ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತರಗಿತ್ತಿ ಬೆನ್ನು ಬಿದ್ದ ಶ್ರೀಕಿ

Last Updated 28 ಮೇ 2015, 19:30 IST
ಅಕ್ಷರ ಗಾತ್ರ

* ಹೇಗಿದೆ ಈ ವರ್ಷದ ಸಿನಿಮಾ ಯಾನ?
ಚೆನ್ನಾಗಿದೆ. ಇವತ್ತು ತೆರೆಗೆ ಬರುವ ‘ಪಾತರಗಿತ್ತಿ’ ಜತೆಗೆ ಈ ವರ್ಷ ಇನ್ನೆರಡು ಸಿನಿಮಾಗಳಲ್ಲಿ ಅಭಿನಯಿಸಲಿದ್ದೇನೆ. ಹಾಗೆ ನೋಡಿದರೆ ಅವಕಾಶಕ್ಕೆ ಕೊರತೆ ಇಲ್ಲ. ಆದರೆ ಹಿಡಿತಕ್ಕೆ ಸಿಗುತ್ತಿಲ್ಲ, ಅಷ್ಟೇ. ‘ಬಿ3’ಯಲ್ಲಿ ಯಶಸ್ಸು ಸಿಗಬಹುದು ಅಂದುಕೊಂಡೆ; ಮುಂದೆ ‘ಗೋವಾ’ದಲ್ಲಿಯಾದರೂ ಸಿಗುತ್ತದೆ ಅಂದುಕೊಂಡೆ. ಎರಡರಲ್ಲೂ ಯಶಸ್ಸು ಸಾಮಾನ್ಯ ಎಂಬಷ್ಟರ ಮಟ್ಟಿಗೆ ದೊರಕಿದೆ. ಈಗ ‘ಪಾತರಗಿತ್ತಿ’ ನನಗೆ ಹೊಸ ಇಮೇಜ್ ಕೊಡುವ ನಿರೀಕ್ಷೆ ಮೂಡಿದೆ.

* ಈಗಲೂ ನಿಮ್ಮನ್ನು ‘ಒಲವೇ ಮಂದಾರ’ ಸಿನಿಮಾದ ಮೂಲಕ ಗುರುತಿಸುತ್ತಾರಲ್ಲ?
ಬಹುಶಃ ಅಂಥ ಅನುಭವ ಹಾಗೂ ಸ್ಪಂದನ ನನಗೆ ಇನ್ನಾವ ಸಿನಿಮಾದಲ್ಲೂ ಸಿಗಲಾರದು. ಆಗ ತಾನೇ ನಾನು ಚಿತ್ರರಂಗಕ್ಕೆ ಬಂದಿದ್ದೆ. ಮೊದಲ ಸಲ ಅಂಥ ಚೆಂದದ ಕಥೆ ಸಿಕ್ಕಿದ್ದು ಅದೃಷ್ಟ. ಆಗ ಪ್ರತಿಯೊಂದೂ ಹೊಸ ಅನುಭವವೇ! ಕ್ಯಾಮೆರಾ, ಅಭಿನಯ, ಹಾಡು, ನೃತ್ಯ ಎಲ್ಲವೂ ಹೊಸತು. ಆ ಅನುಭವ ಖುಷಿ ಕೊಟ್ಟಿತು. ಮುಂದಿನ ಯಾವ ಸಿನಿಮಾದಲ್ಲೂ ಅಂಥ ಅನುಭವ ಸಿಗಲಾರದು. ಒಳ್ಳೇ ಆರಂಭ ಸಿಕ್ಕಿದ್ದು ‘ಒಲವೇ ಮಂದಾರ’ದಿಂದ. ನಿರ್ದೇಶಕ ಜಯತೀರ್ಥ ಅವರದೂ ಅದು ಮೊದಲ ಸಿನಿಮಾ; ನನ್ನದೂ ಮೊದಲ ಸಿನಿಮಾ. ನಮ್ಮದೇ ಬ್ಯಾನರ್‌ನಲ್ಲಿ ಮಾಡಿದ್ದೆವು.

* ಇಷ್ಟು ಸಿನಿಮಾಗಳ ಬಳಿಕ ನೀವು ಪಡೆದ ಅನುಭವ ಏನು?
ಸಿನಿಮಾ ಅಂದರೆ ಏನೋ ಒಂದು ಫೀಲ್ ಇತ್ತು. ಆದರೆ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ, ನಾವು ಅಂದುಕೊಂಡಿದ್ದು ಇಲ್ಲಿ ನಡೆಯುವುದಿಲ್ಲ ಎಂಬ ಅನುಭವ ದಕ್ಕಿದೆ! ಸಿನಿಮಾಲೋಕದಲ್ಲಿ ಕೆಲವೊಂದು ನೀತಿಗಳಿವೆ. ಎಷ್ಟೇ ಕಷ್ಟಪಟ್ಟು ಚಿತ್ರವನ್ನು ಚೆನ್ನಾಗಿ

ಮಾಡಿದ್ದರೂ ಬಿಡುಗಡೆ ಸಂದರ್ಭದಲ್ಲಿ ತುಂಬಾ ಹುಷಾರಾಗಿರಬೇಕು. ಅದೇ ಮುಖ್ಯ. ನಾವು ಬಿಡುಗಡೆ ಮಾಡುವ ಸಮಯದಲ್ಲಿ ದೊಡ್ಡ ಸ್ಟಾರ್‌ಗಳ ಒಂದೋ ಎರಡೋ ಸಿನಿಮಾ ಬಂದುಬಿಟ್ಟರೆ ನಮ್ಮ ಥಿಯೇಟರ್ ‘ಬಲಿ’ಯಾಗಬಹುದು. ಎಲ್ಲೆಲ್ಲೋ ಸಾಲ ಮಾಡಿ, ಕಷ್ಟದಿಂದ ಸಿನಿಮಾ ನಿರ್ಮಿಸಿದ್ದರೂ ಆ ಪ್ರಯತ್ನವೆಲ್ಲ ನೀರಿನಲ್ಲಿ ತೊಳೆದಂತಾಗುತ್ತದೆ. ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಸ್ವಲ್ಪ ಸಮಯ ಬೇಕು. ಒಂದೆರಡು ವಾರ ಥಿಯೇಟರ್‌ನಲ್ಲಿ ಇದ್ದು ಜನರಿಂದಲೇ ಪ್ರಚಾರ ಸಿಗಬೇಕು. ಆಗಷ್ಟೇ ಆ ಸಿನಿಮಾ ಚೆನ್ನಾಗಿ ಓಡುತ್ತವೆ.

‘ಒಲವೇ ಮಂದಾರ’ ಕೂಡ ಅಷ್ಟೇ. ಮೊದಲ ಮೂರು ವಾರ ಅಷ್ಟೇನೂ ಜನರು ಇರಲಿಲ್ಲ. ಆಮೇಲೆ ಜನರು ಚಿತ್ರಮಂದಿರಕ್ಕೆ ಬರಲು ಶುರುಮಾಡಿದರು. ಅಷ್ಟು ಸಮಯ ಸಿಗದೇ ಹೋದರೆ ಸಿನಿಮಾ ಅಲ್ಲೇ ಸೋತು ಹೋಗಿಬಿಡುತ್ತದೆ.

* ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಗಮನಿಸುವುದು ಏನನ್ನು?
ಕಥೆಗೆ ನಾನು ಹೆಚ್ಚು ಮಹತ್ವ ಕೊಡುತ್ತೇನೆ. ಆದರೆ ಚಿತ್ರರಂಗದಲ್ಲಿ ನಮ್ಮ ಪ್ರೇಕ್ಷಕರಿಂದ ಹಿಡಿದು ಕಥೆಗೆ ಯಾರೂ ಆದ್ಯತೆ ಕೊಡುವುದಿಲ್ಲ. ಎಲ್ಲರಿಗೂ ಬೇಕಾಗಿರುವುದು ಮನರಂಜನೆಯ ಪ್ಯಾಕೇಜ್‌. ಕಥೆ ಇಲ್ಲದಿದ್ದರೂ ಯಶಸ್ಸು ಪಡೆದ ಸಿನಿಮಾಗಳು ಹಲವಾರು ಇವೆ. ಈ ಕಾರಣದಿಂದಾಗಿ ಈಗ ನಾನು ಅಭಿನಯಿಸುತ್ತಿರುವ ಸಿನಿಮಾಗಳಲ್ಲಿ ಕಥೆಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ಆದರೆ ಚಿತ್ರಕಥೆ ಚೆನ್ನಾಗಿರಬೇಕು ಎಂಬುದನ್ನಷ್ಟೇ ನೋಡುತ್ತೇನೆ. ಪ್ರೇಕ್ಷಕರನ್ನು ಅದು ಹೇಗೆ ಹಿಡಿದಿಟ್ಟುಕೊಳ್ಳಲಿದೆ ಎಂಬುದನ್ನು ಗಮನಿಸುತ್ತೇನೆ.

* ಈಶ್ವರ್ ಮೊದಲ ಬಾರಿಗೆ ನಿರ್ದೇಶಿಸಿರುವ ‘ಪಾತರಗಿತ್ತಿ’ ಬಗ್ಗೆ?
ನಮ್ಮ ಸುತ್ತಮುತ್ತ ಇರುವ ಸುಶಿಕ್ಷಿತ ಹುಡುಗನೊಬ್ಬನನ್ನು ಇದರಲ್ಲಿ ಕಾಣಲಿದ್ದೀರಿ. ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಕಾಮಿಡಿ, ಫೈಟ್ಸ್‌, ಹಾಡುಗಳ ಜತೆಗೆ ಸಮಾಜಕ್ಕೆ ಸಂದೇಶವೊಂದು ಇದರಲ್ಲಿದೆ. ಈವರೆಗೆ ನಾನು ಆಯ್ಕೆ ಮಾಡಿಕೊಂಡಿದ್ದ ಪ್ರತಿ ಸಿನಿಮಾ ಕೂಡ ವಿಭಿನ್ನವಾಗಿತ್ತು. ಅದೇ ರೀತಿ, ‘ಪಾತರಗಿತ್ತಿ’ಯಲ್ಲಿನ ನನ್ನ ಪಾತ್ರದಿಂದ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರ ಆಗುವ ನಿರೀಕ್ಷೆ ಇದೆ.

* ಈ ವರ್ಷವೇ ಇನ್ನೆರಡು ಸಿನಿಮಾ ಅಂದಿರಿ. ಅವುಗಳ ಬಗ್ಗೆ?
‘ಬಿ–3’ ನಿರ್ದೇಶಕ ಘನಶ್ಯಾಮ್ ಇನ್ನೊಂದು ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ನಾನು ನಾಯಕ ನಟ. ಚಂದ್ರಶೇಖರ ನಿರ್ಮಾಣದಲ್ಲಿ, ಶಿವು ಹೊಳಲು ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ಅಭಿನಯಿಸಲಿದ್ದೇನೆ. ಅದನ್ನು ಒಪ್ಪಿಕೊಳ್ಳಲು ಮುಖ್ಯ ಕಾರಣ, ಅದರ ನಿರೂಪಣಾ ಶೈಲಿ. ತುಂಬ ವಿಭಿನ್ನ ಕಥೆಯನ್ನು ಈವರೆಗೆ ಎಲ್ಲೂ ಇರದಂತೆ ನಿರೂಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT