ ಇಸ್ಪಾನಿ ಅವರದು. ಅವರ ಪುಸ್ತಕದ ಪರಿಶೀಲನೆಯ ನೆಪದಲ್ಲಿ ಭಾರತ ಮತ್ತು ಪಾಕಿಸ್ತಾನದ ವರ್ತಮಾನ ಹಾಗೂ ಸಾಗಬೇಕಾದ ದಾರಿಯ ಬಗ್ಗೆ ಒಂದು ಅವಲೋಕನ.

ಕೋಮುವಾದ, ಜನಾಂಗೀಯವಾದ, ಅಸಹನೆ, ಅಭದ್ರತೆಯಂತಹ ಪರಿಕಲ್ಪನೆಗಳನ್ನು ಕುರಿತು ನಮ್ಮ ನಡುವೆ ನಡೆಯುತ್ತಿರುವ ಚರ್ಚೆ ಒಂದು ಹಂತದ ನಂತರ ಯಾಂತ್ರಿಕ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅದು ನಮ್ಮ ಪ್ರತಿರೋಧವನ್ನಾಗಲೀ ಸಂವೇದನೆಯನ್ನಾಗಲೀ ಚುರುಕುಗೊಳಿಸುತ್ತಿಲ್ಲ. ನಮ್ಮ ಪರಿಭಾಷೆ ಮತ್ತು ಚರ್ಚೆಯ ನೆಲೆಗಳು ಏಕತಾನತೆ ಮತ್ತು ಸಂಕುಚಿತತೆಯಿಂದ ಕೂಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಕೋಮುವಾದ – ಜನಾಂಗೀಯವಾದವೆಂದರೆ ಒಂದು ಧರ್ಮದವರ ವಿರುದ್ಧ ಇನ್ನೊಂದು ಧರ್ಮದವರು ನಡೆಸುವ ದಬ್ಬಾಳಿಕೆ, ತೋರುವ ಅಸಹನೆ–ತಾತ್ಸಾರ ಮಾತ್ರ ಎಂಬುದು ಇಂತಹ ಯಾಂತ್ರಿಕ ಪರಿಕಲ್ಪನೆಗಳಲ್ಲಿ ಒಂದು.

ಕೋಮುವಾದವು ಮೂಲಭೂತವಾಗಿ ಎಲ್ಲ ಮನುಷ್ಯರ ಚೈತನ್ಯ ಮತ್ತು ಕ್ರಿಯಾಶೀಲತೆಯ ವಿರುದ್ಧವಾಗಿಯೇ ಇರುತ್ತದೆ. ಸಂದರ್ಭ, ಸನ್ನಿವೇಶಕ್ಕನುಗುಣವಾಗಿ ಕೆಲವು ನಿರ್ದಿಷ್ಟ ಗುಂಪುಗಳ ವಿರುದ್ಧ ಇರುವಂತೆ ಕಾಣಿಸಿಕೊಳ್ಳುತ್ತದೆ, ಅಷ್ಟೆ. ಇನ್ನೂ ಮುಖ್ಯವಾಗಿ ಕೋಮುವಾದವು ಯಾವುದೇ ಧರ್ಮದ, ಯಾವುದೇ ಒಬ್ಬ ಮನುಷ್ಯನನ್ನು ಕೂಡ ವಿಶಿಷ್ಟ ಸಾಧ್ಯತೆ–ಕನಸು, ಕ್ರಿಯಾಶೀಲತೆಗಳು ಇರುವ ಒಂದು ಚೈತನ್ಯವೆಂದು ನೋಡುವುದೇ ಇಲ್ಲ. ಮನುಷ್ಯರನ್ನು ಗುಂಪಾಗಿ, ಸಮೂಹವಾಗಿ, ಒಂದು ಪರಿಕಲ್ಪನೆ, ವಿಚಾರ, ಆಶಯಗಳ ಪ್ರತಿನಿಧಿಯಾಗಿಯೋ ಸಂಕೇತವಾಗಿಯೋ ನೋಡುತ್ತದೆ.

ಆಧುನಿಕತೆಯ ದೊಡ್ಡ ಕೊಡುಗೆಯೆಂದರೆ ವಿಜ್ಞಾನವೂ ಅಲ್ಲ, ತಂತ್ರಜ್ಞಾನವೂ ಅಲ್ಲ. ಬದಲಿಗೆ ಮನುಷ್ಯನನ್ನು ವ್ಯಕ್ತಿಯಾಗಿ, ವಿಶಿಷ್ಟವಾಗಿ ಗುರುತಿಸಲೇಬೇಕೆಂದು ನಮ್ಮ ಮನಸ್ಸಿಗೆ ಹೇಳಿಕೊಟ್ಟ, ಹೇಳಿಕೊಡುತ್ತಿರುವ ನಿರಂತರ ಪಾಠವೇ ಆಧುನಿಕತೆಯ ದೊಡ್ಡ ಕೊಡುಗೆಯಾಗಿದೆ. ಈ ನೋಟವನ್ನು ಕೋಮುವಾದಿಗಳು, ಜನಾಂಗೀಯವಾದಿಗಳು ಒಪ್ಪುವುದಿಲ್ಲ. ವ್ಯಂಗ್ಯವೆಂದರೆ ಒಮ್ಮೊಮ್ಮೆ ಪ್ರಗತಿಪರರು, ಜಾತ್ಯತೀತವಾದಿಗಳು ಕೂಡ ಮನುಷ್ಯನನ್ನು ಗುಂಪಾಗಿ, ಸಮೂಹವಾಗಿಯೇ, ಗುಂಪು, ಸಮೂಹಗಳ ಪ್ರತಿನಿಧಿಯಾಗಿಯೇ ನೋಡಲು ಪ್ರಯತ್ನಿಸುವುದು.

ಒಂದು ದೇಶವನ್ನು ಹುಟ್ಟುಹಾಕುವಾಗ, ಒಂದು ಸಮಾಜವನ್ನು ಬೆಳೆಸುವಾಗ, ಸರ್ಕಾರವು, ಸಮಾಜವು ಮನುಷ್ಯರನ್ನು, ರಾಜಕೀಯವಾಗಿ, ಸಾಮಾಜಿಕವಾಗಿ ಹೇಗೆ ಪರಿಭಾವಿಸುತ್ತದೆ ಎಂಬುದು ಮುಖ್ಯ. ಮನುಷ್ಯನ ಧಾರ್ಮಿಕ ಹಿನ್ನೆಲೆ, ಸಾಂಸ್ಕೃತಿಕ ಆಚರಣೆಗಳ ಆಧಾರದ ಮೇಲೆಯೇ ಆತನ ನಾಗರಿಕ ಹಕ್ಕುಗಳು, ಅವಕಾಶಗಳು ನಿರ್ಧಾರವಾಗಬೇಕೆ? ಇಲ್ಲ, ಸರ್ಕಾರದ, ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ? ರಾಷ್ಟ್ರೀಯತೆಯ, ಸಮಾಜದ ಅಸ್ಮಿತೆಯ ಆಧಾರ ಯಾವುದಿರಬೇಕು? ಗ್ರಾಂಥಿಕ ಮತ್ತು ಸಾಂಸ್ಥಿಕ ಧರ್ಮದ ಪರಿಕಲ್ಪನೆಯು ರಾಷ್ಟ್ರೀಯತೆಯ ಆಧಾರವಾಗಿ ನಿಲ್ಲಬಹುದೆ? ಈ ವಿಚಾರದಲ್ಲಿ ಇತಿಹಾಸ ಮತ್ತು ಸಮಕಾಲೀನತೆ ಹೇಳುವ ಪಾಠಗಳೇನು?

ಇಂತಹ ಪ್ರಶ್ನೆಗಳನ್ನು ಪಾಕಿಸ್ತಾನದ ಸಂದರ್ಭದಲ್ಲಿ ಪರಿಶೀಲಿಸಿರುವ ಒಂದು ಮುಖ್ಯ ಪುಸ್ತಕ ‘PURIFYING THE LAND OF THE PURE – PAKISTANS RELIGIOUS MINORITIES’ (HARPER COLLINS – 2015). ಈ ಪುಸ್ತಕದ ಲೇಖಕಿ ಫ಼ರ್ಹಾನಜ್ ಇಸ್ಪಾನಿ. ಈಕೆ ಬೆನಜೀರ್ ಭುಟ್ಟೋ ಆಡಳಿತದಲ್ಲಿ ಸಂಸದೆಯಾಗಿದ್ದವರು, ಸರ್ಕಾರದ ಮಾಹಿತಿ ವಕ್ತಾರರಾಗಿದ್ದವರು, ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಕೆಲಸ ಮಾಡಿದವರು. ಜೊತೆಗೆ ವುಡ್ರೊ ವಿಲ್ಸನ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಸಂಶೋಧಕಿ ಕೂಡ.

ಲೇಖಕಿಯ ಈ ಹಿನ್ನೆಲೆ ಕೃತಿಯಲ್ಲಿ ಮಂಡಿಸಿರುವ ವಿಶ್ಲೇಷಣೆಗೆ ವಸ್ತುನಿಷ್ಠತೆಯನ್ನು ಒದಗಿಸಿಕೊಡುವುದರ ಜೊತೆಗೆ ಒಂದು ರೀತಿಯ ದೂರದೃಷ್ಟಿಯನ್ನೂ ರೂಪಿಸಿಕೊಟ್ಟಿದೆ. ಕೃತಿಯು ಪಾಕಿಸ್ತಾನದ ವಿದ್ಯಮಾನಗಳನ್ನು ಕುರಿತೇ ಆಗಿದ್ದರೂ ಭಾರತ ಮತ್ತು ಏಷ್ಯಾ ಖಂಡದ ಇತರ ದೇಶಗಳ ಸಾರ್ವಜನಿಕ ಜೀವನದ ವಿದ್ಯಮಾನಗಳ ಮೇಲೂ ಪ್ರತ್ಯಕ್ಷ–ಪರೋಕ್ಷ ಬೆಳಕು ಚೆಲ್ಲುತ್ತದೆ. ನಮ್ಮ ಎಷ್ಟೋ ಪರಿಕಲ್ಪನೆ–ಪೂರ್ವಗ್ರಹಗಳನ್ನು ಕುರಿತು ಮರುಚಿಂತಿಸುವಂತೆ ಒತ್ತಾಯಿಸುತ್ತದೆ.

ಧರ್ಮದ ಆಧಾರದ ಮೇಲೆಯೇ ಪಾಕಿಸ್ತಾನ ರಚಿತವಾಗಿದ್ದರೂ, ದೇಶವು, ಸಮಾಜವು ಏಕೆ ಕೋಮುವಾದ ಮತ್ತು ಜನಾಂಗೀಯವಾದದ ಕಡೆ ಹೊರಳಕೂಡದು. ಹಾಗೆ ಹೊರಳುವುದರಿಂದ ಪಾಕಿಸ್ತಾನದ ನೆಮ್ಮದಿ ಮತ್ತು ಪ್ರಗತಿಗೆ ಹೇಗೆ ತೊಡಕಾಗುತ್ತದೆ ಎಂದು ದೇಶ ವಿಭಜನೆಯ ಪ್ರಾರಂಭದ ದಿನಗಳಲ್ಲೇ ಕಳಕಳಿಯಿಂದ ಯೋಚಿಸಿದ – ಎಚ್ಚರಿಸಿದ ಮಹಮದ್ ಆಲಿ ಜಿನ್ನಾ, ಸುಹ್ರಾವರ್ದಿ ಅವರಂತಹ ಗಣ್ಯ ಚಿಂತಕರ ವಿಚಾರಗಳಿಂದ ಆ ದೇಶದ ಸಮಾಜ ಮತ್ತು ರಾಜಕೀಯ ನಾಯಕತ್ವ ಏಕೆ ವಿಮುಖವಾಯಿತು? ಹೀಗೆ ವಿಮುಖವಾದದ್ದರ ಹಿಂದೆ ಇದ್ದ ಒತ್ತಾಯಗಳು ಯಾವ ಸ್ವರೂಪದವು? ಪಾಕಿಸ್ತಾನದಲ್ಲಿ ನಾವು ಇಂದು ಕಾಣುತ್ತಿರುವ ಜನಾಂಗೀಯವಾದವು ಹಿಂದೂಗಳು, ಕ್ರೈಸ್ತರಿಗಿಂತ ಹೆಚ್ಚಾಗಿ ಶಿಯಾ ಮತ್ತು ಮಹಮದೀಯ ಪಂಗಡಕ್ಕೆ ಸೇರಿದ ಮುಸ್ಲಿಮರ ವಿರುದ್ಧವೇ ಏಕೆ ಹೆಚ್ಚು ತೀವ್ರವಾಗಿದೆ ಮತ್ತು ಹಿಂಸಾತ್ಮಕವಾಗಿದೆ?

ಕಣ್ಣು ಮತ್ತು ಹೃದಯ ಎರಡೂ ಇಲ್ಲದ ಆತಂಕವಾದಿ ಮತ್ತು ಕೋಮುವಾದಿಗಳ ಕಪಿಮುಷ್ಟಿಯಲ್ಲಿ ಸರ್ಕಾರವು, ಸಮಾಜವು ಹೇಗೆ ಸಿಕ್ಕಿಕೊಂಡಿದೆ? ಎಂಬ ಪ್ರಶ್ನೆಗಳನ್ನು ರಾಜಕೀಯ ಸೂಕ್ಷ್ಮತೆಯಲ್ಲಿ ಈ ಕೃತಿ ಪರಿಶೀಲಿಸುತ್ತದೆ. ಹೀಗೆ ಪರಿಶೀಲಿಸುತ್ತಲೇ ಕೋಮುವಾದ, ಜನಾಂಗೀಯವಾದವೆಂದರೆ ನಿರ್ದಿಷ್ಟ ಧರ್ಮಗಳು ಹಾಗೂ ಧಾರ್ಮಿಕಸ್ಥರು ಒಂದು ಸಂದರ್ಭದಲ್ಲಿ ಪರಸ್ಪರ ವಿರುದ್ಧವಾಗಿ ನಿಲ್ಲುವುದು ಮಾತ್ರವಷ್ಟೇ ಅಲ್ಲ, ಸರ್ಕಾರ–ಸಮಾಜವನ್ನು, ದಿನನಿತ್ಯದ ನಾಗರಿಕ ಜೀವನವನ್ನು ಪ್ರಗತಿಗೆ, ನೆಮ್ಮದಿಗೆ ಮಾರಕವಾಗುವಂತೆ ಜೀವನ ಆಡಳಿತವನ್ನು ನೋಡುವ, ರೂಪಿಸುವ ಒಂದು ವಿಕೃತ ಚಿಂತನಕ್ರಮ ಎಂಬುದನ್ನು ಸೋದಾಹರಣವಾಗಿ ಸಾಬೀತುಪಡಿಸುತ್ತದೆ.

ಪ್ರಸಿದ್ಧ ಇತಿಹಾಸಕಾರ ಇರ್ಫಾನ್ ಹಬೀಬ್ ಹೇಳಿರುವ ಹಾಗೆ ಪಾಕಿಸ್ತಾನವು ಹೇಗೆ ಒಂದು ಹಿಂಸಾತ್ಮಕ ಮತ್ತು ದಮನಕಾರಿ ದೇಶವಾಗಿ ಪರಿವರ್ತನೆ ಹೊಂದಿತು, ಇಸ್ಲಾಂ ಧರ್ಮದ ಆಧ್ಯಾತ್ಮಿಕ, ನೈತಿಕ ಪರಿಕಲ್ಪನೆಗಳಿಂದ ಹೇಗೆ ದೂರವಾಯಿತು, ಜನರಲ್ಲಿ ಹೇಗೆ ಅಭದ್ರತೆಯ ಭಾವನೆಯನ್ನು ಬಿತ್ತಲಾಯಿತು ಎಂಬೆಲ್ಲ ವಿಚಾರಗಳನ್ನು ಈ ಕೃತಿ ಮನಮುಟ್ಟುವಂತೆ ಓದುಗರಿಗೆ ತಲುಪಿಸುತ್ತದೆ.

ದೇಶ ವಿಭಜನೆಯು ಒಂದು ದುರಂತ ಎನ್ನುವುದು ಎಷ್ಟು ನಿಜವೋ, ಅದು ಅನಿವಾರ್ಯ ಎನ್ನುವಂತಹ ಸಂದರ್ಭವನ್ನು ಸೃಷ್ಟಿಸಲಾಯಿತು ಎಂಬುದು ಸಹ ಅಷ್ಟೇ ನಿಜ. ಈ ಅನಿವಾರ್ಯತೆಯನ್ನು ಸೃಷ್ಟಿಸುವಲ್ಲಿ ಬ್ರಿಟಿಷರು, ಹಿಂದೂಗಳು, ಮುಸ್ಲಿಮರು, ಕಾಂಗ್ರೆಸ್, ಮುಸ್ಲಿಂಲೀಗ್ ಎಲ್ಲರದೂ ಪಾಲಿದೆ. ಅವಿಭಜಿತ ಭಾರತದಲ್ಲಿ ಮುಸ್ಲಿಮರು ಶಾಶ್ವತವಾಗಿ ಅಲ್ಪಸಂಖ್ಯಾತರಾಗಿ ಉಳಿಯಬಾರದು ಎಂಬ ಭಯ–ಆತಂಕ ಜಿನ್ನಾರಂತಹವರಿಗೂ ಇದ್ದುದು ನಿಜ. ಆದರೆ ಯಾವುದೇ ಧರ್ಮವನ್ನು ಆಧಾರವಾಗಿಟ್ಟುಕೊಂಡು ಒಂದು ದೇಶದ ನಿತ್ಯ ಜೀವನವನ್ನು ಕಟ್ಟಲಾಗುವುದಿಲ್ಲ. ಧರ್ಮ ಮತ್ತು ನಂಬಿಕೆ ಎಂಬುದು ಕೊನೆಗೂ ಮನುಷ್ಯನ ಅಂತರಂಗಕ್ಕೆ ಸಂಬಂಧಪಟ್ಟ ವಿಚಾರ.

ರಾಜಕೀಯವಾಗಿ, ಸಂವಿಧಾನಾತ್ಮಕವಾಗಿ ಕಾನೂನಿನ ದೃಷ್ಟಿಯಿಂದ ಎಲ್ಲ ನಾಗರಿಕರು ಸಮಾನರು ಎಂಬ ಆಶಯವನ್ನು ಜಿನ್ನಾ ಮತ್ತು ಸುಹ್ರಾವರ್ದಿ ಮತ್ತೆ ಮತ್ತೆ ವ್ಯಕ್ತಪಡಿಸುತ್ತಿದ್ದರು. ಪಾಕಿಸ್ತಾನದ ಸಂವಿಧಾನ ಸಭೆಯನ್ನು ಉದ್ದೇಶಿಸಿ ಜಿನ್ನಾ ಮಾಡಿದ ಪ್ರಸಿದ್ಧ ಭಾಷಣದ ಮಾತುಗಳು ಹೀಗಿವೆ: ‘‘ಪಾಕಿಸ್ತಾನವು ಒಂದು ಸಂಪದ್ಭರಿತ ಮತ್ತು ಪ್ರಮುಖ ರಾಷ್ಟ್ರವಾಗಬೇಕಾದರೆ ನಾವು ಬಡವರ, ಜನಸಾಮಾನ್ಯರ ಕಲ್ಯಾಣದ ಬಗ್ಗೆ ಸದಾ ಗಮನ ಕೊಡಬೇಕು. ಹಿಂದಿನದನ್ನೆಲ್ಲ ಮರೆಯಬೇಕು. ಯಾವುದೇ ಜನಾಂಗಕ್ಕೆ ಯಾರಾದರೂ ಸೇರಿರಲಿ, ಈ ಜನಾಂಗಗಳ ನಡುವೆ ಹಿಂದಿನ ಸಂಬಂಧಗಳು ಹೇಗಾದರೂ ಇದ್ದಿರಲಿ. ಕಾನೂನು, ಸಂವಿಧಾನ, ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನ ಹಕ್ಕು ಮತ್ತು ಅವಕಾಶಗಳನ್ನುಳ್ಳವರು ಎಂಬುದನ್ನು ಒಪ್ಪಿಕೊಂಡರೆ ಪಾಕಿಸ್ತಾನವು ಸಾಧಿಸಬಹುದಾದ ಪ್ರಗತಿಗೆ ಎಲ್ಲೆಯೆಂಬುದಿಲ್ಲ.

ಕಾಲಕ್ರಮೇಣ ಹಿಂದೂಗಳು ಹಿಂದೂಗಳಾಗಿ ಉಳಿಯುವುದಿಲ್ಲ, ಮುಸ್ಲಿಮರು ಮುಸ್ಲಿಮರಾಗಿ ಉಳಿಯುವುದಿಲ್ಲ (ಧಾರ್ಮಿಕ ಅರ್ಥದಲ್ಲಲ್ಲ ನಾನು ಹೇಳುತ್ತಿರುವುದು. ಏಕೆಂದರೆ ಅದು ಪ್ರತಿಯೊಬ್ಬರ ಖಾಸಗಿ ವಿಚಾರ). ರಾಜಕೀಯ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ದೇಶದ ಸಮಾನ ನಾಗರಿಕರಾಗಿರುತ್ತಾರೆ’’. ಈ ಮಾತುಗಳನ್ನು ಹೇಳುವಾಗ ಜಿನ್ನಾರ ಮನಸ್ಸಿನಲ್ಲಿದ್ದುದು ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರು ಪರಸ್ಪರ ದೂಷಣೆ, ಮೂದಲಿಕೆ, ಹಿಂಸಾಚಾರಗಳಲ್ಲಿ ತೊಡಗಿ ಕಷ್ಟಗಳನ್ನು ಅನುಭವಿಸಿದ ರೀತಿ ಮತ್ತು ಆ ಇತಿಹಾಸ ಪಾಕಿಸ್ತಾನ ಮತ್ತು ಭಾರತದೊಳಗಡೆ ಪುನರಾವರ್ತನೆ ಆಗಬಾರದೆಂಬ ಕಳಕಳಿ.

ಇದೇ ಆಶಯವನ್ನು ಗಾಂಧೀಜಿ ಸಾಂಸ್ಕೃತಿಕ ಪರಿಭಾಷೆಯಲ್ಲಿ ಇನ್ನೂ ಮನೋಜ್ಞವಾಗಿ ಮಂಡಿಸಿದ್ದರು. ಭಾರತದ ಒಕ್ಕೂಟದಿಂದ ಮುಸಲ್ಮಾನರೆಲ್ಲ ಹೊರಗುಳಿದುಬಿಟ್ಟರೆ ಭಾರತದಲ್ಲಿ ಹಿಂದೂಧರ್ಮ ನಾಶವಾಗುತ್ತದೆ. ಹಾಗೆಯೇ ಪಾಕಿಸ್ತಾನದಲ್ಲಿ ಮುಸ್ಲಿಮರಲ್ಲದವರೆಲ್ಲ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅಲ್ಲಿ ಇಸ್ಲಾಂಧರ್ಮ ನಾಶವಾಗುತ್ತದೆ. ಈ ಒಳನೋಟವನ್ನು ಜಿನ್ನಾ ಅವರ ಸಹೋದ್ಯೋಗಿ ಸುಹ್ರಾವರ್ದಿ ಮತ್ತೆ ಮತ್ತೆ ಉಲ್ಲೇಖಿಸುತ್ತಿದ್ದರು ಎಂಬುದು ಈ ಪುಸ್ತಕದಲ್ಲಿ ದಾಖಲಾಗಿದೆ. ದುರದೃಷ್ಟವೆಂದರೆ ಜಿನ್ನಾ ಬಹು ಬೇಗನೆ ತೀರಿಕೊಂಡರು ಮತ್ತು ಅವರ, ಅವರಂಥವರ ವಿಚಾರಗಳು ಬಹು ಬೇಗ ಮೂಲೆಗುಂಪಾದವು.

ದೇಶದ ವಿಭಜನೆ ಅಧಿಕೃತವಾಗಿ ಆಗಿಹೋಗಿದ್ದರೂ ಭೌಗೋಳಿಕ ಗಡಿಗಳು ನಾಲ್ಕಾರು ದಿಕ್ಕುಗಳಲ್ಲಿ ಹಂಚಿಹೋಗಿ ವಿಭಜನೆಯೆಂಬುದು ಎಷ್ಟು ಕೃತಕ ಮತ್ತು ನಿರ್ವಹಿಸಲು ಎಷ್ಟು ಕಷ್ಟ ಎಂಬುದು ಕೂಡ ಎಲ್ಲರಿಗೂ ಕಾಣುವಂತಿತ್ತು. ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ಸಾವಿರಾರು ಮೈಲಿಗಳ ಅಂತರವಿದ್ದು, ಮುಸ್ಲಿಮರಾಗಿದ್ದರೂ ಬಾಂಗ್ಲಾ ಸಂಸ್ಕೃತಿ ಮತ್ತು ಭಾಷೆಗೆ ಹತ್ತಿರವಾಗಿದ್ದ, ಪೂರ್ವ ಪಾಕಿಸ್ತಾನದವರು ಪಾಕಿಸ್ತಾನದ ಯಜಮಾನಿಕೆ, ಮೇಲರಿಮೆಗೆ ಪ್ರಾರಂಭದಿಂದಲೂ ತೋರುತ್ತಿದ್ದ ಪ್ರತಿರೋಧ, ಧರ್ಮವು ರಾಷ್ಟ್ರೀಯತೆಯ ಮೂಲವಾಗಲಾರದು ಎಂಬುದನ್ನು ಎತ್ತಿ ತೋರಿಸುತ್ತಿತ್ತು ಮತ್ತು ಈ ಭಾವನೆ 1971ರಲ್ಲಿ ಬಾಂಗ್ಲಾ ದೇಶದ ನಿರ್ಮಾಣಕ್ಕೆ ಕಾರಣವಾಯಿತು.

ರಾಜಕೀಯವಾಗಿ, ಭೌಗೋಳಿಕವಾಗಿ ಪ್ರತ್ಯೇಕವಾಗಿದ್ದರೂ ಎರಡೂ ದೇಶಗಳ ನಾಗರಿಕರು ಸಾವಿರಾರು ವರ್ಷಗಳ ಕಾಲ ನೆರೆಹೊರೆಯವರಾಗಿದ್ದರು. ಸಮಾನ ಭಾಷೆ, ಸ್ಮೃತಿ, ಆಚರಣೆಗಳು ಕೂಡ ಇದ್ದವು. ಸಿಂಧ್–ಬಲೂಚಿಸ್ತಾನದ ಭಾಗಗಳಲ್ಲಿ ಸೂಫಿ ಸಂಸ್ಕೃತಿಯ ಪ್ರಭಾವ ಗಾಢವಾಗಿತ್ತು. (ವ್ಯಂಗ್ಯವೆಂದರೆ ಇವತ್ತು ಆತಂಕವಾದ, ಅಸಹಿಷ್ಣುತೆ ಹೆಚ್ಚಿರುವುದು ಈ ಭಾಗದಲ್ಲೇ). ಧಾರ್ಮಿಕ ಅಲ್ಪಸಂಖ್ಯಾತರ ಶೇಕಡಾವಾರು ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ 1947ರಲ್ಲಿ ಭಾರತಕ್ಕಿಂತ ಪಾಕಿಸ್ತಾನದಲ್ಲೇ ಹೆಚ್ಚು ಧಾರ್ಮಿಕ ಅಲ್ಪಸಂಖ್ಯಾತರಿದ್ದರು (ಶೇ. 23ರಷ್ಟು).

ಧಾರ್ಮಿಕ ಪರಿಕಲ್ಪನೆ ರಾಷ್ಟ್ರೀಯತೆಯ ಮೂಲವಾಗಿಯಾಗಲೀ ಒಂದು ನಾಗರಿಕ ಸಮಾಜವನ್ನು ಕಟ್ಟುವ ಆಶಯವಾಗಿಯಾಗಲೀ ಆಧುನಿಕ ಸಂದರ್ಭದಲ್ಲಿ ಪ್ರಸ್ತುತವಾದುದಲ್ಲ ಎಂಬ ಪಾಠವನ್ನು 18 ಮತ್ತು 19ನೇ ಶತಮಾನದಲ್ಲಿ ಆರ್ಥಿಕ ಕಾರಣಗಳೇ ಪ್ರಧಾನವಾಗಿ ಒಂದರ ನಂತರ ಒಂದೆಂಬಂತೆ ಉದಯಿಸಿದ ಯೂರೋಪಿನ ರಾಷ್ಟ್ರಗಳು, ಕೆಮಾಲ್ ಪಾಷಾರಂಥವರ ನಾಯಕತ್ವ ಮತ್ತೆ ಮತ್ತೆ ನೆನಪಿಸುತ್ತಿದ್ದವು.

ಇದೆಲ್ಲ ಇತಿಹಾಸದ ಮಾತೆನ್ನುವುದಾದರೆ 1950, 1960ರ ದಶಕದಲ್ಲೇ ಸಾದತ್ ಮತ್ತು ನಾಸೆರ್‌ರಂತಹ ಪ್ರಗತಿಪರ ಮನೋಧರ್ಮದ ನಾಯಕರು ಮೂಡಿ ಬಂದಿದ್ದರು. ಜಿನ್ನಾ, ಸುಹ್ರಾವರ್ದಿ ನಂತರದ ನಾಯಕತ್ವ ಈ ಯಾವ ವಿದ್ಯಮಾನಗಳಿಂದಲೂ ಪ್ರೇರಣೆಗಳನ್ನು ಪಡೆಯಲು ಸಿದ್ಧವಿಲ್ಲದೆ ಇದ್ದುದರಿಂದ ಸಾಂಸ್ಥಿಕ ಮತ್ತು ಗ್ರಾಂಥಿಕ ಧರ್ಮವನ್ನೇ ರಾಷ್ಟ್ರ ಕಟ್ಟುವ ಒಂದು ಸಾಧನವನ್ನಾಗಿ ಬಳಸಿಕೊಳ್ಳುವುದು ಅನಿವಾರ್ಯವಾಯಿತು. ಕೃತಿಯಲ್ಲಿ ಪ್ರಸ್ತಾಪವಾಗದೆಯೂ ಪರೋಕ್ಷವಾಗಿ ಸೂಚಿತವಾಗಿರುವ ಒಂದು ಅಂಶವೆಂದರೆ, ಧಾರ್ಮಿಕ ಪರಿಕಲ್ಪನೆಯನ್ನೇ ಒಂದು ಗೀಳನ್ನಾಗಿ ಮಾಡಿಕೊಳ್ಳುವ ನಾಯಕತ್ವಕ್ಕೆ ಬಹುಜನರ ಜೀವನಕ್ಕೆ ಸಂಬಂಧಪಟ್ಟ ದಿನನಿತ್ಯದ ಜೀವನದ ಸಾಮಾಜಿಕ – ಆರ್ಥಿಕ ಆಯಾಮಗಳು ಯಾವತ್ತೂ ಮುಖ್ಯವಾಗಿ ಕಾಣುವುದಿಲ್ಲವೆಂಬುದು.

ಈ ಅನಿವಾರ್ಯತೆಯನ್ನು ಒಮ್ಮೆ ಒಪ್ಪಿಕೊಂಡ ಮೇಲೆ ಮುಂದಿನ ಹೆಜ್ಜೆಗಳು ದುರಂತಮಯ ಮತ್ತು ಪ್ರತಿಯೊಂದು ಹೆಜ್ಜೆಯು ನಿರ್ಮಿಸಿಕೊಳ್ಳುವ ತರ್ಕದಿಂದಾಗಿ ಇನ್ನೂ ಹೆಚ್ಚಿನ ಜನಾಂಗೀಯವಾದ ಮತ್ತು ಆತಂಕವಾದದ ಕಡೆಗೆ ಒಂದೇ ದಿಕ್ಕಿನಲ್ಲಿ ಪಯಣ ಮಾತ್ರವಷ್ಟೇ. 1949ರಲ್ಲಿ ಸಂವಿಧಾನ ಸಭೆಯು ಅಂಗೀಕರಿಸಿದ ಉದ್ದೇಶಗಳ ಗೊತ್ತುವಳಿ ಎಂಬ ತಿದ್ದುಪಡಿ– ಇಡೀ ಸೃಷ್ಟಿಯು ಸರ್ವ ದಯಾಮಯನಿಗೆ ಸೇರಿದ್ದೆಂದು ಪಾಕಿಸ್ತಾನದ ಆಡಳಿತವು ಆ ದಯಾಮಯನು ನಿರೂಪಿಸುವ ಚೌಕಟ್ಟಿನೊಳಗೇ ನಡೆಯಬೇಕೆಂದು ನಿರ್ಧರಿಸಿತು.

ಧಾರ್ಮಿಕ ಗ್ರಂಥದಲ್ಲಿ ನಿರೂಪಿಸಿರುವ ನಿಯಮಾವಳಿಗೆ ಅನುಗುಣವಾಗಿಯೇ ನಾಗರಿಕರು ಬದುಕು ಕಟ್ಟಿಕೊಳ್ಳಬೇಕು ಮತ್ತು ಸರ್ಕಾರವು ಆಡಳಿತ ನಡೆಸಬೇಕೆಂದು ಒಂದು ರೀತಿಯ ಸ್ವಯಂ ಆದೇಶವನ್ನು ಕೂಡ ಜಾರಿ ಮಾಡಲಾಯಿತು. ನಂತರ ಬಂದ ಎಲ್ಲ ಸರ್ಕಾರಗಳು ಈ ದಿಕ್ಕಿನಲ್ಲೇ ಇನ್ನೂ ಸ್ಪಷ್ಟವಾಗಿ, ತೀವ್ರವಾಗಿ ಹೆಜ್ಜೆಯಿಟ್ಟವು. ಪಾಕಿಸ್ತಾನವು ಉದಯವಾಗಿರುವುದೇ ಪರಿಶುದ್ಧವಾದ ಇಸ್ಲಾಂ ಧರ್ಮ – ಪ್ರಭುತ್ವವನ್ನು ಸ್ಥಾಪಿಸುವುದಕ್ಕಾಗಿ ಎಂಬ ನಂಬಿಕೆ ಮತ್ತು ಈ ಸ್ಥಾಪನೆಗೆ ಅಗತ್ಯವಾದದ್ದು ಒಳಗಿನ ಮತ್ತು ಹೊರಗಿನ ಶತ್ರುಗಳ ನಿರ್ಣಾಮವೆಂಬ ಅನಿವಾರ್ಯತೆಯನ್ನು ಇಡೀ ದೇಶದ ಮೇಲೆ ಹೇರಲಾಯಿತು.

ಭಾರತವು ಒಂದು ಹಿಂದೂ ರಾಷ್ಟ್ರವೆಂಬ ಕಲ್ಪನೆಯನ್ನು ಶಾಲಾ ಪಠ್ಯಗಳಿಂದ ಹಿಡಿದು, ವಿದೇಶಾಂಗ ನೀತಿಯ ನಿರೂಪಣೆಯವರೆಗೆ ಮತ್ತೆ ಮತ್ತೆ ಈ ಅಂಶವನ್ನು ವಿಷದಪಡಿಸಲಾಯಿತು. ಹಾಗೆಯೇ ದೇಶದೊಳಗಡೆ ಇರುವ ಅಲ್ಪಸಂಖ್ಯಾತರು ಕೂಡ ಪರಿಶುದ್ಧವಾದ ಇಸ್ಲಾಂ ಸ್ಥಾಪನೆಗೆ ಅಡ್ಡಗಾಲೇ. ಇಲ್ಲಿ ಅಲ್ಪಸಂಖ್ಯಾತರೆಂದರೆ ಹಿಂದೂಗಳು ಮತ್ತು ಕ್ರೈಸ್ತರು ಮಾತ್ರವಲ್ಲ. ಇಸ್ಲಾಂ ಧರ್ಮ ಮತ್ತು ಪ್ರವಾದಿಯನ್ನು ಕುರಿತಂತೆ ಸರ್ಕಾರದ, ಸಾಂಪ್ರದಾಯಿಕ ಧಾರ್ಮಿಕ ಗುರುಗಳ ಪರಿಕಲ್ಪನೆಯನ್ನು ಒಪ್ಪದ ಅಹಮದೀಯ ಮತ್ತು ಶಿಯಾ ಬಣಗಳಿಗೆ ಸೇರಿದ ಮುಸ್ಲಿಮರನ್ನು ಕೂಡ ಒಳಗಿನ ಶತ್ರುಗಳೆಂದೇ ಭಾವಿಸಲಾಗಿದೆ.

ಜಿನ್ನಾ ರಚಿಸಿದ ಮೊದಲ ಸಂಪುಟದಲ್ಲಿ ಹಿಂದೂ, ಶಿಯಾ, ಮಹಮದೀಯರಿಗು ಪ್ರಾತಿನಿಧ್ಯವಿತ್ತು ಮಾತ್ರವಲ್ಲ, ಕಾನೂನು, ವಿದೇಶಾಂಗ ವ್ಯವಹಾರಗಳಂತಹ ಪ್ರಮುಖ ಖಾತೆಗಳನ್ನು ಕೂಡ ಅವರಿಗೆ ನೀಡಲಾಗಿತ್ತು. ಆಡಳಿತದಲ್ಲಿ, ವಣಿಕ ಕ್ಷೇತ್ರದಲ್ಲಿ, ನಾಗರಿಕ ಸಮಾಜದಲ್ಲಿ ಗಣ್ಯ ಸ್ಥಾನ ಪಡೆದಿದ್ದ ಶಿಯಾಗಳು ಮತ್ತು ಅಹಮದೀಯರು ಕ್ರಮೇಣವಾಗಿ, ಖಚಿತವಾಗಿ ತಮ್ಮ ಸ್ಥಾನಗಳನ್ನು, ಪ್ರಾಮುಖ್ಯತೆಯನ್ನು ಕಳೆದುಕೊಂಡರು. ‘ಜಿನ್ನಾ ಅಲ್ಪಸಂಖ್ಯಾತರ ಸಂಸ್ಥೆ’ಯು 2012–15ರ ನಡುವೆ ನಡೆಸಿದ ಕ್ಷೇತ್ರಕಾರ್ಯ ಮತ್ತು ಸಂದರ್ಶನಗಳ ಆಧಾರದ ಮೇಲೆ, ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸೆ, ಬಹಿಷ್ಕಾರ, ನ್ಯಾಯಾಂಗ ರಕ್ಷಣೆಯ ಗೈರು ಹಾಜರಿ ಇವುಗಳನ್ನು ವಿವರವಾಗಿ ತನ್ನ ವರದಿಯಲ್ಲಿ ದಾಖಲಿಸಿದೆ. ಈ ವರದಿಯ ಪ್ರಕಾರ ‘ದೇವ ದೂಷಣೆ’ (BLAS PHEMY LAWS) ಕಾನೂನಿನ ಚೌಕಟ್ಟಿನಲ್ಲಿ ನಿರಂತರವಾಗಿ ದೂಷಣೆಗೆ, ಶಿಕ್ಷೆಗೆ, ಹಿಂಸೆಗೆ ಒಳಗಾಗುತ್ತಿರುವವರು ಮಹಮದೀಯರೇ.

ಧರ್ಮ ಮತ್ತು ಕಾನೂನು, ಧರ್ಮ ಮತ್ತು ದಿನನಿತ್ಯದ ಆಡಳಿತ ನಿರ್ವಹಣೆ, ಧರ್ಮ ಮತ್ತು ಶಿಕ್ಷಣ ಇವುಗಳಿಗಿರುವ ಪರಸ್ಪರ ಸಂಬಂಧದ ಸ್ವರೂಪ ಯಾವ ರೀತಿಯದಿರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಹೇಗೆ ಸಾಂಸ್ಥಿಕ ಮತ್ತು ಗ್ರಾಂಥಿಕ ಧರ್ಮವನ್ನು ಪ್ರತಿನಿಧಿಸುವ ಧಾರ್ಮಿಕ ನಾಯಕರುಗಳಲ್ಲಿ ಕೇಂದ್ರೀಕೃತಗೊಂಡಿತು ಎಂಬುದನ್ನು ಈ ಕೃತಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ. ಮಾತ್ರವಲ್ಲ, ದೇಶದೊಳಗೆ ಆಗಾಗ್ಗೆ ಉಂಟಾದ ಬಿಕ್ಕಟ್ಟುಗಳನ್ನು ಕೂಡ ಈ ವರ್ಗ ತನ್ನ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿತು.

1971ರಲ್ಲಿ ದೇಶ ಇಬ್ಭಾಗವಾಗಿ ಬಾಂಗ್ಲಾದೇಶವು ಉದಯಿಸಿದಾಗ ಪಾಕಿಸ್ತಾನಕ್ಕೆ ಪ್ರಜಾತಂತ್ರ ಮತ್ತು ಜಾತ್ಯತೀತತೆಯ ಕಡೆಗೆ ಹೊರಳಿಕೊಳ್ಳುವ ಒಂದು ಸುವರ್ಣಾವಕಾಶವಿದ್ದರೂ, ಸೇನೆ ಮತ್ತು ಸಾಂಪ್ರದಾಯಿಕ ನಾಯಕತ್ವ ಅಡ್ಡ ಬಂತು. ಒಂದು ಕಾಲಘಟ್ಟದಲ್ಲಿ ಚುನಾವಣೆಗಳ ಮೂಲಕವೇ ಅಧಿಕಾರಕ್ಕೆ ಬಂದಿದ್ದ ಭುಟ್ಟೋ ಸರ್ಕಾರ ಪ್ರಾರಂಭದಲ್ಲಿ ಆಧುನಿಕತೆ ಮತ್ತು ಪ್ರಜಾತಂತ್ರದ ಕಡೆಗೆ ಒಲವು ತೋರಿದ್ದರೂ ಅಧಿಕಾರವನ್ನು ತನ್ನ ಕೈಯಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಸಾಂಪ್ರದಾಯಿಕ ಶಕ್ತಿಗಳನ್ನು ಮಾನ್ಯ ಮಾಡಲೇಬೇಕಾಯಿತು.

ನಂತರ ಬಂದ ಜಿಯಾ ಉಲ್ ಹಕ್ ಸರ್ಕಾರ ಪರಿಸ್ಥಿತಿಯನ್ನು ಇನ್ನಷ್ಟು ಅತಿರೇಕಗೊಳಿಸಿದ್ದು ಹೇಗೆ ಎಂಬ ಚರ್ಚೆ ಧಾರ್ಮಿಕ,ಸಾಂಸ್ಕೃತಿಕ ಭಾವನೆಗಳನ್ನು ಬಡಿದೆಬ್ಬಿಸಿ ಅಧಿಕಾರಕ್ಕೆ ಬರುವವರಿಗೆ ಒಂದು ರೀತಿಯ ನೀತಿ ದುರಂತದ ಪಾಠದಂತಿದೆ. ದೇಶದೊಳಗಡೆ, ಸಮಾಜದೊಳಗಡೆ ಆಂತರಿಕ ಸಾಮೀಪ್ಯ, ಸಮಾನತೆಗಳಿಗೆ ಪ್ರಯತ್ನಿಸದ ಒಂದು ನಾಯಕತ್ವ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಏಕೆ ಯಾವಾಗಲೂ ಯುದ್ಧ ಸನ್ನದ್ಧವಾಗಿರುತ್ತದೆ. ಶಸ್ತ್ರಾಸ್ತ್ರ ನಿರ್ಮಾಣ, ಸಂಗ್ರಹ, ಮಿತಿ ಮೀರಿದ ರಕ್ಷಣಾ ವೆಚ್ಚದಲ್ಲಿ ಏಕೆ ತೊಡಗಿರುತ್ತದೆ.

ಧರ್ಮಕ್ಕೆ ಅಪಾಯವಿದೆ ಎಂಬ ನಿರಂತರ ಬೊಬ್ಬೆಯನ್ನು ಏಕೆ ಹಾಕುತ್ತಲೇ ಇರುತ್ತದೆ. ನಾಯಕತ್ವದ ಬಹುಭಾಗವನ್ನು ಏಕೆ – ಹೇಗೆ ಸೇನೆ, ಗೂಢಾಚಾರ ವಿಭಾಗ, ಧಾರ್ಮಿಕ ಗುರುಗಳೇ ಆಕ್ರಮಿಸಿಕೊಂಡಿದ್ದಾರೆ ಎಂಬ ವಿಶ್ಲೇಷಣೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಹೊಸ ದೃಷ್ಟಿಕೋನದಿಂದ ನೋಡಬಹುದು. ಭಾರತದ ಬೇರೆ ಬೇರೆ ರಾಜಕೀಯ ಪಕ್ಷಗಳು ಕೂಡ ಧಾರ್ಮಿಕ ಅಲ್ಪಸಂಖ್ಯಾತರನ್ನು ಕುರಿತಂತೆ ಮಾತ್ರವಲ್ಲ, ಬಹುಸಂಖ್ಯಾತರನ್ನು ಕುರಿತು ತಳೆಯುವ ನಿಲುವುಗಳನ್ನು, ಬಹುಸಂಖ್ಯಾತರು – ಅಲ್ಪಸಂಖ್ಯಾತರ ನಡುವಿನ ಸಂಬಂಧವನ್ನು ನಿರ್ವಹಿಸುವ ರೀತಿಯನ್ನು ಪರಿಶೀಲಿಸಲು ಕೂಡ ಈ ಒಳನೋಟಗಳು ನೆರವಾಗುತ್ತವೆ.

‘ಪ್ರಭುತ್ವಗಳು ಧರ್ಮದ ಹೆಸರೆತ್ತುವುದೇ ತನ್ನ ದಮನಕಾರಿ ಮತ್ತು ಅಪ್ರಾತಿನಿಧಿಕವಾದ ಆಡಳಿತವನ್ನು ಸಮರ್ಥಿಸಿಕೊಳ್ಳಲು’ ಎಂಬ ಎಡ್ವರ್ಡ್ ಸಯೀದ್‌ನ ಒಳನೋಟ ಮಧ್ಯಪ್ರಾಚ್ಯದ ರಾಷ್ಟ್ರಗಳ ಸಂದರ್ಭದಲ್ಲಿ ಸೂಚಿಸಲ್ಪಟ್ಟಿದ್ದರೂ, ಉಪಖಂಡದ ರಾಷ್ಟ್ರಗಳಿಗೂ ಕೂಡ ಅನ್ವಯಿಸುತ್ತದೆ. ದುರಂತವೆಂದರೆ 1990ರ ದಶಕದ ನಂತರ ತೀವ್ರಗೊಂಡ ಜಾಗತೀಕರಣ, ಆಫ್ಘಾನಿಸ್ತಾನದ ಬೆಳವಣಿಗೆಗಳು, ಜಿಹಾದ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರಕಿದ ಕುಮ್ಮಕ್ಕು ಎಲ್ಲವೂ ಪಾಕಿಸ್ತಾನದಲ್ಲಿ ಮಾತ್ರವಲ್ಲ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಪ್ರಭುತ್ವಗಳನ್ನು ಮತ್ತಷ್ಟು ದಮನಕಾರಿ ನೀತಿಯ ಕಡೆಗೆ, ಮತ್ತು ತೀವ್ರವಾದ ಸಾಂಪ್ರದಾಯಿಕತೆಯ ಕಡೆಗೆ ಚಲಿಸಲು ಕುಮ್ಮಕ್ಕು ನೀಡಿತು.

ಪರಿಸ್ಥಿತಿ ಇಷ್ಟೊಂದು ಏಕಮುಖವಾಗಿದೆಯೇ ಎಂದರೆ ಇಲ್ಲವೆಂದೇ ಹೇಳಬೇಕು. ಇಂತಹ ಬೆಳವಣಿಗೆಗಳು, ಮನೋಧರ್ಮವನ್ನೆಲ್ಲ ಸಕ್ರಿಯವಾಗಿ ವಿರೋಧಿಸಿದ ಪಂಜಾಬಿನ ರಾಜ್ಯಪಾಲ ಸಲ್ಮಾನ್ ತಶೀರ್, ಸಚಿವ ಶಬನಾಜ಼್ ಭಟಿ, ಮಾನವ ಹಕ್ಕುಗಳ ವಕೀಲ ರಶೀದ್ ರಹಮಾನ್, ಚಳವಳಿಗಾರ ಸಬೀನ್ ಅಹಮದ್ ಇವರೆಲ್ಲ ಹತ್ಯೆ, ಹಿಂಸೆಗೆ ಒಳಗಾದರು. ಇವರೆಲ್ಲರ ಬಲಿದಾನ ಮತ್ತು ತ್ಯಾಗ, ಪಾಕಿಸ್ತಾನವು ಒಂದು ಸಮಾಜವಾಗಿ ಕೂಡ ಜನಾಂಗೀಯವಾದ, ಆತಂಕವಾದವನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತದೆ ಎಂಬ ದುರುದ್ದೇಶದ ಪ್ರಚಾರದ ಬಗ್ಗೆ ನಮ್ಮ ಕಣ್ಣು ತೆರೆಸುವುದಕ್ಕೆ ನೆರವಾದರೆ ಈ ಕೃತಿ ರಚನೆಯ ಒಂದು ಮುಖ್ಯ ಉದ್ದೇಶ ಈಡೇರಿದಂತಾಗುತ್ತದೆ.

ಇವರೆಲ್ಲರ ಬಲಿದಾನ, ತ್ಯಾಗದ ಜೊತೆ ಜೊತೆಯಲ್ಲೇ 2014ರ ನಂತರ ಪಾಕಿಸ್ತಾನ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತಂದ ರಾಷ್ಟ್ರೀಯ ಕ್ರಿಯಾ ಯೋಜನೆ, ನ್ಯಾಯಾಂಗವು ಎಲ್ಲ ಹಂತಗಳಲ್ಲೂ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕು ಮತ್ತು ಅವಕಾಶಗಳ ಬಗ್ಗೆ ಆಗಾಗ್ಗೆಯಾದರೂ ತಳೆಯುತ್ತಿರುವ ಸ್ಪಷ್ಟ, ದಿಟ್ಟ ನಿಲುವುಗಳು– ಇವೆಲ್ಲ ಲೇಖಕಿ ಹೇಳುವಂತೆ ಕ್ಷೀಣವಾದ ಆಶಾಕಿರಣಗಳು. ಒಂದು ಸಮಾಜವಾಗಿ, ರಾಷ್ಟ್ರವಾಗಿ, ಪಾಕಿಸ್ತಾನ ತನ್ನ ಸಾಮಾಜಿಕ ವೈವಿಧ್ಯತೆಯನ್ನು ಹೇಗೆ ತಾನೇತಾನಾಗಿ ಕಳೆದುಕೊಂಡಿತು ಎಂಬುದು ಕೃತಿಯುದ್ದಕ್ಕೂ ಇರುವ ನಿರಂತರ ಕಾಳಜಿ.

ಧಾರ್ಮಿಕ, ಜನಾಂಗೀಯ ಪರಿಶುದ್ಧತೆಯ ಗೀಳು ಎಂದಿಗೂ, ಎಲ್ಲಿಯೂ ಕಾರ್ಯಸಾಧ್ಯವಲ್ಲ. ಈ ಗೀಳಿನಿಂದಾಗಿಯೇ ಪಾಕಿಸ್ತಾನ ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆಗೊಳಗಾಗಿದೆ ಮಾತ್ರವಲ್ಲ, ಇಡೀ ದೇಶವೇ ಅಭದ್ರತೆ ಮತ್ತು ಆತಂಕವಾದದ ಕಪಿಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದ ಬಿಡುಗಡೆ ಪಡೆಯಬೇಕಾದರೆ ಧಾರ್ಮಿಕ ಪರಿಶುದ್ಧತೆಯ ಗೀಳಿನಿಂದ ಹೊರಬರುವುದೊಂದೇ ದಾರಿ ಎಂಬ ಕೃತಿಯ ಕೊನೆಯ ವಾಕ್ಯಗಳು ಪಾಕಿಸ್ತಾನದ ಬಗ್ಗೆ ಸದಾಶಯವನ್ನು ಸೂಚಿಸುತ್ತಲೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಧಾರ್ಮಿಕ, ಜನಾಂಗೀಯ ಶುದ್ಧಿ, ಪಾರಮ್ಯವನ್ನು ಬಯಸುವ ದೇಶಗಳಿಗೂ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಗಂಟೆಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT