ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಯ್ಯಗೆ ಪ್ರಶಸ್ತಿ ಪ್ರದಾನ

ಹಿರಿಯ ಸಮಾಜವಾದಿ ಹೋರಾಟಗಾರ
Last Updated 29 ಮೇ 2016, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ಸಮಾಜವಾದಿ ರಾಮಮನೋಹರ ಲೋಹಿಯಾ ಅವರೊಂದಿಗೆ ಸಾಗರದಿಂದ ಶಿವಮೊಗಕ್ಕೆ ಹೋಗಿ ಬರುವ ಸುಕೃತ ಅವಕಾಶ ಸಿಕ್ಕಿತ್ತು. ಅದರ ಪ್ರಭಾವ ಗಾಢವಾಗಿಯೇ ಆಯಿತು’ ಎಂದು ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ ಅವರು ತಿಳಿಸಿದರು.

ಭಾನುವಾರ ನಗರದ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಕೋಣಂದೂರು ವೆಂಕಪ್ಪಗೌಡ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ವೆಂಕಪ್ಪ ಅವರು ಪ್ರತಿ ಹಂತದಲ್ಲಿಯೂ ಹೋರಾಟ ಮಾಡಿಕೊಂಡು ಬಂದವರು. ಅವರ ಛಲ, ಹಟದಿಂದಾಗಿ ಅವರು ಎಲ್ಲಿಯೂ ನೆಲೆ ನಿಲ್ಲಲಿಲ್ಲ. ನನ್ನ ಜೀವನವೂ ಅವರಂತೆಯೇ’ ಎಂದರು.

‘ಮೈಸೂರಿನಲ್ಲಿ ಶಿಕ್ಷಣ ಮುಗಿಸಿದ ಬಳಿಕ ಕನ್ಯಾಕುಮಾರಿ, ಪುದುಚೇರಿ, ಕೋಲ್ಕತ್ತ  ಎಲ್ಲೆಡೆ ಸುತ್ತಿದೆ. ಎಲ್ಲೂ ನೆಲೆ ಕಾಣಲಿಲ್ಲ. ಬಳಿಕ ಚಿತ್ರದುರ್ಗದ ಮಲ್ಲಾಡಿಹಳ್ಳಿ ಗುರೂಜಿ ಅವರನ್ನು ಕೂಡಿಕೊಂಡೆ. ಜೂನಿಯರ್ ಕಾಲೇಜಿನಲ್ಲಿ ಕೆಲಸ ಮಾಡಿದೆ. ಬಳಿಕ ಅದನ್ನು ಬಿಟ್ಟೆ. ನಂತರ ಅವರ ಸಲಹೆಯಂತೆ ಶಿವಮೊಗ್ಗದ ಕುಗ್ರಾಮ ಅಮಟೆಕೊಪ್ಪದಲ್ಲಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿದೆ’ ಎಂದರು.

‘ಸಮಾಜವಾದ ಉತ್ತುಂಗದಲ್ಲಿದ್ದಾಗ ನೆಹರೂ, ಇಂದಿರಾ ಗಾಂಧಿ ಅವರನ್ನು ಟೀಕಿಸುವುದೇ ಕೆಲಸವಾಗಿತ್ತು. ಆದರೆ, ಈಗ ಹಿಂತಿರುಗಿ ನೋಡಿದಾಗ ನೆಹರೂ ಅಪ್ಪಟ ದೇಶಭಕ್ತ ಎನಿಸುತ್ತಾರೆ’ ಎಂದರು. ಸನ್ಮಾನ ಮಾಡಿ ಮಾತನಾಡಿದ ಸಚಿವ ಕಿಮ್ಮನೆ ರತ್ನಾಕರ್, ‘ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎನ್ನುತ್ತಾರೆ.

ಅದಕ್ಕೆ ಯಾರು ಕಾರಣರು? ಅನಕ್ಷಸ್ಥರಲ್ಲ. ನ್ಯಾಯಾಂಗದಲ್ಲಿ ಅನಕ್ಷರಸ್ಥರಿಲ್ಲ. ಶಾಸಕಾಂಗದಲ್ಲಿ ಶೇಕಡ 99ರಷ್ಟು ಇಲ್ಲ. ಕಾರ್ಯಾಂಗದಲ್ಲಂತೂ ಇಲ್ಲವೇ ಇಲ್ಲ. ನಾವು ನಮ್ಮನ್ನು ಬದಲಾವಣೆ ಮಾಡಬೇಕಾದ ಅಗತ್ಯವಿದೆ’ ಎಂದರು.

ವೆಂಕಪ್ಪ ಅವರೊಟ್ಟಿಗಿನ ನಂಟನ್ನು ನೆನಪಿಸಿಕೊಂಡ ಅವರು, ಮುಂದಿನ ಬಾರಿ ಪ್ರಶಸ್ತಿಯ ಜತೆಗೆ ಚರ್ಚಾಗೋಷ್ಠಿಯನ್ನೂ ನಡೆಸಿ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಪಿ.ಜಿ.ಆರ್. ಸಿಂಧ್ಯಾ, ‘ಸಮಾಜವಾದದ ಅಗತ್ಯ ಹೆಚ್ಚಾಗಿದೆ. ಅದನ್ನು ಮುನ್ನೆಲೆಗೆ ತರಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ‘ಸಾಮಾಜಿಕ ಪರಿವರ್ತನೆಗೆ ನೆರವಾಗುವ ವಿಚಾರ ಸಂಕೀರ್ಣ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧ’ ಎಂದು ಪ್ರಕಟಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ನಳಿನಿ ವೆಂಕಪ್ಪ, ಗೌರಾವಾಧ್ಯಕ್ಷ ಕೆ, ಮಲ್ಲಯ್ಯ, ಉಪಾಧ್ಯಕ್ಷ ಇ.ವಿ.ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT