ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಆಟಗಾರರಿಗೂ ಅವಕಾಶ ಕೊಡಿ

ಭಾರತ ಹಾಕಿ ತಂಡದ ಮಾಜಿ ನಾಯಕ ಪಿಳ್ಳೈ ಆಗ್ರಹ
Last Updated 12 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಹಾಕಿ ಇಂಡಿಯಾ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಆಡಲು ಅವಕಾಶ ಕೊಡ ಬೇಕು ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್‌ ಪಿಳ್ಳೈ ಆಗ್ರಹಿಸಿದ್ದಾರೆ.

‘ಲೀಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಲೀಗ್‌ಗೆ ಸಂಬಂಧಿಸಿದ ಅಧಿಕಾರಿಗಳು ರಾಜಕೀಯ ಮುಖಂಡ ರನ್ನು ಭೇಟಿಯಾಗಿ ಸಮಸ್ಯೆ ಪರಿ ಹರಿಸಬೇಕು. ಭಾರತದಲ್ಲಿ ಯುವ ಆಟಗಾರರಿಗೆ ಉತ್ತಮ ಅವಕಾಶಗಳನ್ನು ಕೊಡಬೇಕು. ಹೆಚ್ಚು ಅಕಾಡೆಮಿಗಳನ್ನು ಸ್ಥಾಪಿಸಲು ಗಮನ ಹರಿಸಬೇಕು’ ಎಂದು ಧನರಾಜ್ ಹೇಳಿದ್ದಾರೆ.

ಹೋದ ವರ್ಷ ಭಾರತದಲ್ಲಿ ನಡೆದ ಹಾಕಿ ಟೂರ್ನಿಯಲ್ಲಿ  ಪಾಕ್‌ ತಂಡ 4–3 ಗೋಲುಗಳಿಂದ ಭಾರತದ ಎದುರು ಗೆಲುವು ಪಡೆದಿತ್ತು. ಆಗ ಪಾಕ್‌ ಆಟಗಾರರು ಕ್ರೀಡಾಂಗಣದಲ್ಲಿ ಅನುಚಿತವಾಗಿ ವರ್ತಿಸಿದ್ದರು. ಆದ್ದರಿಂದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಪಾಕ್ ತಂಡದ ಮೂವರು ಆಟಗಾರರನ್ನು ಅಮಾನತು ಮಾಡಿತ್ತು.

ಈ ಬಗ್ಗೆ ಹಾಕಿ ಇಂಡಿಯಾ ಕೂಡ ಸಿಡಿಮಿಡಿಗೊಂಡಿತ್ತು. ಆದ್ದರಿಂದ ಪಾಕ್‌ ಕ್ಷಮೆಯಾಚಿಸಬೇಕು ಎಂದು ಹಾಕಿ ಇಂಡಿಯಾ ಪಟ್ಟು ಹಿಡಿದಿದೆ. ಇದಕ್ಕೆ ಪಾಕ್‌ ಒಪ್ಪದ ಕಾರಣ ಲೀಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಹಾಕಿ ಇಂಡಿಯಾ  ಹೇಳಿದೆ. ಈ ಹಿನ್ನೆಲೆಯಲ್ಲಿ ಪಿಳ್ಳೈ ಹೇಳಿಕೆ ನೀಡಿದ್ದಾರೆ.

‘ಆಟಗಾರರ ಪ್ರದರ್ಶನ ಗುಣಮಟ್ಟ ಹೆಚ್ಚಿಸಲು ಇರುವ ಹೈ ಪರ್ಫಾಮೆನ್ಸ್‌ ನಿರ್ದೇಶಕ ರೋಲಂಟ್‌ ಓಲ್ಟಮಸ್ ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲ ವಾಗುವಂತ ಯೋಜನೆ ಗಳನ್ನು ರೂಪಿಸುತ್ತಿಲ್ಲ. ಹಾಕಿ ಕ್ರೀಡೆಯ ಬೆಳವಣಿಗೆಗೆ ಶ್ರಮಿಸುತ್ತಿಲ್ಲ’ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

‘ರಾಷ್ಟ್ರೀಯ ತಂಡದಲ್ಲಿರುವ ಆಟಗಾರರ ಸಾಮರ್ಥ್ಯ ಹೆಚ್ಚಿಸಲಷ್ಟೇ ಅವರು ಕೆಲಸ ಮಾಡುತ್ತಿದ್ದಾರೆ. ಜೂನಿಯರ್‌, ಸಬ್‌ ಜೂನಿಯರ್‌, 21 ವರ್ಷದ ಒಳಗಿನವರ ತಂಡಕ್ಕೆ ಹೆಚ್ಚು ಬೆಂಬಲ ನೀಡಬೇಕು. ನಮಗೆ ವಿದೇಶಿ ಕೋಚ್‌ ಅಗತ್ಯವಿಲ್ಲ. ಏಕೆಂದರೆ ನಮ್ಮಲ್ಲಿಯೇ ಸಾಕಷ್ಟು ಪ್ರತಿಭಾವಂತ ಕೋಚ್‌ಗಳಿದ್ದಾರೆ.

ಧ್ಯಾನಚಂದ್‌, ದಲ್ಜಿತ್ ಸಿಂಗ್ ಧಿಲ್ಲೋನ್‌, ಜುಗರಾಜ್‌ ಸಿಂಗ್‌  ಅವರಂಥ ಪ್ರತಿಭಾನ್ವಿತ ಆಟಗಾರರು ರೂಪುಗೊಂಡಿದ್ದು ಭಾರತ ದ ಕೋಚ್‌ಗಳ ಸಾಮರ್ಥ್ಯ ದಿಂದಲೇ ಹೊರತು ವಿದೇಶಿ ಕೋಚ್‌ಗಳ ಬಲದಿಂದ ಅಲ್ಲ’ ಎಂದು ಅವರು ನುಡಿದರು.  ನಗರದಲ್ಲಿ ನಡೆಯುತ್ತಿರುವ ಬೆಂಗಳೂರು ಕಪ್‌ ಹಾಕಿ ಟೂರ್ನಿಯಲ್ಲಿ ಏರ್‌ ಇಂಡಿಯಾ ತಂಡ ಪಾಲ್ಗೊಂಡಿದೆ. ಈ ತಂಡಕ್ಕೆ ಧನರಾಜ್‌ ಪಿಳ್ಳೈ ಮಾರ್ಗದರ್ಶಕರಾಗಿದ್ದಾರೆ.

‘ವಿದೇಶಿ ಕೋಚ್‌ಗಳಿಂದ ಭಾರತದ ಆಟಗಾರರಿಗೆ ಭಾಷೆಯ ಸಮಸ್ಯೆ ಕಾಡಬಹುದು. ನಮ್ಮವರಿಗೆ ಇಂಗ್ಲಿಷ್‌ ಕೂಡ ಬೇಗನೆ ಅರ್ಥವಾಗುವುದಿಲ್ಲ’ ಎಂದೂ ಪಿಳ್ಳೈ ಹೇಳಿದ್ದಾರೆ. ಜೊತೆಗೆ ಪುಣೆ ಮತ್ತು ಮುಂಬೈ ಹಾಕಿ ಲೀಗ್‌ಗಳನ್ನು ಆರಂಭಿಸುವ ಯೋಚನೆ ಹೊಂದಿದ್ದಾಗಿ ತಿಳಿಸಿದ್ದಾರೆ.

‘ಹಾಕಿ ಲೀಗ್‌ನಿಂದಾಗಿ ಆಟಗಾರರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಉತ್ತಮ ಮೊತ್ತ ಲಭಿಸುತ್ತಿರುವುದು ಖುಷಿಯ ವಿಚಾರ. 1992ರಲ್ಲಿ ನಾನು ಹಾಕಿ ಆಡಲು ಆರಂಭಿಸಿದ ದಿನಗಳಲ್ಲಿ ₹ 1.25 ಲಕ್ಷ ಹಣ ಸಿಗುತ್ತಿತ್ತು. ಈಗ ಪ್ರತಿ ಆಟಗಾರನಿಗೆ ₹ 70 ಲಕ್ಷದವರೆಗೂ ಹಣ ಲಭಿಸುತ್ತದೆ’ ಎಂದು ಪಿಳ್ಳೈ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT