ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಗ್ರಂಥಾ­ಲಯ ಕಟ್ಟಡ ನವೀಕರಣ ಸ್ಥಗಿತ

ತೋಟಗಾರಿಕೆ ಇಲಾಖೆ, ಇನ್‌ಟ್ಯಾಕ್ಟ್‌ ನಡುವಣ ಸಮನ್ವಯ ಕೊರತೆ
Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಲಾಲ್‌ಬಾಗ್‌ನ ಹೂವಿನ ಗಡಿಯಾರದ ಬಳಿಯಿರುವ ಪಾರಂಪರಿಕ ಕಟ್ಟಡವಾದ ‘ಡಾ.ಎಂ. ಎಚ್‌.ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾ­ಲಯ’ದ ನವೀಕರಣ ಕಾಮಗಾರಿ ಸ್ಥಗಿತಗೊಂಡಿದೆ. ಈ ಪಾರಂಪರಿಕ ಕಟ್ಟಡದ ರಚನೆಯ ಕುರಿತು ಇರುವ ತಾಂತ್ರಿಕ ಗೊಂದಲಗಳ ಕಾರಣದಿಂದ ವಿವಾದ ತಲೆದೋರಿದೆ.

ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಟ್ರಸ್ಟ್‌ (ಇನ್‌ಟ್ಯಾಕ್ಟ್‌) ಯೋಜನೆಯ ಸಲಹೆಗಾರರು ನೀಡಿದ ಸಲಹೆಗಳಂತೆ ತೋಟಗಾರಿಕೆ ಇಲಾಖೆಯು ಕಾರ್ಯ ನಿರ್ವಹಿಸದೆ, ಕಾಮಗಾರಿ ನಡೆಸುತ್ತಿದೆ. ಹೀಗಾಗಿ ಪಾರಂಪರಿಕ ಕಟ್ಟಡದ ಮೂಲ ಆಶಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಲಾಲ್‌­ಬಾಗ್‌ನ ಗ್ರಂಥಾಲಯ ಕಟ್ಟಡದ ನವೀಕರಣ ಕಾರ್ಯ­ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಇನ್‌ಟ್ಯಾಕ್ಟ್‌ ಸಂಸ್ಥೆ ಮತ್ತು ತೋಟಗಾರಿಕೆ ಇಲಾಖೆಯ ನಡುವೆ ಉಂಟಾ­ಗು­ತ್ತಿದ್ದ ವಿವಾದಗಳಿಂದಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿತ್ತು. ಆದರೆ, ಈಗ ಕಾಮಗಾರಿ­ಯನ್ನು ಸ್ಥಗಿತ­ಗೊಳಿ­ಸಲಾಗಿದೆ ಎಂದು ಮೂಲಗಳು ಹೇಳಿವೆ.

ಗ್ರಂಥಾಲಯ ಕಟ್ಟಡದ ಮೇಲ್ಚಾವಣಿಯ ಕೆಲಸ  ಮುಗಿದಿದೆ. ಆದರೆ ತೋಟಗಾರಿಕೆ ಇಲಾಖೆ ಮತ್ತು ಇನ್‌ಟ್ಯಾಕ್ಟ್‌  ನಡುವಣ ಸಮನ್ವಯ ಕೊರತೆ ಯಿಂದಾಗಿ ಜೀರ್ಣೊದ್ಧಾರ ಕಾರ್ಯ ಸ್ಥಗಿತಗೊಂಡಿದೆ. ಇದ­ರಿಂದಾಗಿ ಗ್ರಂಥಾಲಯದಲ್ಲಿದ್ದ ಅಮೂಲ್ಯವಾದ ಪುಸ್ತಕಗಳು, ಪೇಂಟಿಂಗ್‌ಗಳು ಅನಾಥವಾಗಿವೆ.

‘ಸೀಮಿತ ಸದಭಿರುಚಿಯನ್ನು ಹೊಂದಿರುವ ಗುತ್ತಿಗೆ­ದಾರರನ್ನು ಕಟ್ಟಡಗಳ ನವೀಕರಣಕ್ಕೆ ನಿಯೋಜಿಸ­ಲಾ­ಗಿದೆ. ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಸಿಮೆಂಟ್‌ ಮತ್ತು ಸುಣ್ಣದ ಗಾರೆಯನ್ನು ಬಳಸಲಾಗುತ್ತಿದೆ.

ಇದರಿಂದ, ಕಟ್ಟಡ­ಗಳ ಅನನ್ಯತೆಯು ನಾಶವಾಗುತ್ತದೆ. ಪಾರಂಪರಿಕ ಕಟ್ಟಡಗಳ ವಿಶಿಷ್ಟತೆಯನ್ನು ನಾಶ ಮಾಡಿ ನವೀಕರಣ ಮಾಡುವುದು ಸರಿಯಲ್ಲ’ ಎಂದು ಇನ್‌ಟ್ಯಾಕ್ಟ್‌ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಸುಮಾರು 130ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ­ದಾದ ಗ್ರಂಥಾಲಯ ಕಟ್ಟಡವು ಪುರಾತತ್ವ ಇಲಾಖೆಗೆ ಸೇರಿದೆ. ಹೀಗಾಗಿ, ಕಟ್ಟಡದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಕಾಪಾಡಬೇಕಾದ್ದು ನಿಯಮ’  ಎಂದು ಇನ್‌ಟ್ಯಾಕ್ಟ್‌ ಕಟ್ಟಡಗಳ ಸಂರಕ್ಷಣಾ ಧಿಕಾರಿ ಪಂಕಜ್ ಮೋದಿ ಹೇಳಿದರು.

‘ಕಳೆದ ವರ್ಷ ಇನ್‌ಟ್ಯಾಕ್ಟ್‌  ಸಂಸ್ಥೆಯೊಂದಿಗೆ ಚರ್ಚೆ ನಡೆಸಿದ್ದ ತೋಟಗಾರಿಕೆ ಇಲಾಖೆಯು,  ಸಂಸ್ಥೆಯು ನೀಡಿರುವ ಸಲಹೆಗಳನ್ನು ಒಪ್ಪಿಕೊಂಡು ಮಾರ್ಚ್- ತಿಂಗಳಿನಲ್ಲಿ ಕಾಮಗಾರಿ ಆರಂಭಿಸಿತ್ತು. 

ಆದರೆ, ಇನ್‌ಟ್ಯಾಕ್ಟ್‌ನ ಸಲಹೆಗಳನ್ನು ಬದಿಗೊತ್ತಿ ಗುಟ್ಟಾಗಿ ಕಾಮಗಾರಿ ನಡೆಸುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈವರೆಗೆ ಸಮರ್ಪಕ ಉತ್ತರ ಸಿಕ್ಕಿಲ್ಲ’ ಎಂದು ಹೇಳಿದರು.

‘ಇನ್‌ಟ್ಯಾಕ್ಟ್‌ ನೀಡಿದ ಸಲಹೆಗಳಂತೆ ತೋಟಗಾರಿಕೆ ಇಲಾಖೆಗೆ ಕಾಮಗಾರಿ ನಡೆಸಲು ಆಗಲಿಲ್ಲ.  ಈ ಬಗ್ಗೆ ಪ್ರಶ್ನಿಸಿದ್ದನ್ನು ಸಹಿಸದ ಅಧಿಕಾರಿಗಳು, ಸಂಸ್ಥೆಯಿಂದ ಯಾವುದೇ ಸಲಹೆ, ಸೂಚನೆಯ ಅಗತ್ಯವಿಲ್ಲವೆಂದು ಪತ್ರ ಬರೆದಿದ್ದಾರೆ.

ರಾಜ್ಯ ಪುರಾತತ್ವ ಇಲಾಖೆಯಿಂದ ಮಾಡಿಸುತ್ತಿರುವುದಾಗಿ ತಿಳಿದುಬಂದಿದೆ. ನಾವು ಆ ಯೋಜನೆಯಿಂದ ಹೊರಗೆ ಬಂದು ಆಗಲೇ ಮೂರು ತಿಂಗಳಾಗಿದೆ’ ಎನ್ನುತ್ತಾರೆ ಅವರು.

ಐತಿಹಾಸಿಕ ಗ್ರಂಥಾಲಯ
ದಕ್ಷಿಣ ಏಷ್ಯಾದ ಅತಿ ಹಳೆಯ ಗ್ರಂಥಾಲಯಗಳಲ್ಲಿ ಲಾಲ್‌ಬಾಗ್ ಗ್ರಂಥಾಲಯ ಒಂದಾಗಿದೆ. ತೋಟ­ಗಾರಿಕೆ, ಸಸ್ಯಪ್ರಭೇದದ ಸಂಪೂರ್ಣ ಮಾಹಿತಿ ನೀಡುವ ಅಪರೂಪದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಗ್ರಂಥಗಳಿವೆ. ಉದ್ಯಾನ ವಿನ್ಯಾಸ ಕೋಶಗಳು, ವಿಶ್ವಕೋಶ, ಪರಾಮರ್ಶನ ಗ್ರಂಥಗಳು, ಕೆಲವು ಪ್ರಭೇದಗಳಿಗೆ ಸಂಬಂಧಿಸಿದ ಗೆಜೆಟಿಯರ್‌ನೊಂದಿಗೆ ದಾಖಲೆಗಳ ಕಣಜ ಎನಿಸಿದೆ ಈ ಗ್ರಂಥಾಲಯ.



1863-–73ರ ಅವಧಿಯಲ್ಲಿ ಉದ್ಯಾನದ ಮೇಲ್ವಿಚಾರಕರಾಗಿದ್ದ ವಿಲಿಯಂ ನ್ಯೂ ಈ ಗ್ರಂಥಾ­ಲಯ ಸ್ಥಾಪಕರು. ಲಾಲ್‌ಬಾಗ್ ಉನ್ನತಿಗೆ ಶ್ರಮಿಸಿದ ಎಂ. ಎಚ್. ಮರಿಗೌಡ ಅವರು ‘ಲಾಲ್‌ಬಾಗ್ ಜರ್ನಲ್’ ಆರಂಭಿಸುವ ಮೂಲಕ ಹರ್ಬೇರಿಯಂ ಸಂಗ್ರಹಾಲಯಕ್ಕೂ ನಾಂದಿ ಹಾಡಿದರು. ಗ್ರಂಥಾಲಯದಲ್ಲಿ ಸುಮಾರು 750 ತೈಲಚಿತ್ರ ಹಾಗೂ ಪೆನ್ಸಿಲ್ ಸ್ಕೆಚ್‌ಗಳಿದ್ದು, ನೂರು ವರ್ಷಕ್ಕೂ ಹಿಂದಿನ 19ನೇ ಶತಮಾನದ ಚಿತ್ರಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT