ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಓಎಸ್‌ಗೆ ಹೆದರಬೇಕಾಗಿಲ್ಲ

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಪಿಸಿಓಎಸ್‌ ಬಾಧಿತ ಮಹಿಳೆಯರಲ್ಲಿ ಸಕ್ಕರೆಕಾಯಿಲೆಗೆ ತುತ್ತಾಗುವುದು ಇತರರಿಗಿಂತ ಶೇ. 50ರಷ್ಟು ಹೆಚ್ಚು. ಇದು ನಲವತ್ತು ವರ್ಷಗಳಿಗೂ ಮೊದಲೇ ಕಾಣಿಸಿಕೊಳ್ಳಬಹುದು.

*ಪಿಸಿಓಎಸ್‌ ಬಾಧಿತ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ತೊಂದರೆಗಳು ಯಾವುವು?

ಪಿಸಿಓ ಬಾಧಿತ ಗರ್ಭಿಣಿಯರಲ್ಲಿ ಈ ಕೆಳಕಂಡ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ:

*ಗರ್ಭಪಾತ

*ಗರ್ಭಾವಸ್ಥೆಯ ಸಕ್ಕರೆಕಾಯಿಲೆ (ಜೆಸ್ಟೇಷನಲ್‌ ಡಯಾಬಿಟಿಸ್)

*ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ

*ಅವಧಿಪೂರ್ವ ಪ್ರಸವ

ಪಿಸಿಓಎಸ್‌ ಬಾಧಿತ ಮಹಿಳೆಯರಿಗೆ ಹುಟ್ಟುವ ಮಕ್ಕಳು ಆಸ್ಪತ್ರೆಯ ತೀವ್ರ ಘಟಕದಲ್ಲಿ ಹೆಚ್ಚಿನ ಸಮಯ ಉಳಿಯುವಂಥ ಸಂದರ್ಭಗಳು ಹೆಚ್ಚು. ಕೂಸಿಗೆ ಪ್ರಾಣಾಪಾಯದ ಭೀತಿಯೂ ಹೆಚ್ಚಾಗಿರುತ್ತದೆ; ಇದು ಅವಳಿ, ತ್ರಿವಳಿಗಳ ಸಂದರ್ಭದಲ್ಲಿ ಹೆಚ್ಚು.

*ಪಿಸಿಓಎಸ್‌ ಮಹಿಳೆಯರಿಗೆ ಇನ್ನಿತರ ಆರೋಗ್ಯದ ಸಮಸ್ಯೆಗಳೂ ಎದುರಾಗಬಹುದೆ?

ಇತ್ತೀಚಿನ ಅಧ್ಯಯನ ಪ್ರಕಾರ ಪಿಸಿಓಎಸ್‌ ಮಹಿಳೆಯರಿಗೆ ಕೆಲವು ಆರೋಗ್ಯಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದುಂಟು. ಅವುಗಳೆಂದರೆ:
*ಪಿಸಿಓಎಸ್‌ ಬಾಧಿತ ಮಹಿಳೆಯರಲ್ಲಿ ಸಕ್ಕರೆಕಾಯಿಲೆಗೆ ತುತ್ತಾಗುವುದು ಇತರರಿಗಿಂತ ಶೇ. 50ರಷ್ಟು ಹೆಚ್ಚು. ಇದು ನಲವತ್ತು ವರ್ಷಗಳಿಗೂ ಮೊದಲೇ ಕಾಣಿಸಿಕೊಳ್ಳಬಹುದು.

*ಆರೋಗ್ಯವಂತ ಸಾಮಾನ್ಯ ಮಹಿಳೆಯರಿಗಿಂತ ಅದೇ ವಯಸ್ಸಿನ ಪಿಸಿಓಎಸ್‌ ಬಾಧಿತ ಮಹಿಳೆಯಲ್ಲಿ ಹೃದಯಾಘಾತದ ಪ್ರಮಾಣ ನಾಲ್ಕರಿಂದ ಏಳರಷ್ಟು ಹೆಚ್ಚು.

*ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚು.

*ಗರಿಷ್ಠ ಪ್ರಮಾಣದ ಕೊಲೆಸ್ಟ್ರಾಲ್‌ ಸಮಸ್ಯೆ (ಎಲ್‌ಡಿಎಲ್) ಮತ್ತು ಕನಿಷ್ಠ ಪ್ರಮಾಣದ ಕೊಲೆಸ್ಟ್ರಾಲ್‌ ಸಮಸ್ಯೆ( ಎಚ್‌ಡಿಎಲ್‌)ಯ ಸಾಧ್ಯತೆ ಹೆಚ್ಚು.

*ನಿದ್ರಾಸಮಯದಲ್ಲಿ ಉಸಿರುಗಟ್ಟುವಿಕೆಯ ತೊಂದರೆ ಎದುರಾಗಬಹುದು.

*ಉದ್ವೇಗ ಮತ್ತು ಖಿನ್ನತೆಗಳು ಕಾಡುವ ಸಾಧ್ಯತೆ ಹೆಚ್ಚು.

* ಋತುಚಕ್ರದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದು. ಅಧಿಕ ರಕ್ತಸ್ರಾವ ಆಗುವ ಸಂಭವವಿರುತ್ತದೆ.

*ಗರ್ಭಕೋಶ ಸಂಬಂಧಿತ ಕ್ಯಾನ್ಸರ್‌ನ ಸಾಧ್ಯತೆ ಹೆಚ್ಚು.

*ಪಿಸಿಓಸ್‌ನ ಸಮಸ್ಯೆ ಇದ್ದರೆ, ಅದರಿಂದ ಎದುರಾಗುವ ಸಮಸ್ಯೆಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು?

ಪಿಸಿಓಎಸ್‌ ಸಮಸ್ಯೆ ಇರುವುದು ಪತ್ತೆಯಾದರೆ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳುವಂಥ ಕ್ರಮಗಳ ಕಡೆಗೆ ಗಮನ ನೀಡಿ. ಸಕ್ಕರೆಕಾಯಿಲೆ ಮತ್ತು ಹೃದಯಸಂಬಂಧಿತ ಕಾಯಿಲೆಗಳ ಸಾಧ್ಯತೆಯ ಪ್ರಮಾಣವನ್ನು ಇದರಿಂದ ತಗ್ಗಿಸಬಹುದು.

ಪಿಸಿಓಎಸ್‌ ಸಮಸ್ಯೆ ಇದ್ದಾಗ ಅದನ್ನೊಂದು ಸಮಗ್ರ ಸಮಸ್ಯೆಯಂತೆ ಸ್ವೀಕರಿಸಿ, ಅದಕ್ಕೆ ತಕ್ಕ ಚಿಕಿತ್ಸೆಯನ್ನು ನೀಡುವತ್ತ ಗಮನ ಹರಿಸಿ; ಕೇವಲ ಅದನ್ನೊಂದು ಗರ್ಭಧಾರಣೆಯ ಸಮಸ್ಯೆಯನ್ನಾಗಷ್ಟೆ ಪರಿಗಣಿಸದಿರಿ. ನಿಯಮಿತವಾಗಿ ಡಯಾಬಿಟಿಸ್‌ ಪರೀಕ್ಷೆಯನ್ನು ಮಾಡಿಕೊಳ್ಳಿ.

ಇದರ ಜೊತೆಗೆ ಸಮತೋಲಿತ ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದಲೂ, ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದಲೂ, ಧೂಮಪಾನದಂಥ ಚಟವನ್ನು ದೂರ ಮಾಡುವುದರಿಂದಲೂ ತೊಂದರೆಯ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದು.

*ಪಿಸಿಓಎಸ್‌ನ ಮಾನಸಿಕ ಆಘಾತಗಳನ್ನು ಹೇಗೆ ಎದುರಿಸುವುದು?
ಪಿಸಿಓಎಸ್‌ನ ಆಘಾತವು ನಿಮ್ಮನ್ನು ಕಾಡಬಹುದು. ನಿಮ್ಮ ರೂಪದಲ್ಲಾಗುವ ಬದಲಾವಣೆಯು ನಿಮಗೆ ಮುಜುಗರವನ್ನುಂಟುಮಾಡಬಹುದು. ಮಕ್ಕಳಾಗುತ್ತದೆಯೋ ಇಲ್ಲವೋ ಎಂಬ ಸಂಕಟವೂ ಕಾಡಬಹುದು. ನಿಮ್ಮನ್ನು ಅದು ಖಿನ್ನತೆಗೂ ದೂಡಬಹುದು.

ಪಿಸಿಓಎಸ್‌ಗೆ ಚಿಕಿತ್ಸೆಯನ್ನು ಪಡೆದು ಈ ಸಮಸ್ಯೆಗಳಿಂದ ಪಾರಾಗಬಹುದು. ಈ ಸಮಸ್ಯೆಯಿಂದ ಬಳಲುತ್ತಿರುವವರು ನೀವೊಬ್ಬರೇ ಅಲ್ಲ ಎನ್ನವುದನ್ನು ನೆನಪಿನಲ್ಲಿಡಿ.

ಸರಿಯಾದ ಚಿಕಿತ್ಸೆಯನ್ನು ಪಡೆದು ನೀವು ಕೂಡ ತಾಯಿ ಆಗಬಹುದು. ತೊಂದರೆ ಕಂಡ ಕೂಡಲೇ ತಜ್ಞವೈದ್ಯರಲ್ಲಿಗೆ ಹೋಗಿ. ಮಾನಸಿಕವಾಗಿ ಕುಗ್ಗಬೇಡಿ. ಸಮಸ್ಯೆಯನ್ನು ಧೈರ್ಯವಾಗಿಯೂ ಸರಿಯಾಗಿಯೂ ಎದುರಿಸಿ.

ಮಾಹಿತಿಗೆ ಸಂಪರ್ಕಿಸಿ: 18002084444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT