ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ನೇರ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಆಗ್ರಹ

Last Updated 15 ಸೆಪ್ಟೆಂಬರ್ 2014, 20:08 IST
ಅಕ್ಷರ ಗಾತ್ರ

ಬೆಂಗಳೂರು: ಬಾಹ್ಯ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣ­ರಾದ­ವರಿಗೆ ಪದವಿ ಕಾಲೇಜುಗಳಲ್ಲಿ ಪ್ರವೇಶ ನೀಡದಿರುವ ಸಂಬಂಧ ಹೊರಡಿಸಿರುವ ಆದೇಶವನ್ನು ವಾಪಸ್‌ ಪಡೆಯ­ಬೇಕು ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಪುಟ್ಟಣ್ಣ ಸೋಮವಾರ ಆಗ್ರಹಿಸಿದರು.

ಈ ತೀರ್ಮಾನದಿಂದಾಗಿ ಬೆಂಗಳೂರು ವ್ಯಾಪ್ತಿ­ಯಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದು,  ಬಡ ವಿದ್ಯಾರ್ಥಿಗಳ ಭವಿಷ್ಯ­­­ವನ್ನು ಮೊಟಕುಗೊಳಿಸುವ ಹುನ್ನಾರ ಇದರ ಹಿಂದೆ ಇದೆ ಎಂದು ಆರೋಪಿ­ಸಿ­­­­ದರು.

ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಆದೇಶ ವಾಪಸಾ­ತಿಗೆ ಕ್ರಮ ಕೈಗೊಳ್ಳ­ಬೇಕು ಎಂದು ಒತ್ತಾಯಿಸಿದರು.

‘ದೂರ ಶಿಕ್ಷಣದ ಪದ್ಧತಿಯ ಅಡಿ­ಯಲ್ಲಿ ಶಿಕ್ಷಣ ಪಡೆಯಲು ಸರ್ಕಾರ  ದೀರ್ಘ ಕಾಲದಿಂದ ಅವಕಾಶ ನೀಡುತ್ತಾ ಬಂದಿದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರಿಗೆ  ಪ್ರಮಾಣಪತ್ರ, ಉದ್ಯೋಗ­ವನ್ನೂ ಸರ್ಕಾರ ನೀಡುತ್ತಾ ಬಂದಿದೆ. ಹೀಗಿರುವಾಗ ಇಂತಹ ಆದೇಶ ಹೊರಡಿಸುವ ಅಗತ್ಯ ಏನಿತ್ತು? ಹಾಗಿದ್ದರೆ ಸರ್ಕಾರ ಈ ಶಿಕ್ಷಣ ಪದ್ಧತಿಯನ್ನೇ ರದ್ದು ಮಾಡಲಿ’ ಎಂದು ಅವರು ಹೇಳಿದರು.

ಸಾವಿರಾರು ಬಡ ವಿದ್ಯಾರ್ಥಿಗಳು ಕೆಲಸ ಮಾಡಿ­ಕೊಂಡು ದೂರ ಶಿಕ್ಷಣದ ಮೂಲಕ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಆದೇಶದಿಂದ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಉನ್ನತ ಶಿಕ್ಷಣ ಇಲಾಖೆಯು ತಕ್ಷಣ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ರಜನೀಶ್‌ ಗೋಯಲ್‌ ವಿರುದ್ಧ ಟೀಕೆ: ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯಲ್‌ ವಿರುದ್ಧ ಪುಟ್ಟಣ್ಣ ವಾಗ್ದಾಳಿ ನಡೆಸಿದರು.

ರಜನೀಶ್‌ ಅವರು ಇಲಾಖೆಗೆ ಬಂದ  ನಂತರ ಕಡತ ವಿಲೇವಾರಿ ಸರಿಯಾಗಿ ನಡೆಯು­ತ್ತಿಲ್ಲ. ಬಿಬಿ­ಎಂ­ಪಿ­ಯಿಂದ ಹೊರ ಹಾಕಿದವರನ್ನು ಉನ್ನತ ಶಿಕ್ಷಣ ಇಲಾಖೆಗೆ ತಂದು ಕೂರಿಸಲಾಗಿದೆ ಎಂದು ದೂರಿ­ದರು.

‘ಗೋಯಲ್‌ ವಿರುದ್ಧ ನಾವು ಮಾಡಿದ್ದ ಅವ್ಯವಹಾರ ಆರೋಪದ ತನಿಖೆಗೆ ಮುಖ್ಯಮಂತ್ರಿ­ಯವರು ನೇಮಿಸಿದ್ದ ಐಎಎಸ್‌ ಅಧಿಕಾರಿ ಕೃಷ್ಣರಾವ್‌ ನೇತೃತ್ವದ ಸಮಿತಿಯು ವರದಿ ಸಲ್ಲಿಸಿದ್ದು, ವರದಿ ಅನ್ವಯ ಕ್ರಮ ಕೈಗೊಳ್ಳದೇ ಹೋದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುತ್ತೇವೆ’ ಎಂದು ಪುಟ್ಟಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT