ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಮ್ಮನ ಪುಟ್ಟ ಮಾತು

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಮುಗ್ಧತೆಯನ್ನು ಎತ್ತಿ ಹಿಡಿಯುವ ಮುಖ, ಮುದ್ದಾದ ನಗು, ಮಮತೆ ಸೂಸುವ ಕಣ್ಣುಗಳು ಒಟ್ಟಾರೆಯಾಗಿ ಹೇಳಬೇಕೆಂದರೆ ಆಕೆಯದ್ದು ಅಮ್ಮನ ಪಾತ್ರಕ್ಕೆ ಹೇಳಿ ಮಾಡಿಸಿದ ಮುಖಭಾವ.

ಅವರು ಹರಿಣಿ ಶ್ರೀಕಾಂತ್‌. ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯಲ್ಲಿ ಗೌರಿಯ ಅಮ್ಮನ ಪಾತ್ರ ಮಾಡುತ್ತಿರುವ ಇವರು ಹುಟ್ಟಿ ಬೆಳೆದಿದ್ದೆಲ್ಲವೂ ನಗರದಲ್ಲೇ.
ಹರಿಣಿ ಮೂಲತಃ ಭರತನಾಟ್ಯ ಕಲಾವಿದೆ. ನಟನಾ ಕ್ಷೇತ್ರಕ್ಕೆ ಕಾಲಿರಿಸುವ ಮೊದಲು ಆ್ಯಂಕರಿಂಗ್ ಮಾಡುತ್ತಿದ್ದರು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಸವಿನೆನಪು’ ಕಾರ್ಯಕ್ರಮದ ನಿರೂಪಕಿ. ಅಲ್ಲಿಂದ ಆರಂಭವಾದ ಅವರ ಆ್ಯಂಕರಿಂಗ್ ಪಯಣ ಉದಯ ಟೀವಿ, ಈ–ಟೀವಿ ಹೀಗೆ ಮುಂದುವರಿಯಿತು.
ಅವರದು ಸಂಗೀತದ ಕುಟುಂಬ. ಯಾವುದೇ ನಟನಾ ಹಿನ್ನೆಲೆಯಿಲ್ಲದೆ ಧಾರಾವಾಹಿಯಲ್ಲಿ ಅಭಿನಯಿಸಲು ಆರಂಭಿಸಿದ ಪ್ರತಿಭೆ.

‘‘ನಾನು ಮದುವೆಗೂ ಮೊದಲು ‘ಪ್ರತಿಭೆ’ ಹಾಗೂ ‘ಆತ್ಮ’ ಎಂಬ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನಂತರ ಯಾಕೋ ನಟನೆ ಸಹ್ಯವಾಗುತ್ತಿಲ್ಲ ಎನ್ನಿಸಿತ್ತು. ಆದ್ದರಿಂದ ಅಭಿನಯಿಸುವುದನ್ನು ನಿಲ್ಲಿಸಿದೆ. ಮುಂದೆ ಮದುವೆ ಆದ ಮೇಲೆ ನನ್ನ ಗಂಡ ನಟಿಸಲು ಪ್ರೋತ್ಸಾಹ ನೀಡಿದರು. ಹಾಗಾಗಿ ಮತ್ತೆ ನಟಿಸಲು ಆರಂಭಿಸಿದೆ’’ ಎಂದು ತಮ್ಮ ನಟನಾ ಹಾದಿಯನ್ನು ವಿವರಿಸುತ್ತಾರೆ.

ನಟಿಸಿದ್ದು ಕೆಲವೇ ಧಾರಾವಾಹಿಗಳಲ್ಲಿ ಆದರೂ ಜನರ ಮನಸ್ಸಿನಲ್ಲಿ ಅವರು ಅಭಿನಯಿಸಿದ ಪಾತ್ರಗಳ ನೆನಪು ಇಂದಿಗೂ ಹಸಿರಾಗಿದೆ. ಅವರು ನಟಿಸಿದ ‘ಮಿಂಚು’ ಧಾರಾವಾಹಿಯ ಕಾತ್ಯಾಯಿನಿ ಎಂಬ ಕುಂಟಿಯ ಪಾತ್ರ ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಪಾತ್ರ. ‘‘ಇಂದಿಗೂ ನನ್ನನ್ನು ಜನ ‘ಮಿಂಚು’ ಧಾರಾವಾಹಿಯ ಕಾತ್ಯಾಯಿನಿ ಅಲ್ವಾ ಎಂದೇ ಕೇಳುತ್ತಾರೆ’’ ಎಂದು ಸಂತಸದಿಂದ  ಹೇಳುತ್ತಾರೆ.

‘ಸಂಬಂಧ’, ‘ಚಿಕ್ಕಮ್ಮ’, ‘ಪುಟ್ಟ ಗೌರಿ ಮದುವೆ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ ಇವರು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ‘ಮಿಂಚು’   ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಆರ್ಯಭಟ ಪ್ರಶಸ್ತಿ ಹಾಗೂ ‘ಪುಟ್ಟ ಗೌರಿ’ಯ ಅಭಿನಯಕ್ಕಾಗಿ ‘ಮನೆ ಮುಟ್ಟಿದ ಅಮ್ಮ’ ಎಂಬ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

‘ನಾನು ನಟಿಸಿದ್ದು ಕೇವಲ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ, ಆದರೂ ಅಭಿನಯಿಸಿದ ಧಾರಾವಾಹಿಗಳಲ್ಲೇ ಜನ ಮೆಚ್ಚಿ ಹೊಗಳುವ ಪಾತ್ರಗಳನ್ನು ಮಾಡಿದ್ದೇನೆ ಎಂಬ ಹೆಮ್ಮೆ ಇದೆ’ ಹೇಳುವ ಹರಿಣಿಯವರಿಗೆ ಗಯ್ಯಾಳಿ ಪಾತ್ರ ಮಾಡುವ ಆಸೆಯಂತೆ. ‘ನನಗೆ ಗಯ್ಯಾಳಿ, ತುಂಬಾ ಮಾತನಾಡುವ ಹೆಂಗಸಿನ ಪಾತ್ರ ಮಾಡುವ ಆಸೆ. ಆದರೆ ನನ್ನ ಮುಖ ನೋಡಿ ಯಾರೂ ಅಂತಹ ಪಾತ್ರ ನೀಡುವುದಿಲ್ಲ’ ಎಂದು ಮುಗ್ಧವಾಗಿ ನಗುತ್ತಾರೆ ಹರಿಣಿ.
ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಗಂಡ ಮತ್ತು ಮಗನೊಂದಿಗೆ ಸಮಯ ಕಳೆಯಲು ಬಯಸುತ್ತಾರೆ ಅವರು.

ಪ್ರತಿದಿನ ವಾಕಿಂಗ್ ಮಾಡುವುದು ರೂಢಿ. ಜಿಮ್‌ನಲ್ಲಿ ದೇಹ ದಂಡಿಸುವ ಇವರು, ಡಯೆಟ್‌ ಬಗ್ಗೆ ತಮ್ಮದೇ ಪರಿಕಲ್ಪನೆ ಹೊಂದಿದ್ದಾರೆ. ‘ಟೀವಿಯಲ್ಲಿ ಕಾಣಿಸಿಕೊಳ್ಳುವವರು ಅಂದಮೇಲೆ ಹೀಗೆಯೇ ಇರಬೇಕು ಎಂಬ ಮನೋಭಾವವಿದೆ. ಅಂತಹ ಮನೋಭಾವಕ್ಕೆ ನಾವು ಒಗ್ಗಿಕೊಳ್ಳಬೇಕು. ಆದ್ದರಿಂದ ಡಯೆಟ್ ಅನಿವಾರ್ಯ’ ಎಂಬುದು ಅವರ ಅಭಿಮತ. 

‘ಮೀರಾ ಮಾಧವ ರಾಘವ’, ‘ಸಂಜು ವೆಡ್ಸ್‌ ಗೀತಾ’, ‘ಭೂಮಿತಾಯಿ’ ಮುಂತಾದ ಚಿತ್ರಗಳಲ್ಲೂ ನಟಿಸಿ, ಹಿರಿತೆರೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.
‘ನಿರ್ದೇಶನ ಮಾಡಬೇಕೆಂಬ ಕನಸಿದೆ. ಆದರೆ ನಿರ್ದೇಶನಕ್ಕೆ ತಕ್ಕ ಯೋಗ್ಯತೆ ಬೇಕು. ಅಂಥ ಅವಕಾಶಗಳು ಬಂದರೆ ಖಂಡಿತ ನಿರ್ದೇಶನ ಮಾಡುತ್ತೇನೆ’ ಎನ್ನುವ ಇವರು ಕನಸು ಕಂಗಳ ತಾಯಿ.

‘ನಟನೆ ಎಂದರೆ ಕಲೆ. ಕಿರುತೆರೆ ಎಂದರೆ ಒಂದೇ ಪಾತ್ರದಲ್ಲಿ ವರ್ಷಗಳ ಕಾಲ ಅಭಿಯಿಸುವುದು, ಸಿನಿಮಾ ಎಂದರೆ ಅಭಿನಯಿಸಿದ ಪಾತ್ರವನ್ನು ಹಲವು ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದು’ ಎಂದು ಹಿರಿತೆರೆ,  ಕಿರುತೆರೆಯ ನಟನಾನುಭವದ ಬಗ್ಗೆ ವಿವರಿಸುತ್ತಾರೆ ಹರಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT