ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷ ಸಿಬ್ಬಂದಿ ವಿಚಾರಣೆ

ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ
Last Updated 23 ಅಕ್ಟೋಬರ್ 2014, 20:01 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿ ಸಮೀಪದ ಆರ್ಕಿಡ್‌ ದಿ ಇಂಟರ್‌ನ್ಯಾಷನಲ್‌ ಶಾಲೆಯ ಪ್ರಿ ನರ್ಸರಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಶಾಲೆಯ ಎಲ್ಲ 14 ಪುರುಷ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ.

952 ಮಕ್ಕಳು ಕಲಿಯುತ್ತಿರುವ ಈ ಶಾಲೆಯಲ್ಲಿ 77 ಶಿಕ್ಷಕರಿದ್ದು, ಮೂವರು ಮಾತ್ರ ಪುರುಷ ಶಿಕ್ಷಕರಾಗಿದ್ದಾರೆ. ಇರುವ 37 ಬೋಧಕೇತರ ಸಿಬ್ಬಂದಿ­ಯಲ್ಲಿ 11 ಪುರುಷರಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿರುವುದರಿಂದ ಎಲ್ಲ ಪುರುಷ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸ­ಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ, ‘ಪ್ರಕರಣ ಸಂಬಂಧ ಈವರೆಗೂ ಯಾರನ್ನೂ ಬಂಧಿಸಿಲ್ಲ. ಕಾನೂನಿನ ಪ್ರಕಾರವೇ ನೋಟಿಸ್‌ ನೀಡಿ ಪುರುಷ ಸಿಬ್ಬಂದಿಯನ್ನು ವಿಚಾರಣೆಗೆ ಕರೆಯ­ಲಾಗಿದೆ. ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಸಾ.ರಾ.ಫಾತಿಮಾ ನೇತೃತ್ವದ ತನಿಖಾ ತಂಡ ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತಿದೆ’ ಎಂದರು.
ಜ್ವರದಿಂದ ಬಳಲುತ್ತಿದ್ದ ಬಾಲಕಿ ಗುರುವಾರ ಚೇತರಿಸಿಕೊಂಡಿದ್ದಾಳೆ. ಎಸಿಪಿಗಳಾದ ಸಾ.ರಾ.­ಫಾತಿಮಾ ಹಾಗೂ ಶೋಭಾ ರಾಣಿ ಅವರು ಮಗುವಿನ ಜತೆ ಮೃದುವಾಗಿಯೇ ಮಾತನಾಡಿಸಿ ವಾಸ್ತವ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಘಟನೆ ಬಗ್ಗೆ ಆಕೆ ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಬ್ಯಾಡ್ ಅಂಕಲ್: ಬಾಲಕಿಗೆ ಶಾಲೆ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಗುಮಾಸ್ತರ ಭಾವಚಿತ್ರ­ಗಳನ್ನು ತೋರಿಸಲಾಯಿತು. ಎಲ್ಲರ ಭಾವಚಿತ್ರ ನೋಡಿದಾಗಲೂ ‘ಇವರು ಬ್ಯಾಡ್‌ ಅಂಕಲ್’ ಎಂದು ಆಕೆ ಹೇಳುತ್ತಾಳೆ. ಆದರೆ, ಆ ಹೇಳಿಕೆ­ಯೊಂದನ್ನೇ ಆಧರಿಸಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.21ರಂದು ಶಾಲೆಯಿಂದ ಮನೆಗೆ ಹೋಗು­ವಾಗ ವಿದ್ಯಾರ್ಥಿನಿ ಹೊಟ್ಟೆನೋವು ಎಂದು ಅಳುತ್ತಿದ್ದಳು. ಈ ಬಗ್ಗೆ ಆಕೆಯನ್ನು ತಾಯಿ ವಿಚಾರಿಸಿ­ದಾಗ ‘ಶಾಲೆಯಲ್ಲಿ ಅಂಕಲ್‌ ಹೊಡೆ­ದರು’ ಎಂದಷ್ಟೇ ಹೇಳಿದ್ದಳು. ಆದರೆ, ಮನೆಗೆ ಕರೆದುಕೊಂಡು ಹೋದ ಬಳಿಕ ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸಮೀಪದ ಆಸ್ಪತ್ರೆಯ­ಲ್ಲಿ ಕರೆದೊಯ್ದಾಗ ಗುಪ್ತಾಂಗದ ಬಳಿ ಗಾಯದ ಗುರುತು ಇರುವುದಾಗಿ ವೈದ್ಯರು ಹೇಳಿದ್ದರು. ಈ ಸಂಬಂಧ ಸುಬ್ರಹ್ಮಣ್ಯನಗರ ಠಾಣೆಗೆ ಮೆಮೊ ಕಳುಹಿಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಮಗು­ವನ್ನು ಕೊಲಂಬಿಯಾ ಏಷ್ಯಾ ಆಸ್‍ಪತ್ರೆಗೆ ವರ್ಗಾಯಿ­ಸಿದ್ದರು. ನಂತರ ಶಾಲೆ ಜಾಲಹಳ್ಳಿ ಠಾಣೆ ವ್ಯಾಪ್ತಿಗೆ ಬರುವುದರಿಂದ ಆ ಠಾಣೆಯ ಇನ್‌ಸ್ಪೆಕ್ಟರ್ ವೆಂಕ­ಟೇಶ್ ಆಸ್ಪತ್ರೆಗೆ ತೆರಳಿ ದೂರು ದಾಖಲಿಸಿದ್ದರು.

ಹೆಚ್ಚುವರಿ ಭದ್ರತೆ: ‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಸೂಚಿಸುವ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆ’ ಎಂದು ಶಾಲೆ ಅಧ್ಯಕ್ಷ ವೆಂಕಟನಾರಾಯಣ ರೆಡ್ಡಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸೂಚಿಸಿದ್ದ ಎಲ್ಲ ಮಾರ್ಗ­ಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಶಾಲೆ ಆವರಣದಲ್ಲಿ ಒಟ್ಟು 18 ಸಿ.ಸಿ ಕ್ಯಾಮೆರಾಗಳಿವೆ. ಜತೆಗೆ ಮಕ್ಕಳನ್ನು ಕರೆದೊಯ್ಯುವ ವಾಹನದಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ’ ಎಂದರು.

‘ಬಹುತೇಕ ಮಹಿಳಾ ಸಿಬ್ಬಂದಿಯೇ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಗುರುತಿನ ಚೀಟಿ ನೀಡಲಾಗಿದ್ದು, ಇರುವ ಐವರು ಸೆಕ್ಯುರಿಟಿ ಗಾರ್ಡ್‌ಗಳ ಹೆಸರು–ವಿಳಾಸ ಹಾಗೂ ಪೂರ್ವಾ­ಪರಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ.  ಆದರೂ, ಪೋಷಕರು ಸೂಚಿಸಿದರೆ ಹೆಚ್ಚುವರಿ ಕ್ರಮ ಕೈಗೊಳ್ಳ­ಲಾಗುವುದು. ಪ್ರತಿ ತಿಂಗಳು ಪೋಷಕರ ಕ್ರಿಯಾ ಸಮಿತಿಯ ಜತೆ ಸಭೆ ನಡೆಸಿ ಸುರಕ್ಷತೆ ಬಗ್ಗೆ ಚರ್ಚಿಸಲಾಗುವುದು’ ಎಂದು ಭರವಸೆ  ನೀಡಿದರು.

‘25ರಂದು ಪೊಲೀಸ್ ಕಮಿಷನರ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ತರಗತಿಗಳ ಪುನರಾರಂಭದ ಕುರಿತು ಆ ಸಭೆಯಲ್ಲಿ ನಿರ್ಧಾರ ತೆಗೆದು­ಕೊಳ್ಳ­ಲಾಗುವುದು. ಅಲ್ಲದೆ, ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ವೈಫಲ್ಯ ಉಂಟಾಗಿರುವ ಆರೋಪ ಕೇಳಿ ಬಂದಿ­ರುವುದರಿಂದ ಆಂತರಿಕ ತನಿಖೆ ನಡೆಸ­ಲಾಗುವುದು’ ಎಂದು ವೆಂಕಟ ನಾರಾಯಣ ರೆಡ್ಡಿ ತಿಳಿಸಿದರು.

ಶಾಲೆ ವಿರುದ್ಧ ಮೊಕದ್ದಮೆ
‘ಅನುಮತಿ  ಪಡೆಯದೆ ಸಿಬಿಎಸ್‌ಸಿ ಪಠ್ಯಕ್ರಮ ಬೋಧನೆ ಮಾಡುತ್ತಿರುವ ಜಾಲ­ಹಳ್ಳಿಯ ಆರ್ಕಿಡ್ ದಿ ಇಂಟರ್‌­ನ್ಯಾಷನಲ್ ಶಾಲೆ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿ­ಸು­ವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡ-­ಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮಹಮದ್‌ ಮೊಹ್ಸಿನ್‌ ಹೇಳಿದ್ದಾರೆ.
‘ಶಾಲಾ ಆಡಳಿತ ಮಂಡಳಿಯು ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವುದಾಗಿ 2013ರ ಮಾ.23­ರಂದು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿತ್ತು.  ಆದರೆ, ಶಾಲೆ­ಯಲ್ಲಿ ಪ್ರಿ ನರ್ಸರಿಯಿಂದ ಏಳನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ.  ಅಲ್ಲದೇ, ಅನುಮತಿ ಇಲ್ಲದೆ ಸಿಬಿಎಸ್‌ಸಿ ಪಠ್ಯಕ್ರಮ ಬೋಧನೆ ಮಾಡಲಾಗುತ್ತಿದೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಶಾಲೆ ವಿರುದ್ಧ ಪೋಷಕರ ಆಕ್ರೋಶ
ಬೆಂಗಳೂರು
: ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಆಕ್ರೋಶಗೊಂಡ ಇತರೆ ಮಕ್ಕಳ ಪೋಷಕರು, ಆರ್ಕಿಡ್‌ ದಿ ಇಂಟರ್‌ ನ್ಯಾಷನಲ್‌ ಶಾಲಾ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪೋಷಕರ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಶಾಲೆಯ ಅಧ್ಯಕ್ಷ ವೆಂಕಟ ನಾರಾ­ಯಣ ರೆಡ್ಡಿ ಅವರು ಗುರುವಾರ ಎರಡನೇ ಬಾರಿಯ ಸಭೆ ಕರೆದಿದ್ದರು. ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಪೋಷಕರು ಸಭೆಯಲ್ಲಿ ಕಿಡಿ­ಕಾರಿದರು. ಮತ್ತೊಂದೆಡೆ ಕಾಂಗ್ರೆಸ್ ಕಾರ್ಯ­ಕರ್ತರು ಘಟನೆಯನ್ನು ಖಂಡಿಸಿ ಶಾಲೆಯ ನಾಮ­ಫಲಕಗಳಿಗೆ ಮಸಿ ಬಳಿದು  ಪ್ರತಿಭಟನೆ ಮಾಡಿದರು.

‘ಘಟನೆ ನಡೆದು ಮೂರು ದಿನ ಕಳೆದಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನೊಂದ ಮಗುವಿಗೆ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯವೂ ಆಡಳಿತ ಮಂಡಳಿಗೆ ಇಲ್ಲ. ಹಣ ಮಾಡಲು ಮಾತ್ರವಷ್ಟೇ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರೇ ಅಂಥ ಶಾಲೆಗೆ ನಮ್ಮ ಮಕ್ಕಳು ಹೋಗುವುದು ಬೇಡ’ ಎಂದು ಪೋಷಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸರ್ಕಾರದಿಂದ ಅನುಮತಿ ಪಡೆಯದೇ ಶಾಲೆ ನಡೆಸುತ್ತಿರುವ ಬಗ್ಗೆ ಮೊದಲೇ ಏಕೆ ಮಾಹಿತಿ ನೀಡಲಿಲ್ಲ’ ಎಂದು ಪೋಷಕರು ಅಧ್ಯಕ್ಷರನ್ನು ಪ್ರಶ್ನಿಸಿದರು. ಈ ವೇಳೆ ವೆಂಕಟ ನಾರಾಯಣ ರೆಡ್ಡಿ ಅವರು ಸಮಜಾಯಿಷಿ ನೀಡಲು ಯತ್ನಿಸಿದಾಗ ಮತ್ತಷ್ಟು ಕೆರಳಿದ ಪೋಷಕರು, ಸರ್ಕಾರದಿಂದ ಪರವಾನಗಿ ಪಡೆದಿರುವ ದಾಖಲೆಗಳನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.

‘ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಮೇಲಿನ ವಿಶ್ವಾಸದಿಂದ ಮಕ್ಕಳನ್ನು ಕಳುಹಿಸು­ತ್ತೇವೆ. ಆದರೆ, ಶಾಲೆಯಲ್ಲೇ ಇಂಥ ಹೀನ ಕೃತ್ಯಗಳು ನಡೆದರೆ ಶಿಕ್ಷಣ ಸಂಸ್ಥೆಗಳನ್ನು ಹೇಗೆ ನಂಬುವುದು. ಮೂರು ವರ್ಷದ ಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿದ ವ್ಯಕ್ತಿಯನ್ನು ಪೊಲೀಸರು ಆದಷ್ಟು ಬೇಗ ಪತ್ತೆ ಮಾಡಬೇಕು’  ಎಂದು ಅದೇ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ತಂದೆ ನೀರಜ್ ಅಗರ್‌ವಾಲ್ ಹೇಳಿದರು.

‘ಕೋರ್ಟ್‌ ಆದೇಶದಂತೆ ಕ್ರಮ’
‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೊರಡಿಸ­ಲಾಗಿರುವ ಮಾರ್ಗಸೂಚಿ ಅನುಷ್ಠಾನ ಸಂಬಂಧ ನ.3ರಂದು ಹೈಕೋರ್ಟ್‌ ಪ್ರಕಟಿಸುವ ಆದೇಶದ ಅನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ವಿಬ್ಗಯೊರ್ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಎಂ.ಎನ್.ರೆಡ್ಡಿ ಅವರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ಕೆಲವು ಮಾರ್ಗ­ಸೂಚಿಗಳನ್ನು ಕಡ್ಡಾಯಗೊಳಿಸಿದ್ದರು. ಆದರೆ, ಈ ಕ್ರಮವನ್ನು ಪ್ರಶ್ನಿಸಿ ಕೆಲ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ ಮೋರೆ ಹೋಗಿವೆ.

ಮಾರ್ಗಸೂಚಿ ಅಳವಡಿಕೆಗೆ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇತ್ತೀಚೆಗೆ ಎಂ.ಎನ್.ರೆಡ್ಡಿ ಅವರು ಬಿಬಿಎಂಪಿ, ಶಿಕ್ಷಣ ಇಲಾಖೆ, ಖಾಸಗಿ ಮತ್ತು ಸರ್ಕಾರಿ ಶಾಲಾ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT