ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌–ಫೇಲ್‌ ವ್ಯವಸ್ಥೆ ಬೇಕೆಂದ ತಜ್ಞರ ಸಮಿತಿ

Last Updated 29 ಜೂನ್ 2016, 23:30 IST
ಅಕ್ಷರ ಗಾತ್ರ

ಬೆಂಗಳೂರು: ತಳ ಮಟ್ಟದಲ್ಲಿ ವ್ಯಾಪಕ ಸಮಾಲೋಚನೆ ನಡೆಸಿ ಒಳನೋಟ ಮತ್ತು ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷ ಚಾಲನೆ ನೀಡಿತ್ತು.

ತಳ ಮಟ್ಟದಿಂದ ಪಡೆದ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಕ್ರೋಡೀಕರಿಸಿ ನೀತಿ ರೂಪಿಸಲು ಸಲಹೆಗಳನ್ನು ನೀಡುವುದಕ್ಕಾಗಿ ನಿವೃತ್ತ ಸಂಪುಟ ಕಾರ್ಯದರ್ಶಿ ಟಿ.ಎಸ್‌.ಆರ್‌ ಸುಬ್ರಮಣಿಯನ್‌ ನೇತೃತ್ವದಲ್ಲಿ  ತಜ್ಞರ ಸಮಿತಿಯೊಂದನ್ನು ನೇಮಿಸಿತು.

ಮೇ 30ರಂದು ಸಮಿತಿಯು ತನ್ನ ವರದಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದೆ. ಸಮಿತಿ ಸಲ್ಲಿಸಿರುವ ಶಿಫಾರಸುಗಳನ್ನು ಬಹಿರಂಗಪಡಿಸಬೇಕು ಎಂದು ಸುಬ್ರಮಣಿಯನ್‌ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಪಡೆದ ನಂತರವಷ್ಟೇ ಶಿಫಾರಸುಗಳನ್ನು ಬಹಿರಂಗಪಡಿಸುವುದು ಸಾಧ್ಯ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳಿತ್ತು.

ಇದರಿಂದ ಸಿಟ್ಟುಗೊಂಡ ಸುಬ್ರಮಣಿಯನ್‌, ಶಿಫಾರಸುಗಳು ರಹಸ್ಯ ವರದಿ ಅಲ್ಲ. ಸರ್ಕಾರ ಶಿಫಾರಸುಗಳನ್ನು ಬಹಿರಂಗ ಮಾಡದೇ ಇದ್ದರೆ ತಾವೇ ಬಹಿರಂಗ ಮಾಡುವುದಾಗಿ ಹೇಳಿದ್ದಲ್ಲದೆ, ನಂತರ ಅದನ್ನು ಬಹಿರಂಗವೂ ಮಾಡಿದ್ದಾರೆ. ಹೀಗೆ ನೀತಿ ರೂಪುಗೊಳ್ಳುವ ಮೊದಲೇ ವಿವಾದ ಸೃಷ್ಟಿಯಾಯಿತು. ಸುಬ್ರಮಣಿಯನ್‌ ಸಮಿತಿಯ ವರದಿಯಲ್ಲಿ ಕೂಡ ಹಲವು ಚರ್ಚಾಸ್ಪದ ಅಂಶಗಳಿವೆ.

ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿಯ ರೀತಿಯಲ್ಲಿಯೇ ಸುಬ್ರಮಣಿಯನ್‌ ಸಮಿತಿ ಕೂಡ ಎಲ್ಲ ಹಂತಗಳಲ್ಲಿಯೂ ಶಿಕ್ಷಕರಿಗೆ ಬೋಧನೆಯಲ್ಲಿ ಆಸಕ್ತಿಇಲ್ಲದಿರುವುದು, ಆಸಕ್ತಿ ಕೆರಳಿಸದ ಮತ್ತು ಹಳೆಯ ಕಾಲದ  ಪಠ್ಯಕ್ರಮ, ಸಂಪನ್ಮೂಲ ಕೊರತೆ ಮುಂತಾದ ವಿಷಯಗಳತ್ತ ಬೆಳಕು ಚೆಲ್ಲಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಐಸಿಟಿಇ) ರದ್ದತಿ, 5ರಿಂದ 8ನೇ ತರಗತಿವರೆಗೆ ಅನುತ್ತೀರ್ಣಗೊಳಿಸಬಾರದು ಎಂಬ ಪದ್ಧತಿಯಲ್ಲಿ ಬದಲಾವಣೆ ತರಬೇಕು ರದ್ದು ಸಮಿತಿಯ ಕೆಲವು ಪ್ರಮುಖ ಶಿಫಾರಸುಗಳು.

ಶಿಕ್ಷಣ ವ್ಯಾಪಕವಾಗಿ ಖಾಸಗೀಕರಣವಾಗುತ್ತಿರುವ ಬಗ್ಗೆ ಸಮಿತಿ ಏನನ್ನೂ ಹೇಳಿಲ್ಲ ಎಂಬ ಆರೋಪಗಳೂ ಸಮಿತಿಯ ಶಿಫಾರಸುಗಳ ಬಗ್ಗೆ ಕೇಳಿ ಬರುತ್ತಿದೆ.

ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ  ಉನ್ನತ ಸಮಿತಿ ಮಾಡಿರುವ ಶಿಫಾರಸುಗಳು
* ಭಾರತೀಯ ಶಿಕ್ಷಣ ಸೇವೆ (ಐಇಎಸ್‌) ಎಂಬ ಹೊಸ ಸೇವೆ ಆರಂಭಿಸಬೇಕು. ಈ ಸೇವೆ ಕೇಂದ್ರ ಸರ್ಕಾರದ ಅಧೀನದಲ್ಲಿರಬೇಕು.

* ಐಇಎಸ್‌ ಅಧಿಕಾರಿಗಳ ನೇಮಕ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಬೇಕು. ನಾಗರಿಕ ಸೇವಾ ಪರೀಕ್ಷೆಗಳ ಮಾದರಿಯಲ್ಲಿ ಈ ಪರೀಕ್ಷೆ ಇರಲಿದೆ.
* ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಕಾಲ ಕಾಲಕ್ಕೆ ಸಲಹೆಗಳನ್ನು ನೀಡಲು ಸ್ಥಾಯಿ ಶಿಕ್ಷಣ ಆಯೋಗದ ನೇಮಕ
* ಶಿಕ್ಷಣ ಸೇವೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಆಯಾ ರಾಜ್ಯಗಳಲ್ಲಿ ಶಿಕ್ಷಣ ನ್ಯಾಯ ಪಂಚಾಯಿತಿ ನೇಮಕ
* ಸಿಎಟಿ ಜತೆ ಬಾಕಿಯಿರುವ  ವಿವಾದ ಬಗೆಹರಿಸಲು ಮಾನವ ಸಂಪನ್ಮೂಲ ಇಲಾಖೆ ಅಧೀನದಡಿ ಆಡಳಿತಾತ್ಮಕ ನ್ಯಾಯಪಂಚಾಯಿತಿಯ ನೇಮಕ
* ಒಟ್ಟು ಆಂತರಿಕ ಉತ್ಪನ್ನದ ಶೇ 6 ರಷ್ಟನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ಸಲಹೆ

ಉನ್ನತ ಶಿಕ್ಷಣ
*ಉನ್ನತ ಶಿಕ್ಷಣ ವಲಯದ ಎಲ್ಲ ಶಿಕ್ಷಣ ಸಂಸ್ಥೆ, ಪ್ರಾಧಿಕಾರ ಮತ್ತು ಇತರ ಸರ್ಕಾರಿ ಸಂಸ್ಥೆಗಳನ್ನು ಒಂದೇ ಕಾನೂನಿನಡಿ ತರುವುದು

*ಏಕರೂಪ ರಾಷ್ಟ್ರೀಯ ಶಿಕ್ಷಣ ಕಾಯ್ದೆ (ರಾಷ್ಟ್ರೀಯ ಉನ್ನತ ಶಿಕ್ಷಣ ಉತ್ತೇಜಕ ಮತ್ತು ನಿರ್ವಹಣಾ ಕಾಯ್ದೆ) ಜಾರಿಗೊಳಿಸಿ ಎಲ್ಲ ಶೈಕ್ಷಣಿಕ ನಿಯಮಗಳನ್ನು ಇದರ ವ್ಯಾಪ್ತಿಗೆ ಒಳಪಡಿಸುವುದು
*ಈ ಕಾಯ್ದೆಯಡಿಯಲ್ಲಿ ಎಲ್ಲ ರಾಜ್ಯಗಳಲ್ಲೂ ಸ್ವಾಯತ್ತ ಶಿಕ್ಷಣ ಮಂಡಳಿ ಸ್ಥಾಪನೆ
*ಈ ಮಂಡಳಿಯನ್ನು ಆಯಾ ರಾಜ್ಯಗಳೇ  ಸ್ಥಾಪಿಸಬೇಕು
*ಶಿಕ್ಷಣ ನಿಯಂತ್ರಣ ಸಂಸ್ಥೆಗಳ ಪುನರ್‌ ಸಂಘಟನೆ
*ಈಗ ಅಸ್ತಿತ್ವದಲ್ಲಿರುವ ಯುಜಿಸಿ, ಎಐಸಿಟಿಇ ರದ್ದುಪಡಿಸುವುದು
*ಆರ್ಥಿಕವಾಗಿ ಹಿಂದುಳಿದ 10 ಲಕ್ಷ ವಿದ್ಯಾರ್ಥಿಗಳನ್ನು ಪ್ರತಿವರ್ಷ ಗುರುತಿಸಿ ಅವರಿಗೆ ನೆರವಾಗಲು ರಾಷ್ಟ್ರೀಯ ಶಿಷ್ಯವೇತನ ನಿಧಿ ಸ್ಥಾಪನೆ
*12ನೇ ತರಗತಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶಿಷ್ಯವೇತನ ನಿಧಿ ಸ್ಥಾಪನೆ
*ಎಂಜಿನಿಯರಿಂಗ್‌ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ದೇಶದಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವುದು
*ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರಲು ಈಗ ಇರುವ ವ್ಯವಸ್ಥೆಯ ಬದಲಾವಣೆ
*ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಪರಿಣಾಮಕಾರಿ ವ್ಯವಸ್ಥೆ ಜಾರಿಗೆ ಸಲಹೆ
*ಕುಲಪತಿ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳುವುದು
*ಜಾತಿ, ಸಮುದಾಯ ಮತ್ತು ಧರ್ಮದ ಆಧಾರದಲ್ಲಿ ರಚನೆಯಾಗಿರುವ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಗಳ ಕಾರ್ಯಚಟುವಟಿಕೆಯ ಮೇಲೆ ನಿಯಂತ್ರಣ ಹೇರುವುದು
*ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಸಮಯ ಮಿತಿಯನ್ನು ವಿಧಿಸುವುದು


ಶಾಲಾ ಶಿಕ್ಷಣ
*ಶಾಲಾ ಶಿಕ್ಷಕರ ತರಬೇತಿ, ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣ ಪರಿಷ್ಕರಿಸಬೇಕು

*ಚುನಾವಣಾ ಕರ್ತವ್ಯ ಸೇರಿದಂತೆ ಶಿಕ್ಷಕರನ್ನು ಶಾಲೆಯಿಂದ ಹೊರತಾದ ಕೆಲಸಗಳಿಗೆ ನೇಮಿಸಬಾರದು
*ಅಕಾಡೆಮಿಕ್‌ ಕೌನ್ಸೆಲಿಂಗ್‌ ಮತ್ತು ಅ್ಯಪ್ಟಿಟ್ಯೂಡ್‌ ಟೆಸ್ಟ್‌ಗೆ ಹೊಸ ವ್ಯವಸ್ಥೆ ಜಾರಿ
*ಶೈಕ್ಷಣಿಕವಾಗಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳಿಗೆ ನೆರವಾಗಲು ಪರಿಹಾರ ಪಠ್ಯ ವ್ಯವಸ್ಥೆ ಜಾರಿ
*ವಿಶೇಷ ಮಕ್ಕಳಿಗೆ ಇರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದಲ್ಲಿ ಸ್ವತಂತ್ರ ಮಂಡಳಿಯ ನೇಮಕ
*ದೇಶದ ಅಗತ್ಯವನ್ನು ಮನಗಂಡು ಶಾಲಾ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ ಜಾರಿ
*10ನೇ ತರಗತಿಗೆ ಹೊಸ ಪರೀಕ್ಷಾ ಪದ್ಧತಿ ಅಳವಡಿಸುವುದು
*ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಲ್ಲಿ ಈಗ ಇರುವ ಪದ್ಧತಿಯಂತೆ ಅಂಕಗಳು ಮತ್ತು ಗ್ರೇಡ್‌ಗಳನ್ನು ನೀಡುವ ಬದಲು ಸ್ಕೇಲಿಂಗ್‌ ಅಂಕ ನೀಡುವ ಪದ್ಧತಿ ಜಾರಿಗೊಳಿಸುವುದು
*ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಲ್ಲಿ ಕೃಪಾಂಕ ನೀಡುವ ವ್ಯವಸ್ಥೆಯನ್ನು ನಿಲ್ಲಿಸುವುದು
*ಐದನೇ ತರಗತಿಯವರೆಗೆ ಸಂಸ್ಕೃತ ಭಾಷೆಯನ್ನು ಸ್ವತಂತ್ರ ಪಠ್ಯವಾಗಿ ಕಲಿಸುವುದು
*ಯೋಗವನ್ನು ಪಠ್ಯವಾಗಿ ಕಲಿಸಲು ಶಾಲೆಗಳಿಗೆ ಉತ್ತೇಜನ ನೀಡುವುದು
*ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಶೇ 25 ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಸಲಿಡುವುದು
*ಶಿಕ್ಷಕರು, ಪ್ರಾಂಶುಪಾಲರು ಮತ್ತು ಶಾಲೆಯ ಇತರ ಸಿಬ್ಬಂದಿಯ ನೇಮಕಾತಿಗೆ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸುವುದು
*ಸರ್ಕಾರಿ ಅಥವಾ ಖಾಸಗಿ ಶಾಲೆಯ ಶಿಕ್ಷಕರು ಪರವಾನಗಿ ಆಥವಾ ಪ್ರಮಾಣಪತ್ರ ಹೊಂದುವುದನ್ನು ಕಡ್ಡಾಯಗೊಳಿಸುವುದು
*ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ಅಳೆಯಲು ವ್ಯವಸ್ಥೆಯೊಂದನ್ನು ರೂಪಿಸುವುದು
* ಶಾಲಾ ಪೂರ್ವ ಶಿಕ್ಷಣವು 4–5 ವಯಸ್ಸಿನ ಮಕ್ಕಳ ಹಕ್ಕು ಎಂದು ಘೋಷಿಸುವುದು
*ವಿದ್ಯಾರ್ಥಿಗಳ ಅನುತ್ತೀರ್ಣ ನಿಷೇಧ ನೀತಿಯಲ್ಲಿ ಬದಲಾವಣೆ ತರುವುದು
*ಐದರಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಅವಕಾಶ. ಅಂತಹ ವಿದ್ಯಾರ್ಥಿಗಳಿಗೆ ಕನಿಷ್ಠ ಎರಡು ಅವಕಾಶಗಳನ್ನು ನೀಡುವುದು.

ಸಂಶೋಧನಾ ಕ್ಷೇತ್ರಕ್ಕೆ ಒತ್ತು
*ಮುಂದಿನ ಒಂದು ದಶಕದಲ್ಲಿ 100 ಸಂಶೋಧನಾ ಕೇಂದ್ರಗಳ ಸ್ಥಾಪನೆ

*ಈ ಕೇಂದ್ರಗಳ ಸ್ಥಾಪನೆಗೆ ನಿಯಮಗಳನ್ನು ರೂಪಿಸಲು ಮಂಡಳಿಯ ನೇಮಕ
*ಸಂಶೋಧನಾ ಕೇಂದ್ರಗಳನ್ನು ಆರಂಭಿಸಲು ₹ 1000 ಕೋಟಿ ಮೂಲ ಧನದಲ್ಲಿ ರಾಷ್ಟ್ರೀಯ ನಿಧಿ ಸ್ಥಾಪನೆ
*ವಿದೇಶದ 200 ಶ್ರೇಷ್ಠ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅನುಮತಿ ನೀಡುವುದು

ಶಿಕ್ಷಕರ ನೇಮಕಾತಿಗೆ ಪ್ರವೇಶ ಪರೀಕ್ಷೆ

ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಪ್ರವೇಶ ಪರೀಕ್ಷೆ ಕಡ್ಡಾಯಗೊಳಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.
ಯಾವ ಬ್ಲಾಕ್‌ನಲ್ಲಿ ಎಷ್ಟು ಶಿಕ್ಷಕರ ಹುದ್ದೆ ಖಾಲಿಯಿದೆ ಎಂಬುದನ್ನು ಸಾರ್ವಜನಿಕರಿಗೆ ಸುಲಭವಾಗಿ ಗೊತ್ತಾಗುವ ರೀತಿಯಲ್ಲಿ ಪ್ರಕಟಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಭತ್ಯೆ ಸೌಲಭ್ಯಗಳನ್ನು ಒದಗಿಸಬೇಕು ಎಂದಿದೆ.

ಬಿ.ಎಡ್ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇಕಡ 50ರಷ್ಟು ಅಂಕ ಗಳಿಸಿರಬೇಕು ಎಂದೂ ಹೇಳಿದೆ.

ಕೋಚಿಂಗ್‌ ಸೆಂಟರ್‌ಗಳ ಹಾವಳಿ
ಕೋಚಿಂಗ್‌ ಸೆಂಟರ್‌ಗಳು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಸಮಿತಿಯು ಗುರುತಿಸಿದೆ.
ಖಾಸಗಿ ಕೋಚಿಂಗ್‌ ಸೆಂಟರ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವು ನೀಡುತ್ತಿವೆಯಾದರೂ, ಶ್ರೀಮಂತ ಮತ್ತು ಬಡ ವಿದ್ಯಾರ್ಥಿಗಳ ನಡುವೆ ತಾರತಮ್ಯಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಛತ್ತೀಸ್‌ಗಡದಲ್ಲಿ ಶೇ 2.8 ರಷ್ಟು ವಿದ್ಯಾರ್ಥಿಗಳು ಮಾತ್ರ ಖಾಸಗಿ ಕೋಚಿಂಗ್‌ ಸೆಂಟರ್‌ಗಳ ಪ್ರಯೋಜನ ಪಡೆಯುತ್ತಿದ್ದು, ಕೋಲ್ಕತ್ತದಲ್ಲಿ ಶೇ 73 ರಷ್ಟು ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್‌ ಸೆಂಟರ್‌ಗಳಿಗೆ ತೆರಳುತ್ತಿದ್ದಾರೆ ಎಂದಿದೆ.
ಇದರಿಂದ ಖಾಸಗಿ ಕೋಚಿಂಗ್‌ ಸೆಂಟರ್‌ಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಶಿಫಾರಸು ಮಾಡಿದೆ.

ಸಮಿತಿ ಬಗ್ಗೆ
ಮುಖ್ಯಸ್ಥರು:
ಟಿ.ಎಸ್‌.ಆರ್‌. ಸುಬ್ರಮಣಿಯನ್‌
(ಮಾಜಿ ಸಂಪುಟ ಕಾರ್ಯದರ್ಶಿ)

ಸದಸ್ಯರು
ಶೈಲಜಾ ಚಂದ್ರ, ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ
ಶಿವರಾಂ ಶರ್ಮಾ, ದೆಹಲಿಯ ಮಾಜಿ ಗೃಹ ಕಾರ್ಯದರ್ಶಿ
ಸುಧೀರ್‌ ಮಂಕಡ್‌, ಗುಜರಾತ್‌ನ ಮಾಜಿ ಮುಖ್ಯಕಾರ್ಯದರ್ಶಿ
ಜೆ.ಎಸ್‌. ರಜಪೂತ್‌, ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕ

ರಚನೆ: 2015ರ ಅಕ್ಟೋಬರ್‌ 31
ವರದಿ ಸಲ್ಲಿಕೆ: 2016ರ ಏಪ್ರಿಲ್‌ 30 (ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಮಾಧ್ಯಮಗಳಿಗೆ ಸೋರಿಕೆಯಾಗಿದೆ)

ಕೆ.ವಿ, ಜೆ.ಎನ್‌.ವಿ ಬಗ್ಗೆ ಮೆಚ್ಚುಗೆ
ಕೇಂದ್ರೀಯ ವಿದ್ಯಾಲಯ (ಕೆ.ವಿ) ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿರುವ ಜವಾಹರ್‌ ನವೋದಯ ವಿದ್ಯಾಲಯಗಳ (ಜೆ.ಎನ್‌.ವಿ) ಬಗ್ಗೆ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

‘ಈ ಶಾಲೆಗಳ ಯಶಸ್ಸಿನ ಹಿಂದಿನ ಕಾರಣ ಏನು ಎಂಬುದನ್ನು ಅಧ್ಯಯನ ನಡೆಸಬೇಕಿದೆ. ಈ ಶಾಲೆಗಳು ಅನುಸರಿಸುವ ಮಾದರಿಯನ್ನು ಇತರ ಶಾಲೆಗಳೂ ಅನುಸರಿಸುವಂತಾಗಬೇಕು’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT