ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಬೇಡಿಕೆಗಳಿಗೆ ಅಸ್ತ್ರವಾದ ‘ಆತ್ಮಹತ್ಯೆ’!

ಸಿಬ್ಬಂದಿಯಿಂದ ಸಂದೇಶ ಬಂದರೆ ಬೆಚ್ಚಿಬೀಳುವ ಅಧಿಕಾರಿಗಳು
Last Updated 21 ಜುಲೈ 2016, 2:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಡಿವೈಎಸ್ಪಿಗಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ, ಕೆಲ ಪೊಲೀಸರು ‘ನಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಹಿರಿಯ ಅಧಿಕಾರಿಗಳನ್ನು ಬೆದರಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಎಸ್‌ಐ ರೂಪಾ ತೆಂಬದ ಅವರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಸಂಜೀವ್‌ಗೌಡ ಸಹ ಇದೇ ದಾರಿ ಅನುಸರಿಸಿದ್ದಾರೆ.

‘ನನ್ನನ್ನು ಅಮಾನತು ಮಾಡಿದ್ದರಿಂದ ಪತ್ನಿ ಖಿನ್ನತೆಗೆ ಒಳಗಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸುತ್ತಿದ್ದಾಳೆ. ದಯವಿಟ್ಟು ಅಮಾನತು ಆದೇಶ ಹಿಂಪಡೆಯಬೇಕು’ ಎಂದು ಕಮಿಷನರ್ ಎನ್‌.ಎಸ್‌.ಮೇಘರಿಕ್ ಬಳಿ ಸಂಜೀವ್‌ಗೌಡ ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಕಳೆದ ತಿಂಗಳು ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಹರ್ಷ ಎಂಬಾತನ ಕೊಲೆಯಾಯಿತು. ಅದಾದ 15 ದಿನಗಳಲ್ಲೇ ‘ಕಾಫಿ ಡೇ’ಯಲ್ಲಿ ರೌಡಿ ಮಹೇಶ್‌ನ ಹತ್ಯೆಯಾಯಿತು. ಸಚಿವ ಸ್ಥಾನ ಸಿಗಲಿಲ್ಲವೆಂದು ಶಾಸಕ ಎಂ.ಕೃಷ್ಣಪ್ಪ ಬೆಂಬಲಿಗರು ದಾಂದಲೆ ನಡೆಸಿದರು.

ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಈ ಎಲ್ಲ ಘಟನೆಗಳನ್ನು ತಡೆಯುವ ಸಾಧ್ಯತೆ ಇತ್ತು. ಈ ವಿಚಾರದಲ್ಲಿ ಇನ್‌ಸ್ಪೆಕ್ಟರ್ ಸಂಜೀವ್‌ಗೌಡ ನಿರ್ಲಕ್ಷ್ಯ ತೋರಿದ್ದರಿಂದ ಅಮಾನತು ಮಾಡಲಾಗಿತ್ತು. ಈಗ ಮಾನವೀಯತೆ ದೃಷ್ಟಿಯಿಂದ ಅಮಾನತು ಆದೇಶ ಹಿಂಪಡೆಯಲಾಗಿದೆ’ ಎಂದು ಮೇಘರಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಮಿಷನರ್ ಆಕ್ಷೇಪ: ಸಂಜೀವ್‌ಗೌಡ ಅವರನ್ನು ಪುನಃ ವಿಜಯನಗರ ಠಾಣೆಗೇ ನಿಯೋಜಿಸುವುದು ಬೇಡ. ಬದಲಾಗಿ ಎಕ್ಸಿಕ್ಯುಟಿವ್ ಅಲ್ಲದ ಹುದ್ದೆಗೆ ವರ್ಗ ಮಾಡುವಂತೆ ಕಮಿಷನರ್‌ ಅವರು ಗೃಹ ಇಲಾಖೆಗೆ ಸಲಹೆ ನೀಡಿದ್ದರು.

ಆದರೆ, ಕೆಲವರ ಪ್ರಭಾವ ಬಳಸಿ ಸಂಜೀವ್‌ಗೌಡ ಅವರು ಜುಲೈ 15ರಂದು ವಾಪಸ್ ಅದೇ ಠಾಣೆಗೆ ಬಂದಿದ್ದರು. ಈ ಬೆಳವಣಿಗೆ ಬಗ್ಗೆ ಕಮಿಷನರ್ ತಮ್ಮ ಆಪ್ತ ವಲಯದಲ್ಲಿ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ಡಿಜಿಪಿಗೂ ಬೆದರಿಕೆ!: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡಿಜಿಪಿ ಓಂಪ್ರಕಾಶ್ ಅವರನ್ನು ಬೆದರಿಸಿ ಕಾನ್‌ಸ್ಟೆಬಲ್‌ವೊಬ್ಬರು, ದಾವಣಗೆರೆಗೆ ವರ್ಗಾವಣೆ ಮಾಡಿಸಿಕೊಂಡ ಪ್ರಸಂಗ ಸೋಮವಾರ ನಡೆದಿದೆ.

ಎಂಟು ವರ್ಷಗಳಿಂದ ರಾಜಗೋಪಾಲನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆ ಕಾನ್‌ಸ್ಟೆಬಲ್, ದಾವಣಗೆರೆಗೆ ವರ್ಗಾವಣೆ ಕೋರಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅವರನ್ನು 15 ದಿನಗಳ ಹಿಂದೆ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಸೋಮವಾರ ಡಿಜಿಪಿ ಕಚೇರಿಗೆ ತೆರಳಿದ ಆ ಕಾನ್‌ಸ್ಟೆಬಲ್, ‘ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದೇನೆ. ಈಗ ನನ್ನ ಹುಟ್ಟೂರಿಗೆ  ಹೋಗಲು ಬಯಸುತ್ತಿದ್ದೇನೆ. ಈ ಬಗ್ಗೆ ಹಲವು ತಿಂಗಳುಗಳಿಂದ ಮನವಿ ಮಾಡುತ್ತಿದ್ದರೂ, ನನ್ನನ್ನು ಮತ್ತೆ ಇಲ್ಲೇ ಉಳಿಸಿಕೊಳ್ಳಲಾಗಿದೆ’ ಎಂದು ಅಳಲು ತೋಡಿಕೊಂಡಿದ್ದರು.

ಆಗ ಡಿಜಿಪಿ ಅವರು, ‘ಸ್ವಲ್ಪ ದಿನ ಇಲ್ಲೇ ಕೆಲಸ ಮಾಡಿ. ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡುತ್ತೇವೆ’ ಎಂದಿದ್ದರು. ಅವರ ಮಾತನ್ನು ಒಪ್ಪದ ಕಾನ್‌ಸ್ಟೆಬಲ್, ‘ನನಗೆ ವರ್ಗಾವಣೆ ಕೊಡಿ. ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿ ಕೊಳ್ಳುತ್ತೇನೆ’ ಎಂದು ಬೆದರಿಸಿದ್ದರು. ಹೀಗೆ ಹೇಳಿದ ಅರ್ಧ ತಾಸಿನಲ್ಲೇ, ದಾವಣಗೆರೆಗೆ ವರ್ಗ ಮಾಡಿರುವ ಆದೇಶ ಕಾನ್‌ಸ್ಟೆಬಲ್ ಅವರ ಕೈಸೇರಿದೆ.

ಬೇರೆ ಠಾಣೆಗೆ ಹೋಗಲ್ಲ: ಕಚೇರಿ ಕೆಲಸದ ನಿಮಿತ್ತ ಬೇರೆ ಠಾಣೆಗೆ ಹೋಗುವಂತೆ ಹೇಳಿದ್ದಕ್ಕೆ ಜಯನಗರ ಠಾಣೆ ಕಾನ್‌ಸ್ಟೆಬಲ್ ಶ್ರೀನಿವಾಸ್ ಎಂಬುವರು, ‘ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಜುಲೈ 7ರಂದು ವಾಟ್ಸ್‌ ಆ್ಯಪ್ ಸಂದೇಶ ಕಳುಹಿಸಿ ಹಿರಿಯ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದ್ದರು.

ಶ್ರೀನಿವಾಸ್ ಅವರನ್ನು ಸಿದ್ದಾಪುರ ಠಾಣೆಗೆ ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಅದಕ್ಕೆ ಒಪ್ಪದ ಅವರು, ತನ್ನನ್ನು ಬೇರೆ ಠಾಣೆಗೆ ಕಳುಹಿಸಬೇಡಿ ಎಂದು ಮನವಿ ಮಾಡಿದ್ದರು. ಕೊನೆಗೆ, ‘ಇನ್‌ಸ್ಟೆಕ್ಟರ್‌ಗಳಾದ ರಾಜೇಶ್ ಕೋಟ್ಯಾನ್, ರಾಘವೇಂದ್ರ ಹಾಗೂ ಎಸಿಪಿ ಕಾಂತರಾಜ್ ಅವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಂದೇಶ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಇದರಿಂದ ಗಾಬರಿಗೊಂಡ ಅಧಿಕಾರಿಗಳು, ಸಂಬಂಧಿಕರನ್ನು ಸಂಪರ್ಕಿಸಿ ಕನಕಪುರದಲ್ಲಿ ಶ್ರೀನಿವಾಸ್ ಅವರನ್ನು ಪತ್ತೆ ಮಾಡಿದ್ದರು. ನಂತರ ಕೌನ್ಸೆಲಿಂಗ್ ಮಾಡಿಸಿ, ಅವರ ಮಾತಿನಂತೆ ಅದೇ ಠಾಣೆಯಲ್ಲೇ ಉಳಿಸಿಕೊಂಡಿದ್ದರು.

ಮಹಿಳಾ ಎಸ್‌ಐ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು: ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಎಸ್‌ಐ ರೂಪಾ ತಂಬದ (34) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ‘ರೂಪಾ ಅವರ ರಕ್ತದೊತ್ತಡ ಹಾಗೂ ದೇಹದಲ್ಲಿನ ಸಕ್ಕರೆ ಪ್ರಮಾಣ ಸಹಜ ಸ್ಥಿತಿಯಲ್ಲಿದೆ. ಆದರೆ, ಹೆಚ್ಚು ಮಾತ್ರೆಗಳನ್ನು ನುಂಗಿರುವ ಕಾರಣ ಕರುಳಿಗೆ ಹಾನಿಯಾಗಬಹುದು. ಹೀಗಾಗಿ 36 ಗಂಟೆ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುವುದು’ ಎಂದು ಸುಗುಣ ಆಸ್ಪತ್ರೆ ಮುಖ್ಯಸ್ಥ ಡಾ.ಶಶಿಕುಮಾರ್ ತಿಳಿಸಿದ್ದಾರೆ.

ನಿಯಮಿತವಾಗಿ ಕೌನ್ಸೆಲಿಂಗ್
‘ಸಿಬ್ಬಂದಿಗೆ ಆಗಾಗ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಜುಲೈ 16ರಂದು ಸಹ ಎಲ್ಲ ಇನ್‌ಸ್ಪೆಕ್ಟರ್‌ಗಳನ್ನು ಕಚೇರಿಗೆ ಕರೆಸಿ ಆತ್ಮಸ್ಥೈರ್ಯ ತುಂಬಲಾಯಿತು. ವಾರದ ಪರೇಡ್‌ನಲ್ಲಿ ಕೆಳ ಹಂತದ ಸಿಬ್ಬಂದಿಯ ಕುಂದು ಕೊರತೆಗಳನ್ನು ಆಲಿಸಲಾಗುತ್ತಿದೆ’ ಎಂದು ಕಮಿಷನರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT