ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಂದರ ಭಟ್‌ಗೆ ಸಿಎನ್‌ಆರ್‌ ಪ್ರಶಸ್ತಿ

ಸುಳ್ಯದ ವಿದ್ಯಾಬೋಧಿನಿ ಪ್ರೌಢಶಾಲೆಯ ಗಣಿತ ಅಧ್ಯಾಪಕ
Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ವಿದ್ಯಾಬೋಧಿನಿ ಪ್ರೌಢಶಾಲೆಯ ಗಣಿತ ಅಧ್ಯಾಪಕ ಕೆ.ಪುರಂದರನಾರಾಯಣ ಭಟ್‌ ಹಾಗೂ ಉತ್ತರ ಪ್ರದೇಶದ ಅಲಹಾಬಾದ್‌ನ ಟ್ಯಾಗೋರ್‌ ಪಬ್ಲಿಕ್‌ ಶಾಲೆಯ ರಸಾಯನವಿಜ್ಞಾನ ಅಧ್ಯಾಪಕ ಸಂಜಯ್‌ ಕುಮಾರ್‌ ಶ್ರೀವಾಸ್ತವ ಅವರಿಗೆ ಸಿ.ಎನ್‌.ರಾವ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಧಾನಿಯ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷರಾಗಿರುವ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರು ಜಕ್ಕೂರಿನ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ (ಜೆಎನ್‌ಸಿಎಎಸ್‌ಆರ್‌) ಗುರುವಾರ  ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಭೌತವಿಜ್ಞಾನಿ ಪ್ರೊ.ಎ.ಕೆ.ಸೂದ್‌ ಅವರು ಬ್ಯಾಕ್ಟೀರಿಯಗಳನ್ನು ಬಳಸಿ ಉಷ್ಣ ಎಂಜಿನ್‌ ಕಾರ್ಯಕ್ಷಮತೆ ಹೆಚ್ಚಿಸುವ ಕುರಿತು  ಉಪನ್ಯಾಸ ನೀಡಿದರು. 

‘ಕೆಲವು ಪ್ರಾಣಿಗಳು ಹಾಗೂ ಹಕ್ಕಿಗಳು ಹಿಂಡಾಗಿ ಚಲಿಸುವಾಗ ಸಮಷ್ಟಿಯ ಚಲನೆಯನ್ನು ಅನುಸರಿಸುತ್ತವೆ. ಸಾಗುವಾಗ ಉಂಟಾಗುವ ಸಂಘರ್ಷವನ್ನು ತಡೆಯಲು ಮಾಡಿಕೊಳ್ಳುವ ತಾತ್ಕಾಲಿಕ ವ್ಯವಸ್ಥೆ ಇದು. ಒಂದು ತಟ್ಟೆಯಲ್ಲಿ ಸಮಾ ಕೃತಿಗಳಲ್ಲದ  ಒಂದೇ ಆಕಾರವಿರುವ ವಸ್ತುಗಳನ್ನು ಚೆಲ್ಲಿ, ಸಣ್ಣ ಪ್ರಮಾಣದಲ್ಲಿ ಕಂಪನಕ್ಕೊಳಗಾಗುವಂತೆ ಮಾಡಿದಾಗ ಅವುಗಳೂ ಸಮಷ್ಟಿಯ ಚಲನೆಯ ತತ್ವವನ್ನೇ ಅನುಸರಿಸುತ್ತವೆ’ ಎಂದರು.

‘ಇದೇ ತತ್ವವನ್ನು ಆಧರಿಸಿ ಸಂಶೋಧನೆ ನಡೆಸಿದಾಗ ಬ್ಯಾಕ್ಟೀರಿಯ ಗಳ (ಇ–ಕೋಲೈ) ಬಳಕೆಯಿಂದ ಉಷ್ಣ ಎಂಜಿನ್‌ನ ಕ್ಷಮತೆ 10 ಪಟ್ಟು ಹೆಚ್ಚಾಗುವುದು ದೃಢಪಟ್ಟಿದೆ’ ಎಂದು ವಿವರಿಸಿದರು.  ಜೆಎನ್‌ಸಿಎಎಸ್‌ಆರ್‌ನ ಜೀವವಿಜ್ಞಾನಿ ಡಾ.ರವಿ ಮಂಜಿತ್ತಾಯ ಅವರು,  ಸ್ವಯಂಭಕ್ಷಣಾ ತಂತ್ರಗಳನ್ನು ಬಳಸಿ ನರಜೀವಕೋಶಗಳ ನಾಶದಿಂದ ಉಂಟಾಗುವ ಪಾರ್ಕಿನ್ಸನ್‌ ಮತ್ತಿತರ ರೋಗಗಳನ್ನು ನಿಯಂತ್ರಿಸುವ ಕುರಿತು ಉಪನ್ಯಾಸ ನೀಡಿದರು.

‘ಜೀವಕೋಶಗಳಲ್ಲಿರುವ ಲೈಸೋಸೋಮ್‌ಗಳನ್ನು ಆತ್ಮಹತ್ಯಾ ಸಂಚಿ ಎಂದು ಕರೆಯುತ್ತಾರೆ. ಸ್ವಯಂಭಕ್ಷಣೆ ಮೂಲಕ ಇವು ಜೀವಕೋಶದೊಳಗಿರುವ ಅನಗತ್ಯ ಪ್ರೋಟೀನ್‌, ಲಿಪಿಡ್‌ ಹಾಗೂ ಸಕ್ಕರೆಯ ಅಂಶಗಳನ್ನು ನಾಶಪಡಿಸಿ ಉಪಯುಕ್ತ ಘಟಕಗಳನ್ನಾಗಿ ಪರಿವರ್ತಿಸುತ್ತವೆ. ಲೈಸೋಸೋಮ್‌ಗಳಿಂದ ಅನುಕೂಲವೇ ಆಗುತ್ತದೆ.

ಆದರೆ, ಕೆಲವೊಮ್ಮೆ ವರ್ಣತಂತುಗಳಲ್ಲಿರುವ ದೋಷ ಮತ್ತಿತರ ಕಾರಣಗಳಿಂದಾಗಿ ಸ್ವಯಂ ಭಕ್ಷಣಾ ಪ್ರಕ್ರಿಯೆ ನಿಯಂತ್ರಣ ಕಳೆದು ಕೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಕೋಶ ವಿಭಜನೆ ಸಾಧ್ಯವಿಲ್ಲದ ನರಜೀವಕೋಶಗಳನ್ನು ಲೈಸೋಸೋಮ್‌ಗಳು ನಾಶಪಡಿಸಿದರೆ ಅದು ಪಾರ್ಕಿನ್ಸನ್‌ನಂತಹ  ರೋಗಕ್ಕೆ ಕಾರಣವಾಗಬಲ್ಲುದು’ ಎಂದು ವಿವರಿಸಿದರು.

‘ಔಷಧವಾಗಿ ವರ್ತಿಸಬಲ್ಲ ಕಣಗಳನ್ನು ಜೀವಕೋಶದೊಳಗೆ ಕಳುಹಿಸುವ ಮೂಲಕ  ಸ್ವಯಂಭಕ್ಷಣಾ ಪ್ರಕ್ರಿಯೆಯನ್ನು ಸಮತೋಲನವನ್ನು ಮತ್ತೆ ಸಾಧಿಸುವುದಕ್ಕೆ ಸಾಧ್ಯವಿದೆ. ನಮ್ಮ ಪ್ರಯೋಗಾಲಯದಲ್ಲಿ ಪಾರ್ಕಿನ್ಸನ್‌ನಂತಹದ್ದೇ ರೋಗದಿಂದ ಬಳಲುವ ಇಲಿಗಳ ಮೇಲೆ ಇಂತಹ ಔಷಧವನ್ನು ಪ್ರಯೋಗಿಸಿ ಯಶಸ್ಸು ಸಾಧಿಸಿದ್ದೇವೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ  ಈ ತಂತ್ರ ಧನುರ್‌ ವಾಯು, ಕ್ಯಾನ್ಸರ್‌ನಂತಹ ರೋಗ ನಿಯಂತ್ರಣಕ್ಕೂ ಪ್ರಯೋಜನಕಾರಿಯಾಗಬಲ್ಲುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT