ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರವೇ ನಿಜವಾದ ಹೀರೊ

ಬಾಲಿವುಡ್‌ನಲ್ಲಿ ಹೊಸ ಅಲೆ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಬಾಲಿವುಡ್‌ನಲ್ಲಿ ಸಿದ್ಧ ಸೂತ್ರಗಳು ಬುಡಮೇಲಾಗುತ್ತಿವೆ. ಸಾಂಪ್ರದಾಯಿಕ ‘ಹೀರೊ’ ಇಮೇಜ್‌ನಿಂದ ಆಚೆ ಬಂದು ಎಲ್ಲರೂ ಹೊಸ ನೀರಿಗೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ಕೇವಲ ಹೀರೊಗಳೇ ಮಿಂಚುವ ಬದಲು ಇದೀಗ ಪಾತ್ರಗಳೇ ಹೀರೊ ಆಗುತ್ತಿವೆ. ಇದು ಉತ್ತಮೋತ್ತಮ ಬೆಳವಣಿಗೆ...’ ಎನ್ನುವುದು ನಟ ನವಾಜುದ್ದೀನ್ ಸಿದ್ದಿಕಿ ಅವರ ಪರಾಮರ್ಶೆ.

ಹೌದು, ಬಾಲಿವುಡ್‌ನಲ್ಲಿ ಹೆಸರಲ್ಲದೇ ಹೊಸ ಬದಲಾವಣೆಯೊಂದು ಚಿತ್ರಜಗತ್ತಿನಲ್ಲಿ ಹೊಸ ನೀರು ಹರಿಸುತ್ತಿದೆ, ಹೊಸತನ ಎಲ್ಲರನ್ನು ತನ್ನೊಳಗೆ ಸೆಳೆದುಕೊಂಡು ಮುಂದೆ ಸಾಗುತ್ತಿದೆ ಎನ್ನುವುದು ಅವರ ವಿಶ್ಲೇಷಣೆ.

‘ಮೊದಲೆಲ್ಲ ಹೀರೊ ಸುತ್ತ ಕಥೆ ಹೆಣೆಯಲಾಗುತ್ತಿತ್ತು. ಹೀರೊ ಯಾರು ಎನ್ನುವುದನ್ನು ನೋಡಿ ಜನ ಥಿಯೇಟರ್‌ನತ್ತ ಬರುವ ವಾಡಿಕೆ ಇತ್ತು. ಆದರೆ ಇದೀಗ ಚಿತ್ರಗಳಲ್ಲಿ ಕಥೆ ಮುಖ್ಯವಾಗುತ್ತಿದೆ. ಜನ ಕಥೆಯ ಬಗ್ಗೆ ಕೇಳಿ, ಓದಿ ಚಿತ್ರಗಳನ್ನು ಆರಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಸಿದ್ದಿಕಿ.

ಅಷ್ಟೇ ಅಲ್ಲ, ಈಗಿನ ಚಿತ್ರಗಳಲ್ಲಿ ಹೀರೊ ಹಾಗೂ ವಿಲನ್ ನಡುವಿನ ಅಂತರವೂ ಕಡಿಮೆ ಆಗುತ್ತಿದೆ. ಕಥೆಗಳೇ ಹೀರೊ ಹಾಗೂ ವಿಲನ್ ಆಗುತ್ತ ಸಾಗುವ ಹಾಗೂ ಆಯಾ ಸಂದರ್ಭಗಳಿಗೆ ತಕ್ಕಂತೆ ಹೀರೊ ಹಾಗೂ ವಿಲನ್‌ನ ಪಾತ್ರಗಳೂ ಬದಲಾಗುತ್ತ ಹೋಗುವ ಹೊಸ ಪರಂಪರೆಗೆ ಬಾಲಿವುಡ್ ನಾಂದಿ ಹಾಡಿದೆ. ಈ ಬೆಳವಣಿಗೆಗೆ ‘ಬದ್ಲಾಪುರ್’ ಒಂದು ಉತ್ತಮ ನಿದರ್ಶನ. ಅದರಲ್ಲಿ ಹೀರೊ ವಿಲನ್ ಆಗುತ್ತಾನೆ ಹಾಗೂ ವಿಲನ್ ಹೀರೊ ಆಗುತ್ತಾನೆ ಎನ್ನುವುದು 40 ವರ್ಷದ ಸಿದ್ದಿಕ್ ನೀಡುವ ವಿವರಣೆ.

ನಿರ್ದೇಶಕನೇ ನಿಜವಾದ ಹೀರೊ
ಹಾಗೆ ನೋಡಿದರೆ ಒಂದು ಚಿತ್ರದ ನಿಜವಾದ ಹೀರೊ ಎಂದರೆ ನಿರ್ದೇಶಕ. ಕಥೆಯ ಆಯ್ಕೆ, ಪಾತ್ರಗಳಿಗೆ ಜೀವ ತುಂಬುವ ಕೆಲಸ ಎಲ್ಲವೂ ಅವರದೇ. ಉಳಿದಿದ್ದೆಲ್ಲ ನಂತರದ್ದು ಎನ್ನುತ್ತಾರೆ ಈ ಹೊಸ ಅಲೆಯ ಸೂಪರ್‌ಸ್ಟಾರ್.

ಎಲ್ಲೊ ಇರುವ ನಮ್ಮನ್ನು, ನಮ್ಮ ಸಾಮರ್ಥ್ಯವನ್ನು ಗುರುತಿಸಿ ನಮಗೊಂದು ಅವಕಾಶ ನೀಡುವ ಮೂಲಕ ನಮ್ಮೊಳಗೆ ಹೀರೊನನ್ನು ತುಂಬುವುದೇ ನಿರ್ದೇಶಕರು. ಅವರು ಕಲಾವಿದರನ್ನು ಗುರುತಿಸಿ ಅವಕಾಶ ನೀಡದೇ ಹೋದರೆ ಯಾರೂ ತಾವಾಗಿಯೇ ಹೀರೊ ಆಗಲು ಸಾಧ್ಯವಿಲ್ಲ ಎನ್ನುವ ಸಿದ್ದಿಕಿ, ತಮ್ಮನ್ನು ಬಾಲಿವುಡ್‌ನಲ್ಲಿ ಬೆಳೆಸಿದ ನಿರ್ದೇಶಕರ ಪಟ್ಟಿಯನ್ನೇ ಮುಂದಿಡುತ್ತಾರೆ.

ಶ್ರೀರಾಮ್‌ ರಾಘವನ್ ಜೊತೆಗೂಡಿ ಕೆಲಸ ಮಾಡುವ ನನ್ನ ಹತ್ತು ವರ್ಷಗಳ ಕನಸು ಕೈಗೂಡಿದ್ದು ‘ಬದಲಾಪುರ್’ ಚಿತ್ರದಿಂದ. ಆ ಚಿತ್ರ ತೆಗೆದುಕೊಂಡು ನನ್ನ ಬಳಿ ಬಂದಾಗ ನಾನು ಕೇವಲ ಒಂದೇ ಒಂದು ಸಾಲು ಕಥೆ ಕೇಳಿದೆ– ಇಲ್ಲಿ ಒಬ್ಬ ಒಳ್ಳೆಯ ಹುಡುಗ ಉಡಾಳನಾಗುತ್ತಾನೆ ಮತ್ತು ಉಡಾಫೆಯ ಹುಡುಗ ಹೀರೊ ಆಗುತ್ತಾನೆ’ ಮುಂದೆ ಒಂದೂ ಮಾತನಾಡದೇ ಚಿತ್ರವನ್ನು ಒಪ್ಪಿಕೊಂಡೆ. ಬದಲಾಪುರ್ ಮಾಡಿದ ಬಗ್ಗೆ ನನಗೆ ಇಂದಿಗೂ ಬಹಳ ಖುಷಿ ಇದೆ.
-ನವಾಜುದ್ದೀನ್ ಸಿದ್ದಿಕಿ

ನಾನು ಹೀರೊ ಅಲ್ಲ
‘ನಾನು ಹೀರೊ ಅಲ್ಲ, ಹೀರೊ ಆಗಬೇಕು ಎಂದು ಬಂದವನೂ ಅಲ್ಲ. ಹೀರೊ ಆಗಲು ಮೊದಲು ಸುಂದರವಾಗಿರಬೇಕು. ನಾನು ಅಷ್ಟು ಚೆನ್ನಾಗಿಲ್ಲ. ಆದರೆ ನಟನಾಗಬೇಕು, ಕಲಾವಿದನಾಗಬೇಕು ಎಂದು ಆಸೆ ಪಟ್ಟೆ. ಅದಕ್ಕೆ ಬೇಕಾಗುವ ಎಲ್ಲಾ ಗುಣಗಳೂ ನನ್ನಲ್ಲಿವೆ. ಈವರೆಗೂ ನನಗೆ ಸಿಕ್ಕ ಪಾತ್ರಗಳ ಬಗ್ಗೆ ನನಗೆ ಖುಷಿ ಇದೆ’ ಎನ್ನುತ್ತಾರೆ.

‘ನನಗೆ ಸಾಂಪ್ರದಾಯಿಕವಾದ ನಾಯಕನ ಪಾತ್ರಗಳು ಯಾವತ್ತೂ ಬೇಕಿರಲಿಲ್ಲ. ವಿಭಿನ್ನ ಪಾತ್ರಗಳು ಬೇಕು’ ಎನ್ನುವ ಅವರು ಹೀರೊ–ವಿಲನ್ ಎರಡೂ ಪಥಗಳಲ್ಲೂ ಸಾಗುತ್ತಿರುವ ಸೃಜನಶೀಲ ಕಲಾವಿದ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT