ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಜರ ಆಸ್ತಿ ವಿವರವನ್ನೂ ಘೋಷಿಸಬೇಕೇ?

ಅಘೋಷಿತ ಆದಾಯದ ಕುರಿತು ಸಾರ್ವಜನಿಕರ ಗೊಂದಲ ನಿವಾರಿಸಿದ ಕಾರ್ಯಾಗಾರ
Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪೂರ್ವಜರ ಅಘೋಷಿತ ಆಸ್ತಿಯಿಂದ ಬಂದ ಪಾಲಿನ ವಿವರವನ್ನೂ ನೀಡಬೇಕೇ?’
–ಅಘೋಷಿತ ಆದಾಯವನ್ನು ತೆರಿಗೆ ವ್ಯಾಪ್ತಿಗೆ ತರುವ ವಿಷಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಕೇಳಿಬಂದ ಪ್ರಶ್ನೆ ಇದು.

‘ಪ್ರತಿ ವ್ಯಕ್ತಿಯೂ ಅಘೋಷಿತ ಆದಾಯದ ಪ್ರತಿಯೊಂದು ವಿವರವನ್ನೂ ನೀಡಲೇಬೇಕು. ಅಂತೆಯೇ ಪೂರ್ವಜರ ಅಘೋಷಿತ ಆಸ್ತಿಯಲ್ಲಿ ಬಂದ ಪಾಲಿನ ಮಾಹಿತಿಯನ್ನೂ ಕೊಡಬೇಕು. ಅದರ ಮೌಲ್ಯಕ್ಕೆ ಅನುಗುಣವಾಗಿ ತೆರಿಗೆ ಕಟ್ಟಬೇಕು’ ಎಂದು ಆದಾಯ ತೆರಿಗೆ ಸಹಾಯಕ ಆಯುಕ್ತ ವೆಂಕಟೇಶ್ವರ ರಾವ್‌ ಉತ್ತರಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಾಗೂ ಆದಾಯ ತೆರಿಗೆ ಇಲಾಖೆ ಜತೆಯಾಗಿ ಈ ಕಾರ್ಯಾಗಾರ ಏರ್ಪಡಿಸಿತ್ತು. ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ನಂಬಿರಾಜನ್‌, ಕಾಸಿಯಾ ಕಾರ್ಯದರ್ಶಿ ಬಿ.ಪ್ರವೀಣ್‌ ಹಾಜರಿದ್ದರು. ಅಘೋಷಿತ ಆದಾಯದ ಕುರಿತು ನಡೆದ ಸಂವಾದದ ಮಾಹಿತಿ ಪ್ರಶ್ನೋತ್ತರ ರೂಪದಲ್ಲಿ ಇಲ್ಲಿದೆ:

* ಅಘೋಷಿತ ಆದಾಯವನ್ನು ಯಾರೆಲ್ಲ ತೆರಿಗೆ ವ್ಯಾಪ್ತಿಗೆ ತರಬಹುದು?:
ಆದಾಯ ಘೋಷಣೆ ಯೋಜನೆ 2016ರ ಪ್ರಕಾರ, ಯಾವುದೇ ವ್ಯಕ್ತಿ, ಕಂಪೆನಿ, ಉದ್ದಿಮೆ, ಹಿಂದೂ ಅವಿಭಕ್ತ ಕುಟುಂಬ (ಎಚ್‌ಯುಎಫ್‌) ಅಘೋಷಿತ ಆದಾಯದ ಮಾಹಿತಿ ನೀಡಿ, ಅದನ್ನು ತೆರಿಗೆ ವ್ಯಾಪ್ತಿಗೆ ತರಬಹುದು.

* ಯೋಜನೆ ವ್ಯಾಪ್ತಿ ಎಷ್ಟು?:
2015–16ರ ಆರ್ಥಿಕ ವರ್ಷಕ್ಕಿಂತ ಮೊದಲಿನ ಯಾವುದೇ ಅಘೋಷಿತ ಆದಾಯ ಹಾಗೂ ಯಾವುದೇ ಅಘೋಷಿತ ಆಸ್ತಿಯಲ್ಲಿ ಮಾಡಿದ ಹೂಡಿಕೆ ಈ ಯೋಜನೆ ವ್ಯಾಪ್ತಿಗೆ ಬರುತ್ತದೆ.

* ಅಘೋಷಿತ ಆದಾಯವನ್ನು ತೆರಿಗೆ ವ್ಯಾಪ್ತಿಗೆ ತರುವಾಗ ಎಷ್ಟು ಪ್ರಮಾಣದ ತೆರಿಗೆ ಕಟ್ಟಬೇಕಾಗುತ್ತದೆ?:
ಒಟ್ಟು ಅಘೋಷಿತ ಆದಾಯದ ಮೇಲೆ ಶೇ 30ರಷ್ಟು ತೆರಿಗೆ, ಶೇ 7.5ರಷ್ಟು ಸರ್‌ಚಾರ್ಜ್‌ ಹಾಗೂ ಶೇ 7.5ರಷ್ಟು ದಂಡ ಸೇರಿದಂತೆ ಒಟ್ಟು ಶೇ 45ರಷ್ಟು ತೆರಿಗೆ ಭರಿಸಬೇಕಾಗುತ್ತದೆ. ಒಟ್ಟು ಅಘೋಷಿತ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ.

* ಅಘೋಷಿತ ಆದಾಯ ಘೋಷಣೆಯಿಂದ ಏನು ಪ್ರಯೋಜನ?:
ಘೋಷಿತ ಆದಾಯಕ್ಕೆ ಸಂಪತ್ತಿನ ತೆರಿಗೆಯಿಂದ ವಿನಾಯಿತಿ ಇದೆ. ಈ ಆದಾಯಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಶೀಲನೆ ಇಲ್ಲವೆ ವಿಚಾರಣೆ ನಡೆಸುವುದಿಲ್ಲ. ಬೇನಾಮಿ ವಹಿವಾಟು (ನಿರ್ಬಂಧ) ಕಾಯ್ದೆಯಿಂದ ಸಹ ವಿನಾಯಿತಿ ಇದೆ.

* ಅಘೋಷಿತ ಆದಾಯದ ಕುರಿತು ಮಾಹಿತಿ ನೀಡದಿದ್ದರೆ ಏನಾಗುತ್ತದೆ?: 
ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಕ್ಷಣದಲ್ಲಿ ದಾಳಿ ನಡೆಸಬಹುದು. ಆಗ ಅಂತಹ ಆದಾಯದ ಮೇಲೆ ಶೇ 100ರಿಂದ ಶೇ 300ರವರೆಗೆ ದಂಡ, ತೆರಿಗೆ ಹಾಗೂ ಬಡ್ಡಿ ವಸೂಲಿ ಮಾಡಲಾಗುತ್ತದೆ. ಜತೆಗೆ ಆದಾಯ ತೆರಿಗೆ ಕಾಯ್ದೆ ಪ್ರಕಾರ ವಿಚಾರಣೆಯನ್ನೂ ಎದುರಿಸಬೇಕಾಗುತ್ತದೆ.

* ಎಲ್ಲಿಯವರೆಗೆ ಅಘೋಷಿತ ಆದಾಯದ ಮಾಹಿತಿ ನೀಡಬಹುದು?:
ಪ್ರಸಕ್ತ ವರ್ಷದ ಸೆಪ್ಟೆಂಬರ್‌ 30ರವರೆಗೆ ಮಾಹಿತಿ ನೀಡಬಹುದು. ಅಘೋಷಿತ ಆದಾಯದ ಮೇಲಿನ ತೆರಿಗೆಯನ್ನು 2017ರ ಸೆಪ್ಟೆಂಬರ್‌ 30ರೊಳಗೆ ಮೂರು ಕಂತುಗಳಲ್ಲಿ ಪಾವತಿ ಮಾಡಬಹುದು. ಈ ಕಂತುಗಳ ಮೇಲೆ ಯಾವುದೇ ಬಡ್ಡಿ ಆಕರಿಸುವುದಿಲ್ಲ.

* ಘೋಷಣೆ ಯಾವಾಗ ಅಸಿಂಧುವಾಗುತ್ತದೆ?:
2017ರ ಸೆಪ್ಟೆಂಬರ್‌ 30ರೊಳಗೆ ಪೂರ್ತಿ ತೆರಿಗೆ ತುಂಬದಿದ್ದರೆ ಅಥವಾ ತಪ್ಪು ಮಾಹಿತಿ ನೀಡಿದ್ದರೆ ಇಲ್ಲವೆ ಅಘೋಷಿತ ಆದಾಯದ ಭಾಗಶಃ ವಿವರ ನೀಡಿದ್ದರೆ ಘೋಷಣೆ ಅಸಿಂಧುವಾಗುತ್ತದೆ.

* ಈ ಯೋಜನೆ ಸದ್ಯ ವಿಚಾರಣೆ ಎದುರಿಸುತ್ತಿರುವ ಪ್ರಕರಣಗಳಿಗೆ ಅನ್ವಯವಾಗುವುದೇ?:
ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 142 (1), 143 (2), 148, 153ಸಿ ಅನ್ವಯ ನೋಟಿಸ್‌ ಜಾರಿ ಮಾಡಲಾದ ಪ್ರಕರಣಗಳಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ. ಹಾಗೆಯೇ ದಾಳಿ ನಡೆದ ಇಲ್ಲವೆ ವಿಚಾರಣೆ ನಡೆಸಿದ ಪ್ರಕರಣಗಳು ಸಹ ಇದರ ವ್ಯಾಪ್ತಿಗೆ ಬರುವುದಿಲ್ಲ.

* ವಿದೇಶದಲ್ಲಿರುವ ಕಪ್ಪು ಹಣವನ್ನೂ ಘೋಷಣೆ ಮಾಡಬಹುದೇ?:
ಕಪ್ಪು ಹಣ ಕಾಯ್ದೆ 2015ರ ವ್ಯಾಪ್ತಿಗೆ ಬರುವ ಆದಾಯವನ್ನು ಈ ಯೋಜನೆ ಮೂಲಕ ಘೋಷಣೆ ಮಾಡುವಂತಿಲ್ಲ. ಭ್ರಷ್ಟಾಚಾರ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ ಆದಾಯವನ್ನೂ ಈ ಯೋಜನೆಯಲ್ಲಿ ಪರಿಗಣನೆ ಮಾಡುವುದಿಲ್ಲ.

* ಎಷ್ಟು ಫಾರ್ಮ್‌ಗಳನ್ನು ತುಂಬಬೇಕು?:
ಅಘೋಷಿತ ಆದಾಯ ಘೋಷಣೆಗೆ ಒಂದು (ಫಾರ್ಮ್‌–1), ತೆರಿಗೆ ಪಾವತಿಸಿದ್ದಕ್ಕೆ ಮತ್ತೊಂದು (ಫಾರ್ಮ್‌–3) ಭರ್ತಿ ಮಾಡಬೇಕು. ಅದಕ್ಕೆ ಪ್ರತಿಯಾಗಿ ಆದಾಯ ತೆರಿಗೆ ಇಲಾಖೆ ಸ್ವೀಕೃತಿಗೆ ಒಂದು (ಫಾರ್ಮ್‌–2) ಹಾಗೂ ಅಘೋಷಿತ ಆದಾಯ ತೆರಿಗೆ ವ್ಯಾಪ್ತಿಗೆ ಬಂದಿದ್ದನ್ನು ದೃಢೀಕರಿಸಲು ಮತ್ತೊಂದನ್ನು (ಫಾರ್ಮ್‌–4) ನೀಡುತ್ತದೆ. ಸಕ್ರಮ ಆದಾಯಕ್ಕೆ ಫಾರ್ಮ್‌–4 ಅಧಿಕೃತ ಪುರಾವೆ ಆಗಿರುತ್ತದೆ.

* ಹತ್ತು ವರ್ಷಗಳ ಹಿಂದೆ ಅಘೋಷಿತ ಆದಾಯದಿಂದ ಖರೀದಿಸಿದ ಆಸ್ತಿ ಮೌಲ್ಯವನ್ನು ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ?:
ಪ್ರಸಕ್ತ ಮಾರುಕಟ್ಟೆ ದರದ ಪ್ರಕಾರ ಆಸ್ತಿಯ ಮೌಲ್ಯವನ್ನು ನಿರ್ಧರಿಸಿ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಮಾರುಕಟ್ಟೆ ಮೌಲ್ಯ ನಿರ್ಧರಿಸಲು ಆದಾಯ ತೆರಿಗೆ ಇಲಾಖೆ ಮೌಲ್ಯಮಾಪಕರನ್ನು ಗುರುತಿಸಿದೆ. ಅವರ ಮೂಲಕ ಆಸ್ತಿಯ ಮೌಲ್ಯದ ಲೆಕ್ಕಾಚಾರ ಮಾಡಿಸಬೇಕಾಗುತ್ತದೆ.

* ಆದಾಯ ಘೋಷಿಸಿದ ಮೇಲೆ ದಾಳಿ ನಡೆಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?:
ಸರ್ಕಾರ ರೂಪಿಸಿದ ಕಾಯ್ದೆಯಲ್ಲೇ ಆದಾಯವನ್ನು ತೆರಿಗೆ ವ್ಯಾಪ್ತಿಗೆ ತರುವವರಿಗೆ ಎಲ್ಲ ರೀತಿಯ ರಕ್ಷಣೆ ಒದಗಿಸಲಾಗಿದೆ.

* ಆದಾಯದ ಘೋಷಣೆ ಮಾಡುವಾಗ ಅದರ ಮೂಲದ ಬಗೆಗೂ ಮಾಹಿತಿ ನೀಡಬೇಕೇ?:
ಹೌದು, ನೀಡಬೇಕು. ಆದರೆ, ಆ ಮಾಹಿತಿಯನ್ನು ಸರ್ಕಾರದ ಯಾವುದೇ ಇಲಾಖೆಯೊಂದಿಗೆ ಹಂಚಿಕೊಳ್ಳುವುದಿಲ್ಲ. ವಿಚಾರಣೆಯನ್ನೂ ನಡೆಸುವುದಿಲ್ಲ. ಭ್ರಷ್ಟಾಚಾರ ಇಲ್ಲವೆ ಐಪಿಸಿ ಸೆಕ್ಷನ್‌ ಪ್ರಕಾರ ನಿಷಿದ್ಧ ಮೂಲಗಳಿಂದ ಆ ಹಣ ಬಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲಷ್ಟೇ ಈ ಮಾಹಿತಿ ಪಡೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT