ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ

ಸಚಿವ ಎಂ.ವೆಂಕಯ್ಯನಾಯ್ಡು ಅಭಿಮತ
Last Updated 26 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಂಸತ್ತಿನ ಮಹತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಕ್ಷಕ್ಕೆ ದಕ್ಕುವ ಸಾಧ್ಯತೆ ಇದೆ. ಆದರೆ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಆ ಪಕ್ಷಕ್ಕೆ ಸಿಗುವುದು ಇನ್ನೂ ನಿಶ್ಚಿತವಾಗಿಲ್ಲ.

ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಶೇ 10ರಷ್ಟು ಸ್ಥಾನ ಗೆಲ್ಲಲು ವಿಫಲವಾದ ಕಾಂಗ್ರೆಸ್‌ಗೆ ಇನ್ನೂ ಲೋಕ­ಸಭೆಯಲ್ಲಿ ಪ್ರತಿಪಕ್ಷ ನಾಯಕತ್ವ ಲಭ್ಯವಾಗಿಲ್ಲ. ಒಂದೊಮ್ಮೆ ಕಾಂಗ್ರೆಸ್‌ ಶೇ 10ರಷ್ಟು ಸ್ಥಾನ ಗೆದ್ದಿದ್ದರೆ ಅದು ಪ್ರಮುಖ ಪ್ರತಿಪಕ್ಷವಾಗುತ್ತಿತ್ತು. ಅಲ್ಲದೇ, ಲೋಕ­ಸಭೆಯಲ್ಲಿ ಆ ಪಕ್ಷದ ನಾಯಕ­ರಾದವರು ಪ್ರಮುಖ ನೇಮಕಾತಿಗಳ ನಿರ್ಧಾರದಲ್ಲಿ ಭಾಗಿಯಾಗಿ­ರು­ತ್ತಿದ್ದರು. ಆದರೆ, ಈಗ ಅಂತಹ ಸನ್ನಿವೇಶ ಇಲ್ಲ. ಹೀಗಾಗಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ­ರಾ­ದ­ವ­ರನ್ನೇ ಲೋಕ­ಪಾಲ ನೇಮಕಾತಿ­­ಯಂ­­ತಹ ಪ್ರಮುಖ ನಿರ್ಧಾರ­ಗಳಲ್ಲಿ ಭಾಗಿಯಾಗಿಸಿ­ಕೊಳ್ಳಲಾ­ಗು­ವುದೇ ಎಂಬ ಬಗ್ಗೆ ಸರ್ಕಾರ ಯಾವುದೇ ಆಶ್ವಾಸನೆ­ ನೀಡಿಲ್ಲ.

‘ಪಿಎಸಿ ರಚನೆಯಲ್ಲಿ ಪ್ರತಿಪಕ್ಷ­ವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ­ಬೇಕೆಂಬುದು ನನ್ನ ಅಭಿಪ್ರಾಯ. ಇದನ್ನು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ಗೆ ನೀಡಬೇಕು ಎಂಬುದನ್ನು ನಾನು ಬೆಂಬಲಿಸುತ್ತೇನೆ’ ಎಂದು ಸಂಸದೀಯ ವ್ಯವ­ಹಾರಗಳ ಸಚಿವ ಎಂ.ವೆಂಕಯ್ಯ­ನಾಯ್ಡು ಗುರುವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

‘ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕ ಯಾರಾ­ಗ­ಬೇಕೆಂಬುದನ್ನು ನಿರ್ಧರಿಸುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದು ಕಾನೂನು ಸಚಿವಾಲ­ಯಕ್ಕೆ ಸಂಬಂಧಪಟ್ಟಿದ್ದಾಗಿದೆ. ಸ್ಪೀಕರ್‌ ಅವರು ಪೂರ್ವ ನಿದರ್ಶನಗಳನ್ನು ಕೂಲಂಕಷವಾಗಿ ಅವ­ಲೋಕಿಸಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿ­ದ್ದಾರೆ’ ಎಂದರು.

‘ಉಪ ಸ್ವೀಕರ್‌ ಹುದ್ದೆ ಕಾಂಗ್ರೆಸ್‌ಗೆ ಹೋಗಲಿ­ದೆಯೇ ಎಂದು ಕೇಳಿದಾಗ, ‘ಪ್ರತಿಪಕ್ಷಗಳ ಪೈಕಿ ಯಾವ ಪಕ್ಷಕ್ಕೆ ನೀಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದೇನೆ. ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಹಣಕಾಸು ಸ್ಥಾಯಿ ಸಮಿತಿಯು ಪ್ರತಿಪಕ್ಷಗಳಿಗೆ ಹೋಗುತ್ತದೆ. ಕಾಂಗ್ರೆಸ್‌, ಎಐಎಡಿಎಂಕೆ, ಟಿಎಂಸಿ, ಬಿಜೆಡಿ ಪ್ರಮುಖ ವಿರೋಧ ಪಕ್ಷಗಳಾಗಿವೆ. ಈ ಪಕ್ಷಗಳ ನಾಯಕರ ಜತೆ ಚರ್ಚೆ ನಡೆಸುತ್ತಿದ್ದೇನೆ’ ಎಂದೂ ನಾಯ್ಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT