ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರಾ ಕ್ವಿಟೋವಾಗೆ ಸುಲಭ ಜಯ

ವಿಂಬಲ್ಡನ್‌ ಟೆನಿಸ್‌: ಎರಡನೇ ಸುತ್ತಿಗೆ ರೋಜರ್‌ ಫೆಡರರ್, ರಫೆಲ್‌ ನಡಾಲ್ ಪ್ರವೇಶ
Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಲಂಡನ್ (ಎಎಫ್‌ಪಿ):  ಹಾಲಿ ಚಾಂಪಿಯನ್ ಪೆಟ್ರಾ ಕ್ವಿಟೋವಾ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6–1, 6–0ಯಿಂದ ನೆದರ್‌ಲ್ಯಾಂಡ್‌ನ ಕಿಕಿ ಬರ್ಟೆನ್ಸ್ ಅವರನ್ನು ಕೇವಲ 35 ನಿಮಿಷಗಳಲ್ಲಿ ಸೋಲಿಸಿದರು. 

ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಮೊದಲ ಸೆಟ್‌ನಲ್ಲಿ ಮಾತ್ರ ಒಂದು ಪಾಯಿಂಟ್ ಕಳೆದುಕೊಂಡರು. ಉಳಿದಂತೆ  ಅವರದ್ದೇ ಪಾರುಪತ್ಯ ನಡೆಯಿತು.  ಎರಡು ಬಾರಿ ಚಾಂಪಿಯನ್ ಆಗಿದ್ದ ಪೆಟ್ರಾ  ಎದುರು 138ನೇ ಶ್ರೇಯಾಂಕದ ಕಿಕಿ ಬರ್ಟೆನ್ಸ್ ಆಟ ನಡೆಯಲಿಲ್ಲ.

ಫೆಡರರ್, ನಡಾಲ್ ಮುನ್ನಡೆ: ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್  ಅವರು ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ 6–1, 6–3, 6–3 ಸೆಟ್‌ಗಳಿಂದ ಬೋಸ್ನಿಯಾದ ಡಾಮಿರ್ ಜುಮುರ್ ಅವರನ್ನು ಮಣಿಸಿದರು.

ಏಳು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಫೆಡರರ್‌  ಕರಾರುವಾಕ್ ಆಟದ ಮುಂದೆ ಬೋಸ್ನಿಯಾ ಆಟಗಾರ ಪಾಯಿಂಟ್ ಗಳಿಸಲು ಹರಸಾಹಸ ಪಡಬೇಕಾಯಿತು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಸೋಲೊಪ್ಪಿದ ಅವರು, ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಸ್ವಲ್ಪಮಟ್ಟಿನ ಪ್ರತಿರೋಧ ಒಡ್ಡಿದರು. 

ಪದಾರ್ಪಣೆ ಪಂದ್ಯದಲ್ಲಿ ಜುಮುರ್ ಕೆಲವು ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಬ್ಯಾಕ್‌ಹ್ಯಾಂಡ್ ಆಟದ ಅವರ ಶೈಲಿ ನೋಡುಗರ ಮೆಚ್ಚುಗೆ ಗಳಿಸಿತು. ಆದರೆ, ಎಂಟನೇ ಬಾರಿ ಚಾಂಪಿಯನ್ ಆಗುವ ಗುರಿ ಹೊಂದಿರುವ ರೋಜರ್  ಅವರನ್ನು ಮಣಿಸಲು ಸಾಧ್ಯವಾಗಲಿಲ್ಲ.

‘ಜುಮರ್ ತಮ್ಮ ಆಟದ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುತ್ತ ಆಡಿದರು. ಆದ್ದರಿಂದ ಜಯದ ಹಾದಿ ಸ್ವಲ್ಪ ಕಠಿಣವಾಗಿತ್ತು. ಈ ರೀತಿಯ ಸವಾಲು ಎದುರಿಸಿ ಗೆಲ್ಲುವುದು ನನಗೆ ಖುಷಿ ಕೊಡುತ್ತದೆ’ ಎಂದು 33 ವರ್ಷದ ಫೆಡರರ್ ಹೇಳಿದರು. ಇನ್ನೊಂದು ಪಂದ್ಯದಲ್ಲಿ ಸ್ಪೇನ್ ಆಟಗಾರ ರಫೆಲ್ ನಡಾಲ್ 6–4, 6–2, 6–4ರಿಂದ ಬ್ರೆಜಿಲ್‌ನ ಥಾಮಸ್ ಬೆಲ್ಲೂಸಿ ವಿರುದ್ಧ  ಜಯಗಳಿಸಿದರು.  

ಹತ್ತನೇ ಶ್ರೇಯಾಂಕದ ನಡಾಲ್ ಬ್ರೆಜಿಲ್ ಆಟಗಾರ ಥಾಮಸ್ ಅವರನ್ನು ಒಟ್ಟು ಐದು ಪಂದ್ಯಗಳಲ್ಲಿ ಸೋಲಿಸಿದ ಸಾಧನೆ ಮಾಡಿದರು.
ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಜೊ ವಿಲ್‌ಫ್ರೆಡ್ ಸೋಂಗಾ 7–6 (10),  6–7 (7) , 3–6, 6–2 ಸೆಟ್‌ಗಳಿಂದ  ಗಿಲಿಸ್ ಮುಲ್ಲರ್ ಅವರನ್ನು ಮಣಿಸಿದರು.

32 ವರ್ಷದ ಮುಲ್ಲರ್ ಅನುಭವಿ ಸೊಂಗಾಗೆ ಕಠಿಣ ಸ್ಪರ್ಧೆ ಒಡ್ಡಿದರು.  ಎಲ್ಲ ಸವಾಲುಗಳಿಗೂ ದಿಟ್ಟ ಉತ್ತರ ನೀಡಿದ ಸೋಂಗಾ ಎರಡನೇ ಸುತ್ತಿಗೆ ಮುನ್ನಡೆದರು. ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಡಸ್ಟಿನ್ ಬ್ರೌನ್ 3–6, 6–3, 7–5, 6–4ರಿಂದ ತೈವಾನ್‌ನ ಲು ಯೆನ್ ಸುನ್ ವಿರುದ್ಧ ಪ್ರಯಾಸದ ಜಯ ದಾಖಲಿಸಿದರು. ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಗೆದ್ದ ತೈವಾನ್ ಆಟಗಾರ ಎರಡನೇ ಸೆಟ್‌ನಲ್ಲಿ ಹೆಚ್ಚು ಪ್ರತಿರೋಧ ಒಡ್ಡಲಿಲ್ಲ. ಆದರೆ, ಮೂರನೇ ಸೆಟ್‌ನಲ್ಲಿ ನೀಡಿದ ಸ್ಪರ್ಧೆಯನ್ನು ಬ್ರೌನ್ ಮೀರಿ ನಿಂತರು.

ಗರಿಷ್ಠ ತಾಪಮಾನ: ಲಂಡನ್‌ನಲ್ಲಿ ಬುಧವಾರ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಯ ಪ್ರಕಾರ 35 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಇರಲಿದೆ. ಇದರಿಂದಾಗ ವಿಂಬಲ್ಡನ್‌ ಪಂದ್ಯಗಳಲ್ಲಿ ಎರಡು ಮತ್ತು ಮೂರನೇ ಸೆಟ್‌ಗಳ ನಡುವೆ 10 ನಿಮಿಷಗಳ ವಿಶ್ರಾಂತಿ ನೀಡಲಾಗುವುದು.  ನಿಯಮದ ಪ್ರಕಾರ 30.1 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ತಾಪಮಾನ ಇದ್ದಾಗ ಹತ್ತು ನಿಮಿಷಗಳ ವಿರಾಮ ನೀಡಲಾಗುತ್ತದೆ. 1976ರಲ್ಲಿ ವಿಂಬಲ್ಡನ್ ನಡೆದ ಸಂದರ್ಭದಲ್ಲಿ ಇದ್ದ 34 ಡಿಗ್ರಿ ಸೆಲ್ಸಿಯಲ್ ತಾಪಮಾನವು ಇದುವರೆಗಿನ  ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT