ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ನಿಲುವು ಬದಲಾಗಲಿ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದುಷ್ಟಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟರೆ ಮುಂದೊಂದು ದಿನ ಅದು ತನಗೇ ತಿರುಗುಬಾಣವಾಗಬಹುದು ಎನ್ನುವ ಮಾತು ಪಾಕಿ­ಸ್ತಾ­ನದ ವಿಷಯದಲ್ಲಿ ನಿಜವಾಗುತ್ತಿರುವುದು ದುರದೃಷ್ಟಕರ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಉದ್ದೀಪಿಸಲು ತನ್ನ ನೆಲದಲ್ಲೇ ಉಗ್ರರಿಗೆ ಆಶ್ರಯ­ತಾಣ ಒದಗಿಸಿರುವ ಆ ದೇಶ ಆಗಾಗ್ಗೆ ಅದಕ್ಕೆ ಬೆಲೆ ತೆರುತ್ತಿದೆ; ಆತ್ಮಹತ್ಯಾ ದಾಳಿಗಳಿಗೆ ತುತ್ತಾಗುತ್ತಲೇ ಇದೆ.

ವಾಘಾ ಗಡಿಯಲ್ಲಿ ಭಾನುವಾರ ನಡೆದಿ­ರುವ ಬಾಂಬ್‌ ಸ್ಫೋಟ ಇದಕ್ಕೆ ಉದಾಹರಣೆ. ಪ್ರತಿ ಸಂಜೆ ಧ್ವಜ ಅವರೋ­ಹಣದ ವೇಳೆ ಉಭಯ ದೇಶಗಳ ಸೈನಿಕರು ನಡೆಸುವ ಅಣಕು ಆಕ್ರಮಣ­ವನ್ನು ಒಳಗೊಂಡ ಆಕರ್ಷಕ ಕವಾಯತು ವೀಕ್ಷಣೆಗೆ ಎರಡೂ ಗಡಿಗಳಲ್ಲಿ ಸಾಕಷ್ಟು ಜನ ನೆರೆಯುತ್ತಾರೆ. ಮಹಾತ್ಮ ಗಾಂಧೀಜಿ ಮತ್ತು ಮೊಹಮ್ಮದ್‌ ಅಲಿ ಜಿನ್ನಾ ಅವರ ಭಾವಚಿತ್ರಗಳ ಸಮ್ಮುಖದಲ್ಲಿ ನಡೆಯುವ ಈ ಮನ­ಮೋಹಕ ಕವಾಯತನ್ನು ಕಣ್ತುಂಬಿಕೊಳ್ಳಲು ಭಾನುವಾರವಂತೂ ಸಾವಿ­ರಾರು ಜನ ಸೇರುತ್ತಾರೆ. ಅಂತಹ ರಜಾದಿನವನ್ನೇ ಆಯ್ದುಕೊಂಡಿರುವ ಉಗ್ರರು, ಭದ್ರತಾ ಪಡೆಗಳಿಗಿಂತಲೂ ತಾವು ಚಾಣಾಕ್ಷರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಗಡಿಯಲ್ಲಿ ದಾಳಿ ನಡೆಯುವ ಮುನ್ಸೂಚನೆ ಸಿಕ್ಕಿತ್ತು, ಹೀಗಾಗಿ ನಾವು ಎಚ್ಚರಿಕೆ ವಹಿಸಿದ್ದೆವು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಹಾಗಿ­ದ್ದರೆ ಪಾಕಿಸ್ತಾನಕ್ಕೆ ಅಂತಹದ್ದೊಂದು ಮುನ್ಸೂಚನೆ ಸಿಕ್ಕಿರಲಿಲ್ಲವೇ? ಕುಖ್ಯಾತ ಉಗ್ರ ಒಸಾಮ ಬಿನ್‌ ಲಾಡೆನ್‌ ಅಂತಹವನಿಗೇ ಆಶ್ರಯ ಕೊಟ್ಟಿದ್ದ ದೇಶ ಅದು. ಅಲ್ಲಿನ ಸರ್ಕಾರ ಮತ್ತು ಸೇನೆಯ ಆಯಕಟ್ಟಿನ ಜಾಗಗಳಲ್ಲಿ ಇದ್ದು­ಕೊಂಡು ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವವರು ಬೇಕೆಂದೇ ಅಂತಹ ಮುನ್ಸೂಚನೆ ಕಡೆಗಣಿಸಿರಬಹುದಾದ ಸಾಧ್ಯತೆ ಇದೆ. ಹೀಗಾಗಿ ಈ ಭದ್ರತಾ ಲೋಪವನ್ನು ಪಾಕ್‌ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಮುಂಬೈ ದಾಳಿ ಪ್ರಕರಣದಲ್ಲಿ ಭಾರತ ಒದಗಿಸಿದ ಸಾಕ್ಷ್ಯಕ್ಕೆ ಬೆಲೆ ಕೊಟ್ಟು ಉಗ್ರ ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರೆ ಅವು­ಗಳಿಗೆ ತಕ್ಕ ಸಂದೇಶ ರವಾನಿಸಿದಂತೆ ಆಗುತ್ತಿತ್ತು. ಅದು ಬಿಟ್ಟು ನಮ್ಮ ಸಾಕ್ಷ್ಯ­ಗಳನ್ನೇ ಶಂಕೆಯಿಂದ ನೋಡಿದ ಪಾಕಿಸ್ತಾನ ಸರ್ಕಾರದ ನಿಲುವು ಪರೋಕ್ಷ­ವಾಗಿ ಉಗ್ರರ ಬೆನ್ನುತಟ್ಟಿದಂತೆಯೇ ಇತ್ತು. ಹೀಗಾಗಿ ಈಗ ವಾಘಾ ಘಟ­ನೆಯ ನೈತಿಕ ಹೊಣೆ ಹೊರಲು ಮೂರು ಉಗ್ರ ಸಂಘಟನೆಗಳು ಪೈಪೋಟಿ ನಡೆಸುವಂತಹ ಮಟ್ಟಕ್ಕೆ ಅಲ್ಲಿನ ಭಯೋತ್ಪಾದನೆ ಬಂದು ನಿಂತಿದೆ. ದೇಶ, ಧರ್ಮಗಳ ಹಂಗಿಲ್ಲದ ಭಯೋತ್ಪಾದನೆಯು ಮಾನವೀಯತೆಗೆ ಮಾರಕ. ತನ್ನ ಗಡಿಯಿಂದ ಕೆಲವೇ ಮೀಟರ್‌ ದೂರದಲ್ಲಿ ಈ ಘಟನೆ ನಡೆದಿ­ರು­ವು­ದರಿಂದ ಭಾರತ ಸಹ ಕಟ್ಟೆಚ್ಚರ ವಹಿಸಲೇಬೇಕಾಗಿದೆ. ಅತಿಯಾದ ಆತ್ಮ­ವಿಶ್ವಾಸದಿಂದ ಕೊಂಚ ಮೈಮರೆತರೂ ರಾತ್ರಿ ಕಂಡ ಬಾವಿಗೆ ಹಗಲು ಬೀಳ­ಬೇಕಾಗುತ್ತದೆ ಅಷ್ಟೆ.

ಪಾಕಿಸ್ತಾನಕ್ಕೆ ಪ್ರಜೆಗಳ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಶ್ವಾಸಾ­ರ್ಹತೆ­ಯನ್ನು ವೃದ್ಧಿಸಿಕೊಳ್ಳುವ ಮನಸ್ಸಿದ್ದರೆ ಭಯೋತ್ಪಾದನೆ ಕುರಿತ ತನ್ನ ನಿಲು­ವನ್ನೇ ಪಾಕ್‌ ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ವಿಶ್ವ ಸಮು­ದಾ­­ಯಕ್ಕೂ ಇದು ಎಚ್ಚರಿಕೆಯ ಗಂಟೆ. ಇಂತಹ ಕೃತ್ಯಗಳನ್ನು ಅಂತರ­ರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು. ಭಯೋತ್ಪಾ­ದ­ನೆಯ ಬೇರು­ಗಳನ್ನು ಮೂಲೋತ್ಪಾಟನೆ ಮಾಡಲು ದೃಢ ನಿಲುವು ತಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT