ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಆಯುಕ್ತರಿಂದ ಅಪೂರ್ಣ ಮಾಹಿತಿ

ರಶ್ಮಿ ಭೇಟಿ ಮಾಡಿದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ
Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕಿ ವಿ. ರಶ್ಮಿ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್‌ ಆಯುಕ್ತರು ಪೂರ್ಣ ಮಾಹಿತಿ ನೀಡಿಲ್ಲ, ಹೀಗಾಗಿ ಅವರನ್ನು ಖುದ್ದಾಗಿ ಭೇಟಿ ಮಾಡಲು ಬಂದಿದ್ದೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದರು.

ನಗರದ ಪ್ರಾದೇಶಿಕ ಆಯುಕ್ತರ ನಿವಾಸದಲ್ಲಿ ರಶ್ಮಿ ಅವರನ್ನು ಭಾನು­ವಾರ ಭೇಟಿ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ­ದರು.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ಸ್ವಯಂ­ಪ್ರೇರಿತ­ವಾಗಿ ದೂರು ದಾಖಲಿಸಿ­ಕೊಂಡಿದೆ. ತನಿಖೆ ನಿಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್‌ ಆಯಕ್ತರಿಗೆ ಮಾಹಿತಿ ಕೇಳಲಾಗಿತ್ತು. ಅವರು ಕೆಲವೊಂದು ಮಾಹಿತಿಗಳನ್ನು ಮಾತ್ರ ನೀಡಿದ್ದಾರೆ. ರಶ್ಮಿ ಮತ್ತು ಅವರ ಅಂಗರಕ್ಷಕನ ಹೇಳಿಕೆಯ ದೂರು ಪ್ರತಿ­ಗಳನ್ನಷ್ಟೇ ನೀಡಿದ್ದಾರೆ. ಮಾಹಿತಿ ಪರಿ­ಪೂರ್ಣವಾಗಿಲ್ಲ ಎಂಬುದನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

ರಶ್ಮಿ ಅವರ ಮಾನಸಿಕ ಸ್ಥಿತಿ, ಚಿಕಿತ್ಸೆ, ವಾಸ್ತವ್ಯ ಇತ್ಯಾದಿ ಕುರಿತು ಪೊಲೀಸ್‌ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಈ ನಿಟ್ಟಿನಲ್ಲಿ ನಗರ ಪೊಲೀಸ್‌ ಆಯಕ್ತರಿಗೆ ಸೂಕ್ತ ನಿರ್ದೇಶನ ನೀಡ­ಬೇಕು ಮತ್ತು ರಶ್ಮಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ ಎಂದರು.

ರಶ್ಮಿ ಅವರೊಂದಿಗೆ ಸುಮಾರು 45 ನಿಮಿಷ ಮಾತನಾಡಿ ಮಾಹಿತಿ ಪಡೆದಿ­ದ್ದೇನೆ. ಅವರಿಗೆ ತಲೆಗೆ ಪೆಟ್ಟು ಬಿದ್ದಿದೆ, ರಕ್ತ ಹೆಪ್ಪುಗಟ್ಟಿದೆ, ಕಣ್ಣಿಗೂ ಏಟಾ­ಗಿದೆ, ಹಲ್ಲು ಬಿದ್ದಿದೆ. ಅವರಿಗೆ ಚಿಕಿತ್ಸೆ ಅಗತ್ಯ ಇದೆ. ಅವರು ಮಾನಸಿಕ­ವಾಗಿ ನೊಂದಿ­ದ್ದಾರೆ ಎಂದು ಮಂಜುಳಾ ತಿಳಿಸಿದರು.

ಮಹಿಳೆಯ ಅಸಹಾಯಕ ಪರಿಸ್ಥಿತಿ­ಯನ್ನು ದುರ್ಬಳಕೆ ಮಾಡಿಕೊಂಡು ಹಲ್ಲೆ ಮಾಡಲಾಗಿದೆ. ಈ ಅಮಾನ­ವೀಯ ಕೃತ್ಯವನ್ನು ಗಮನಿಸಿ­ದರೆ ವ್ಯವಸ್ಥೆ ಮಹಿಳೆ ವಿರುದ್ಧ ಇದೆಯೇ ಎನಿಸುತ್ತದೆ. ಘಟನೆಗೆ ಕಾರಣರಾದ­ವರಿಗೆ ತಕ್ಕ ಶಾಸ್ತಿ ಮಾಡುವ ಕೆಲಸ ಆಗಬೇಕಿದೆ. ಪ್ರಾಮಾ­ಣಿಕ­ತೆಗೆ ಜಯ ಸಲ್ಲ­ಬೇಕು. ಸರ್ಕಾರವು ಇದನ್ನು ವಿಶೇಷ ಪ್ರಕರಣವಾಗಿ ಪರಿ­ಗಣಿಸಿ ತನಿಖೆ ನಡೆಸ­ಬೇಕು ಎಂದು ಮುಖ್ಯಮಂತ್ರಿ­­ಯವರಿಗೆ ಪ್ರಸ್ತಾವ ಸಲ್ಲಿ­ಸು­ತ್ತೇನೆ. ಎಟಿಐ ಅವ್ಯವ­ಹಾರ ಮತ್ತು ಐಎಎಸ್‌ ಅಧಿಕಾರಿ ಹಲ್ಲೆ ಪ್ರಕರಣ­ಗಳನ್ನು ಸಿಬಿಐ, ಲೋಕಾಯುಕ್ತ ಅಥವಾ ಸಿಐಡಿಯಿಂದ ತನಿಖೆ ಮಾಡಿ­ಸು­ವಂತೆ ಸರ್ಕಾರವನ್ನು ಒತ್ತಾಯಿಸು­ತ್ತೇನೆ ಎಂದು ಹೇಳಿದರು.

ರಶ್ಮಿ ಅವರಿಗೆ ಷೋಕಾಸ್‌ (ಕಾರಣ ಕೇಳಿ) ನೋಟಿಸ್‌ ನೀಡಿರುವುದಕ್ಕೆ ಸಂಬಂ­ಧಿ­ಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯ ಕಾರ್ಯದರ್ಶಿ ಅವರು ಇಂಥ ಸಂದರ್ಭವನ್ನು ಈ ರೀತಿ ಬಳಸಿ­ಕೊಳ್ಳ­ಬಾರದಿತ್ತು. ರಶ್ಮಿ ಅವರ ಮನಸ್ಥಿತಿ­ಯನ್ನು ಪರಿಗಣಿಸಬೇಕಿತ್ತು. ಷೋಕಾಸ್‌ ನೋಟಿಸ್‌ ನೀಡಿರುವ ಬಗ್ಗೆ ಮಾಧ್ಯಮ­ಗಳಲ್ಲಿನ ವರದಿ ನೋಡಿ­ದ್ದೇನೆ. ಈ ಕುರಿತು ವಿವರ ಪಡೆದು ಕೌಶಿಕ್‌ ಮುಖರ್ಜಿ ಅವರೊಂದಿಗೂ ಮಾತ­ನಾಡುತ್ತೇನೆ ಎಂದರು.

ಅ.15ರಂದು ಎಟಿಐನಲ್ಲಿ ನಡೆದ ಘಟನೆ ಕುರಿತಂತೆ ಮಹಿಳಾ ಆಯೋಗ ತಕ್ಷಣ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಸತ್ಯಕ್ಕೆ ದೂರ­ವಾ­ದುದು. ತಕ್ಷಣವೇ ಆಯೋಗ ಕ್ರಮ ವಹಿ­ಸಿದೆ. ಆಯೋಗವನ್ನು ಬೀದಿಗೆ ತೆಗೆದು­ಕೊಂಡು ಬಂದು ಪ್ರಚಾರ ಮಾಡುವ ಅಗತ್ಯ ನನಗಿಲ್ಲ. ಆಯೋಗ­ವನ್ನು ಜೀವಂತಿಕೆ­­­ಯಿಂದ ಇಟ್ಟುಕೊಂಡು ಜವಾ­ಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

‘ತನಿಖೆ ಬಳಿಕ ಪೂರ್ಣ ವರದಿ ನೀಡಲು ಸಾಧ್ಯ’
ಮೈಸೂರು: ಐಎಎಸ್‌ ಅಧಿಕಾರಿ ವಿ. ರಶ್ಮಿ ಮೇಲೆ ಹಲ್ಲೆ ಘಟನೆ ಕುರಿತ ತನಿಖೆ ಮುಗಿದ ಬಳಿಕ ಪೂರ್ಣ ವರದಿ ನೀಡಲು ಸಾಧ್ಯ ಎಂದು ನಗರ ಪೊಲೀಸ್‌ ಆಯುಕ್ತ ಎಂ.ಎ. ಸಲೀಂ ತಿಳಿಸಿದರು.

ರಶ್ಮಿ ಮೇಲೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ನಗರ ಪೊಲೀಸ್‌ ಆಯುಕ್ತರು ಅಪೂರ್ಣ ಮಾಹಿತಿ ನೀಡಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಘಟನೆ ಕುರಿತು ತನಿಖೆ ನಡೆಯುತ್ತಿದೆ. ಹೀಗಾಗಿ, ಲಭ್ಯ ಇದ್ದ ಮಾಹಿತಿಯನ್ನು ಆಯೋಗಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT