ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ನಿರಾಕರಿಸಿದ್ದ ಬಾಬು ರಾಜೇಂದ್ರ ಪ್ರಸಾದ್

ಕಡತ ಯಜ್ಞ: ಅಪರೂಪದ ದಾಖಲೆ ಲಭ್ಯ
Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನನೆಗುದಿಗೆ ಬಿದ್ದಿದ್ದ ಕಡತ­ಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಿರುವ ಗೃಹ ಸಚಿವಾಲಯ, ಅನೇಕ ವರ್ಷಗಳಿಂದ ದೂಳು ಹಿಡಿ­ದಿದ್ದ ಸುಮಾರು 1.5 ಲಕ್ಷ ಕಡತಗಳನ್ನು ನಾಶ ಮಾಡಿದೆ.

ಹಳೆಯ ಕಡತಗಳನ್ನು ಶೀಘ್ರ ವಿಲೇವಾರಿ ಮಾಡು­ವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವಾಲ­ಯ­ಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ‘ಕಡತ ಯಜ್ಞ’ ಕೈಗೊಂಡ ಗೃಹ ಸಚಿವಾಲಯಕ್ಕೆ ಅನೇಕ ಆಸಕ್ತಿಕರ ಕಡತ­ಗಳು ಮತ್ತು ಐತಿಹಾಸಿಕ ಘಟನೆಗಳ ದಾಖ­ಲೆ­ಗಳು ದೊರಕಿವೆ.

ಸ್ವತಂತ್ರ ಭಾರತದ ಮೊದಲ ಗರ್ವನರ್‌ ಜನರಲ್‌ ಆಗಿದ್ದ ಲಾರ್ಡ್‌ ಮೌಂಟ್‌ಬ್ಯಾಟನ್‌ ಅವರಿಗೆ ತಮ್ಮ ದೇಶಕ್ಕೆ ವಾಪಸು ಹೋಗಲು ₨64 ಸಾವಿರ ಗೌರವ­ಧನದ ರೂಪದಲ್ಲಿ ಮಂಜೂರು ಮಾಡಿದ್ದ ಕಡತ ಸಿಕ್ಕಿದೆ. ಇದಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಅವರು ಪಿಂಚಣಿ ಪಡೆಯಲು ನಿರಾಕರಿಸಿದ್ದು ಮತ್ತು ಇದನ್ನು ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಿದ್ದರ ದಾಖಲೆ ದೊರಕಿದೆ. ಹಾಗೆಯೇ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರೂ ವೇತನ ನಿರಾಕರಿಸಿದ್ದರು. ಅದನ್ನೂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದ ವಿವರ ಪತ್ತೆ­ಯಾಗಿದೆ.

ಮತ್ತೊಂದು ಕಡತದಲ್ಲಿ, ಮಹಾತ್ಮ ಗಾಂಧಿ ಅವರ ಸಾವನ್ನು ಅಧಿಕೃತವಾಗಿ ಘೋಷಿಸುವುದಕ್ಕೂ ಮೊದಲು ನಡೆದ ಸಂಪುಟ ಸಭೆಯ ವಿವರ ಇದೆ.

‘ಹಳೆಯ ಕಡತಗಳನ್ನು ‘ಎ’, ‘ಬಿ’ ಮತ್ತು ‘ಸಿ’ ಎಂದು ವಿಂಗಡಿಸಲಾಯಿತು. ಐದು ವರ್ಷಗಳಷ್ಟು ಹಳೆ­ಯ­ದ್ದನ್ನು ‘ಎ’, 10ರಿಂದ 15 ವರ್ಷ ಹಿಂದಿನದ್ದನ್ನು ‘ಬಿ’ ಮತ್ತು 15 ವರ್ಷಗಳಿಗೂ ಹಳೆಯ ಕಡತಗಳನ್ನು ‘ಸಿ’ ಎಂದು ವಿಭಜಿಸಲಾಯಿತು. ನಂತರ ಐತಿಹಾಸಿಕ ಮಹತ್ವವುಳ್ಳ ಕಡತಗಳನ್ನು  ರಾಷ್ಟ್ರೀಯ ಪತ್ರಾಗಾರಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಅವರ ಸೂಚನೆ ಮೇರೆಗೆ ಹಳೆಯ ಕಡತಗಳನ್ನು ವಿಲೇವಾರಿ ಮಾಡಿರುವ ವಿವಿಧ ಸಚಿವಾಲಯಗಳು, ಅನುಪಯುಕ್ತ ಕಡತಗಳನ್ನು ನಾಶ ಮಾಡಿವೆ. ಅನೇಕ ವರ್ಷಗಳಿಂದ ಪೇರಿಸಿ ಇಟ್ಟಿದ್ದ ಮುರಿದ ಪೀಠೋಪಕರಣಗಳನ್ನೂ ಸ್ಥಳಾಂತರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT