ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆಗೆ ತಿರುಗೇಟು ನೀಡುವ ಗುರಿ

ಅಗ್ರಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ತಂಡಕ್ಕೆ ಹ್ಯಾಟ್ರಿಕ್‌ ಜಯದ ಆಸೆ; ಮೆಕ್ಲಮ್‌ ಮೇಲೆ ಕಣ್ಣು
Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಹಿಂದಿನ ಪಂದ್ಯಗಳಲ್ಲಿ ಸತತ ಎರಡು ಗೆಲುವುಗಳನ್ನು ಪಡೆದಿರುವ ಗುಜರಾತ್‌ ಲಯನ್ಸ್ ತಂಡ ಭಾರಿ ವಿಶ್ವಾಸದಲ್ಲಿದೆ. ಆದರೆ, ಲಯನ್ಸ್ ಎದುರು ಮೊದಲ ಸುತ್ತಿನ ಪಂದ್ಯದಲ್ಲಿ ಸೋತಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್  ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.

ಈ ಎರಡೂ ತಂಡಗಳಿಗೂ ಇದು ಚೊಚ್ಚಲ ಟೂರ್ನಿಯಾಗಿದೆ. ಹೊಸ ತಂಡಗಳ ನಡುವಣ ಹಣಾಹಣಿಗೆ ಶುಕ್ರವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.

ಸುರೇಶ್ ರೈನಾ ನಾಯಕತ್ವದ ಲಯನ್ಸ್ ತಂಡ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಗೆಲುವು ಪಡೆದಿತ್ತು. ಅದಕ್ಕೂ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಸೋಲಿಸಿತ್ತು.

ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಸೂಪರ್‌ಜೈಂಟ್ಸ್‌ ತನ್ನ ಹಿಂದಿನ ಹೋರಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌  ಎದುರು ಡಕ್ವರ್ಥ್‌ ಲೂಯಿಸ್ ನಿಯಮದ ಅನ್ವಯ 34 ರನ್‌ಗಳ ಗೆಲುವು ಪಡೆದಿತ್ತು. ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ನೀರಸ ಪ್ರದರ್ಶನ ತೋರಿದ ತಂಡಕ್ಕೆ ಈ ಗೆಲುವು ಕೊಂಚ ವಿಶ್ವಾಸ ತುಂಬಿದೆ.

ದೋನಿ ಪಡೆ ಈಗಾಗಲೇ ಆರು ಪಂದ್ಯಗಳನ್ನು ಆಡಿದ್ದು ಎರಡರಲ್ಲಷ್ಟೇ ಗೆಲುವು ಸಾಧಿಸಿದೆ. ಈ ತಂಡಕ್ಕೆ ಉಳಿದಿರುವುದು ಎಂಟು ಲೀಗ್‌ ಪಂದ್ಯಗಳಷ್ಟೇ. ನಾಕೌಟ್ ಹಂತ ಪ್ರವೇಶಿಸಬೇಕಾದರೆ ಸೂಪರ್‌ಜೈಂಟ್ಸ್ ತಂಡಕ್ಕೆ ಉಳಿದ ಪಂದ್ಯಗಳಲ್ಲಿಯೂ ಗೆಲುವು ಅನಿವಾರ್ಯವಾಗಿದೆ.

ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ  ಸೂಪರ್‌ಜೈಂಟ್ಸ್  ಚುರುಕಿನ ಬೌಲಿಂಗ್ ಮಾಡಿತ್ತು. ಎದುರಾಳಿ ತಂಡವನ್ನು 118 ರನ್‌ಗೆ ಕಟ್ಟಿ ಹಾಕಿತ್ತು.   ಅಲ್ಪ ಮೊತ್ತದ ಗುರಿಯನ್ನು ದೋನಿ ಪಡೆ ಬೆನ್ನು ಹತ್ತಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಆದ್ದರಿಂದ ಫಲಿತಾಂಶವನ್ನು ನಿರ್ಧರಿಸಲು ಡಕ್ವರ್ಥ್‌  ಲೂಯಿಸ್‌ ನಿಯಮದ ಮೊರೆ ಹೋಗಲಾಗಿತ್ತು.

ಫಾಫ್‌ ಡು ಪ್ಲೆಸಿಸ್‌, ಸ್ಟೀವನ್‌ ಸ್ಮಿತ್‌ ಅವರ ಅಬ್ಬರದ ಆಟದಿಂದ ವೇಗವಾಗಿ ರನ್ ಕಲೆ ಹಾಕಿದ್ದ ಸೂಪರ್‌ಜೈಂಟ್ಸ್ ತಂಡ ಉತ್ತಮ ರನ್‌ರೇಟ್‌ ಕಾಪಾಡಿಕೊಂಡು ಜಯ ಸಾಧಿಸಿತ್ತು.

ಎರಡನೇ ಮುಖಾಮುಖಿ: ಉಭಯ ತಂಡಗಳು ಮುಖಾಮುಖಿಯಾಗು ತ್ತಿರುವುದು ಇದು ಎರಡನೇ ಬಾರಿ. ಈ ತಂಡಗಳ ನಡುವೆ ಏಪ್ರಿಲ್‌ 14 ರಂದು ರಾಜ್‌ಕೋಟ್‌ನಲ್ಲಿ ಪಂದ್ಯ ನಡೆದಾಗ ಲಯನ್ಸ್ ಏಳು ವಿಕೆಟ್‌ಗಳ ಗೆಲುವು ಪಡೆದಿತ್ತು. ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸೂಪರ್‌ಜೈಂಟ್ಸ್‌ ತಂಡ ಕಾಯುತ್ತಿದೆ.

ವಿಶ್ವಾಸ ಹೆಚ್ಚಿಸಿದ ಜಯ: ಡ್ವೇನ್‌ ಸ್ಮಿತ್‌, ಬ್ರೆಂಡನ್‌ ಮೆಕ್ಲಮ್‌, ರೈನಾ, ದಿನೇಶ್‌ ಕಾರ್ತಿಕ್‌, ರವೀಂದ್ರ ಜಡೇಜ ಅವರನ್ನು ಹೊಂದಿರುವ ಲಯನ್ಸ್ ತಂಡ ಡೆಲ್ಲಿ ಎದುರಿನ ಪಂದ್ಯದಲ್ಲಿ ಒಂದು ರನ್‌ನಿಂದ ರೋಚಕ ಗೆಲುವು ಪಡೆದಿತ್ತು.

ಆ್ಯರನ್ ಫಿಂಚ್ ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರ ಬದಲು ಡ್ವೇನ್ ಸ್ಮಿತ್‌ ಹಿಂದಿನ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದರು.

ಲಯನ್ಸ್ ನೀಡಿದ್ದ 173 ರನ್‌ಗಳ ಸವಾಲಿನ ಗುರಿಯನ್ನು ಮುಟ್ಟಲು ಡೆಲ್ಲಿ ಉತ್ತಮ ಹೋರಾಟ ತೋರಿತ್ತು. ಕೊನೆಯ ಓವರ್‌ಗಳಲ್ಲಿ ಲಯನ್ಸ್  ಚುರುಕಿನ ಬೌಲಿಂಗ್ ಮಾಡಿ ಗೆಲುವು ಪಡೆದುಕೊಂಡಿತ್ತು.

ಪವನ್‌ ಕುಮಾರ್‌, ಧವಳ್‌ ಕುಲಕರ್ಣಿ, ಡ್ವೇನ್‌ ಬ್ರಾವೊ, ಜೇಮ್ಸ್‌ ಫಾಕ್ನರ್‌ ಅವರ  ಮೇಲೆ ಲಯನ್ಸ್ ತಂಡದ  ಬೌಲಿಂಗ್ ವಿಭಾಗ ಅವಲಂಬಿತವಾಗಿದೆ.
ಆರು ಪಂದ್ಯಗಳನ್ನು ಆಡಿರುವ ಲಯನ್ಸ್ ತಂಡ ಐದರಲ್ಲಿ ಗೆಲುವು ಪಡೆದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಇನ್ನು ನಾಲ್ಕೈದು ಲೀಗ್‌ ಪಂದ್ಯಗಳಲ್ಲಿ ಗೆಲುವು ಪಡೆದರೆ ಪ್ಲೇ  ಆಫ್‌್ ಪ್ರವೇಶದ ಹಾದಿ  ಸುಗಮವಾಗಲಿದೆ.

ಲಯನ್ಸ್ ತಂಡದ ಪ್ರಮುಖ ಶಕ್ತಿಯೆಂದರೆ ಬ್ಯಾಟಿಂಗ್ ವಿಭಾಗ. ಸ್ಮಿತ್‌ ಮತ್ತು ಮೆಕ್ಲಮ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ಡೆಲ್ಲಿ ಎದುರಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 112 ರನ್ ಕಲೆ ಹಾಕಿದ್ದರು. ಸನ್‌ರೈಸರ್ಸ್‌ ವಿರುದ್ಧ ಸೂಪರ್‌ಜೈಂಟ್ಸ್ ಚುರುಕಿನ ಬೌಲಿಂಗ್ ಮೂಲಕ ಗಮನ ಸೆಳೆದಿತ್ತು. ಆದ್ದರಿಂದ  ಸೂಪರ್‌ಜೈಂಟ್ಸ್ ಬೌಲರ್‌ಗಳು ಮತ್ತು ಲಯನ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ನಡುವೆ ಕಠಿಣ ಹೋರಾಟ ಕಂಡು ಬರುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT