ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನೀಯ ತಯಾರಿಕೆಗೆ ಸ್ಮಾರ್ಟ್‌ ಕೆಟಲ್‌

Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕಪ್ಪು–ಬಿಳಪು ಟಿವಿ ಬಂದಾಗ ಎಲ್ಲರೂ ಬೆರಗಿನಿಂದ ನೋಡಿದವರೆ.  ಕಾಲಾನಂತರ ಈಸ್ಟಮನ್ ಕಲರ್, ಬಳಿಕ ಬಣ್ಣದ ಗಾಜಿನ ಕನ್ನಡಕದ ಸೌಲಭ್ಯ ದಾಟಿ, ಕಲರ್‌ ಕಂಡಿದ್ದು, ಬಳಿಕ ರಿಮೋಟ್ ಬಂದಿದ್ದು, ಅಡುಗೆ ಮನೆಯಲ್ಲಿ ಮಡಕೆ ಸ್ಥಳವನ್ನು ಸ್ಟೀಲ್, ಸಿಲ್ವರ್ ಪಾತ್ರೆಗಳು ಆಕ್ರಮಿಸಿಕೊಂಡಿದ್ದು, ಪ್ರೆಷರ್ ಕುಕ್ಕರ್ ದಾಟಿ ಇದೀಗ ಎಲೆಕ್ಟ್ರಾನಿಕ್ ಕುಕ್ಕರ್ ಬಂದಿದ್ದು...  ಇದೆಲ್ಲವೂ ತಂತ್ರಜ್ಞಾನ ಸ್ಥಿತ್ಯಂತರವೇ ಸರಿ.  ಕಾಲ ಸರಿದಂತೆ ಎಲ್ಲವೂ ಸ್ಮಾರ್ಟ್‌ ಆಗುತ್ತಿದೆ; ಸುಲಭಗೊಳ್ಳುತ್ತಿದೆ. ಎಷ್ಟೇ ಆಗಲಿ ಇದು ಸ್ಮಾರ್ಟ್‌ಫೋನ್ ಕಾಲ! 

ಆಧುನಿಕತೆಯ ಓಟದ ವೇಗಕ್ಕೆ ಹೊಂದುವಂಥ ‘ಸ್ಮಾರ್ಟ್‌ ಕೆಟಲ್‌’ವೊಂದು (ಜಗ್/ಮಗ್) ಇದೀಗ ಸಿದ್ಧಗೊಂಡಿದೆ.  ಹೆಸರು ಆ್ಯಪ್‌ಕೆಟಲ್. ಬಗೆಬಗೆಯ ಪಾತ್ರಗಳಿಗೆ ರೂಪಾಂತರಗೊಳ್ಳಬಲ್ಲ ಚತುರ ಸ್ಮಾರ್ಟ್‌ಫೋನ್‌  ಇದನ್ನು ನಿಯಂತ್ರಿಸಲಿದೆ. ಈ ಮೂಲಕ ಅಡುಗೆ ಮನೆಗೂ ಅಡಿಯಿಟ್ಟಿದೆ ಸ್ಮಾರ್ಟ್‌ಫೋನ್‌!

ಏನಿದು ಸ್ಮಾರ್ಟ್‌ಕೆಟಲ್‌?
ಏನಿಲ್ಲ, ಹೆಸರೇ ಹೇಳುವಂತೆ ಇದೊಂದು ಲಘು ಪಾನೀಯಗಳನ್ನು ಸಿದ್ಧಪಡಿಸಿಕೊಳ್ಳಲು ನೆರವಾಗುವಂತಹ  ಚತುರ ಕೆಟಲ್. ರಾಬರ್ಟ್‌ ಹಿಲ್ ಹಾಗೂ ರಿಚರ್ಡ್‌ ಹಿಲ್  ಇದರ  ನಿರ್ಮಾತೃಗಳು. ವಿನ್ಯಾಸ ಹಾಗೂ ನಿರ್ಮಾಣ ಸಂಪೂರ್ಣ ಅವರದ್ದೆ. ಇದಕ್ಕಾಗಿ ಇಂಗ್ಲೆಂಡಿನಲ್ಲಿ ಪೇಟೆಂಟ್  ಕೂಡ ದೊರೆತಿದೆ. ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಮಾದರಿಯಷ್ಟೇ ಸಿದ್ಧಗೊಂಡಿದೆ. ಈ ಕೆಟಲನ್ನು ಉಚಿತವಾದ ನಿರ್ದಿಷ್ಟ ಆ್ಯಪ್‌ ಮೂಲಕ ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಿಸಬಹುದು. ಸದ್ಯ ಸಿದ್ಧವಾಗಿರುವ ಮಾದರಿಯನ್ನು ವೈಫೈ ಮೂಲಕ ನಿಯಂತ್ರಿಸಬಹುದಾಗಿದೆ. ಬಹು ಜನರ  ಆಶಯಕ್ಕೆ ತಕ್ಕಂತೆ ವೈವಿಧ್ಯಮಯ ಪಾನೀಯ ತಯಾರಿಕೆಗೆ ಅವಕಾಶವಿರುವುದು ಈ ಕೆಟಲ್ ವಿಶೇಷ.

ಬೇಕೆನಿಸಿದಾಗ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವಂಥ ತಾಪಮಾನ ನಿಯಂತ್ರಕ ಹಾಗೂ ಸ್ಮಾರ್ಟ್‌ ಶೆಡ್ಯೂಲಿಂಗ್ ಇದರಲ್ಲಿ ಅಡಕವಾಗಿದೆ. ನಿಸ್ತಂತು ಜಾಲತಾಣ, ಅತ್ಯಾಧುನಿಕ 360 ಡಿಗ್ರಿ ಆಪ್ಟಿಕಲ್ ಐಆರ್ ಇಂಟರ್‌ಫೇಸ್‌ ಕನೆಕ್ಟರ್ ಸಂಪರ್ಕಯುಕ್ತ  ಎಲ್ಇಡಿ ಸಂವೇದಕಗಳು  ಇದರಲ್ಲಿವೆ. ಇದರಿಂದ ಮೊಬೈಲ್ ಆ್ಯಪ್, ಜಗ್/ಕೆಟಲ್  ಹಾಗೂ ಅದರ ಬೇಸ್‌ ನಡುವೆ ದ್ವಿಮುಖ ನಿಸ್ತಂತು ಸಂವಹನ ಸಾಧ್ಯವಾಗುತ್ತದೆ.

ಸದ್ಯಕ್ಕೆ ಪಾನೀಯ ಹಾಗೂ ಬೇಬಿ ಫುಡ್‌ ತಯಾರಿಕೆಗೆ ಇದನ್ನು ಬಳಸಬಹುದು. ಪುಟಾಣಿಗಳಿಗಾಗಿ ಬೇಕಾಗುವ ಆಹಾರವನ್ನು ಬೇಯಿಸಿ, ಬೇಕಾದ ಹದಕ್ಕೆ ತಣ್ಣಗಾಗಿಸುವಂತೆ ಕೆಟಲ್‌ ಮುಂಚಿತವಾಗಿಯೇ ಶೆಡ್ಯೂಲ್ ಮಾಡಬಹುದು.  ಇದೆಲ್ಲವನ್ನೂ ಮೊಬೈಲ್ ಪರದೆ ಮೇಲೆ ಕೈಯಾಡಿಸುವ ಮೂಲಕವೇ ನಿಯಂತ್ರಿಸಬಹುದು ಎಂಬುದು ಮತ್ತೊಂದು ವಿಶೇಷ. ಈ ಕೆಟಲ್‌, ಮನೆ ಅಥವಾ ಕಚೇರಿಗಳಲ್ಲಿ ಬಳಕೆಗೆ ಸೂಕ್ತ. ಇದರಿಂದ ಬಹಳ ಬೇಗ ಹಾಗೂ ಕಡಿಮೆ ಇಂಧನ ಬಳಸಿ ಪಾನೀಯವನ್ನು ತಯಾರಿಸಬಹುದು. ಅಂದರೆ, ಇಂಧನ ಹಾಗೂ ಸಮಯ ಉಳಿತಾಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಅಂದಹಾಗೆ ಸ್ಮಾರ್ಟ್‌ಕೆಟಲ್‌ ನಿರ್ಮಾಣ ಕಲ್ಪನೆಯ ಹಿಂದೊಂದು ಪುಟ್ಟ ಕಥೆಯಿದೆ. ಅದನ್ನು ರಾಬರ್ಟ್‌ ಅವರ ಮಾತುಗಳಲ್ಲೇ ಕೇಳಿ: ‘ಕುಟುಂಬ ಹಾಗೂ ಗೆಳೆಯರೊಂದಿಗೆ ಹರಟುತ್ತಾ ಕುಳಿತಿದ್ದಾಗ, ಸ್ಮಾರ್ಟ್‌ಫೋನ್‌ ನಿಯಂತ್ರಿತ ಹಾಗೂ ಅದು ಸ್ಮಾರ್ಟ್‌ಫೋನ್‌ ಪರದೆಯ ಮೇಲೆ ಕಾಣುವಂತಿದ್ದರೇ ತಾವೆಲ್ಲ ಎಷ್ಟೊಂದು ಚೆನ್ನಾಗಿ ಕಾಫಿ ತಯಾರಿಸುತ್ತಿದ್ದೆವು ಎಂಬ ಬಗ್ಗೆ ಚರ್ಚಿಸುತ್ತಿದ್ದರಂತೆ. ಒಂದು ಕೆಟಲ್ ಇರಬೇಕು. ಅದು ಸ್ಮಾರ್ಟ್‌ ಫೋನ್‌ಗಳ ಮೂಲಕ ನಿಯಂತ್ರಿಸುವಂತಿರಬೇಕು.

ಇಲ್ಲಿಯೇ ಕುಳಿತು ಅದರಲ್ಲಿ ಪಾನೀಯ ತಯಾರಿಸ ಬೇಕು. ಅದು ನಮಗೆ ಮೊಬೈಲ್ ಪರದೆಯಲ್ಲಿ ಕಾಣುತ್ತಿರಬೇಕು  ಹೀಗೆಲ್ಲ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕುಳಿತು ಕಲ್ಪಿಸಿಕೊಳ್ಳುತ್ತಿರುವಾಗ  ಈ ಉಪಾಯ ಮೊಳೆಯಿತಂತೆ. ‘ಈ ಕಲ್ಪನೆಯೇ ಬಳಿಕ ಆ್ಯಪ್‌ಕೆಟಲ್ ಯೋಜನೆಯ ರೂಪ ತಳೆಯಿತು’ ಎನ್ನುತ್ತಾರೆ ಸಂಶೋಧಕರಲ್ಲಿ ಒಬ್ಬರಾಗಿರುವ ರಾಬರ್ಟ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT