ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ಗೆ ಜ್ವರ, ಉಬರ್‌ಗೆ ಬರೆ!

Last Updated 13 ಜನವರಿ 2015, 16:57 IST
ಅಕ್ಷರ ಗಾತ್ರ

ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರ­ಣಕ್ಕೆ ಸಂಬಂಧಿಸಿದಂತೆ, ಟ್ಯಾಕ್ಸಿ ಸೇವೆ ಸಲ್ಲಿ­ಸು­ತ್ತಿರುವ ಉಬರ್ ಮತ್ತು ಇತರ ಟ್ಯಾಕ್ಸಿ ಸೇವಾ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರವು ನಿಷೇಧ ಹೇರಿ­ರು­ವುದು ಮತ್ತು ಇದೇ ಬಗೆಯ ಕ್ರಮ­ಗ­ಳನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾ­­ಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದು ನೋಡಿದಾಗ, ನನಗೆ ಜನಪ್ರಿಯ ಗಾದೆ, ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ನೆನಪಾ­ಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಕೂಡ ಕೇಂದ್ರದ ನಿರ್ದೇಶನ­ವನ್ನು ಕಣ್ಣುಮುಚ್ಚಿಕೊಂಡು  ಚಾಚೂತಪ್ಪದೇ ಪಾಲಿ­ಸಿರುವುದು ನೋಡಿದರೆ ವಿಷಾದ ಎನಿಸುತ್ತದೆ. ಈ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೋಗ ವಾಸಿ ಮಾಡುವ ಬದಲಿಗೆ ಬರೀ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡಲು ಮುಂದಾಗಿ­ರುವಂತೆಯೂ ಭಾಸವಾ­ಗುತ್ತದೆ. ಅಷ್ಟೇ ಅಲ್ಲ, ಸರ್ಕಾರದ ಈ ಕ್ರಮವು ಕಾಯಿಲೆಪೀಡಿತ ಹಸು ಬಿಟ್ಟು ಆರೋಗ್ಯ­ವಂತ ಹಸುವಿಗೆ ಚುಚ್ಚುಮದ್ದು ನೀಡಲು ಹೊರಟಿರು­ವಂತೆ ಕಂಡು ಬರುತ್ತದೆ.

ದೇಶದಾದ್ಯಂತ ವ್ಯಾಪಿಸಿರುವ ಹೊಸ ತಂತ್ರ­ಜ್ಞಾನ ಬಳಕೆಯ ಪ್ರಭಾವ ಮತ್ತು ಅದರಿಂದ ಭಾರತೀಯರ ಜೀವನಮಟ್ಟ­ದಲ್ಲಿನ  ಸುಧಾರಣೆ ಮತ್ತು ಸಮಾಜದ ಎಲ್ಲ ಸ್ತರದ ಜನರಿಗೆ ಒದಗಿಸಿರುವ ವಿಪುಲ ಉದ್ಯೋಗ ಅವಕಾಶಗಳ ಪರಿಕಲ್ಪನೆಯೇ ನಮ್ಮ ರಾಜಕಾರಣಿಗಳಿಗೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗು­ತ್ತದೆ.

ಭಾರತವು ತನ್ನೊಳಗೆ ಇದ್ದ ವಿಶಿಷ್ಟ ವಂಶವಾಹಿ ಗುಣವನ್ನು (ಡಿಎನ್‌ಎ) ಗುರುತಿಸಿ ಅದನ್ನು ಸದ್ಬಳಕೆ ಮಾಡಿ­ಕೊಂಡು ಸ್ವತಃ ತಾನೆ ಬೆರಗಾಗುವುದರ ಜತೆಗೆ, ಇಡೀ ವಿಶ್ವವೇ ಚಕಿತ­ಗೊಳ್ಳುವಂತೆ ಮಾಡಿದೆ. ಈ ಮೂಲಕ ಅಭಿವೃದ್ಧಿ ಹೊಂದಿದ ಅನೇಕ ದೇಶಗಳೂ ಸೇರಿದಂತೆ ಪ್ರವ­ರ್ಧ­ಮಾನಕ್ಕೆ ಬರುತ್ತಿರುವ ಆರ್ಥಿ­ಕತೆ­­ಗಳನ್ನು ಹಿಂದಿಕ್ಕಿ ಮುನ್ನಡೆ­ಯುತ್ತಿದೆ. ಇಂಟರ್‌ನೆಟ್‌, ಸಾಮಾ­ಜಿಕ ಮಾಧ್ಯಮ, ಮಾಹಿತಿ ತಂತ್ರಜ್ಞಾನ­ಗ­ಳನ್ನು ಅಳವಡಿಸಿ­ಕೊಂಡು ವಾಣಿಜ್ಯ ಚಟುವ­ಟಿಕೆ­ಗಳ ತಳಹದಿಯನ್ನೇ ಅಲುಗಾಡಿಸಿದೆ. ಇದರಿಂದ ಭಾರತೀಯರ ಜೀವನಮಟ್ಟ ಮತ್ತು ಕೆಲಸದ ವಿಧಾನವೇ ಆಮೂ­ಲಾಗ್ರವಾಗಿ ಬದಲಾಗಿದೆ.

ದೆಹಲಿ ಅತ್ಯಾಚಾರ ಘಟನೆಗೆ ಸಂಬಂಧಿಸಿ­ದಂತೆ ಟ್ಯಾಕ್ಸಿ ಸೇವಾ ಸಂಸ್ಥೆ ಉಬರ್‌ ಮೇಲೆ ನಿಷೇಧ ಹೇರುವ ಮೂಲಕ ಕೇಂದ್ರ ಸರ್ಕಾರವು

ಅವ­ಸರದ ತೀರ್ಮಾನಕ್ಕೆ ಬಂದಿದೆ. ಟ್ಯಾಕ್ಸಿ ಚಾಲ­ಕ­­ರಿಂದ ಅತ್ಯಾಚಾರ ಪ್ರಕರಣಗಳು ನಡೆಯದಂತೆ ತಡೆ­ಯಲು ಪೊಲೀಸ್ ಮತ್ತು ಸಾರಿಗೆ ಇಲಾಖೆ­ಯಲ್ಲಿ ವ್ಯವಸ್ಥಿತ ಬದಲಾವಣೆ ತರುವ ಬದಲಿಗೆ, ಇನ್ನಾ­ರನ್ನೊ ಬಲಿಪಶು (ಈ ಪ್ರಕರಣದಲ್ಲಿ ಉಬರ್‌) ಮಾಡುವ ಸುಲಭದ ಮಾರ್ಗ ತುಳಿ­ದಿದೆ. ವಾಹನಗಳಲ್ಲಿ ಅತ್ಯಾಚಾರ ಘಟನೆಗಳು ನಡೆಯುವು­ದನ್ನು ತಡೆಯಲು ಆರ್‌ಟಿಒ  ಕಚೇರಿ­ಗಳು ಮತ್ತು ಪೊಲೀಸ್‌ ವ್ಯವಸ್ಥೆ ಪರಿಣಾಮ­ಕಾ­ರಿಯಾಗಿ ಕಾರ್ಯನಿರ್ವ­ಹಿಸದಿರುವುದೇ ಮೂಲ ಕಾರಣವಾಗಿದೆ.

ಉಬರ್‌ ಟ್ಯಾಕ್ಸಿಯಲ್ಲಿ ನಡೆದ ದುರ­ದೃಷ್ಟಕರ ಮತ್ತು ಬೆಚ್ಚಿ ಬೀಳಿಸುವ ಅತ್ಯಾಚಾರಕ್ಕೆ ಸಂಬಂಧಿ­ಸಿದಂತೆ ಮಾಧ್ಯ­ಮ­­­ಗಳಲ್ಲಿ ಬಂದ ವರದಿಗಳಿಂದ ಉಂಟಾದ ಸಮೂಹ ಸನ್ನಿ ಮತ್ತು ಸರ್ಕಾರದ ದಿಢೀರ್‌ ನಿರ್ಧಾರವು ಜನರನ್ನು ಹಾದಿ ತಪ್ಪಿಸಿವೆ.

ಇತರ ಸೇವಾ ಸಂಸ್ಥೆಗಳಂತೆ ಉಬರ್ ಟ್ಯಾಕ್ಸಿ ಸಂಸ್ಥೆಯು ಕೂಡ ತಂತ್ರಜ್ಞಾನದ ಸದ್ಬಳಕೆ ಮಾಡಿ­ಕೊಂಡು, ಗ್ರಾಹಕರಿಗೆ ಸಕಾಲಕ್ಕೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಒದಗಿಸುತ್ತದೆ.  ತಂತ್ರಜ್ಞಾನ ಮತ್ತು ಲಭ್ಯ ಸಂಪನ್ಮೂಲಗಳನ್ನು ಗರಿಷ್ಠ ಬಳಕೆ ಮಾಡಿ­ಕೊಳ್ಳುವುದು ಅರ್ಥ ವ್ಯವಸ್ಥೆ­ಯಲ್ಲಿ ವ್ಯಾಪಕ ಬದಲಾವಣೆಗೆ ಕಾರಣವಾಗು­ತ್ತದೆ. ಗ್ರಾಹಕರಿಗೆ ಟ್ಯಾಕ್ಸಿ ಸೇವೆಯ ಅಗತ್ಯ ಬಿದ್ದು ಕರೆ ಮಾಡಿದಾಗ  ಭೌಗೋಳಿಕವಾಗಿ ಅವರಿಗೆ ಹತ್ತಿರದಲ್ಲಿ ಇರುವ ಟ್ಯಾಕ್ಸಿ ಸೇವೆಯನ್ನು ಅತ್ಯಂತ ಕಡಿಮೆ ಸಮಯ­ದಲ್ಲಿ ಒದಗಿಸಲು ಜಿಪಿಎಸ್‌ ತಂತ್ರಜ್ಞಾನ, ಸ್ಮಾರ್ಟ್‌ಫೋನ್‌ ಮತ್ತು ಬಹುತೇಕ ಮೊಬೈಲ್‌­ಗ­ಳಲ್ಲಿ ಬಳಕೆಯಾಗುತ್ತಿರುವ ವಾಟ್ಸ್‌­ಆ್ಯಪ್‌ ಸೌಲಭ್ಯದ ನೆರವು ಪಡೆಯ­ಲಾಗುತ್ತದೆ. ಈಗಾ­ಗಲೇ ಲೈಸನ್ಸ್‌ ಹೊಂದಿರುವ ಟ್ಯಾಕ್ಸಿಗಳನ್ನೇ ಉಬರ್‌ ಸಂಸ್ಥೆಯು ಈ ಉದ್ದೇಶಕ್ಕೆ ಬಳಸು­ತ್ತದೆ. ಸಂಸ್ಥೆ ಜತೆ ನೋಂದಾಯಿಸಿಕೊಂಡಿರುವ ಟ್ಯಾಕ್ಸಿ ಮಾಲೀಕರ ಫೋನ್‌ಗೆ ಗ್ರಾಹಕ­ರಿಂದ ಅಥವಾ ಸಂಸ್ಥೆಗಳಿಂದ ಬರುವ ದೂರವಾಣಿ ಕರೆ ಆಧರಿಸಿ  ಟ್ಯಾಕ್ಸಿ ಸೇವೆ ಒದಗಿಸಲಾಗುತ್ತದೆ. ಗ್ರಾಹಕರಿ­ಲ್ಲದೇ ಟ್ಯಾಕ್ಸಿ ನಿಲ್ಲಿಸುವ ಬದಲಿಗೆ, ಟ್ಯಾಕ್ಸಿ ಸೇವಾ ಸಂಸ್ಥೆ ಜತೆ ಒಪ್ಪಂದ ಮಾಡಿ­ಕೊಳ್ಳುವ ಟ್ಯಾಕ್ಸಿ ಚಾಲ­ಕರು ಅಸಂಖ್ಯ ಗ್ರಾಹಕರಿಗೆ ಸಕಾಲಕ್ಕೆ ಸೇವೆ ಸಲ್ಲಿ­ಸಲು ನೆರವಾಗು­ತ್ತಾರೆ. ಇದರಿಂದ ಉದ್ಯೋಗ ಅವ­ಕಾಶಗಳು ಹೆಚ್ಚುವುದರ ಜತೆಗೆ ಅರ್ಥ ವ್ಯವಸ್ಥೆ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾ­ಗುತ್ತದೆ. ಈ ವಹಿ­ವಾಟು, ಆನ್‌ಲೈನ್‌ ಮಾರಾಟ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಯಶೋ­ಗಾಥೆ­­ಯನ್ನು ಹೋಲುತ್ತದೆ.

ಉಬರ್‌ ಮತ್ತು ಇಂತಹ ಇತರ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಸಂಸ್ಥೆ­ಗಳು ಗ್ರಾಹಕರ ಸುರಕ್ಷತೆ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತವೆ. ಚಾಲಕರ ಛಾಯಾ­ಚಿತ್ರ ಮತ್ತಿತರ ವೈಯಕ್ತಿಕ ವಿವ­ರ­ಗಳನ್ನು ಮುಂಚಿತವಾಗಿಯೇ  ರವಾನಿ­ಸುವ ಮೂಲಕ ಗ್ರಾಹಕರಲ್ಲಿ ಸುರಕ್ಷತಾ ಭಾವನೆ ಮೂಡಿ­ಸುತ್ತವೆ. ಒಂದು ವೇಳೆ ಚಾಲಕರು ಗ್ರಾಹ­ಕರ  ಜತೆ ಅನುಚಿತ­ವಾಗಿ ವರ್ತಿಸಿದರೆ, ಚಾಲಕರ ಮಾಹಿತಿ­­ಯನ್ನು ಪೊಲೀಸರಿಗೆ ತ್ವರಿತವಾಗಿ  ನೀಡಲು ಸುಲಭವಾಗುತ್ತದೆ. ವೈಯಕ್ತಿಕ ನೆಲೆಯಲ್ಲಿ ಟ್ಯಾಕ್ಸಿ ಸೇವೆ ಒದಗಿ­ಸುವ ಚಾಲಕರಿಂದ ಇಂತಹ ಮಾಹಿತಿ ಪಡೆ­ಯಲು ಸಾಧ್ಯವಾಗುವುದಿಲ್ಲ.

ಟ್ಯಾಕ್ಸಿ ಚಾಲಕರಿಂದ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧ ಪ್ರವೃತ್ತಿಯ ಚಾಲಕರ ಮೇಲೆ ನಿಗಾ ಇಡುವಲ್ಲಿ  ಪೊಲೀಸ್ ಇಲಾಖೆ ಮತ್ತು ಆರ್‌ಟಿಒಗಳ ಕಾರ್ಯವೈಖರಿ­ಯ­ಲ್ಲಿಯೇ ಮೂಲ ದೋಷ ಇದೆ.

ಸರ್ಕಾರ ತಳೆದ ನಿರ್ಧಾರಕ್ಕೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎತ್ತಿದ ಪ್ರಶ್ನೆಗಳು ಸರಿಯಾಗಿಯೇ ಇವೆ. ರೈಲ್ವೆ ಬೋಗಿ­ಯಲ್ಲಿ ಒಬ್ಬಂಟಿ ಮಹಿಳಾ ಪ್ರಯಾಣಿಕಳ ಮೇಲೆ ಟಿಕೆಟ್ ಕಲೆಕ್ಟರ್‌ನಿಂದ, ವೈಯ­ಕ್ತಿಕ ನೆಲೆ­ಯಲ್ಲಿ ಸೇವೆ ಸಲ್ಲಿಸುವ ಖಾಸಗಿ ಟ್ಯಾಕ್ಸಿ­ಯಲ್ಲಿ ಅದರ ಚಾಲಕ­ನಿಂದ, ಆಟೊರಿಕ್ಷಾದಲ್ಲಿ ಆಟೊ ಚಾಲ­ಕನಿಂದ ಅಥವಾ ಕಾಲ್‌ಸೆಂಟರ್‌­ನಲ್ಲಿ ಅಲ್ಲಿನ ಸಿಬ್ಬಂದಿಯಿಂದ ಅತ್ಯಾ­ಚಾರ ನಡೆ­ದರೆ, ರೈಲ್ವೆ, ಆಟೊ, ಖಾಸಗಿ ಟ್ಯಾಕ್ಸಿ ಸೇವೆಗಳನ್ನು ಮತ್ತು ಕಾಲ್‌ ಸೆಂಟರ್‌­ಗಳನ್ನೇ ನಿಷೇಧಿಸಲಿಕ್ಕಾ­ದೀತೆ? ಉಬರ್ ಮತ್ತಿತರ ಟ್ಯಾಕ್ಸಿ ಸೇವಾ ಸಂಸ್ಥೆ­ಗಳು ದೇಶದ ಅನೇಕ ನಗರಗಳಲ್ಲಿ ಕೆಲ ವರ್ಷ­ಗಳಿಂದಲೂ ಕಾರ್ಯನಿ­ರ್ವಹಿಸುತ್ತಿವೆ. ಈ ಸಂಸ್ಥೆ­ಗಳು ಮುಚ್ಚುಮರೆ­ಯಿಂದೇನೂ ಸೇವೆ ಸಲ್ಲಿಸು­ತ್ತಿಲ್ಲ. ಸರ್ಕಾರದ ಎಲ್ಲ ಇಲಾಖೆಗಳಿಗೆ ಇವುಗಳ ಅಸ್ತಿತ್ವದ ಬಗ್ಗೆ ಮನವರಿಕೆ ಇದ್ದೇ ಇದೆ.

ಉಬರ್ ಘಟನೆ ನಂತರವಾದರೂ ನಿಯಮ­ಗಳನ್ನು ಕಠಿಣಗೊಳಿಸಲು ನಿರ್ಧ­ರಿಸಿದ್ದರೂ ಎಲ್ಲ ಟ್ಯಾಕ್ಸಿ ಸೇವಾ ಸಂಸ್ಥೆಗಳು ಅವುಗಳನ್ನು ಜಾರಿಗೆ ತರಲು ಕನಿಷ್ಠ ಒಂದು ತಿಂಗಳ ಸಮಯಾವ­ಕಾಶವ­ನ್ನಾದರೂ ಕೊಡಬಾರದೇ? ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತದೆ.

ಈ ಪ್ರಕರಣದಲ್ಲಿ ಸರ್ಕಾರ ಇನ್ನಷ್ಟು ಪ್ರಾಮಾ­ಣಿ­­ಕತೆ­ಯಿಂದ ವರ್ತಿಸ­ಬೇಕಾ­ಗಿತ್ತು. ಜತೆಗೆ, ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಪೊಲೀಸ್ ವ್ಯವಸ್ಥೆಯನ್ನೇ ಸ್ವಚ್ಛಗೊ­ಳಿಸುವ ವಾಸ್ತವಿಕ ನೆಲೆ­ಯಲ್ಲಿ ಜಾರಿಗೆ ತರ­ಬಹುದಾದ ಕ್ರಿಯಾ ಯೋಜ­ನೆ­ಯನ್ನೂ ಪ್ರಕಟಿಸಬಹುದಿತ್ತು.
ಪೊಲೀಸ್ ವ್ಯವಸ್ಥೆಯಲ್ಲಿ ಅರ್ಥ­ಪೂರ್ಣ ಬದಲಾವಣೆ ತರಲು ಪೊಲೀಸ್ ಸುಧಾರಣಾ ಕ್ರಮಗಳನ್ನು ಜಾರಿಗೆ ತರು­ವುದೇ ಮುಖ್ಯ ಎನ್ನುವುದು ಅತಿಶ­ಯೋಕ್ತಿ ಹೇಳಿಕೆ ಏನಾಗದು.

ಅಧಃಪತನದತ್ತ ಸಾಗಿರುವ ಪೊಲೀಸ್ ವ್ಯವಸ್ಥೆ ಸುಧಾರಿಸಲು, ಅದನ್ನು  ಭ್ರಷ್ಟಾಚಾರ ಮತ್ತು ರಾಜಕಾ­ರ­ಣಿಗಳ ಹಸ್ತಕ್ಷೇಪದಿಂದ ಮುಕ್ತಗೊಳಿ­ಸುವುದೇ ಸದ್ಯಕ್ಕೆ ಇರುವ ಏಕೈಕ ಮಾರ್ಗೋ­ಪಾಯವಾಗಿದೆ.

ಸ್ವಾತಂತ್ರ್ಯಾನಂತರ ಪೊಲೀಸ್ ವ್ಯವಸ್ಥೆ ಸುಧಾ­ರ­ಣೆಗೆ ಕೇಂದ್ರ ಸರ್ಕಾರವು ನೇಮಿಸಿರುವ ಪ್ರತಿ­ಯೊಂದು ಆಯೋ­ಗದ ಮುಖ್ಯಸ್ಥರು ಜಾರಿಗೆ ತರ­ಬಹು­ದಾದ ಅನೇಕ ಶಿಫಾರಸುಗಳನ್ನು ನೀಡಿದ್ದಾರೆ. ಆದರೆ, ಅವುಗಳೆಲ್ಲ   ವರ್ಷ­ಗಳಿಂದ ಕಡತಗಳಲ್ಲೇ ಉಳಿದಿವೆ. ಪೊಲೀಸ್ ಇಲಾಖೆಯ ಇತರ ಕೊರತೆ­ಗಳ ಹೊರತಾಗಿಯೂ, ಭ್ರಷ್ಟಾ­ಚಾರ ಮತ್ತು ರಾಜಕೀಯ ಹಸ್ತಕ್ಷೇಪಗಳೇ ಪ್ರಮುಖ ಸಮಸ್ಯೆಗಳಾಗಿವೆ.

ಆರ್‌ಟಿಒಗಳಲ್ಲಿಯಂತೂ ಆಡಳಿತಾ­ರೂಢ ಪಕ್ಷಗಳ ಜತೆಗಿನ ಸಂಪರ್ಕ­ದಿಂದಾಗಿ ಭ್ರಷ್ಟಾ­ಚಾರವು ಕೊಳೆತು ನಾರುತ್ತಿದೆ. ಇಲಾಖೆಯಲ್ಲಿನ ಲಂಚದ ಸಾಮ್ರಾಜ್ಯದ  ಬೇರುಗಳ ಬಗ್ಗೆ ಮಾಧ್ಯ­ಮ­­ಗಳು ಹಲವಾರು ಬಾರಿ ಮಾರು­ವೇಷದ ಕಾರ್ಯಾಚರಣೆಯಲ್ಲಿ ಬೆಳ­ಕಿಗೆ ತಂದಿವೆ. ಚಾಲನಾ ಪರೀಕ್ಷೆ ನಡೆಸದೆ ಕೆಲವೇ ಕೆಲ ನೂರು ರೂಪಾಯಿಗಳಿಗೆ ನಕಲಿ ಚಾಲನಾ ಪತ್ರ ಮತ್ತು ಸಾವಿರ ರೂಪಾಯಿಗಳಿಗೆ ನೈಜ ಚಾಲನಾ ಪತ್ರ­ವನ್ನು (ಡ್ರೈವಿಂಗ್ ಲೈಸನ್ಸ್) ‘ಆರ್‌ಟಿಒ’­ಗಳಲ್ಲಿ ಸುಲಭ­ವಾಗಿ ಪಡೆಯಬ­ಹುದಾಗಿದೆ.

ಪೊಲೀಸ್ ವ್ಯವಸ್ಥೆ ಸುಧಾರಣೆ ಬಗ್ಗೆ ಆಯೋ­ಗ­­ಗಳು ಮಾಡಿರುವ  ಶಿಫಾರಸು­ಗಳನ್ನು ಸ್ವೀಕರಿಸಿ ಅವುಗಳನ್ನು ಹಾಡಿ ಹೊಗಳುವ ಮತ್ತು ಅವುಗ­ಳನ್ನು ತುರ್ತಾಗಿ ಜಾರಿಗೆ ತರುವುದರ ಬಗ್ಗೆ ಮಾತ­ನಾಡುವ ಸರ್ಕಾರಗಳು, ದಶಕ­ಗಳು ಉರು­ಳಿದರೂ ವರದಿಗಳನ್ನು ಕಡತ­ಗಳಲ್ಲಿಯೇ ಉಳಿಸಿವೆ. ಪೊಲೀಸ್ ವ್ಯವಸ್ಥೆ ಮೇಲಿನ ತಮ್ಮ ನಿಯಂ­ತ್ರಣ ಕೈಬಿಡಲು ರಾಜಕಾರಣಿಗಳಿಗೆ ಮನಸ್ಸು ಇಲ್ಲದಿರು­ವುದೇ ಇದಕ್ಕೆ ಕಾರಣ. ಪೊಲೀಸರನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳಲು ಪ್ರತಿ­ಯೊಬ್ಬ ರಾಜಕಾರಣಿ ಬಯ­ಸುತ್ತಾನೆ ಎನ್ನುವುದು ಗುಟ್ಟಾಗಿ ಉಳಿ­ದಿಲ್ಲ.

ತಂತ್ರಜ್ಞಾನದ ಬಳಕೆ ಮತ್ತು ಅದರ ಉಪ­ಯು­ಕ್ತತೆ ಬಗ್ಗೆಯೂ ಇಲ್ಲಿ ಪ್ರಸ್ತಾ­ಪಿಸ­ಬೇಕಾ­ಗು­ತ್ತದೆ. ದೇಶದಲ್ಲಿನ ಎಲ್ಲ ವಾಹನಗಳ ಚಾಲಕರ ಹೆಸರು ಮತ್ತು ಲೈಸನ್ಸ್‌ ವಿವರಗಳು ಪೊಲೀಸ್‌ ಠಾಣೆ ಮತ್ತು ಆರ್‌ಟಿಒ ಕಚೇರಿಗಳಲ್ಲಿ ಲಭ್ಯ ಇರುತ್ತವೆ. ಅಪರಾಧ ದಾಖಲೆಗಳು ಈ ಎರಡೂ ಇಲಾಖೆಗಳೂ ಸೇರಿದಂತೆ ತನಿಖಾ ತಂಡಗಳ ಬಳಿಯೂ ಇರುತ್ತವೆ. ಆದರೆ, ಪೊಲೀಸರೂ ಸೇರಿದಂತೆ ತನಿಖಾ ತಂಡ­ಗಳ ಬಳಿ ಇಚ್ಛಾಶಕ್ತಿ ಮತ್ತು ತುರ್ತಾಗಿ ಕಾರ್ಯನಿರ್ವಹಿಸುವ ಮನೋ­­ಭಾವ ಮಾತ್ರ ಕಂಡು ಬರುವುದಿಲ್ಲ.

‘ಆಧಾರ್‌’ ಕಾರ್ಡ್‌ ಜಾರಿಗೆ ತರುವ ಮೊದಲೇ, ಕೇಂದ್ರ ಗೃಹ ಇಲಾಖೆಯು  ರಾಷ್ಟ್ರೀಯ ಬೇಹುಗಾರಿಕಾ ಜಾಲ (ಎನ್‌ಎಟಿ ಗ್ರಿಡ್‌) ಸ್ಥಾಪಿಸಿ, ದೇಶದ ಎಲ್ಲ ಪ್ರಜೆಗಳ ಮಾಹಿತಿ ಸಂಗ್ರ­ಹಿಸಲು ಮುಂದಾಗಿತ್ತು. ಹಿಂದಿನ ‘ಯುಪಿಎ–2’ ಸರ್ಕಾರದ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳ ವಿರುದ್ಧ ಟೀಕಾಪ್ರಹಾರ ಕೇಳಿ­ಬಂದಿತು. ದೇಶದ ಭದ್ರತೆ ಒತ್ತೆ ಇಟ್ಟು ಅಕ್ರಮ ವಲಸಿ­ಗರನ್ನೂ ದೇಶದ ಪ್ರಜೆ­ಗಳೆಂದು ನೋಂದಾ­ಯಿ­ಸಿಕೊಳ್ಳ­ಲಾಗು­ತ್ತಿದೆ ಎನ್ನುವ ಹುಯಿಲೂ ಕೇಳಿ ಬಂದಿತು. ಈ ವಿವಾದ ಆಮೇಲೆ ತಣ್ಣಗಾಯಿತು. ದೇಶದಲ್ಲಿ ನಡೆಯುತ್ತಿರುವ ಅತ್ಯಾ­ಚಾರ ಪ್ರಕ­ರ­ಣಗಳೂ ಸೇರಿದಂತೆ ಎಲ್ಲ ಬಗೆಯ ಅಪ­ರಾಧ ಮತ್ತು ಭಯೋ­ತ್ಪಾದನಾ ಕೃತ್ಯಗಳನ್ನು ತಡೆ­ಯಲು ಇಂತಹ ಮಾಹಿತಿಯನ್ನು ದಕ್ಷ ರೀತಿ­ಯಲ್ಲಿ ಪರಿ­ಣಾಮಕಾರಿಯಾಗಿ ಬಳಕೆ ಮಾಡಿ­ಕೊ­ಳ್ಳಲು ಮುಂದಾಗುವುದು ಸದ್ಯದ ತುರ್ತು ಕೆಲಸವಾಗಿದೆ.

ಸಾಮಾಜಿಕ ಮಾಧ್ಯಮಗಳ ಮನ್ನ­ಣೆಗೆ ಪಾತ್ರ­ವಾಗಿರುವ, ಪ್ರಚಾರಕ್ಕೆ ನವ ಮಾಧ್ಯಮಗಳನ್ನೇ ನೆಚ್ಚಿಕೊಂಡಿರುವ ನರೇಂದ್ರ ಮೋದಿ ಸರ್ಕಾರ ಮತ್ತು ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಮುಂಚೂ­­ಣಿಯಲ್ಲಿ ಇರುವ ಕರ್ನಾಟಕ ಸರ್ಕಾರ, ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲೆ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಬಿಟ್ಟು, ತಂತ್ರಜ್ಞಾನ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳನ್ನೇ ನಿರ್ಬಂಧಿಸುವ ಕ್ರಮಗಳನ್ನು ಕೈಗೊಂಡಿರುವುದು ಆಶ್ಚರ್ಯ ಮತ್ತು ಗೊಂದಲವನ್ನೂ ಮೂಡಿಸಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT