ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದ ದೌರ್ಜನ್ಯ: ಮಹಿಳೆ ದೂರು

ಮನೆಹಕ್ಕು ಪತ್ರ ಪಡೆಯಲು ಸಿ.ಎಂ ಗೃಹಕಚೇರಿಗೆ ತೆರಳಿದ್ದ ಮಹಿಳೆ * ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೈಗ್ರೌಂಡ್‌ ಪೊಲೀಸ್‌ ಠಾಣೆಯ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು, ನೀನು ಕುಮಾರಣ್ಣನ ಬಳಿಗೆ ಹೋಗು, ಅವರು ಸಹಾಯ ಮಾಡುತ್ತಾರೆ ಅಂದ್ರು. ಹೀಗಾಗಿ ನಾನು ಕುಮಾರಣ್ಣನ ಬಳಿಗೆ ಹೋಗಿ ನನಗಾದ ನೋವು ಹೇಳಿಕೊಂಡೆ...’

–‘ಇದೇ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿದ ಸಂದರ್ಭದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದೆ’ ಎಂದು ಆರೋಪಿಸಿರುವ ದಲಿತ ಮಹಿಳೆ ಸುನೀತಾ ಹೀಗೆ ಹೇಳಿ ಕಣ್ಣೀರಿಟ್ಟರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸುನಿತಾ ಮಾತನಾಡಿ, ‘ಮಾಗಡಿ ರಸ್ತೆಯ ಪೈಪ್‌ಲೈನ್‌ ಬಳಿ ಕಟ್ಟಿಸಿರುವ ಮನೆಯ ಹಕ್ಕುಪತ್ರ ಪಡೆಯಲು ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಅಂಬರೀಷ್‌  ಅವರನ್ನು ಭೇಟಿಯಾಗಿದ್ದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಪತಿ ಮತ್ತು ಇಬ್ಬರ ಮಕ್ಕಳ ಜೊತೆ ಮುಖ್ಯಮಂತ್ರಿ ಅವರ ಬಳಿ ನೋವು ಹೇಳಿಕೊಳ್ಳಲು ಹೋಗಿದ್ದೆ. ನಾನು ಮುಖ್ಯಮಂತ್ರಿಯನ್ನು ಭೇಟಿಯಾಗಿಯೇ ಬರುತ್ತೇನೆ ಎಂದು ಮಕ್ಕಳನ್ನು ಸಂಜೆ 6 ಗಂಟೆಗೆ ಪತಿಯ ಜೊತೆ ಮನೆಗೆ ಕಳುಹಿಸಿದೆ’.

‘ಮುಖ್ಯಮಂತ್ರಿ ಅವರನ್ನು ಭೇಟಿಯಾಗಲೇಬೇಕು ಎಂದು ಹಟ ಹಿಡಿದು ಅವರ ಗೃಹ ಕಚೇರಿ ಎದುರು ಕಾದುಕುಳಿತೆ. ಆದರೆ, ಅಲ್ಲಿನ ಸಿಬ್ಬಂದಿ ಸೂಚನೆಯಂತೆ ರಾತ್ರಿ 9 ಗಂಟೆಗೆ ಹೊಯ್ಸಳ ವಾಹನದಲ್ಲಿ ಬಂದ ಪೊಲೀಸರು ನನ್ನನ್ನು ಹೈಗ್ರೌಂಡ್‌ ಠಾಣೆಗೆ ಕರೆದೊಯ್ದರು....’

‘ಪೊಲೀಸರು ನನ್ನ ಜೊತೆ ತುಂಬಾ ಕೆಟ್ಟದಾಗಿ ನಡೆದುಕೊಂಡರು. ಕಚಡಾಗಳು ಎಂದು ಹೀಯಾಳಿಸಿದರು. ಇಂಥವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಬೇಕು ಎಂದು ಅವಾಚ್ಯವಾಗಿ ನಿಂದಿಸಿದರು. ಅಂತಹ ಕೆಲಸ ಮಾಡುವುದಾದರೆ ಸಿ.ಎಂ. ಕಚೇರಿಗೆ ಹೋಗಬೇಕಿತ್ತಾ?’ ಎಂದು ಸುನೀತಾ ಕಣ್ಣೀರಿಟ್ಟರು.

‘ಪೊಲೀಸರು ನನ್ನನ್ನು ಹೊಸೂರು ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯಕ್ಕೆ ಕರೆದೊಯ್ದರು. ರಾತ್ರಿ ಇಡೀ ನಾನು ನಿದ್ದೆ ಮಾಡಲಿಲ್ಲ. ನಾನು ಅಂದು ಸಂಜೆ 6.30ಕ್ಕೆ ಕುಮಾರಕೃಪಾ ರಸ್ತೆಯಲ್ಲಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದೆ ಎಂದು ಮಹಿಳಾ ನಿಲಯಕ್ಕೆ ಹೈಗ್ರೌಂಡ್‌ ಠಾಣೆಯ ಅಧಿಕಾರಿ ಬರೆದ ಪತ್ರವನ್ನು ಸೀರೆಯ ಸೆರಗಿನಲ್ಲಿ ಅಡಗಿಸಿಟ್ಟು ಹೊರಗೆ ತಂದಿದ್ದೆ. ಈ ಪತ್ರ ನಾನು ಕದ್ದು ಇಟ್ಟುಕೊಂಡಿದ್ದೇನೆ ಎಂಬ ಸಂದೇಹದಿಂದ ನನ್ನ ಮೇಲೆ ದೌರ್ಜನ್ಯ ಎಸಗಿದರು. ಎಲ್ಲವನ್ನೂ ಸಹಿಸಿಕೊಂಡೆ...’

‘ಮರುದಿನ ಬೆಳಿಗ್ಗೆ ಪತಿ ಮುತ್ತುರಾಜ್ ಅವರನ್ನು ಕರೆಸಿಕೊಂಡು ಅವರ ಜೊತೆ ನನ್ನನ್ನು ಕಳುಹಿಸಿಕೊಟ್ಟರು. ಪತಿ ಆಟೋ ಬಾಡಿಗೆಗೆ  ಓಡಿಸುತ್ತಿದ್ದಾರೆ. ಆಟೊ ಮಾಲೀಕರಿಗೆ ಕರೆ ಮಾಡಿದ ಪೊಲೀಸರು ಇನ್ನು ಮುಂದೆ ಪತಿಗೆ ಆಟೊ ನೀಡದಂತೆ ಸೂಚಿಸಿದರು..’ ಎಂದೂ ಆಕೆ ಹೇಳಿದರು.

‘ಮನೆಯ ಬಳಿ ಇರುವ ಬೇಕರಿಯೊಂದನ್ನು ₹ 5 ಲಕ್ಷಕ್ಕೆ ಖರೀದಿಸಬೇಕು ಎಂದು ಖಾಸಗಿ ವ್ಯಕ್ತಿಯೊಬ್ಬರಲ್ಲಿ ಸಾಲ ಕೇಳಿದ್ದೆ. ಮನೆಯ ಹಕ್ಕುಪತ್ರ ಅಡವಿಟ್ಟರೆ ಹಣ ಕೊಡುವುದಾಗಿ ಅವರು ಒಪ್ಪಿದ್ದರು. ಆದರೆ ಹೈಗ್ರೌಂಡ್‌ ಪೊಲೀಸರು ನನ್ನ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಸುದ್ದಿವಾಹಿನಿಗಳಲ್ಲಿ ಬಂದ ವರದಿ ನೋಡಿ ಆ ವ್ಯಕ್ತಿ, ಸಾಲ ಕೊಟ್ಟ ಬಳಿಕ ಹಣ ಮರಳಿ ವಸೂಲು ಮಾಡಲು ನಾನು ಪರಪ್ಪನ ಅಗ್ರಹಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದರು...’ ಎಂದು ದುಃಖಿಸಿದರು.

ಮುಖ್ಯಮಂತ್ರಿಗೆ ಕುಮಾರಸ್ವಾಮಿ ಗಡುವು: ‘ನೊಂದ ದಲಿತ ಮಹಿಳೆ ಸುನೀತಾ ಅವರಿಗೆ ಮೂರು ದಿನಗಳ ಒಳಗಾಗಿ ನ್ಯಾಯ ದೊರಕಿಸಿಕೊಡದಿದ್ದರೆ ಮುಖ್ಯಮಂತ್ರಿಗಳ ಗೃಹ ಕಚೇರಿಯ ಮುಂಭಾಗದಲ್ಲಿ  ಮಹಿಳೆ ಮತ್ತು ಪಕ್ಷದ ಕಾರ್ಯಕರ್ತರ ಜೊತೆ ಧರಣಿ ಕುಳಿತುಕೊಳ್ಳುತ್ತೇನೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

‘ಸುನೀತಾ ಜೊತೆ ಅನಾಗರಿಕವಾಗಿ ವರ್ತಿಸಿದ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬೇಕು. ತಪ್ಪು ಮಾಡಿದವರ ವಿರುದ್ಧ 48 ಗಂಟೆಯ ಒಳಗಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಆಕೆಗೆ ಅಂಬೇಡ್ಕರ್‌ ನಿಗಮದಿಂದ ಬಡ್ಡಿರಹಿತವಾಗಿ ₹ 5 ಲಕ್ಷ ಸಾಲ ಕೊಡಬೇಕು. ಸಾಲ ಕೊಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ನಾನೇ ಸಾಲ ಕೊಡುತ್ತೇನೆ’ ಎಂದೂ ಅವರು ಹೇಳಿದರು.

‘ಹಕ್ಕುಪತ್ರ ಕೊಡದಿದ್ದರೆ ವಿಷ ಕುಡಿಯುತ್ತೇನೆ ಅಂದಿದ್ರು. ಅದಕ್ಕಾಗಿ ಅವರನ್ನು ಬಂಧಿಸಿ ಮಹಿಳಾ ನಿಲಯದಲ್ಲಿ ಇರಿಸಿದ್ದೆವು. ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ. ನಮ್ಮ ಬಳಿ ವಿಡಿಯೋ ಸಾಕ್ಷಿ ಇದೆ’ ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಹೇಳಿದ್ದಾರೆ.

‘ಮೇಘರಿಕ್‌ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ವಿಡಿಯೊ ಇದ್ದರೆ ಬಿಡುಗಡೆ ಮಾಡಲಿ’ ಎಂದೂ ಕುಮಾರಸ್ವಾಮಿ ಸವಾಲು ಹಾಕಿದರು.

ಮುತ್ತುರಾಜ್‌ಗೆ ಆಟೊ ರಿಕ್ಷಾ
ಸುನೀತಾ ಅವರ ಪತಿ ಮುತ್ತುರಾಜ್ ಅವರಿಗೆ ಆಟೊ ರಿಕ್ಷಾ ಕೊಡಿಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

‘ಕುಮಾರಸ್ವಾಮಿ ಆರೋಪ ರಾಜಕೀಯ ಪ್ರೇರಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ದೇವೇಗೌಡ, ‘ದಲಿತ ಮಹಿಳೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ. ಸುನೀತಾ ಮಾಡಿರುವ ಆರೋಪಗಳನ್ನು ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

‘ಸ್ವಾಭಿಮಾನದಿಂದ ಬದುಕಬೇಕು ಎಂಬ ಕನಸು ಸುನೀತಾರಲ್ಲಿದೆ. ಆದರೆ ಅವರ ಪತಿ ಮುತ್ತುರಾಜ್ ಅವರಿಗೆ ಬಾಡಿಗೆ ಆಟೊ ರಿಕ್ಷಾ ಕೂಡ ಸಿಗುತ್ತಿಲ್ಲ. ಹಾಗಾಗಿ, ನಾನೇ ಅವರಿಗೆ ಒಂದು ರಿಕ್ಷಾ ಕೊಡಿಸುವೆ’ ಎಂದು ದೇವೇಗೌಡ ತಿಳಿಸಿದರು.

‘ವಿವಸ್ತ್ರಗೊಳಿಸಿಲ್ಲ’
ಮೇ 17ರಂದು ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಬಂದಿದ್ದ ದಲಿತ ಮಹಿಳೆಯನ್ನು ಪೊಲೀಸರು ಎಳೆದೊಯ್ದು ವಿವಸ್ತ್ರಗೊಳಿಸಿ, ಹೆದರಿಸಿದ್ದರು ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಮುಖ್ಯಮಂತ್ರಿಯನ್ನು ಕಾಣಬೇಕು ಎಂದು ಮಹಿಳೆ ಪಟ್ಟು ಹಿಡಿದಿದ್ದಳು. ಮರುದಿನ ಬೆಳಿಗ್ಗೆ 9ಕ್ಕೆ ಬರುವಂತೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ತಿಳಿಸಿದ್ದರು.
ಆದರೆ ಅದಕ್ಕೆ ಒಪ್ಪದ ಮಹಿಳೆ ಸ್ಥಳದಲ್ಲಿ ಗಲಾಟೆ ಮಾಡಲು ಆರಂಭಿಸಿದಾಗ ಹೈಗ್ರೌಂಡ್‌ ಠಾಣೆ ಪೊಲೀಸರು ಕರೆದೊಯ್ದು, ರಿಮ್ಯಾಂಡ್‌ ರೂಂ ಗೆ ಕಳುಹಿಸಿದ್ದರು ಎಂದು ವಿವರಿಸಿದರು.

ಜೂನ್‌ 4ರಂದು ಪೊಲೀಸರ ಪ್ರತಿಭಟನೆ ಕುರಿತು ಪ್ರಶ್ನಿಸಿದಾಗ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಹೇಳಿದರು.

‘ಕುಮಾರಸ್ವಾಮಿ ರಾಜಕೀಯ’
‘ದಲಿತ ಮಹಿಳೆ ಸವಿತಾ ವಿಷಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರಿದರು.

ಮಂಗಳವಾರ ನಗರ ಸಂಚಾರ ಮುಗಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸವಿತಾ ಅವರನ್ನು ನಾನು ಭೇಟಿಯಾಗಿಲ್ಲ. ಆದರೆ, ಅವರು ಹಲವು ಬಾರಿ ಗೃಹ ಕಚೇರಿ ಕೃಷ್ಣಾ ಬಳಿ ಬಂದು ಗಲಾಟೆ ಮಾಡಿದ್ದರಂತೆ. ಅವರನ್ನು ವಶಕ್ಕೆ ಪಡೆದ ಪೊಲೀಸರು ಮಹಿಳಾ ನಿಲಯದಲ್ಲಿ ಇರಿಸಿದ್ದರು’ ಎಂದು ಅವರು ಸ್ಪಷ್ಟಪಡಿಸಿದರು.

‘ಆ ಮಹಿಳೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ. ಹಕ್ಕುಪತ್ರವನ್ನೂ ಕೊಡಿಸುತ್ತೇನೆ. ಆದರೆ,  ಈ ವಿಷಯದಲ್ಲಿ ಕುಮಾರಸ್ವಾಮಿ ಅವರು ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು’ ಎಂದರು.

ಸವಿತಾ ಅವರ ಮೇಲೆ ಹಲ್ಲೆ ನಡೆಸಿಲ್ಲ: ‘ಮಾಗಡಿ ಮೂಲದ ಸವಿತಾ ಎಂಬ ಮಹಿಳೆ ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾ ಬಳಿ ಬಂದು ವಿಷ ಕುಡಿಯುವುದಾಗಿ ಬೆದರಿಕೆ ಹಾಕುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಭದ್ರತಾ ಸಿಬ್ಬಂದಿ ಸವಿತಾ ಅವರನ್ನು ವಶಕ್ಕೆ ಪಡೆದರು’ ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌.ಮೇಘರಿಕ್‌ ತಿಳಿಸಿದರು.

‘ಪೊಲೀಸರು ಸವಿತಾ ಅವರ ಮೇಲೆ ಹಲ್ಲೆ ನಡೆಸಿಲ್ಲ, ಕಿರುಕುಳವೂ ನೀಡಿಲ್ಲ. ಈ ಬಗ್ಗೆ ವಿಡಿಯೊ ಸಹ ಲಭ್ಯವಿದೆ. ಕುಮಾರಸ್ವಾಮಿ ಆರೋಪ ಸತ್ಯಕ್ಕೆ ದೂರವಾದದ್ದು. ಆದರೂ, ಈ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT