ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದ ಕಟ್ಟಡ, ಲಾರಿ ಮತ್ತು ಅಭಿವೃದ್ಧಿ

ಜಕ್ಕಲಮಡಗು ಜಲಾಶಯದತ್ತ ಹೀಗೊಂದು ಹಿನ್ನೋಟ
Last Updated 1 ಸೆಪ್ಟೆಂಬರ್ 2014, 7:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆಗ ಜಕ್ಕಲಮಡಗು ಸಿಲ್ಟ್ ಜಲಾಶಯ ಸ್ಥಳ ಈಗಿನಂತಿರಲಿಲ್ಲ. ಅಣೆಕಟ್ಟು ನಿರ್ಮಾಣ, ಕಟ್ಟಡ ಕಾಮ­ಗಾರಿ ಆಮೆವೇಗದಲ್ಲಿ ಸಾಗುತ್ತಿತ್ತು. ಇದನ್ನು ನಗರಸಭೆಯ ಕೆಲ ಸದಸ್ಯರು ವಿರೋಧಿಸಿದರೆ, ಇನ್ನೂ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದರು. ಇಲ್ಲಿನ ಅಭಿ­ವೃದ್ಧಿ ಕಾಮಗಾರಿ ಪೂರ್ಣ­ಗೊಳ್ಳುವುದೇ ಇಲ್ಲ ಎಂಬ ಮಾತು ಸಹ ಕೇಳಿ ಬಂದಿತ್ತು. ಸದ್ಯಕ್ಕೆ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಆದರೆ ಕಪ್ಪುಚುಕ್ಕೆ ಎಂಬಂತೆ ನಗರಸಭೆ ಕಟ್ಟಡ ಪಾಳು ಬಿದ್ದಿದೆ.
 
ಜಕ್ಕಲಮಡಗು ಜಲಾಶಯ ಸ್ಥಳಕ್ಕೆ ನಗರಸಭೆ ಅಧಿಕಾರಿಗಳಾಗಲೀ ಜನಪ್ರತಿ­ನಿಧಿಗಳಾಗಲೀ ಹೆಚ್ಚು ಭೇಟಿ ನೀಡು­ತ್ತಿರಲಿಲ್ಲ. ಅಲ್ಲಿನ ಪರಿಸ್ಥಿತಿ ಪರಿಶೀಲಿಸುವ ನೆಪದಲ್ಲಿ ಮೊದಲ ಬಾರಿಗೆ 2011ರ ಮೇ 25ರಂದು ಜಕ್ಕಲಮಡಗು ಜಲಾಶಯ ಸ್ಥಳದ ಆವರಣದಲ್ಲಿ ಆಗಿನ ನಗರಸಭೆ ಅಧ್ಯಕ್ಷ ಬಿ.ಎ.­ಲೋಕೇಶ್‌­ಕುಮಾರ್‌ ಅಧ್ಯಕ್ಷತೆಯಲ್ಲಿ ನಗರಸಭೆ ಬಜೆಟ್‌ ಮಂಡನೆಯಾಯಿತು. ನಂತರ ಅಲ್ಲಿ ಸಭೆ ನಡೆಯಲೇ ಇಲ್ಲ.

2009ರವರೆಗೆ ಜಕ್ಕಲಮಡಗು ಜಲಾಶ­ಯದ ಪರಿಸ್ಥಿತಿ ಅಸ್ಪಷ್ಟವಾಗಿತ್ತು. ₨ 27 ಕೋಟಿ ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಲಾಶಯ ಪುನರ್‌­ನಿರ್ಮಾಣಕ್ಕೆ ಮುಂದಾ­ಗು­ವ­ವರೆಗೆ ಕಾಮಗಾರಿ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ನೀರಿನ ಹಂಚಿಕೆ ಕುರಿತು ಚಿಕ್ಕ­ಬಳ್ಳಾಪುರ ಮತ್ತು ದೊಡ್ಡ­ಬಳ್ಳಾಪುರ ನಗರಸಭೆಗಳ ನಡುವಿನ ಶೀತಲ­ಸಮರ ಕಾಮಗಾರಿಗೆ ಮುಳು­ವಾಗಿತ್ತು. 2009­ರವರೆಗೆ ಒಟ್ಟು 1 ಸಾವಿರ ಎಂಎಲ್‌ಡಿ ಮಾತ್ರ ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದ್ದ ಜಲಾಶಯ ಈಗ ಕೊಂಚ ಅಭಿವೃದ್ಧಿ­ಗೊಂಡು 4,390 ಎಂಎಲ್‌ಡಿ ನೀರಿನ ಶೇಖರಣಾ ಸಾಮರ್ಥ್ಯ ಗಳಿಸಿದೆ.

ಸೆಪ್ಟೆಂಬರ್‌ ಮೊದಲನೇ ವಾರದಿಂದ ಚಿಕ್ಕಬಳ್ಳಾಪುರ ಮತ್ತು ದೊಡ್ಡ­ಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಸಲು ಸಿದ್ಧತೆ ನಡೆ­ಯುತ್ತಿ­ರುವ ಸಂದರ್ಭದಲ್ಲಿ  ಹೀಗೆ ನೆನಪು ಮೆಲುಕು ಹಾಕಿದ್ದು ನಗರದ ನಿವಾಸಿ ಅಭಿಷೇಕ್‌ ಸೀತಾರಾಂ. ಜಲಾಶಯ ಭರ್ತಿಯಾಗಿರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದರು.

ಕೆಂಪು ನೀರಿನದ್ದೇ ಚರ್ಚೆ: 30–40 ವರ್ಷಗಳ ಹಿಂದೆ ಜಕ್ಕಲಮಡಗು ಜಲಾಶಯದಿಂದ ಕೆಂಪು ನೀರು ಪೂರೈಕೆ­ಯಾಗುತ್ತಿತ್ತು. ಹೋಟೆಲ್‌, ಕ್ಯಾಂಟೀನ್‌ ಅಥವಾ ಮನೆಗಳಲ್ಲಿ ಎಲ್ಲಿ­ಯಾದರೂ ಕೆಂಪು ನೀರು ಕಂಡರೆ ಸಾಕು, ಇದು ಜಕ್ಕಲಮಡಗು ನೀರು ಎಂದೇ ತಿಳಿ­ಯುತ್ತಿದ್ದರು. ಆರೋಗ್ಯಕ್ಕೆ ಹಾನಿಯಾ­ಗುವುದಿಲ್ಲ ಎಂಬ ವಿಶ್ವಾಸದಿಂದಲೇ ಆ ನೀರನ್ನು ಕುಡಿಯುತ್ತಿದ್ದರು. ಕೆಲ ವರ್ಷಗಳವರೆಗೆ ಅದೇ ರೂಢಿಯಾಗಿತ್ತು ಎಂದು ಅವರು ತಿಳಿಸಿದರು.

ಶುದ್ಧವಾದ ನೀರನ್ನೇ ಕುಡಿಯ­ಬೇಕೆಂದು ಕೆಲ ಮನೆಗಳವರು ಸ್ಫಟಿಕ (ಆಲಂ) ಇಟ್ಟುಕೊಳ್ಳುತ್ತಿದ್ದರು. ಅದನ್ನು ನೀರಿನಲ್ಲಿ ಹಾಕಿದ ಕೂಡಲೇ ಮಣ್ಣು ಮತ್ತು ಸೂಕ್ಷ್ಮಾಣುಗಳು ತಳ ಸೇರಿ ನೀರು ಶುದ್ಧವಾಗುತ್ತಿತ್ತು.

ಸಿಹಿ ನೀರು ಕುಡಿ­ದಷ್ಟೇ ಸಮಾಧಾನ­ವಾಗುತ್ತಿತ್ತು. ನಂತರದ ವರ್ಷಗಳಲ್ಲಿ ಜಲಾಶಯದ ಸ್ಥಳದಲ್ಲೇ ಎರಡು ಮಹಡಿಗಳ ಜಲ ಶುದ್ಧೀಕರಣ ಘಟಕದ ಕಟ್ಟಡ ನಿರ್ಮಿ­ಸಲಾಯಿತು. ಆಗಿನಿಂದ ಎಲ್ಲರಿಗೂ ಶುದ್ಧ ನೀರು ದೊರೆಯ­ಲಾರಂಭಿಸಿತು ಎಂದು ಅವರು ನೆನಪಿಸಿಕೊಂಡರು.
ಪಾಳುಬಿದ್ದ ಕಟ್ಟಡ ಸದ್ಬಳಕೆಯಾಗಲಿ: ಕೆಂಪು ಮಣ್ಣಿನ ನೀರು ಹೇಗೆ ಶುದ್ಧಗೊಳ್ಳುತದೆ ಎಂಬುದನ್ನು ತಿಳಿದು­ಕೊಳ್ಳಲೆಂದೇ ಕೆಲ ಮಂದಿ ಜಲ ಶುದ್ಧೀ­ಕರಣ ಘಟಕಕ್ಕೆ ಭೇಟಿ ನೀಡುತ್ತಿದ್ದರು. ಮಣ್ಣು ಮತ್ತು ಸೂಕ್ಷ್ಮಾಣುಗಳಿಂದ ಶುದ್ಧ ನೀರು ಬೇರ್ಪಡುವ ರೀತಿ ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಅದೆಲ್ಲ ಇತಿಹಾಸ. ಪಾಳು ಬಿದ್ದಿರುವ ಕಟ್ಟಡ­ವನ್ನು ಕಂಡರೆ ಈಗ ತುಂಬಾ ಬೇಸರ­ವಾಗುತ್ತದೆ ಎಂದು ಅವರು ತಿಳಿಸಿದರು.

ವರ್ಷಗಳಾದರೂ ಕಿಟಕಿ, ಬಾಗಿಲು, ಪೈಪ್‌ ಮತ್ತು ಕೆಲ ಉಪಕರಣ ಹೊರತು­ಪಡಿಸಿದರೆ ಕಟ್ಟಡ ಈಗಲೂ ಬಳಕೆಗೆ ಯೋಗ್ಯವಾಗಿದೆ. ಜಲಾಶಯದಂತಹ ಸುಂದರ ಸ್ಥಳದಲ್ಲಿ ಇಂತಹ ಕಟ್ಟಡ ಪಾಳು ಬಿಡಬಾರದು. ಮೈಸೂರಿನ ಕೆಆರ್‌­ಎಸ್ ಆಣೆಕಟ್ಟು ವೀಕ್ಷಣೆಗೆ ಜನರು ಬರುವ ಮಾದರಿಯಲ್ಲೇ ಇಲ್ಲೂ ಜನರು ಜಲಾಶಯ ವೀಕ್ಷಣೆಗೆ ಬರುವಂತೆ ವ್ಯವಸ್ಥೆ ಮಾಡಬೇಕು. ಪಾಳುಬಿದ್ದ ಕಟ್ಟಡವನ್ನು ಅತಿಥಿಗೃಹ ಅಥವಾ ಉಪಾಹಾರ ಮಂದಿರದ ಸ್ವರೂಪದಲ್ಲಿ ಸದ್ಬಳಕೆ ಮಾಡಿಕೊಂಡರೆ ಎಲ್ಲರಿಗೂ ಪ್ರಯೋಜನವಾಗುತ್ತದೆ ಎಂದು ಅವರು ಹೇಳಿದರು.
ಸದ್ಬಳಕೆಗೆ ಚಿಂತನೆ: ಕಟ್ಟಡದಲ್ಲಿದ್ದ ಕಿಟಕಿ, ಬಾಗಿಲು, ಪೈಪು ಮತ್ತು ಇತರ ಕಬ್ಬಿಣದ ಉಪಕರಣಗಳನ್ನು ಹರಾಜು ಹಾಕಿ ಬಂದ ಸುಮಾರು ಎರಡೂವರೆ ಕೋಟಿ ರೂಪಾಯಿಯನ್ನು ನಗರದ ಹಳೆಯ ಬಸ್‌ ನಿಲ್ದಾಣದ ಬಳಿ ವಾಣಿಜ್ಯ ಮಳಿ­ಗೆಗಳ ನಿರ್ಮಾಣಕ್ಕೆ ವಿನಿಯೋಗಿ­ಸಲಾಗುತ್ತಿದೆ. ಪಾಳು ಬಿದ್ದ ಕಟ್ಟಡವನ್ನು ಸದ್ಬಳಕೆ ಮಾಡುವ ಉದ್ದೇಶವಿದೆ. ಆದರೆ ಯಾವ ರೀತಿಯಲ್ಲಿ ಬಳಸ­ಬೇಕೆಂದು ನಿರ್ಧರಿಸಿಲ್ಲ ಎಂದು ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡದ ಬದಿಯಲ್ಲೇ ವರ್ಷಗಳಿಂದ ಲಾರಿಯೊಂದು ನಿಂತಿದ್ದು, ಅದರ ಬಗ್ಗೆ­ಯೂ ಮಾಹಿತಿ ಸಂಗ್ರಹಿಸಲಾಗಿದೆ. ಆಗಿನ ದಿನಗಳಲ್ಲಿ ಆ ಲಾರಿಯನ್ನು ನೀರಿನ ಟ್ಯಾಂಕರ್ ರೂಪದಲ್ಲಿ ಬಳಸ­ಲಾ­ಗುತ್ತಿತ್ತು. ಅದು ಗುತ್ತಿಗೆದಾರರಿಗೆ ಸೇರಿದ್ದು, ತೆಗೆದುಕೊಂಡು ಹೋಗು­­ವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಜಲಾಶಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರಯ­ತ್ನಿ­­­­ಸ­ಲಾಗು­ವುದು ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT