ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರಕ ಓದಿಗೆ ಕ್ರಾಷ್‌ ಕೋರ್ಸ್‌

ಅಕ್ಷರ ಗಾತ್ರ

ರಜೆಯ ಮಜ ಮುಗಿದಿದೆ. ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಯಾರಿ ಆರಂಭವಾಗಿದೆ. ಶಾಲೆ/ ಕಾಲೇಜು ಆರಂಭಕ್ಕೂ ಮೊದಲು ಎಲ್ಲವನ್ನೂ ಕಲಿತಿರಬೇಕು ಎಂಬ ಹೆಬ್ಬಯಕೆ ಪೋಷಕರದ್ದು. ರಜೆಯಲ್ಲಿ ಯಾಕೆ ಈ ಸಜೆ ಎಂದು ಗೊಣಗುವ ವಿದ್ಯಾರ್ಥಿಗಳು ಒಂದೆಡೆಯಾದರೆ, ತರಗತಿ ಆರಂಭಕ್ಕೂ ಮೊದಲು ಈ ಬಾರಿಯ ಪಠ್ಯಕ್ರಮ ಹೇಗಿದೆ ಎಂದು ಇಣುಕಿ ನೋಡುವ ಆಸೆ ಬಹುತೇಕ ವಿದ್ಯಾರ್ಥಿಗಳದ್ದು.

ಹೀಗಾಗಿಯೇ ರಾಜ್ಯದ ಆಯ್ದ ನಗರಗಳಲ್ಲಿ ಕ್ರಾಷ್‌ ಕೋರ್ಸ್‌ ಎಂಬ ವಿನೂತನ ಮಾದರಿಯ ಟ್ಯೂಷನ್‌ ತರಗತಿಗಳು ಆರಂಭವಾಗಿವೆ. 45ರಿಂದ 50 ದಿನಗಳ ಈ ಕ್ರಾಷ್‌ ಕೋರ್ಸ್‌ಗಳಲ್ಲಿ ವಸತಿ ಸೌಲಭ್ಯ ಸಹಿತ ಪಾಠ ಹೇಳಿಕೊಡುವ ಪದ್ಧತಿ ಈಗ ರಾಜ್ಯದ ಆಯ್ದ ನಗರಗಳಲ್ಲಿ ಲಭ್ಯ.

  ಧಾರವಾಡ, ಮಂಗಳೂರು, ದಾವಣಗೆರೆ, ಬಾಗಲಕೋಟೆ ಸೇರಿದಂತೆ ರಾಜ್ಯದ ಕೆಲವು ಪ್ರಮುಖ ನಗರಗಳು ಈ ಬಗೆಯ ಕ್ರಾಷ್‌ ಕೋರ್ಸ್‌ಗಾಗಿಯೇ ಪ್ರಸಿದ್ಧಿ ಪಡೆದಿವೆ. ರಾಜ್ಯ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲ, ಹೊರ ದೇಶದಲ್ಲಿ ಓದುತ್ತಿರುವ ಹಾಗೂ ರಜೆಗಾಗಿ ಸ್ವದೇಶಕ್ಕೆ ಮರಳಿರುವ ವಿದ್ಯಾರ್ಥಿಗಳೂ ಇಂಥ ಕ್ರಾಷ್‌ ಕೋರ್ಸ್‌ನ ಲಾಭ ಪಡೆಯುತ್ತಿದ್ದಾರೆ.

ಕಲಿಸುವ ವಿಷಯಗಳು ಹಾಗೂ ಬಗೆ
ಕ್ರಾಷ್‌ ಕೋರ್ಸ್‌ನಲ್ಲಿ ಮುಖ್ಯವಾಗಿ ಕಬ್ಬಿಣದ ಕಡಲೆ ಎಂದೆನಿಸಿಕೊಂಡಿರುವ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ದಿನಕ್ಕೊಂದು ಪಾಠ, ವಾರಕ್ಕೊಂದು ಕಿರು ಪರೀಕ್ಷೆ, ಹೋಂ ವರ್ಕ್‌, ಪ್ರಾಜೆಕ್ಟ್‌ ಮುಂತಾದ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಈ ತರಗತಿಯಲ್ಲಿ ಆಯಾ ವಿಷಯಗಳ ಪಾಠಗಳ ಪರಿಚಯ ಮಾಡಿಕೊಡಲಾಗುತ್ತದೆ. ಆ ಪಾಠದ ಪ್ರಮುಖ ವಸ್ತು, ಗಮನ ನೀಡಬೇಕಾದ ವಿಷಯ, ಲೆಕ್ಕ ಬಿಡಿಸುವ ಸರಳ ತಂತ್ರ, ಉತ್ತರ, ಚಿತ್ರ ಹಾಗೂ ಗ್ರಾಫ್‌ಗಳನ್ನು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ನಿಖರವಾಗಿ ಬರೆಯವ ತಂತ್ರಗಾರಿಕೆ ಸೇರಿದಂತೆ ಹಲವು ವಿಷಯಗಳನ್ನು ನಿಗದಿತ ಅವಧಿಯಲ್ಲಿ ಕಲಿಸಲಾಗುತ್ತದೆ.

‘ಕಾಲ ಬದಲಾಗುತ್ತಿದೆ. ಶೇ 80ರಿಂದ 90 ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆಯೂ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಅಂಕ ಗಳಿಸುವ ತಂತ್ರಗಾರಿಕೆಯನ್ನು ತಮ್ಮ ಮಕ್ಕಳು ಕಲಿಯಲಿ ಎಂಬ ಬಯಕೆ ಪೋಷಕರದ್ದು. ಹೀಗಾಗಿ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಓದುವ ವಿದ್ಯಾರ್ಥಿಗಳನ್ನು ಇಂಥ ಕೋರ್ಸ್‌ಗಳಿಗೆ ಸೇರಿಸುತ್ತಾರೆ’ ಎಂದೆನ್ನುತ್ತಾರೆ ಧಾರವಾಡದ ಜೋಶಿ ಟ್ಯುಟೋರಿಯಲ್ಸ್‌ನ ವಿನಾಯಕ ಜೋಶಿ.

‘ಬೆಳಿಗ್ಗೆ 8ಕ್ಕೆ ತರಗತಿ ಆರಂಭವಾದರೆ ಮಧ್ಯಾಹ್ನ 2ರವರೆಗೂ ತರಗತಿ ನಡೆಯುತ್ತದೆ. ಮಧ್ಯಾಹ್ನದ ನಂತರ ಒಂದಷ್ಟು ವಿಶ್ರಾಂತಿ ಹಾಗೂ ಹೋಂ ವರ್ಕ್‌ ಮಾಡಲು ಸಮಯ ನೀಡಲಾಗುತ್ತದೆ. ಓದಿದ್ದನ್ನು  ಸಂಜೆ ಮತ್ತೊಮ್ಮೆ ಮನನ ಮಾಡಿಸುವ ತರಗತಿಗಳು ನಡೆಯುತ್ತವೆ’ ಎನ್ನುತ್ತಾರೆ.

‘ರಜೆಯ ಮೂಡ್‌ನಲ್ಲಿರುವ ವಿದ್ಯಾರ್ಥಿಗಳ ತಾಳ್ಮೆಯನ್ನು ಹೆಚ್ಚು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅವರನ್ನು ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ತಂತ್ರಗಾರಿಕೆ ಇದೆ. ಶೈಕ್ಷಣಿಕ ವಸ್ತುವಿರುವ ಸಿನಿಮಾ ತೋರಿಸಲಾಗುತ್ತದೆ. ಲಘು ಪ್ರವಾಸ ಏರ್ಪಡಿಸಲಾಗುತ್ತದೆ.

  ಮಕ್ಕಳಿಂದಲೇ ಕೆಲವೊಂದು ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ. ಉಳಿದಂತೆ ಅವರನ್ನು ಉತ್ತೇಜಿಸಲು ಪ್ರಶಂಸೆ ಹಾಗೂ ಉಡುಗೊರೆಗಳು ಸಾಮಾನ್ಯ.  50 ದಿನಗಳ ಕೋರ್ಸ್‌ ಮುಗಿಸಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಕರೆಯಿಸಿ, 10 ದಿನಗಳ ಉಚಿತ ತರಗತಿ ನಡೆಸಿ ವಿಷಯ ಕುರಿತು ಮತ್ತೊಮ್ಮೆ ಹೇಳಲಾಗುತ್ತದೆ’ ಎಂದು ಜೋಶಿ ಹೇಳಿದರು.

‘ವಸತಿ ಹಾಗೂ ಊಟೋಪಚಾರಗಳಲ್ಲೂ ಸಾಕಷ್ಟು ಮುತುವರ್ಜಿ ವಹಿಸಲಾಗುತ್ತದೆ. ಊರು, ಮನೆ ಬಿಟ್ಟು ಬರುವ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ವಹಿಸುವುದರ ಸಲುವಾಗಿ ಶುದ್ಧ ಕುಡಿಯುವ ನೀರು,  ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತದೆ. ಜತೆಗೆ ಅವರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ’ ಎಂದೆನ್ನುವುದು ಅವರ ಮಾತು.

ಇಂಥ ಕ್ರಾಷ್‌ ಕೋರ್ಸ್‌ ಕೇಂದ್ರಗಳು ಧಾರವಾಡ, ಮಂಗಳೂರು ಮುಂತಾದೆಡೆ ನೂರಾರು ಸಂಖ್ಯೆಯಲ್ಲಿವೆ. ಪ್ರತಿ ಕೇಂದ್ರದಲ್ಲೂ 200ರಿಂದ 500 ವಿದ್ಯಾರ್ಥಿಗಳು ಕಲಿಯುತ್ತಾರೆ. ಪ್ರತಿಯೊಬ್ಬರಿಗೂ ಒಂದೇ ಕಡೆ ಎಂದೇನೂ ಇಲ್ಲ. ಆಯಾ ಪಠ್ಯಕ್ರಮ ಹಾಗೂ ತರಗತಿಗಳಿಗೆ ಅನುಗುಣವಾಗಿ ನಗರದ ಬೇರೆ ಬೇರೆ ಕಡೆ ಕೊಠಡಿಗಳನ್ನು ಬಾಡಿಗೆಗೆ ಪಡೆದು ಪಾಠ ಹೇಳಿಕೊಡಲಾಗುತ್ತದೆ.

ಸರ್ಕಾರಿ ಶಿಕ್ಷಕರನ್ನು ಬಳಸಿಕೊಳ್ಳಲು ಆಕ್ಷೇಪ ಇರುವ ಕಾರಣ ಧಾರವಾಡದಲ್ಲಿ ಖಾಸಗಿ ಶಿಕ್ಷಕರು ಹಾಗೂ ಬಿಎಸ್ಸಿ ಮತ್ತು ಬಿಎಡ್‌ ಮಾಡಿ ನಿರುದ್ಯೋಗಿಗಳಾದವರಿಗೆ ಇಂಥ ಕ್ರಾಷ್‌ ಕೋರ್ಸ್‌ಗಳು ಉದ್ಯೋಗ ಕಲ್ಪಿಸಿವೆ. ಪ್ರತಿಭೆ ಇದ್ದರೆ ಮಾತ್ರ ಇಂಥ ಕೇಂದ್ರಗಳಲ್ಲಿ ನೌಕರಿ. ಏಕೆಂದರೆ ಕೋರ್ಸ್‌ನ ಕೊನೆಯಲ್ಲಿ ಶಿಕ್ಷಕರ ಕುರಿತು ವಿದ್ಯಾರ್ಥಿಗಳ ಫೀಡ್‌ ಬ್ಯಾಕ್ ಕೂಡಾ ಪಡೆಯಲಾಗುತ್ತದೆ. ಹೀಗಾಗಿ ಶಿಕ್ಷಕರಿಗೂ ವಿದ್ಯಾರ್ಥಿಗಳಿಗಿಂಥ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ.

ತರಗತಿ ಸೌಲಭ್ಯಗಳು
ಕಾಲ ಬದಲಾದಂತೆ ಕ್ರಾಷ್‌ಕೋರ್ಸ್‌ ತರಗತಿಗಳೂ ಬದಲಾಗಿವೆ. ಪ್ರೊಜೆಕ್ಟರ್‌, ಸ್ಪೀಕರ್‌, ಮ್ಯಾಗ್ನೆಟಿಕ್‌ ಹಾಗೂ ಡಸ್ಟ್‌ ಫ್ರೀ ಹಲಗೆ ಸೇರಿದೆ. ಇಷ್ಟು ಮಾತ್ರವಲ್ಲ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆಯೂ ಈಗ ಪಟ್ಟಿ ಸೇರಿದೆ.  ಕ್ರಾಶ್‌ ಕೋರ್ಸ್‌ನಿಂದಾಗಿ ಧಾರವಾಡ ನಗರ ಒಂದರಲ್ಲೇ ₹10 ಕೋಟಿ ವಹಿವಾಟು ನಡೆಯುತ್ತದೆ. ಅಂದರೆ ಇದು ತರಗತಿಯಿಂದ ಮಾತ್ರವಲ್ಲ, ಕೋರ್ಸ್‌ಗಳಿಗೆ ಪೂರಕವಾಗಿ ವಿದ್ಯಾರ್ಥಿಗಳು ತಂಗಲು ಬಾಡಿಗೆ ಮನೆ, ಅವರಿಗೆ ಮೆಸ್‌, ಪುಸ್ತಕಗಳು, ಅವರ ಇತರ ಖರೀದಿ ಸೇರಿದಂತೆ ಬಹಳಷ್ಟು ಜನರಿಗೆ ಉದ್ಯೋಗ ಹಾಗೂ ವ್ಯಾಪಾರ ಹೆಚ್ಚಾಗಿದೆ.

ಕ್ರಾಶ್‌ ಕೋರ್ಸ್‌ ಆರಂಭವಾಗಿದ್ದು 25 ವರ್ಷಗಳ ಹಿಂದೆ ಶ್ರೀನಿವಾಸ ದೇಶಪಾಂಡೆ ಅವರಿಂದ. ನಂತರ ಪೈ, ವಾಲ್ಟರ್‌, ದೇವರಾಜ್‌ ಮುಂತಾದವರಿಂದ ಹೊಸ ರೂಪ ಪಡೆದುಕೊಂಡಿತು. ಅಂದಿನಿಂದ ಇಂದಿನವರೆಗೂ ಧಾರವಾಡದಲ್ಲಿ ಕಲಿತ ಬೇರೆ ಕಡೆಯ ವಿದ್ಯಾರ್ಥಿಗಳು ಇದರ ಲಾಭ ಪಡೆದು ರ‍್ಯಾಂಕ್ ಕೂಡಾ ಪಡೆದದ್ದಾರೆ. ಆದರೆ ಧಾರವಾಡದವರು ಇದರ ಲಾಭ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಇಂಥ ಕೇಂದ್ರಗಳು ಆರಂಭವಾದ ನಂತರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರಾಶ್‌ ಕೋರ್ಸಗಳಿಗೆ ಹೋಗದಂತೆ ನೇರವಾಗಿ ಬೆದರಿಕೆ ಹಾಕಲಾಗುತ್ತಿದೆ. ಶಿಕ್ಷಕರ ಬಳಿ ಇರುವ 20 ಅಂಕಗಳಿಗಾಗಿ ಬಹಳಷ್ಟು ಪೋಷಕರು ಧಾರವಾಡದ ಕ್ರಾಶ್‌ ಕೋರ್ಸ್‌ನಿಂದ ದೂರ ಉಳಿದಿದ್ದಾರೆ. ಇಷ್ಟು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ’ ಎನ್ನುವುದು ಧಾರವಾಡದ ವಿನಾಯಕ ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT