ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿ ಕೃಷಿಕರಿವರು...

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಹತ್ತು ಕಿಲೋ ಮೀಟರ್ ಸಾಗಿದಾಗ ಸಿಗುವ ಪುಟ್ಟ ಪೇಟೆ ಅಳದಂಗಡಿ. ರಸ್ತೆ ಪಕ್ಕದಲ್ಲೇ ಸತ್ಯದೇವತೆಯ ಗುಡಿ, ಇದರ ಎದುರಿಗೆ ಮನೆಯೊಂದರ ಸುತ್ತಲೂ ವರ್ಣಮಯವಾಗಿ ಅರಳಿದ ಬಗೆಬಗೆಯ ಹೂಗಿಡಗಳು. ಮನೆ ತಾರಸಿಯ ತುಂಬ ಹಸಿರೋ ಹಸಿರು! ಇವು ವೈವಿಧ್ಯಮಯ ತರಕಾರಿ ಗಿಡಗಳು. ಬೆಂಡೆ, ನಾಳಿ ಬದನೆ, ಟೊಮೆಟೊ, ಹಾಗಲ, ಮುಳ್ಳುಸೌತೆ... ಇತ್ಯಾದಿ. ಬಹುತೇಕ ಗಿಡಗಳು ಗೊಂಚಲು ಗೊಂಚಲು ಕಾಯಿಗಳಿಂದ ಬಾಗುತ್ತಿದ್ದವು.

ಈ ತಾರಸಿ ಕೃಷಿ ಮಾಡಿದ್ದು ಮನೆಯ ಮಾಲೀಕರಾದ ಶಿಕ್ಷಕ ವಜ್ರಾಂಗಿ ಸುಬ್ರಹ್ಮಣ್ಯ ಭಟ್ಟ ಹಾಗೂ ಅವರ ಪತ್ನಿ ಗುಣಮಾಲಿನಿ ಇರಬಹುದೆಂಬ ಊಹೆಯಿಂದ ಅವರನ್ನು ಪ್ರಶ್ನಿಸಿದರೆ ಸಿಕ್ಕಿದ್ದು ಬೇರೆಯೇ ಉತ್ತರ. ಇವರ ಮಕ್ಕಳಾದ ಪ್ರಣಮ್ಯ ಹಾಗೂ ಶ್ರೀಪ್ರಿಯಾ ಈ ತಾರಸಿ ತೋಟವನ್ನು ನಿರ್ಮಿಸಿದವರಂತೆ.

ಅಳದಂಗಡಿಯ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಇವರ ಪುತ್ರಿ ಪ್ರಣಮ್ಯ ಮತ್ತು ಎಂಟನೇ ತರಗತಿಯ ವಿದ್ಯಾರ್ಥಿನಿ ಕಿರಿಯ ಪುತ್ರಿ ಶ್ರೀಪ್ರಿಯಾ.
ಕಲಿಕೆಯಲ್ಲಿ ಇವರಿಬ್ಬರೂ ಮುಂದು. ಚಿತ್ರಕಲೆಯಲ್ಲೂ ಎತ್ತಿದ ಕೈ. ಸಂಜೆ ಶಾಲೆಯಿಂದ ಬಂದ ಕೂಡಲೇ ಶಾಲೆಯ ಪಠ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಗಿಸಿ ನಂತರ ತೋಟದತ್ತ ಇವರ ಮನಸ್ಸು ಸಾಗುತ್ತದೆ.

ಹೀಗಾಗಿ ಮನೆಯ ಸುತ್ತಲೂ ಎಲ್ಲಿ ನೋಡಿದರೂ ವರ್ಣರಂಜಿತ ಹೂಗಿಡಗಳ ಸಾಲು ಸಾಲು, ತಾರಸಿಗೆ ಹತ್ತಿದರೆ ಹೊರಜಗಲಿಯಲ್ಲಿ ಒತ್ತೊತ್ತಾಗಿ ಕಾಯಿಗಳ ಭಾರದಿಂದ ಬಾಗುತ್ತಿರುವ ತರಕಾರಿ ಗಿಡಗಳು. ಮನೆಯ ಬಳಕೆಗೆ ಸಾಕಷ್ಟು ತರಕಾರಿ ಉಳಿಸಿಕೊಂಡು ಉಳಿದ ತರಕಾರಿ ಮಾರಾಟ ಮಾಡಿ ಬಂದ ಹಣದಲ್ಲಿ ಇವರ ಶಾಲಾ ಶುಲ್ಕದ ಬಹುಪಾಲು ತುಂಬಲು ಸಾಲುತ್ತದೆ ಎಂಬುದು ಎಳೆಯ ಕೃಷಿ ಪರಿಣತರ ಸಾಧನೆಯ ಹಿಂದಿರುವ ಸತ್ಯ.

ಸಣ್ಣ ವಯಸ್ಸಿನಿಂದಲೇ ಪ್ರಣಮ್ಯ ಮತು ಶ್ರೀಪ್ರಿಯಾ ಕೃಷಿಯಲ್ಲಿ ಆಸಕ್ತರು. ತಂದೆಗೆ ಐದು ಎಕರೆ ಅಡಿಕೆ ತೋಟವಿತ್ತು. ಕೂಲಿಗೆ ಜನ ಸಿಗುವುದಿಲ್ಲ ಎಂಬ ಕಾರಣಕ್ಕೆ ಭೂಮಿಯನ್ನು ಮಾರಾಟ ಮಾಡಿ ಪೇಟೆಗೆ ಬಂದ ಮೇಲೆ ಅರಿವಾದದ್ದು ದಿನ ಬಳಕೆಯ ಕರಿಬೇವಿನ ಕಂತೆಗೂ ಹಣ ಕೊಡಬೇಕು ಎಂದು. ತರಕಾರಿ ಖರೀದಿಗೆ ವೆಚ್ಚವಾಗುವ ದುಬಾರಿ ಮೊತ್ತವು ಕೂಡ ಕಳವಳಕ್ಕೆ ಕಾರಣವಾಗಿತ್ತು. ಆಗ ಶಾಲೆಯಲ್ಲಿ ಹೂಗಿಡಗಳನ್ನು ಮತ್ತು ಬಿಸಿಯೂಟದ ತರಕಾರಿಗಳನ್ನು ಬೆಳೆಯಲು ತಾವೂ ಶ್ರಮಿಸುತ್ತಿದ್ದ ಅನುಭವ ಮಕ್ಕಳಿಗೆ ತಮ್ಮ ಮನೆಯಲ್ಲಿ ತಾವೇಕೆ ತರಕಾರಿ ಬೆಳೆದು ಹಣ ಉಳಿಸಬಾರದು? ಎಂಬ ಪ್ರಶ್ನೆಯನ್ನು ಮೂಡಿಸಿತು. ಮನೆಯಂಗಳದಲ್ಲಿ ಹೂಗಿಡಗಳನ್ನು ಬೆಳೆದುದಾಗಿದೆ, ಇನ್ನು ತರಕಾರಿ ಬೆಳೆಯಲು ಜಾಗವೆಲ್ಲಿದೆ? ಎಂದು ಹುಡುಕಿದರೆ ಕಂಡಿದ್ದು ಮನೆಯ ಮಹಡಿಯ ಖಾಲಿ ಜಾಗ. ತಕ್ಷಣವೇ ಖಾಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತಾರಸಿ ಮೇಲೆ ತರಕಾರಿ ಬೆಳೆಯುವ ಪ್ರಯತ್ನಕ್ಕೆ ಮುಂದಾದರು.

ಮನೆಯಲ್ಲಿರುವ ಒಂದೇ ಒಂದು ದೇಸೀ ದನಕ್ಕೆ ಬೂಸಾ ತಂದ ಖಾಲಿ ಚೀಲಗಳು ಸಾಕಷ್ಟಿದ್ದವು. ಅಕ್ಕ ತಂಗಿ ಬೇರಾರ ನೆರವೂ ಪಡೆಯದೆ ಈ ಚೀಲಗಳನ್ನು ಮಹಡಿಯ ಜಗಲಿಯಲ್ಲಿ ಸಾಲಾಗಿಟ್ಟು ಸ್ವಲ್ಪ ಹೊಸಮಣ್ಣನ್ನು ಇಬ್ಬರೂ ಬುಟ್ಟಿಗೆ ತುಂಬಿಸಿ ತಂದಿದ್ದಾರೆ.

ಸೆಗಣಿಯೊಂದಿಗೆ ಹಸಿರೆಲೆ ಸೇರಿಸಿ ತಯಾರಿಸಿದ ಗೊಬ್ಬರವನ್ನು ಒಣಗಿಸಿ ಅದರ ಹುಡಿಯೊಂದಿಗೆ ಕಟ್ಟಿಗೆಯ ಬೂದಿ ಸೇರಿಸಿದ್ದಾರೆ. ಕಸ ಕಡ್ಡಿಗಳನ್ನು ಮಣ್ಣಿನೊಂದಿಗೆ ಸುಟ್ಟು ಸಿದ್ಧವಾದ ಸುಡುಮಣ್ಣನ್ನೂ ಮಿಶ್ರ ಮಾಡಿ ನೀರು ಹಾಕಿ ನೆನೆಸಿ ಅದರಲ್ಲಿ ಬದನೆ ಗಿಡಗಳನ್ನು ನಾಟಿ ಮಾಡಿದ್ದಾರೆ. ದಿನನಿತ್ಯ ಪೈಪಿನಲ್ಲಿ ನೀರು ಹನಿಸಿದ್ದಾರೆ, ಗಿಡಗಳು ಚಿಗುರುವವರೆಗೂ ಹಸಿ ಸೆಗಣಿಯನ್ನು ತೆಳ್ಳಗೆ ನೀರಿನಲ್ಲಿ ಕದಡಿ ಬುಡಕ್ಕೆ ಹೊಯ್ದಿದ್ದಾರೆ.

ಬದನೆಯಲ್ಲದೆ ಚೀಲಗಳಲ್ಲಿ ಟೊಮೆಟೊ, ಬೆಂಡೆ, ಹೀರೆ ಮತ್ತು ಹಾಗಲ ಬೀಜ ಬಿತ್ತಿ ಗಿಡ ಮಾಡಿರುವ ಇವರು ರಸಗೊಬ್ಬರವನ್ನು ಉಪಯೋಗಿಸಿಲ್ಲ. ದನದ ಸೆಗಣಿಯನ್ನು ಬ್ಯಾರೆಲ್ಲಿನಲ್ಲಿ ನೀರು ಹಾಕಿ ಕರಗಿಸುತ್ತಾರೆ. ಅದಕ್ಕೆ ಕಪ್ಪುಬೆಲ್ಲ, ಸುಡುಮಣ್ಣು, ಹುತ್ತದ ಮಣ್ಣು, ಗೋಮೂತ್ರ, ಶೇಂಗಾ ಹಿಂಡಿ ಇತ್ಯಾದಿಗಳನ್ನು ಬೆರೆಸಿ ದಿನವೂ ಕದಡುತ್ತ ಹುಳಿ ಬರಲು ಇಡುತ್ತಾರೆ. ಈ ಪಾಕವನ್ನು ಮೂರು ದಿನಗಳಿಗೊಮ್ಮೆ ಒಂದು ಗೆರಟೆ ಪ್ರಮಾಣದಲ್ಲಿ ಈ ಗಿಡಗಳಿಗೆ ಪೂರೈಸುವುದು ಬಿಟ್ಟರೆ ಬೇರೆ ಯಾವುದೇ ಪೋಷಕಾಂಶಗಳನ್ನು ಉಪಯೋಗಿಸಿಲ್ಲ. ಇಷ್ಟರಲ್ಲೇ ಗೊಂಚಲು ತುಂಬ ಕಾಯಿಗಳಾಗಿವೆ. ಸಾವಯವದ ಸತ್ವವುಂಡ ಗಿಡಗಳನ್ನು ಕೀಟಗಳು ಬಾಧಿಸಿಲ್ಲ. ರೋಗ ಬಂದಿಲ್ಲ.

ಕರಾವಳಿಯಲ್ಲಿ ಟೊಮೆಟೊ ಚೆನ್ನಾಗಿ ಬೆಳೆಯುವುದಿಲ್ಲ ಎಂಬ ಕೆಲವರ ನಂಬುಗೆಯನ್ನು ಸುಳ್ಳು ಮಾಡುವಂತೆ ಕಾಯಿಗಳು ತುಂಬಿವೆ. ಕೆಲವು ಗಿಡಗಳು ಕಾಯಿಗಳ ಭಾರದಿಂದ ಬಗ್ಗದಂತೆ ಕೋಲುಗಳ ಆಧಾರ ನೀಡಲಾಗಿದೆ.

ಕಳೆದ ವರ್ಷ ತರಕಾರಿಗಳ ಮಾರಾಟದಿಂದ ಅಕ್ಕ ತಂಗಿ ಐದು ಸಾವಿರ ರೂಪಾಯಿ ಗಳಿಸಿದ್ದರಂತೆ. ಈ ವರ್ಷ ಇನ್ನೂ ಹೆಚ್ಚು ಸಿಗಬಹುದೆನ್ನುತ್ತಾರೆ. ಈಗಾಗಲೇ ಸುಮಾರು ಐವತ್ತು ಕಿಲೋ ಬದನೆಕಾಯಿ ಕಿಲೋಗೆ ಮೂವತ್ತೈದು ರೂಪಾಯಿಗೆ ಮಾರಾಟವಾಗಿದೆ.

ಟೊಮೆಟೊ ಮತ್ತು ಬೆಂಡೆ ಈಗ ಕಾಯಿ ಬಿಡುತ್ತಿದೆಯಷ್ಟೆ. ಸಾವಯವದಲ್ಲಿ ಬೆಳೆದ ತರಕಾರಿಗೆ ರುಚಿ ಮತ್ತು ಕಂಪು ಹೆಚ್ಚು. ಮೃದುವಾಗಿ ಬೇಯುತ್ತದೆಂದು ಗ್ರಾಹಕರೂ ಖರೀದಿಗೆ ಮುಂದಾಗುತ್ತಾರೆ. ಈ ವರ್ಷ ಮಳೆಗಾಲದಲ್ಲೂ ಈ ಕೃಷಿ ಪ್ರಯೋಗ ಮಾಡುವ ಯೋಚನೆ ಅವರಿಗಿದೆ. ಹೆತ್ತವರ ಸಹಾಯ ಪಡೆಯದೆ ತಮ್ಮ ಓದಿನ ಅನುಭವದಲ್ಲೇ ಅವರು ತಾರಸಿಯ ಸದ್ಬಳಕೆ ಮಾಡಿರುವುದು ಸಫಲ ಆಗಿದೆ. ನಾಟಿಗೆ ಬೇಕಾದ ಗಿಡಗಳನ್ನು ಇವರು ಸ್ವತಃ ತಯಾರಿಸಿದ್ದಾರೆ. ಪ್ಲಾಸ್ಟಿಕ್ ಹಾಳೆಯ ಮೇಲೆ ಮಣ್ಣು ಮತ್ತು ಗೊಬ್ಬರದ ಹುಡಿ ಹರಡಿ ಅದರಲ್ಲಿ ಬದನೆ ಬೀಜಗಳನ್ನು ಬಿತ್ತಿ ಗಿಡ ತಯಾರಿಸಿ ಆಯ್ದ ಗಿಡಗಳನ್ನು ನಾಟಿ ಮಾಡಿದ್ದಾರೆ. ಬೆಂಡೆ ಮತ್ತು ಟೊಮೆಟೊವನ್ನು ಗೋಣಿಚೀಲದಲ್ಲಿ ನೇರವಾಗಿ ಬಿತ್ತನೆ ಮಾಡಿದ್ದಾರೆ.

ಅಕ್ಕ ತಂಗಿ ಎಲ್ಲಿಗೇ ಹೋಗಲಿ, ಅಲ್ಲಿ ವಿಶೇಷವಾದ ಹೂ ಗಿಡ ಕಾಣಿಸಿದರೆ ಅದರ ಕೊಂಬೆಯನ್ನೋ ಬೀಜವನ್ನೋ ತಾರದೆ ಬಿಡುವುದಿಲ್ಲ. ಹೀಗೆ ತಂದು ಬೆಳೆಸಿದ ಹತ್ತಾರು ಬಗೆಯ ಗುಲಾಬಿಗಳು, ದಾಸವಾಳಗಳು, ಕ್ರೋಟನ್‌ಗಳು, ವಿದೇಶೀ ಗಿಡಗಳು ಹೂವರಳಿಸಿ ಗಮನ ಸೆಳೆಯುತ್ತವೆ. ಕೆಂದಾವರೆ ಗಿಡಗಳಿಗಾಗಿಯೇ ಒಂದು ಪುಟ್ಟ ಕೊಳ ಮಾಡಿಸಿದ್ದು ಅದರಲ್ಲಿ ಹೂಗಳರಳಲು ತಯಾರಾಗಿವೆ. ನಿಂಬೆಯ ನಾಲ್ಕಾರು ಗಿಡಗಳು ಅಷ್ಟಗಲ ಹರಡಿ ಗೊಂಚಲು ಗೊಂಚಲಾಗಿ ಕಾಯಿಗಳನ್ನು ಬಿಡುತ್ತಿವೆ. ದೊಡ್ಡ ಗಾತ್ರದ ಈ ನಿಂಬೆ ರಸಭರಿತವಾಗಿದ್ದು ಉಪ್ಪಿನಕಾಯಿ ಮತ್ತು ಪಾನಕಕ್ಕೆ ಯೋಗ್ಯವಾಗಿವೆ. ಇರುವ ಅತ್ಯಲ್ಪ ಸ್ಥಳಾವಕಾಶದ ಹಿತ್ತಲಿನಲ್ಲಿ ಬಾಳೆ, ಪಪ್ಪಾಯಿ, ನುಗ್ಗೆ ಹೀಗೆ ಅನೇಕ ಬಗೆಯ ಗಿಡಗಳೂ ಜೀವಾಮೃತವುಂಡು ಬೆಳೆಯುತ್ತಿರುವುದು ಇವರ ಕೃಷಿ ಆಸಕ್ತಿಗೆ ಸಾಕ್ಷಿಯಾಗಿವೆ.

ದಿನದಲ್ಲಿ ಒಂದು ತಾಸನ್ನು ಕೃಷಿ ಚಟುವಟಿಕೆಗೆ ವಿನಿಯೋಗಿಸುತ್ತಾರೆ ಈ ಮಕ್ಕಳು. ಅದರಿಂದ ತಮ್ಮ ಓದಿಗಾಗಲೀ ಅಂಕ ಗಳಿಕೆಗಾಗಲೀ ಯಾವುದೇ ತೊಂದರೆ ಬಂದಿಲ್ಲ ಎನ್ನುವ ಈ ಸಹೋದರಿಯರಿಗೆ ಮುಂದೆ ಕೃಷಿಯಲ್ಲಿ ಪದವಿ ಪಡೆದು ದಿನದ ನಿಗದಿತ ಸಮಯವನ್ನು ಕೃಷಿಗೆ ಮೀಸಲಿಡಬೇಕು ಎಂಬ ಆಶಯವೂ ಇದೆ.
ಸಂಪರ್ಕಕ್ಕೆ ಸಂಖ್ಯೆ: 9972564144.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT