ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಓಎಸ್‌ಗೂ ಇದೆ ಚಿಕಿತ್ಸೆಗಳು

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

*ನನಗೆ ಪಿಸಿಓಎಸ್ ಇದೆ ಎಂದು ಹೇಗೆ ತಿಳಿಯುತ್ತದೆ?
ನಿಮ್ಮ ವೈದ್ಯರು ಹಲವು ವಿಧಾನಗಳಿಂದ ನಿಮಗೆ ಪಿಸಿಓಎಸ್‌ ಇದೆಯೆ, ಇಲ್ಲವೆ ಎನ್ನುವುದನ್ನು ನಿರ್ಧರಿಸುತ್ತಾರೆ.
ನಿಮ್ಮ ಆರೋಗ್ಯದ  ಪೂರ್ವ ವಿವರಗಳನ್ನು ಕೇಳಬಹುದು. ಋತುಚಕ್ರದ ಬಗ್ಗೆ ಕೇಳಬಹುದು.

ನಿಮ್ಮ ತೂಕದಲ್ಲಾದ ಬದಲಾವಣೆಯಂಥವನ್ನು ವಿಚಾರಿಸಬಹುದು. ನಿಮ್ಮ ದೇಹಪರೀಕ್ಷೆಯನ್ನೂ ಮಾಡಬಹುದು. ರಕ್ತದೊತ್ತಡ, ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ),

ಸೊಂಟದ ಸುತ್ತಳತೆಗಳನ್ನು ಅಳೆಯಬಹುದು. ದೇಹದ ಯಾವ ಭಾಗದಲ್ಲಿ ಕೂದಲುಗಳ ಬೆಳವಣಿಗೆ ಹೆಚ್ಚಾಗಿದೆ ಎಂದೂ ಪರೀಕ್ಷಿಸಬಹುದು. ಪೆಲ್ವಿಕ್ ಪರೀಕ್ಷೆಯನ್ನೂ ಮಾಡಬಹುದು.

ಅಂಡಾಶಯದ ಗಾತ್ರದಲ್ಲಿ ಏನಾದರೂ ವ್ಯತ್ಯಾಸವಾಗಿದೆಯೆ ಎನ್ನುವುದನ್ನೂ ಪರೀಕ್ಷಿಸಬಹುದು. ರಕ್ತಪರೀಕ್ಷೆಯನ್ನು ಮಾಡಿ, ಗ್ಲುಕೋಸ್‌ ಪ್ರಮಾಣವನ್ನು ಅಳೆಯಬಹುದು. ಅ್ಯಂಡ್ರೋಜನ್‌ ಹಾರ್ಮೋನಿನ ಪರೀಕ್ಷೆಯನ್ನೂ ಮಾಡಬಹುದು. ಸೋನೋಗ್ರ್ಯಾಮ್‌ ಪರೀಕ್ಷೆಯನ್ನೂ ಮಾಡಬಹುದು.

*ಪಿಸಿಓಎಸ್‌ಗೆ ಇರುವ ಚಿಕಿತ್ಸೆಗಳೇನು?
ಪಿಸಿಓಎಸ್‌ಅನ್ನು ಗುಣಮುಖ ಮಾಡಲಾಗದು. ತೊಂದರೆಗಳಿಂದ ಮುಕ್ತವಾಗುವಂತೆ ಅದನ್ನು ನಿರ್ವಹಿಸಬಹುದು. ನಿಮ್ಮ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ನಡೆಸಲಾಗುತ್ತದೆ.

ನೀವು ತಾಯಿಯಾಗಲು ಬಯಸುತ್ತೀದ್ದರೀರಾ? ಇಲ್ಲವೆ? – ಎನ್ನುವುದೂ ನಿಮ್ಮ ಚಿಕಿತ್ಸೆಯನ್ನು ನಿರ್ಧರಿಸುವ ಕಾರಣವಾಗಲಿದೆ. ಹೃದಯರೋಗ ಮತ್ತು ಸಕ್ಕರೆಕಾಯಿಲೆಯ ಸಾಧ್ಯತೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದಲೂ ಚಿಕಿತ್ಸೆಯ ಕ್ರಮ ನಿರ್ಧಾರವಾಗುತ್ತದೆ. ಇದಕ್ಕೆ ಒಂದೇ ಚಿಕಿತ್ಸೆ ಎನ್ನುವುದಕ್ಕಿಂತಲೂ ಹಲವು ಚಿಕಿತ್ಸೆಗಳ ಆವಶ್ಯಕತೆ ಇದೆ ಎನ್ನಬಹುದು.

*ಪಿಸಿಓಎಸ್‌ಗೆ ಇರುವ ಕೆಲವು ಚಿಕಿತ್ಸಾವಿಧಾನಗಳು
ಜೀವನಶೈಲಿಯಲ್ಲಿ ಬದಲಾವಣೆ: ಸಾಮಾನ್ಯವಾಗಿ ಪಿಸಿಓಎಸ್‌ ಮಹಿಳೆಯರ ತೂಕ ಹೆಚ್ಚಾಗಿರುತ್ತದೆ, ಬೊಜ್ಜೂ ಇರಬಹುದು. ಆರೋಗ್ಯಪೂರ್ಣವಾದ ಆಹಾರವನ್ನು ಸರಿಯಾದ ಕ್ರಮದಲ್ಲಿ ತಿನ್ನುವುದು ಮತ್ತು ಅಗತ್ಯವಾದ ವ್ಯಾಯಾಮ ಮಾಡುವುದರಿಂದ ಪಿಸಿಓಎಸ್‌ಅನ್ನು ನಿರ್ವಹಿಸಬಹುದು. ಡಬ್ಬಿಗಳಲ್ಲಿ ಸಂಗ್ರಹಿಸಿದ ಆಹಾರವನ್ನು ತಿನ್ನಬಾರದು.

ಸಕ್ಕರೆಯನ್ನು ಸೇರಿಸಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳಿತು. ಕಾಳುಗಳನ್ನು, ತರಕಾರಿಗಳನ್ನು, ಹಣ್ಣುಗಳನ್ನು, ಹೆಚ್ಚು ಕೊಬ್ಬಿಲ್ಲದ ಮಾಂಸವನ್ನು ಸೇವಿಸುವ ಮೂಲಕ ರಕ್ತದಲ್ಲಿ ಗ್ಲೂಕೋಸ್‌ನ ಉತ್ಪತ್ತಿಯ ಪ್ರಮಾಣವನ್ನು ನಿಯಂತ್ರಿಸಬಹುದು;

ಇದು ಇನ್ಸುಲಿನ್‌್ಅನ್ನು ದೇಹ ಸರಿಯಾಗಿ ಬಳಸಿಕೊಳ್ಳಲೂ ಸಾಧ್ಯವಾಗುವುದಲ್ಲದೆ, ಹಾರ್ಮೋನ್‌ನ ಪ್ರಮಾಣವನ್ನೂ ಇದು ಸಹಜಗೊಳಿಸುತ್ತದೆ. ನಿಮ್ಮ ದೇಹದ ತೂಕದಲ್ಲಿ ಶೇ. 10ರಷ್ಟು ಕಡಿಮೆಯಾದರೂ ಕೂಡ ಅದು ನಿಮ್ಮ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗುತ್ತದೆ; ಇದು ನಿಮ್ಮ ಋತುಚಕ್ರದ ಕ್ರಮವನ್ನು ಕಾಪಾಡುತ್ತದೆ. 

*ಗರ್ಭನಿರೋಧಕ ಮಾತ್ರೆಗಳು 
ಗರ್ಭಧರಿಸಲು ಇಷ್ಟವಿರದ ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಬಹುದು. ಇದು ಋತಚಕ್ರವನ್ನು ನಿಯಂತ್ರಿಸುತ್ತದೆಯಲ್ಲದೆ ಪುರುಷ–ಹಾರ್ಮೋನ್‌ನ ಪ್ರಮಾಣವನ್ನು ತಗ್ಗಿಸುತ್ತದೆ. ಮಾತ್ರೆಗಳನ್ನು ನಿಲ್ಲಿಸಿದರೆ ಮತ್ತೆ ಋತುಚಕ್ರದಲ್ಲಿ ಏರುಪೇರಾಗುವ ಸಾಧ್ಯತೆಯಿರುತ್ತದೆ.

ಡಯಾಬಿಟಿಸ್‌ಗೆ ತೆಗೆದುಕೊಳ್ಳುವ ಔಷಧವೂ ಪಿಸಿಓಸ್‌ನ ಲಕ್ಷಣಗಳನ್ನು ಕಡಿಮೆ ಮಾಡಬಲ್ಲದು. ಕೂದಲುಗಳ ಅಸಹಜ ಬೆಳವಣಿಗೆಯನ್ನು ಇದು ತಡೆಯುತ್ತದೆ. ಅಂಡೋತ್ಪತ್ತಿ ಪುನರಾರಂಭವೂ ಸಾಧ್ಯವಾಗಬಹುದು.

ದೇಹದ ತೂಕ ಕಡಿಮೆಯಾಗಿ, ಕೊಲೆಸ್ಟ್ರಾಲ್ ಪ್ರಮಾಣವೂ ಸಹಜತೆಗೆ ಮರಳಬಹುದು. ಪಿಸಿಓಎಸ್‌ನ ಲಕ್ಷಣಗಳುಳ್ಳ ಮಹಿಳೆಯರಲ್ಲಿ ಫಲೀಕರಣಕ್ಕೆ ತೊಂದರೆ ಇರುತ್ತದೆ. ಅಂಥವರು ಫಲೀಕರಣಕ್ಕೆ ಸಹಾಯಮಾಡುವ ಔಷಧಗಳನ್ನು ತೆಗೆದುಕೊಂಡಾಗ ಗರ್ಭ ಧರಿಸಬಲ್ಲ ಸಾಮರ್ಥ್ಯ ಒದಗುತ್ತದೆ.

ಐವಿಎಫ್‌ ಮೂಲಕವೂ ಮಕ್ಕಳನ್ನು ಪಡೆಯಬಹುದಾಗಿದೆ. ‘ಓವರಿಯನ್ ಡ್ರಿಲ್ಲಿಂಗ್‌’ ಶಸ್ತ್ರಚಿಕಿತ್ಸೆಯ ವಿಧಾನದಿಂದ ಅಂಡೋತ್ಪತ್ತಿಯ ಪ್ರಮಾಣ ಹೆಚ್ಚಿ, ಸಂತಾನೋತ್ಪತ್ತಿಯ ಸಾಧ್ಯತೆಗೆ ಇದು ಪೂರಕವಾಗಲಿದೆ.

*ಕೂದಲು ಬೆಳವಣಿಗೆಗೆ ನಿಯಂತ್ರಣ
ಪಿಸಿಓಎಸ್‌ನಿಂದ ದೇಹದಲ್ಲಿ ಕೂದಲು ಹೆಚ್ಚಾಗಿ ಬೆಳೆಯುವ ಸಾಧ್ಯತೆಯಿರುತ್ತದೆ. ಕೆಲವೊಂದು ಔಷಧಗಳು ಇದನ್ನು ನಿಯಂತ್ರಿಸುತ್ತವೆ. ಕೆಲವೊಂದು ಕ್ರೀಮ್‌ಗಳೂ ಈ ವಿಷಯದಲ್ಲಿ ಸಹಾಯಕ್ಕೆ ಬರುತ್ತವೆ. ಲೇಸರ್‌ ಚಿಕಿತ್ಸೆಯೂ ಉಂಟು. ತಜ್ಞವೈದ್ಯರು ಮತ್ತಷ್ಟು ಪರಿಹಾರದ ಮಾರ್ಗಗಳನ್ನು ಸೂಚಿಸಬಲ್ಲರು. 

ಮಾಹಿತಿಗೆ ಸಂಪರ್ಕಿಸಿ: 18002084444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT