ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಚಿತ್ರಣಗಳ ಗುಪ್ತಗಾಮಿನಿ ನಿರೂಪಣೆ

ರಂಗಭೂಮಿ
Last Updated 15 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಕನ್ನಡದ ಕಥೆ, ಕಾವ್ಯ ಮತ್ತು ಕಾದಂಬರಿಗಳನ್ನು ರಂಗರೂಪಕ್ಕೆ ಅಳವಡಿಸಿ, ಸಮರ್ಥವಾಗಿ ಪ್ರಯೋಗ ಮಾಡುವುದರಲ್ಲಿ ನೈಪುಣ್ಯ ಸಾಧಿಸಿರುವ ‘ರೂಪಾಂತರ’ ತಂಡದ ನಾಟಕ ‘ಮುಸ್ಸಂಜೆ ಕಥಾಪ್ರಸಂಗ’ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

‘ಭಾಗವತರು’ ಸಂಘಟನೆ ಏರ್ಪಡಿಸಿದ್ದ ‘ರಂಗ ರೂಪೋತ್ಸವ’ದ ಸಂದರ್ಭದಲ್ಲಿ ಸತತವಾಗಿ ಐದು ವಿಭಿನ್ನ ನಾಟಕಗಳನ್ನು ಪ್ರದರ್ಶಿಸಿದ್ದು ತಂಡದ ಅಗ್ಗಳಿಕೆ. ಪಿ.ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’ ಕಾದಂಬರಿ ಯನ್ನು ಆಧರಿಸಿ ನಾಟಕವನ್ನು ಆಸಕ್ತಿದಾಯಕವಾಗಿ ರೂಪಿಸಿದವರು ಬಸವರಾಜ ಸೂಳೇರಿಪಾಳ್ಯ. ಉತ್ತಮ ವಾಗಿ ನಿರ್ದೇಶಿಸಿದವರು ಕೆ.ಎಸ್.ಡಿ.ಎಲ್.ಚಂದ್ರು.

ಎಲ್ಲ ಗ್ರಾಮಗಳಲ್ಲಿರುವಂತೆ ಕಂಬಳ್ಳಿಯಲ್ಲೂ ನಾನಾ ಸ್ವಭಾವಗಳ, ಜಾತಿಭೇದ, ಮೇಲು-ಕೀಳೆಂಬ ತಾರತಮ್ಯ ಮನೋಭಾವದ ಒಂದು ಸಾಮಾಜಿಕ ಪರಿಸರ. ಘಟವಾಣಿ ವಿಧವೆ ರಂಗವ್ವ ಗ್ರಾಮಸ್ಥರಿಗೆ ಸಾಲಕೊಟ್ಟು ಬಡ್ಡಿ ವಸೂಲು ಮಾಡುವ ಲೇವಾದೇವಿ ವ್ಯವಹಾರ ನಡೆಸಿಕೊಂಡು, ಮಗಳು ಸಾವಂತ್ರಿಯನ್ನು ಜೋಪಾನವಾಗಿ ಸಾಕುತ್ತ ಜೀವನ ಮಾಡುತ್ತಿದ್ದ ಸ್ವಾಭಿಮಾನಿ ಹೆಣ್ಣುಮಗಳು. ಚೆಲುವೆಯಾದ ಸಾವಂತ್ರಿಯ ಮೇಲೆ ಕಣ್ಣಿಟ್ಟಿದ್ದ ನಡುವಯಸ್ಸಿನ ಭರಮಣ್ಣ ತಮ್ಮ ಜಾತಿಯ ಹುಡುಗಿ ಬ್ಯಾಡರ ಮಂಜನ ಸ್ನೇಹ ಬೆಳೆಸಿದ್ದು ಕಂಡು ಹೌಹಾರಿದ.

ತಾನು ವೀರಶೈವನೆಂಬ ಜಾತಿ ಪ್ರತಿಷ್ಠೆಯ ಹೆಚ್ಚುಗಾರಿಕೆಯನ್ನು ಸದಾ ಕೊಚ್ಚಿಕೊಳ್ಳುತ್ತಿದ್ದವ, ಸಾವಂತ್ರಿ ಜಾತಿಕೆಡುತ್ತಿದ್ದಾಳೆಂದು ಹಳ್ಳಿಯೆಲ್ಲ ಬೊಬ್ಬೆಯೆಬ್ಬಿಸಿದ. ರಂಗವ್ವ ಕೊಟ್ಟಿದ್ದ ಹಣವನ್ನು ಹಿಂದೆ ಕೊಡಬೇಕಾದ ಸಂಕಟ ತಪ್ಪಿಸಿಕೊಳ್ಳಲು ಜಾತಿಪ್ರಶ್ನೆಯಿಂದ ಅವಳನ್ನು ಹೆದರಿಸಲು ಪ್ರಯತ್ನಿಸಿ ಸೋತು, ತಮ್ಮ ಸಮಾಜದ ಜನರನ್ನೆಲ್ಲ ಒಟ್ಟುಗೂಡಿಸಿ ಜಾತಿಮರ್ಯಾದೆ ಹಾಳಾಗುತ್ತಿದೆಯೆಂದು ಗಲಾಟೆಯೆಬ್ಬಿಸುತ್ತಾನೆ. ಮಗಳನ್ನು ಸರಿದಾರಿಗೆ ತರಲು ರಂಗವ್ವ ಊರಿಂದ ತಮ್ಮನನ್ನು ಕರೆಸಿ ಅವನೊಂದಿಗೆ ಮದುವೆ ಮಾಡಲೆತ್ನಿಸುವಳು. ಆದರೆ ಸಾವಂತ್ರಿ ಮಂಜನನ್ನು ಪ್ರೀತಿಸುತ್ತಿದ್ದ ಕಾರಣ ಜಪ್ಪಯ್ಯ ಎಂದರೂ ಒಪ್ಪುವುದಿಲ್ಲ.

ಭರಮಣ್ಣ ಗುಂಪುಗೂಡಿಸಿ ಮಂಜನಿಗೆ ಹೊಡಿಸಿದ, ಹೆದರಿಸಿದ. ಮಂಜ ಜಗ್ಗಲಿಲ್ಲ. ಹಳ್ಳಿಯ ರಾಜಕೀಯ ಕಂಡು ಹೇಸಿ, ರಂಗವ್ವಳೂ ಮಗಳಿಗೆ ಬಂದೋಬಸ್ತು ಮಾಡಿ, ಮಂಜನಿಗೆ ಬೆದರಿಕೆಯೊಡ್ಡಿದಳು. ಭರಮಣ್ಣನಿಗೆ ಇಬ್ಬರು ಹೆಂಡತಿಯರಿದ್ದರೂ ಸಾವಂತ್ರಿಯ ಮೇಲೆ ಚಪಲ. ಕಡೆಗೆ ಜಾತಿ ಕೆಡುತ್ತಿರುವ ಅವಳನ್ನು ಕೆಡಿಸಿಯಾದರೂ ರಂಗವ್ವನ ಮೇಲೆ ಸೇಡು ತೀರಿಸಿಕೊಳ್ಳುವ ಇರಾದೆಯಿಂದ ರಾತ್ರಿ, ಸಾವಂತ್ರಿಯನ್ನು ಅಪಹರಿಸಿ ಗೆಳೆಯರೆಲ್ಲ ಸೇರಿ ಕೆಡಿಸಬೇಕೆಂಬ ಉಪಾಯ ಹೂಡುತ್ತಾನೆ. ಆದರೆ ದುರದೃಷ್ಟವಶಾತ್ ರಾತ್ರಿಯ ಕತ್ತಲಲ್ಲಿ, ರಂಗವ್ವನ ಮನೆಗೆ ಬಂದಿದ್ದ ನವವಿವಾಹಿತ ಉಡುಪನ ಹೆಂಡತಿ ಮುಮ್ತಾಜಳನ್ನು ಸಾವಂತ್ರಿಯೆಂದು ತಪ್ಪುಭಾವಿಸಿ ಎತ್ತೊಯ್ದಾಗ ಕೆಲಸ ಕೆಡುತ್ತದೆ.

ಇಷ್ಟರಲ್ಲಿ ಭರಮಣ್ಣನ ಎರಡನೇ ಹೆಂಡತಿ, ಬೇರೆ ಜಾತಿಯವನಾದ ಶಿವಾಜಿಯೊಡನೆ ಪರಾರಿಯಾದ ಸಂಗತಿ ತಿಳಿದು ಜಾತಿಯ ಭೂತ ಮೆಟ್ಟಿಕೊಂಡಿದ್ದ ಅವನು ಗರಬಡಿದು ನಿಲ್ಲುತ್ತಾನೆ. ಆದರೂ ಪ್ರಯತ್ನ ಬಿಡದ ಅವನು ಕೆಲವು ಗೆಳೆಯರನ್ನು ಸೇರಿಸಿಕೊಂಡು ಆ ಯುವಪ್ರೇಮಿಗಳನ್ನು ಅಡ್ಡಗಟ್ಟಿ, ಹೊಡೆಯುತ್ತಿರುವ ವಿಚಾರ ತಿಳಿದು ಕ್ರೋಧಿತಳಾದ ರಂಗವ್ವ ಅಲ್ಲಿಗೆ ಧಾವಿಸಿ ಬರುತ್ತಾಳೆ. ಅವಳ ಕಾಳಿ ಅವತಾರ ಕಂಡು ಎಲ್ಲರೂ ಭಯಭೀತರಾಗುವುರಲ್ಲದೆ, ಅವಳ ಕೈಯಲ್ಲಿ ಸಿಕ್ಕಿಕೊಂಡ ಮಂಜ, ಸಾವಿತ್ರಿ ಕೂಡ ನಡುಗಿಹೋಗುತ್ತಾರೆ.

ಇನ್ನೇನು ರಂಗವ್ವ ಕೈಲಿದ್ದ ಕುಡುಗೋಲು ಬೀಸಿ ಅವರಿಬ್ಬರನ್ನೂ ಕತ್ತರಿಸಿಯೇ ಬಿಡುತ್ತಾಳೆಂದು ನಿರೀಕ್ಷಿಸಿದವರಿಗೆಲ್ಲ ಶಾಕ್! ಅನಾಮತ್ತು ಸೊಂಟದಿಂದ ಅರಿಷಿನದ ತಾಳೀದಾರವನ್ನು ತೆಗೆದವಳೆ ರಂಗವ್ವ, ಮಂಜನ ಕೈಗೆ ಅದನ್ನು ಕೊಟ್ಟು, ಮಗಳ ಕೊರಳಿಗೆ ಕಟ್ಟಿಸಿದಾಗ ನೆರೆದ ಜನಸ್ತೋಮ ದಂಗುಬಡಿದು ನಿಲ್ಲುತ್ತದೆ! ಮೇಲ್ನೋಟಕ್ಕೆ ಜಗಳಗಂಟಿ, ಮಹಾ ಒರಟಳಂತೆ ಕಂಡುಬರುತ್ತಿದ್ದ ರಂಗವ್ವನ ಹೃದಯಾಂತರಾಳದ ಮೃದು ಧೋರಣೆಯ ಅಭಿವ್ಯಕ್ತಿಯೇ ನಾಟಕದ ತಿರುವು.

ಇಡೀ ಕಥೆಗೆ ಸಾಕ್ಷಿಪ್ರಜ್ಞೆಯಾಗಿದ್ದವನು ತಿಕ್ಕಲನಂತೆ ಕಾಣುತ್ತಿದ್ದ ಹುಡುಗ ಕರಿಯ, ಇಡೀ ಕಥಾನಕದ ಸನ್ನಿವೇಶಗಳ ನಡುವಿನ ಕೊಂಡಿಯಾಗಿ ಸದ್ದಿಲ್ಲದೆ ನಡೆಸಿಕೊಂಡು ಹೋಗುತ್ತಾನೆ. ನಾಟಕದ ಅಂಕಗಳು ಅವನು ಕಂಡಂತೆ ತೆರೆದುಕೊಳ್ಳುತ್ತ ಹೋಗುವುದೇ ಇದರ ಸ್ವಾರಸ್ಯ. ಕೆಲವೊಮ್ಮೆ ಕಥಾವಸ್ತು, ಪಾತ್ರಚಿತ್ರಣಗಳೇ ಅನೇಕ ವಿಚಾರಗಳನ್ನು ಗುಪ್ತಗಾಮಿನಿಯಾಗಿ ನಿರೂಪಿಸುತ್ತ ಹೋಗುತ್ತವೆ. ಇನ್ನು ಕೆಲವೊಮ್ಮೆ ಕಥಾ ಎಳೆ ಹ್ರಸ್ವವಾಗಿ ಕಂಡರೂ ಅದು ಹೊರಹೊಮ್ಮಿಸುವ ಅರ್ಥಸ್ಫುರಣೆ ಅನಂತವಾಗಿರುತ್ತವೆ.

ಕಠಿಣ ಸ್ವಭಾವದ ರಂಗವ್ವ ಹರೆಯದ ಮಗಳನ್ನು ಕಾಪಾಡಿಕೊಳ್ಳಲೆತ್ನಿಸುವ ವಿವಿಧ ಸನ್ನಿವೇಶಗಳು ಮನಮುಟ್ಟುತ್ತವೆ. ಸದಾ ಸಿನಿಮಾ ಹಾಡು ಗುನುಗುನಿಸುತ್ತ ಕನಸು ಕಾಣುವ ಸಾವಂತ್ರಿಯ ವಿಶಿಷ್ಟ ಪಾತ್ರಚಿತ್ರಣ ಮತ್ತು ಮುಗ್ಧ ಹುಡುಗನಾದರೂ ಕರಿಯ ಮೆರೆಯುವ ಸಮಯಪ್ರಜ್ಞೆ, ಪೆದ್ದನಂತೆ ಮೇಲ್ನೋಟಕ್ಕೆ ಕಂಡರೂ ಅವನು ಪ್ರದರ್ಶಿಸುವ ಜಾಣ್ಮೆ ಮೆಚ್ಚುಗೆಯಾಗುತ್ತದೆ. ಸದಾ ಇನಿಯನ ನಿರೀಕ್ಷೆಯಲ್ಲಿ ಬಾಗಿಲುವಾಡದಲ್ಲಿ ಬಂದುನಿಲ್ಲುವ ಕನಸುಗಣ್ಣಿನ ಸಾವಂತ್ರಿಯ ಚಲನವಲನ, ಆಗಾಗ ಹಾಲು ತೆಗೆದುಕೊಂಡು ಹೋಗಲು ಬರುತ್ತಿದ್ದ ಇಕ್ಬಾಲನನ್ನು ಅವಳು ಯಾಮಾರಿಸುವ ಬಗೆ, ಬ್ಯಾಡರ ಮಂಜ ಸೈಕಲ್ ಬೆಲ್ಲು ಬಾರಿಸುತ್ತ ಮನೆಯಸುತ್ತ ರೌಂಡ್ ಹಾಕುತ್ತ ರೋಮಿಯೊನಂತೆ ಕೊಡುವ ಪೋಸುಗಳನ್ನು ನಿರ್ದೇಶಕರು ಕಡೆದಿರುವ ರೀತಿ ಚೆನ್ನಾಗಿದೆ. ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಆಸಕ್ತಿಕರವಾಗಿ ಚುರುಕು ಸಂಭಾಷಣೆಗಳನ್ನು ಹೆಣೆದಿರುವ ಬಸವರಾಜ ರೂಪಿಸಿರುವ ಕಥಾಚೌಕಟ್ಟು ಆಕರ್ಷಕವಾಗಿದೆ.

ದಿಟ್ಟ ಹೆಂಗಸೆಂಬಂತೆ ತೋರುವ ರಂಗವ್ವನ ಅಂತರಂಗದ ಸೌಂದರ್ಯ, ಪ್ರೇಮಿಗಳ ಬಗೆಗಿನ ಅವಳ ಅನುಕಂಪ, ಮಮತೆಯನ್ನು ರಂಗವ್ವನ ಪಾತ್ರಧಾರಿ ಬೃಂದಾ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಕನಸುಗಾರ್ತಿ ಸಾವಂತ್ರಿಯಾಗಿ ಸಿತಾರಾ ಮೋಹಕವಾಗಿ ಅಭಿನಯಿಸಿದ್ದಾರೆ. ಅಮಾಯಕ ನೋಟದ ಕರಿಯ (ಶರತ್) ನೈಜಾಭಿನಯದಿಂದ ಮನಸೂರೆಗೊಳ್ಳುತ್ತಾನೆ. ಮಂಜನಾಗಿ ವೇಣು ಉತ್ಸಾಹಪೂರ್ಣ ನಟನೆ ನೀಡಿದ್ದರೆ, ಭರಮಣ್ಣ (ರಾಮಚಂದ್ರ) ಗೌಡನ ಧಿಮಾಕನ್ನು ಚೆನ್ನಾಗಿಯೇ ಅಭಿವ್ಯಕ್ತಿಸುತ್ತಾನೆ. ಬೂಸಿ ಬಸ್ಯನಾಗಿ ಹರೀಶ್ ತಮ್ಮ ವಿಶಿಷ್ಟ ಆಂಗಿಕಾಭಿನಯದಿಂದ ಛಾಪುಮೂಡಿಸಿ ಉತ್ತಮ ನಟನೆ ತೋರಿದರೆ, ಅಜಯ್, ಮೇಷ್ಟ್ರಾಗಿ ಹಾಸ್ಯರಸ ಜಿನುಗಿಸುತ್ತಾರೆ. ಉಳಿದ ಪಾತ್ರಗಳಲ್ಲಿ ಚೈತ್ರಾ, ಶ್ರೀಹರ್ಷ, ಸಿದ್ದರಾಜು ಮುಂತಾದವರು ಹದವಾಗಿ ನಟಿಸಿದ್ದಾರೆ. ರಂಗಸಜ್ಜಿಕೆ ಮತ್ತು ಪರಿಕರಗಳು ನಾಟಕದ ಪರಿಣಾಮ ಹೆಚ್ಚಿಸುವಲ್ಲಿ ಪೂರಕ ಪಾತ್ರ ನಿರ್ವಹಿಸಿದ್ದವು.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT