ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ನೆಲದಲ್ಲಿ ಭರವಸೆಯ ಬೀಜ ಬಿತ್ತಿದ ಸಬೀನ್‌

ವ್ಯಕ್ತಿ ಸ್ಮರಣೆ
Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಮೂಲಭೂತವಾದಿಗಳ ದಾಳಿ  ಮುಂದುವರಿದಿದೆ. ಲಿಂಗ ಸಮಾನತೆ ಪ್ರತಿ­ಪಾದಕರು, ಮಾನವ ಹಕ್ಕುಗಳ ಹೋರಾಟಗಾರರು ಮೂಲಭೂತವಾದಿಗಳ  ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಮಹಿಳೆಯರ ಶಿಕ್ಷಣ, ಲಿಂಗ ಸಮಾನತೆ ಕೂಗನ್ನು ಉಗ್ರರ ಗುಂಡುಗಳು ಹೊಸಕಿ ಹಾಕುತ್ತಿವೆ.

ಆ ದೇಶಕ್ಕೆ ಇದೇನೂ ಹೊಸದಲ್ಲ. ಕಳೆದ ವಾರ ನಡೆದ, ಮಾನವ ಹಕ್ಕುಗಳ ಕಾರ್ಯಕರ್ತೆ ಸಬೀನ್ ಮಹಮೂದ್ ಅವರ ಹತ್ಯೆಯೂ ಆ ಪೈಕಿ ಒಂದು. ಆಕೆಯ ಸಾವು ಯಾರ ಗಮನವನ್ನೂ ಸೆಳೆಯಲಿಲ್ಲ.

ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಜಾಗೃತಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮರಳುತ್ತಿದ್ದಾಗ, ಬೈಕ್‌ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ಮಳೆಗರೆದರು.  ಅಲ್ಲಿಗೆ  ಮಾನವ ಹಕ್ಕುಗಳ  ಪರವಾದ  ಮತ್ತೊಂದು ಗಟ್ಟಿ ಧ್ವನಿ ಇನ್ನಿಲ್ಲದಂತಾಯಿತು. ಮತ್ತೊಮ್ಮೆ ಮೂಲಭೂತವಾದಿಗಳ ಕೈ ಮೇಲಾಯಿತು.

ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಸ್ಥಳೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಬೀನ್‌ ಧ್ವನಿ ಎತ್ತಿದ್ದರು. ಆಕೆ ಹುಟ್ಟು ಹಾಕಿದ ಹೋರಾಟ ಜನಾಂದೋಲನದ ಸ್ವರೂಪ ಪಡೆದಿತ್ತು.

ಮಾನವ ಮತ್ತು ನಾಗರಿಕ ಹಕ್ಕುಗಳ ಜಾಗೃತಿಯಲ್ಲಿ ತೊಡಗಿದ್ದ ಸಬೀನ್‌ ಅವರದ್ದು ಯಾರನ್ನಾದರೂ ತಕ್ಷಣ ಸೆಳೆಯುವಂತಿದ್ದ ಚುಂಬಕ ವ್ಯಕ್ತಿತ್ವ. ಪಾಕಿಸ್ತಾನದ ಸಂಕೀರ್ಣ ಸ್ಥಿತಿ ಮತ್ತು ವೈಯಕ್ತಿಕವಾಗಿ ಅಪಾಯಕರ ಸವಾಲುಗಳನ್ನು ಎದುರಿಸಿ ಮಾನವ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿದ್ದ ದಿಟ್ಟೆ ಆಕೆ. ಸಂಪ್ರದಾಯವಾದಿಗಳ ಗೊಡ್ಡು ಬೆದರಿಕೆಗೆ ಜಗ್ಗದೆ ತನಗೆ ಅನಿಸಿದಂತೆ ದಿಟ್ಟವಾಗಿ ಬದುಕಿದ ಗಟ್ಟಿಗಿತ್ತಿ.
ಸದಾ ಸ್ಕಿನ್‌ ಟೈಟ್‌ ಜೀನ್ಸ್‌ ಮತ್ತು ಟಿ–ಶರ್ಟ್‌ ತೊಡುತ್ತಿದ್ದ ಸಬೀನ್‌, ಬಿಂದಾಸ್‌ ಜೀವನ ನಡೆಸಿದಾಕೆ. ಅವರ ನಿರ್ಭಿಡೆ, ನಿಸ್ಸಂಕೋಚದ ಸ್ವಭಾವ ಸಂಪ್ರದಾಯವಾದಿಗಳಿಗೆ ನುಂಗಲಾರದ ತುತ್ತಾಗಿತ್ತು. 

ಆಧುನಿಕ ಚಿಂತನೆ, ಪ್ರಗತಿಪರ ಮನೋಭಾವದ ಸಬೀನ್ ಸದಾ ಬದಲಾವಣೆಗಾಗಿ ಹಾತೊರೆಯುತ್ತಿದ್ದರು.  ತಾಲಿಬಾನ್‌ ಉಗ್ರರ ಉಪಟಳ, ಮೂಲಭೂತವಾದಿಗಳ ಹಿಡಿತ, ಮಿಲಿಟರಿ ಕಪಿಮುಷ್ಟಿಯಿಂದ ತನ್ನ ದೇಶವನ್ನು ಬಿಡುಗಡೆಗೊಳಿಸುವ ಕನಸು ಕಟ್ಟಿಕೊಂಡಿದ್ದರು.

ತನ್ನಂತೆ ಯೋಚಿಸುವ ಸಮಾನಮನಸ್ಕರ ಜತೆ ಸೇರಿ ಕರಾಚಿಯಲ್ಲಿ ‘ದಿ ಸೆಕೆಂಡ್‌ ಫ್ಲೋರ್‌’ (ಟಿ2ಎಫ್‌) ಎಂಬ ವೇದಿಕೆ ಹುಟ್ಟು ಹಾಕಿ, ತಮ್ಮ ಕನಸನ್ನು  ನನಸಾಗಿಸಲು ಹೊರಟಿದ್ದ ಸಬೀನ್ ಅರ್ಧ ದಾರಿಯಲ್ಲಿಯೇ ಪಯಣ ಮುಗಿಸಿ ಹೊರಟು ಹೋದರು. ಆಕೆ ಇನ್ನೂ ನಲ್ವತ್ತರ ಹರೆಯದಲ್ಲಿದ್ದರು.

ಟಿ2ಎಫ್‌ ಎಂಬ ಕಾಫಿ ಹೌಸ್‌
ಕರಾಚಿಯಲ್ಲಿರುವ ‘ಟಿ2ಎಫ್‌’ ಮೂಲತಃ ಕಾಫಿ ಮಳಿಗೆ. ಕೇವಲ ಕಾಫಿ ಮಳಿಗೆಯಾಗಿದ್ದರೆ ಅದಕ್ಕೆ ಅಷ್ಟೊಂದು ಮಹತ್ವ ಬರುತ್ತಿರಲಿಲ್ಲ.  ಕಾಫಿಯ ನೆಪದಲ್ಲಿ ಜನರನ್ನು ಬೆಸೆಯುವ ಮತ್ತು ಅರ್ಥಪೂರ್ಣ ಚರ್ಚೆ ನಡೆಯುವ ತಾಣವಾಗಿತ್ತು ಅದು. ಪಾಕಿಸ್ತಾನದ ಹೆಸರಾಂತ  ಕಲಾವಿದರು, ಸಂಗೀತಗಾರರ ಮೆಚ್ಚಿನ ಕೇಂದ್ರವಾಗಿತ್ತು. ಸದಾ ಅಲ್ಲಿ ಗೋಷ್ಠಿಗಳು, ಸಂಗೀತ ಸಂಜೆಗಳು ನಡೆಯುತ್ತಿದ್ದವು.

ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕುಗಳ ಕಾರ್ಯಕರ್ತರು, ಕಲಾವಿದರು, ರಂಗಕರ್ಮಿಗಳು, ಸಾಹಿತಿಗಳು, ಲೇಖಕರು, ಪತ್ರಕರ್ತರು, ಸಾಕ್ಷ್ಯಚಿತ್ರ ನಿರ್ಮಾಪಕರು, ಪುಸ್ತಕ ಪ್ರೇಮಿಗಳು, ಅಷ್ಟೇ ಏಕೆ ಲೈಂಗಿಕ ಅಲ್ಪಸಂಖ್ಯಾತರೂ ಅಲ್ಲಿ ಸೇರುತ್ತಿದ್ದರು.
ಅಲ್ಲಿ ಚರ್ಚೆಯಾಗದ ವಿಷಯಗಳೇ ಇರಲಿಲ್ಲ. ಮಾನವೀಯತೆ, ಉಗ್ರವಾದ, ಲಿಂಗ ಸಮಾನತೆಯಿಂದ ಹಿಡಿದು ಸಲಿಂಗ ಕಾಮದವರೆಗೆ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಚರ್ಚಿಸುವ ಸ್ವಾತಂತ್ರ್ಯವನ್ನು ಸಬೀನ್‌ ಕಲ್ಪಿಸಿದ್ದರು.

ಪ್ರತಿಯೊಬ್ಬರಿಗೂ ವಿಚಾರ ಮಂಡಿಸುವ, ತನಗೆ ಸರಿ ಅನಿಸಿದ್ದನ್ನು ಪ್ರತಿಪಾದಿಸುವ ವಾಕ್ ಸ್ವಾತಂತ್ರ್ಯ ನೀಡಿದ್ದರು.  ಜಾತಿ, ಮತ, ಪಂಥದ ಬೇಲಿಗಳನ್ನು ಕಿತ್ತೆಸೆದು ಇಡೀ ಮನುಕುಲದ ಸಮಸ್ಯೆ ಬಗ್ಗೆ ಮುಕ್ತವಾಗಿ ಚಿಂತಿಸುವ ವಾತಾವರಣ ಕಲ್ಪಿಸಿದ್ದರು.

ಸಂಪ್ರದಾಯವಾದಿಗಳು ಹಾಗೂ  ತಾಲಿಬಾನ್‌ ಉಗ್ರರ ನೆಲದಲ್ಲಿ ಸಾಂಸ್ಕೃತಿಕ ಪರಿಸರ ನಿರ್ಮಾಣವಾಗತೊಡಗಿತು. ಪ್ರಶ್ನಿಸುವ, ಪ್ರತಿಭಟಿಸುವ ಮನೋಭಾವ ಬೆಳೆಯತೊಡಗಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಆಕೆ ಮಾನವೀಯತೆಯ ಬೀಜ ನೆಟ್ಟಿದ್ದರು.

ಸದಾ ಬಾಂಬ್‌ ಸ್ಫೋಟ, ಗುಂಡುಗಳ ಶಬ್ದದಿಂದ ಬೇಸತ್ತಿದ್ದ ಜನರ ಮನಸ್ಸನ್ನು ಸಂಗೀತದಿಂದ ಮುದಗೊಳಿಸಿದರು. ಎಲ್ಲರನ್ನೂ ಕಲೆ ಹಾಕಿ ಗಾಲಿಬ್‌, ಉಮರ್‌ ಖಯ್ಯಾಮ್‌ ಮತ್ತು  ಗಜಲ್‌ಗಳ ಬಗ್ಗೆ ಮಾತನಾಡಿದರು. ಸೂಫಿ ಚಿಂತನೆ ನಡೆಸಿದರು. ಶಾಂತಿ, ಸೌಹಾರ್ದ, ಸಾಮರಸ್ಯದ ಬದುಕಿನ ಕನಸು ಬಿತ್ತಿದರು. ಜೀವನ ಪ್ರೀತಿಯನ್ನು  ಕಲಿಸಿದರು. ಇದರಿಂದಾಗಿಯೇ ಸಬೀನ್‌ ಮಗುವಿನಂತೆ ಪ್ರೀತಿಯಿಂದ ಕಟ್ಟಿ ಬೆಳೆಸಿದ ‘ಟಿ2ಎಫ್‌’ ಕೆಫೆ ಕರಾಚಿಯ ವಿಶ್ವವಿದ್ಯಾಲಯದಂತಾಯಿತು. 

ಹಾಗೆ ನೋಡಿದರೆ ಕೆಫೆ ಪಾಕಿಸ್ತಾನಕ್ಕೆ ಹೊಸದಲ್ಲ. ಈ ಹಿಂದೆ ಲಾಹೋರ್‌ನಲ್ಲಿ ‘ಪಾಕ್‌ ಟೀ ಹೌಸ್‌’ ಕಲಾವಿದರು ಮತ್ತು ಸಾಹಿತಿಗಳ ಹರಟೆಯ ತಾಣವಾಗಿತ್ತು. ಫಯಾಜ್‌ ಅಹ್ಮದ್‌ ಫಯಾಜ್‌, ಸಾದತ್‌ ಹಸನ್‌ ಮಂಟೋ ಅವರಂತಹ ಧೀಮಂತ ಕವಿಗಳು ನಿತ್ಯ ಇಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಕರಾಚಿಯ ‘ಇರಾನಿ ಕೆಫೆ’ಯ ಗತ್ತೇ ಬೇರೆ. ಇಲ್ಲಿಗೆ ಭೇಟಿ ನೀಡುತ್ತಿದ್ದ ಗಣ್ಯರು, ರಾಜಕಾರಣಿಗಳು ಕಾಫಿ ಹೀರುತ್ತಾ ಗಂಟೆಗಟ್ಟಲೆ ದೇಶದ ರಾಜಕೀಯ ಬೆಳವಣಿಗೆಯನ್ನು ಚರ್ಚಿಸುತ್ತಿದ್ದರು. ಈ ಕೆಫೆಗಳ ಹೊಸ ರೂಪವೇ ‘ಟಿ2ಎಫ್‌’. ಇಲ್ಲಿ ಕಲೆ, ಸಾಹಿತ್ಯ, ರಾಜಕಾರಣದೊಂದಿಗೆ ಮಾನವ ಹಕ್ಕು, ಮಹಿಳೆಯರ ಶಿಕ್ಷಣ, ಲಿಂಗ ಸಮಾನತೆ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಚಿಂತನ, ಮಂಥನ ನಡೆಯುತ್ತಿತ್ತು.

2009ರಲ್ಲಿ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿ ಆಯೋಜಿಸಿದ್ದ ಫ್ಯಾಶನ್‌ ಸಪ್ತಾಹ ‘ಚಾದರ್‌ ಮತ್ತು ಚಾರ್‌ ದಿವಾರೆ’ಯಲ್ಲಿ ಯುವತಿಯರು ದುಪ್ಪಟ್ಟಾ, ಬುರ್ಖಾ ಕಳಚಿಟ್ಟು ಭಾಗವಹಿಸಿದ್ದರು. ಇದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಸಬೀನ್‌ ಹತ್ಯೆಯ ವಿಷಯ ಕೇಳಿದ ಪಾಕಿಸ್ತಾನದ ಖ್ಯಾತ ಲೇಖಕ ರಜಾ ರುಮಿ ‘ನಾನೇ ಸತ್ತಂತೆ ಭಾಸವಾಗುತ್ತಿದೆ’ ಎಂದು ಪ್ರತಿಕ್ರಿಯಿಸಿರುವುದು ಸಬೀನ್‌ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆಕೆ ಎಷ್ಟು ಜನಪ್ರಿಯರಾಗಿದ್ದರು ಎನ್ನುವುದಕ್ಕೆ ಸಾಕ್ಷಿ.
‘ಸಬೀನ್‌  ಹತ್ಯೆ ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಲ್ಲ. ಸಾಮಾಜಿಕ ಬದಲಾವಣೆ ಬಯಸಿದ ಪ್ರಗತಿಪರ ವಿಚಾರಗಳ ಪರ್ಯಾಯ ಧ್ವನಿಗಳನ್ನು ದಮನಿಸುವ ಯತ್ನ’ ಎಂದು ಕಳೆದ ವರ್ಷ ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿ ಅಮೆರಿಕ ಸೇರಿರುವ ರುಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಾವು ತನ್ನ ಬೆನ್ನ ಹಿಂದೆಯೇ ಇದೆ ಎಂಬ ಪರಮ ಸತ್ಯ ಆಕೆಗೆ ಗೊತ್ತಿತ್ತು.  ಒಂದಲ್ಲ ಒಂದು ದಿನ ಮೂಲಭೂತವಾದಿಗಳ ಗುಂಡು ತನ್ನ ದೇಹವನ್ನು ಸೀಳಬಹುದು, ಉಗ್ರರು ಬಾಂಬ್‌ನಿಂದ ಛಿದ್ರಗೊಳಿಸಬಹುದು ಎನ್ನುವುದರ ಅರಿವಿತ್ತು. ಆದರೂ ಅನೇಕ ಮಿತ್ರರ ಎಚ್ಚರಿಕೆ ಮಾತನ್ನು ಸಬೀನ್‌ ಲೆಕ್ಕಿಸಲಿಲ್ಲ. ಆಶಾವಾದಿಯಾಗಿದ್ದ ಆಕೆ ಸಾವಿನ ಬಗ್ಗೆ ಚಿಂತಿಸಿ ಎದೆಗುಂದಲಿಲ್ಲ. ಬೆದರಿಕೆಯ ನಡುವೆಯೂ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಿದ್ದರು.   ಕೊನೆಗೂ ಮೂಲಭೂತವಾದಿಗಳು ಅಂದುಕೊಂಡಿದ್ದನ್ನು ಮಾಡಿ ಮುಗಿಸಿದ್ದಾರೆ. ಆಕೆಯ ಎಣಿಕೆಯಂತೆಯೇ ಹೋರಾಟದ ಬದುಕು ಕೊನೆಯಾಯಿತು.

ಸಬೀನ್‌ ಪಾಕಿಸ್ತಾನದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿ ಹೋಗಿದ್ದಾರೆ. ಅವರ ಕನಸಿನ ಕೂಸು ‘ಟಿ2ಎಫ್‌ ’ ಅನಾಥವಾಗಿದೆ. ಸಂಪ್ರದಾಯವಾದಿಗಳು ಒಬ್ಬ ಸಬೀನ್‌  ಧ್ವನಿಯನ್ನು  ಅಡಗಿಸಿರಬಹುದು; ಆದರೆ, ತನ್ನಂತೆ ಯೋಚಿಸುವ ನೂರಾರು  ಬೀಜಗಳನ್ನು ಪಾಕಿಸ್ತಾನದ ನೆಲದಲ್ಲಿ ಆಕೆ ನೆಟ್ಟು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT