ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್‌ನ ‘ಒಳಗುಟ್ಟು’ ತಂದ ವಾದ ವಿವಾದ

Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡ ವಿದೇಶಕ್ಕೆ ಟೆಸ್ಟ್ ಆಡಲು ಹೋದಾಗಲೂ ಟೀಕೆಗೆ ಗುರಿಯಾಗುತ್ತದೆ. ಸ್ವದೇಶಧಲ್ಲಿ ಗೆಲ್ಲುವಾಗಲೂ ಟೀಕಾಕಾರರ ಬಾಯಿಗಳಿಗೆ ತುತ್ತಾಗುತ್ತದೆ. ಎರಡೂ ಸಂದರ್ಭಗಳಲ್ಲಿಯೂ ಕಾರಣ ಒಂದೇ. ಅದು ಪಿಚ್.

ವಿದೇಶದ ವೇಗದ ಬೌಲರ್‌ಗಳಿಗೆ ಅನುಕೂಲವಾಗುವ ಪಿಚ್‌ಗಳಲ್ಲಿ ಭಾರತದ ಆಟಗಾರರು ‘ಪುಲ್’ ಮಾಡುವ ಯತ್ನದಲ್ಲಿ ವಿಕೆಟ್ ಚೆಲ್ಲುತ್ತಾರೆ. ಸೋಲಿಗಾಗಿ ಟೀಕೆ ಎದುರಿಸುತ್ತಾರೆ. ಅದೇ ಇಲ್ಲಿ ನಮ್ಮ ಸಾಂಪ್ರದಾಯಿಕ ಶಕ್ತಿ ಸ್ಪಿನ್‌ ಬೌಲರ್‌ಗಳಿಗೆ ಅನುಕೂಲವಾಗುವ ಪಿಚ್ ಸಿದ್ಧಗೊಳಿಸಿ ಎದುರಾಳಿಗಳನ್ನು ಕೆಡವಿದಾಗಲೂ ಟೀಕಾಸ್ತ್ರಗಳನ್ನು ಸಹಿಸಿಕೊಳ್ಳಬೇಕು.

ಇದು ಬರೀ ಮಹಾತ್ಮ ಗಾಂಧಿ–ನೆಲ್ಸನ್ ಮಂಡೇಲಾ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ನಡೆದ ಮೊಹಾಲಿ ಮತ್ತು ನಾಗಪುರದ ಪಿಚ್‌ಗಳ ಮಾತಲ್ಲ. ಹಲವಾರು ವರ್ಷಗಳಿಂದ ಈ ಪ್ರತೀತಿ ಇದೆ.

ಟೆಸ್ಟ್ ಆಡುವ ಎಲ್ಲ ದೇಶಗಳೂ ಆತಿಥ್ಯ ವಹಿಸಿದಾಗ ಈ ತಂತ್ರವನ್ನು ಅನುಸರಿಸುವುದು ಹೊಸದೇನಲ್ಲ. ಆದರೆ. ಭಾರತದಲ್ಲಿ ಇಂತಹ ಪಿಚ್‌ಗಳು ಸಿದ್ಧವಾದಾಗ ಮಾತ್ರ ಪರ, ವಿರೋಧ ಚರ್ಚೆಗಳು ತಾರಕಕ್ಕೆ ಏರುತ್ತವೆ.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಆಟಗಾರರ ವೈಫಲ್ಯದ ಬಗ್ಗೆ ಹೆಚ್ಚು ಚರ್ಚೆಗಳು ಆದವು. ಟೀಕೆಗಳು ವ್ಯಕ್ತವಾದವು. ಟ್ರೆಂಟ್‌ಬ್ರಿಡ್ಜ್‌ನ  ಹಸಿರು ಪಿಚ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (15ಕ್ಕೆ8) ಬಿರುಗಾಳಿಗೆ ಆಸ್ಟ್ರೇಲಿಯಾ ತಂಡ ತರಗೆಲೆಯಂತೆ ಹಾರಿ ಹೋಗಿತ್ತು. ಕೇವಲ 60 ರನ್‌ಗಳ ಮೊತ್ತ ಗಳಿಸಿತ್ತು. ಅದೇ ಪಿಚ್‌ನಲ್ಲಿ ಜೋ ರೂಟ್ ಶತಕ ಗಳಿಸಿದ್ದರು. ಆಸ್ಟ್ರೇಲಿಯಾದ ಬೌಲರ್ ಮೈಕೆಲ್ ಸ್ಟಾರ್ಕ್ ಕೂಡ ಆರು ವಿಕೆಟ್ ಪಡೆದಿದ್ದರು.

ಆದರೆ, ಪಿಚ್‌ಗಳ ಬಗ್ಗೆ ಬಂದ ಟೀಕೆಗಳು ಕಡಿಮೆ. ಪಂದ್ಯದ ಐದು ದಿನವೂ ರನ್‌ಗಳ ಹೊಳೆಯೇ ಹರಿದ ಇತ್ತೀಚಿನ ಪರ್ಥ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ನ್ಯೂಜಿಲೆಂಡ್‌ನ ರಾಸ್ ಟೇಲರ್ ಅವರ ದ್ವಿಶತಕಗಳು ಮತ್ತು ಆಸ್ಟ್ರೇಲಯಾದ ವೇಗಿ ಮಿಷೆಲ್ ಜಾನ್ಸನ್ ನಿವೃತ್ತಿ ಹೆಚ್ಚು ಪ್ರಚಾರ ಪಡೆಯಿತು. ರನ್‌ಗಳ ಹೊಳೆ ಹರಿದರೂ ನಿರಸ ಡ್ರಾ ಕಂಡ ಟೆಸ್ಟ್ ಫಲಿತಾಂಶದ ಬಗ್ಗೆ ಅಥವಾ ಕೊರಡಿನಂತಿದ್ದ ಪಿಚ್ ಬಗ್ಗೆಯಾಗಲೀ ಹೆಚ್ಚು ಮಾತುಗಳು ಕೇಳಿಬರಲಿಲ್ಲ.

ಬಹುಶ: 2013ರಲ್ಲಿ ಸಚಿನ್ ತೆಂಡೂಲ್ಕರ್ ವಿದಾಯ ಸರಣಿಯ ಎರಡು ಪಂದ್ಯಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿಯೂ ಪಿಚ್ ಸುದ್ದಿ ಮಾಡಿದೆ. ಸಚಿನ್ ನಿವೃತ್ತಿಯ ನಂತರ ಭಾರತದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಸರಣಿ ಇದು. ಈ ಟೂರ್ನಿಯಲ್ಲಿ ಪಿಚ್ ಮಾತುಕತೆ ಸಾಕಷ್ಟು ಆಗಿದೆ. ಏಕದಿನ  ಸರಣಿಯ ಕೊನೆಯ ಪಂದ್ಯದಲ್ಲಿ  ವಾಂಖೆಡೆ ಪಿಚ್ ವಿವಾದ ಇನ್ನೂ ಮರೆತಿಲ್ಲ. ರವಿಶಾಸ್ತ್ರಿ ಮತ್ತು ಪಿಚ್ ಕ್ಯುರೇಟರ್ ಸುಧೀರ್ ನಾಯಕ ನಡುವಣ ಜಟಾಪಟಿ ದೊಡ್ಡ ಸುದ್ದಿ ಮಾಡಿತ್ತು.

‘ಭಾರತದಲ್ಲಿ ಪಿಚ್ ಬಗ್ಗೆ ಅನಗತ್ಯವಾಗಿ ಚರ್ಚೆ ಮಾಡಲಾಗುತ್ತದೆ. ಅಂಗಳ ಹೇಗೆಯೇ ಇರಲಿ ಆಡುವವರು ತಮ್ಮ ಕೌಶಲ ಪ್ರದರ್ಶಿಸಬೇಕು. ಅದರ ಬಗ್ಗೆ ಚರ್ಚೆಗಳು ನಡೆಯಬೇಕು. ಆ ಮೂಲಕ ಕ್ರಿಕೆಟ್ ಬೆಳೆಯುತ್ತದೆ. ಸ್ಪಷ್ಟ ಫಲಿತಾಂಶ ಹೊರಹೊಮ್ಮುವಂತಹ ಪಿಚ್‌ಗಳು ಅವಶ್ಯಕ. ಸುಮ್ಮನೆ ಡ್ರಾ ಆದರೆ ಏನು ಪ್ರಯೋಜನ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳುತ್ತಾರೆ.

ನಾಯಕನಾದ ನಂತರ ಭಾರತದಲ್ಲಿ ಮೊದಲ ಸರಣಿ ಆಡುತ್ತಿರುವ ಅವರಿಗೂ ಗೆಲುವಿನ ಗುರಿ ಇರುವುದು ಸಹಜ. ಯಾವ ನಾಯಕನೂ ಸೋಲಲು ಇಷ್ಟಪಡುವುದಿಲ್ಲ ಅಲ್ಲವೇ? ಆದರೆ, ಈ ಮಾತನ್ನು ಸಾಂಪ್ರದಾಯಿಕ ಕ್ರಿಕೆಟ್ ಇಷ್ಟಪಡುವವರು ಒಪ್ಪುವುದಿಲ್ಲ.

ಒಂದೇ ದಿನ 20 ವಿಕೆಟ್‌ಗಳು ಪತನಗೊಳ್ಳುವ ಮೂಲಕ ನಾಗಪುರದ ಪಿಚ್ ಹಲವರ  ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಕೂಡ ಇದನ್ನು ಟೀಕಿಸಿದ್ದಾರೆ. ಇದಕ್ಕೆ ಆರ್. ಅಶ್ವಿನ್ ಕೂಡ ತಿರುಗೇಟು ನೀಡಿದ್ದಾರೆ.

ಬೂಮ್‌ರ‍್ಯಾಂಗ್ ಸಾಧ್ಯತೆ...
ಕ್ರಿಕೆಟ್‌ನಲ್ಲಿ ಸ್ಪಿನ್ ಮತ್ತು ಸ್ವಿಂಗ್ ಇರುವವರೆಗೂ ಪಿಚ್‌ ವಾದ–ವಿವಾದಗಳು ಇದ್ದೇ ಇರುತ್ತವೆ.  ಇದೆಲ್ಲದರ ನಡುವೆ ಗಮನಿಸಲೇಬೇಕಾದ ಒಂದು ಅಂಶವಂತೂ ಇದೆ. ಈ ತಂತ್ರವು ಪ್ರತಿ ಸಾರಿಯೂ ಆತಿಥೇಯರಿಗೆ ಜಯ ತಂದು ಕೊಡುವುದಿಲ್ಲ. ಕೆಲವೊಮ್ಮೆ ‘ಬೂಮ್‌ರ‍್ಯಾಂಗ್’ ಆಗಿ ಬಿಡುತ್ತದೆ.

2013ರ ಇಂಗ್ಲೆಂಡ್ ಸರಣಿಯನ್ನು ನೆನಪಿಸಿಕೊಳ್ಳಿ. ಮಾಂಟಿ ಪನೇಸರ್ ಮತ್ತು ಗ್ರೆಮ್ ಸ್ವಾನ್ ತಮ್ಮ ಸ್ಪಿನ್ ಮೋಡಿಯ ಮೂಲಕ ಸರಣಿಯನ್ನೇ ಗೆದ್ದುಕೊಂಡು ಹೋಗಿದ್ದರು. ಉಪಖಂಡದಲ್ಲಿ ಸರಣಿ ಆಡಲು ಬರುವಾಗ ಆಸ್ಟ್ರೇಲಿಯಾದ ಶೇನ್ ವಾರ್ನ್ ಹೆಚ್ಚು ಪರಿಣಾಮಕಾರಿಯಾಗುತ್ತಿದ್ದರು.

ಈ ಸರಣಿಯಲ್ಲಿಯೂ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳಾದ ಸೈಮನ್ ಹಾರ್ಮರ್ ಮತ್ತು ಇಮ್ರಾನ್ ತಾಹೀರ್ ಉತ್ತಮ ಬೌಲಿಂಗ್ ಮಾಡಿದ್ದಾರೆ. ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಸಫಲರಾಗಿಲ್ಲ ಎನ್ನುವುದು ಇಲ್ಲಿ ಮುಖ್ಯ. ನೆಲದ ಗುಣಕ್ಕೆ ತಕ್ಕಂತೆ ಹೊಂದಿಕೊಂಡು ಆಡಿದರೆ, ಸಫಲರಾಗಲು ಸಾಧ್ಯವಿದೆ ಎಂದು ಹಲವು ಬ್ಯಾಟ್ಸ್‌ಮನ್‌ಗಳು ಈ ಮೊದಲು ತೋರಿಸಿಕೊಟ್ಟಿದ್ದಾರೆ. ಅಲನ್ ಬಾರ್ಡರ್, ಡೇವಿಡ್ ಬೂನ್, ಸ್ಟೀವ್ ವಾ, ಮಾರ್ಕ್‌ ವಾ, ಜಾಕ್ ಕಾಲಿಸ್ ಅವರ ದಾಖಲೆಗಳು ಇದನ್ನು ಪುಷ್ಟಿಕರಿಸುತ್ತವೆ.

ಕ್ರಿಕೆಟ್ ಆಟದ ಹುಚ್ಚು ಹೊಳೆ ಹರಿಯುವ ಭಾರತದಲ್ಲಿ ಆತಿಥೇಯ ತಂಡದ ಗೆಲುವು ಮುಖ್ಯ. ತಂಡವು ಸೋಲುವುದನ್ನು ಜನ ನೋಡಲು ಬಯಸುವುದಿಲ್ಲ. ಟ್ವೆಂಟಿ–20 ಕ್ರಿಕೆಟ್ ಕಾಲದಲ್ಲಿ ಐದು ದಿನ ಮೈದಾನದಲ್ಲಿ ಕುಳಿತು ಕ್ರಿಕೆಟ್ ನೋಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಅದಕ್ಕಾಗಿಯೇ ಟೆಸ್ಟ್ ಕ್ರಿಕೆಟ್‌ ಉಳಿಸುವ ಪ್ರಯತ್ನಗಳೂ ಆರಂಭವಾಗಿವೆ. ಹಗಲು–ರಾತ್ರಿ ಪಂದ್ಯಗಳ ಆರಂಭಕ್ಕೂ ಮುನ್ನುಡಿ ಬರೆಯಲಾಗಿದೆ. ನೀರಸ ಡ್ರಾ ಪಂದ್ಯಗಳಿಗಿಂತ ಸ್ಪಷ್ಟ ಫಲಿತಾಂಶವನ್ನು ಬಯಸುವ ಜನ ಹೆಚ್ಚಾಗಿದ್ದಾರೆ. ಜತೆಗೆ ಕ್ರಿಕೆಟ್‌ನ ಎಲ್ಲ ಆಕರ್ಷಕ ಅಂಶಗಳೂ ಪ್ರದರ್ಶನಗೊಳ್ಳಬೇಕು ಎಂಬ ಅಭಿಮಾನಿಗಳ ಬೇಡಿಕೆಯೂ ತಪ್ಪಲ್ಲ.

‘ಪ್ರವಾಸಿ ತಂಡಗಳು ಇಂತಹ ಪಿಚ್‌ಗಳಲ್ಲಿ ಹೊಂದಿಕೊಂಡು ಆಡಬೇಕು. ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದು ನಿಜ. ಆದರೆ, ಕೇವಲ ಪಂದ್ಯ ಗೆಲ್ಲುವ ಉದ್ದೇಶದಿಂದ ಇಂತಹ ಪಿಚ್‌ಗಳನ್ನು ಸಿದ್ಧ ಮಾಡುವುದು ದೀರ್ಘ ಕಾಲದಲ್ಲಿ ಭಾರತದ ಕ್ರಿಕೆಟ್‌ಗೆ ಮಾರಕವಾಗುವ ಅಪಾಯವೂ ಇದೆ’ ಎನ್ನುತ್ತಾರೆ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ. 

‘ಜಂಟಲ್ ಮ್ಯಾನ್ ಗೇಮ್’ ಎಂಬ ಹೆಸರು ಕ್ರಿಕೆಟ್‌ಗೆ ಬಂದಿದ್ದೇ ಟೆಸ್ಟ್‌ ಕ್ರಿಕೆಟ್‌ ಮೂಲಕ. ಹೊಡಿ–ಬಡಿ ಆಟವಿರುವ ಚುಟುಕು ಪಂದ್ಯಗಳು ಎಷ್ಟೇ ಅಕರ್ಷಕವಾಗಿದ್ದರೂ, ಕ್ರಿಕೆಟ್‌ನ ಅಸಲಿ ಮಜಾ ಇರುವುದು ಟೆಸ್ಟ್‌ನಲ್ಲಿಯೇ ಎನ್ನುವದಂತೂ ನಿರ್ವಿವಾದ. ಇದೆಲ್ಲದರ ಹಿನ್ನೆಲೆಯಲ್ಲಿ ಏಕರೂಪದ ಪಿಚ್ ಸೂತ್ರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ರೂಪಿಸಬೇಕು ಎಂಬ ವಾದಕ್ಕೂ ಈಗ ಮತ್ತೆ ರೆಕ್ಕೆಪುಕ್ಕ ಬಂದಿದೆ. ಆದರೆ, ಇದು ಸದ್ಯಕ್ಕಂತೂ ಕೈಗೂಡುವ ಮಾತಲ್ಲ.

ಪಿಚ್ ಟೀಕೆ ಸಲ್ಲದು
ನಾಗಪುರದ ಪಿಚ್ ಕಳಪೆ ಅಲ್ಲ. ಎರಡೂ ತಂಡಗಳಿಗೆ ಸಮಾನ ಅವಕಾಶ ನೀಡುವ ಸವಾಲಿನ ಪಿಚ್. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಸರಿಯಾದ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಇದು ಭಾರತದ ಸಾಂಪ್ರದಾಯಿಕ ಪಿಚ್. ಸ್ಪಿನ್, ಬೌನ್ಸ್, ಸ್ವಿಂಗ್ ಎಲ್ಲವೂ ಆಗುತ್ತಿದೆ. ನಿರ್ಜೀವವಾಗಿಲ್ಲ. ಆಟದ ಬಗ್ಗೆ ಮಾತನಾಡುವುದು ಬಿಟ್ಟು ಪಿಚ್‌ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ.
–ಸುನಿಲ್ ಗಾವಸ್ಕರ್,
ಮಾಜಿ ಕ್ರಿಕೆಟಿಗ
(ಮೈಕೆಲ್ ವಾನ್, ಮ್ಯಾಥ್ಯೂ ಹೇಡನ್, ಡೇವಿಡ್ ಲಾಯ್ಡ್ ಮತ್ತಿತರರ ಟೀಕೆಗೆ ಪ್ರತಿಕ್ರಿಯೆ)

***
ಪರ್ಥ್‌ಗಿಂತಲೂ ಉತ್ತಮ
ಪರ್ಥ್ ಮೈದಾನಕ್ಕಿಂತಲೂ (ಇತ್ತೀಚೆಗೆ ಆಸ್ಟ್ರೇಲಿಯಾ–ನ್ಯೂಜಿಲೆಂಡ್ ನಡುವಣ ಟೆಸ್ಟ್ ಡ್ರಾ ಆಗಿತ್ತು. ರನ್‌ಗಳ ಹೊಳೆಯೇ ಹರಿದಿತ್ತು) ನಾಗಪುರವೇ ಉತ್ತಮ. ಯಾರು ಏನು ಬೇಕಾದರೂ ದೂರು ನೀಡಲಿ. ಇಲ್ಲಿಯ ಪಂದ್ಯ ಪರ್ಥ್‌ಗಿಂತಲೂ ಹೆಚ್ಚು ಮನರಂಜನೆ ನೀಡುತ್ತಿದೆ.
–ಜಿಮ್ಲಿ ನಿಶಾಮ್,
ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT