ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ವಶಕ್ಕೆಎಂಟು ಮಂದಿ

ರಾಜಧಾನಿಯಲ್ಲಿ ಆಫ್ರಿಕಾ ಜನರ ಮೇಲೆ ಹಲ್ಲೆ * ತನಿಖೆ ತೀವ್ರ
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದಕ್ಷಿಣ ದೆಹಲಿಯ ಮೆಹ್‌ರೌಲಿ ಪ್ರದೇಶದಲ್ಲಿ ಆಫ್ರಿಕಾ ದೇಶಗಳ ಹಲವು ಪ್ರಜೆಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು  ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ತೀವ್ರಗೊಳಿಸಲಾಗಿದೆ. ರಾಜಧಾನಿಯಲ್ಲಿ ಆಫ್ರಿಕಾ ಜನರ ಮೇಲೆ ನಡೆಯುತ್ತಿರುವ ಹಲ್ಲೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಗುರುವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಫ್ರಿಕಾ ದೇಶಗಳ ಆರು ಜನರು ಹಲ್ಲೆಯಿಂದ ಗಾಯಗೊಂಡಿದ್ದಾರೆ. ಈ ಜನರು ಜೋರಾಗಿ ಸಂಗೀತ ಹಾಕಿದ್ದು ಮತ್ತು ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡಿದ್ದು ಸಂಘರ್ಷಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ದಕ್ಷಿಣ ದೆಹಲಿಯ ವಸಂತಕುಂಜ್‌ ಪ್ರದೇಶದಲ್ಲಿ ಕಾಂಗೊ ಪ್ರಜೆ ಎಂ.ಕೆ. ಆಲಿವರ್‌ ಎಂಬವರ ಕೊಲೆಯಾಗಿತ್ತು. ಅದರ ಬೆನ್ನಿಗೇ ಈ ಘಟನೆ ನಡೆದಿರುವುದು ಆಫ್ರಿಕಾ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆಲಿವರ್‌ ಹತ್ಯೆ ಬಗ್ಗೆ ಆಫ್ರಿಕಾ ದೇಶಗಳ ರಾಯಭಾರಿಗಳು ಆಘಾತ ವ್ಯಕ್ತಪಡಿಸಿದ್ದರು. ಆಫ್ರಿಕಾ ದೇಶಗಳ ಜನರಿಗೆ ಭದ್ರತೆ ಒದಗಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.

ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರೂ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಉಗಾಂಡದವರಾದರೆ ಇನ್ನೊಬ್ಬರು ದಕ್ಷಿಣ ಆಫ್ರಿಕಾ ದೇಶದವರು. ಹಲ್ಲೆಗೆ ಜನಾಂಗೀಯ ದ್ವೇಷವೇ ಕಾರಣ ಎಂದು ನೈಜೀರಿಯಾದ ಇಬ್ಬರು ಪ್ರಜೆಗಳು ಆರೋಪಿಸಿದ್ದಾರೆ.

ಗೃಹ ಸಚಿವರಿಗೆ ಸುಷ್ಮಾ ಒತ್ತಾಯ: ಆಫ್ರಿಕಾ ದೇಶಗಳ ಪ್ರಜೆಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಗೃಹ ಸಚಿವ ರಾಜನಾಥ್‌ ಸಿಂಗ್‌ ಜತೆ ಮಾತುಕತೆ ನಡೆಸಿದ್ದಾರೆ. ಈ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜನಾಥ್‌ ಅವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಆಫ್ರಿಕಾ ದೇಶಗಳ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸುಂತೆ ಸೂಚನೆ ನೀಡಿದ್ದಾರೆ.

ಆಫ್ರಿಕಾ ಜನರು ವಾಸಿಸುವ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗುವುದು ಎಂದು ಸುಷ್ಮಾ ತಿಳಿಸಿದ್ದಾರೆ. ಆಫ್ರಿಕಾ ದೇಶಗಳ ವಿದ್ಯಾರ್ಥಿಗಳು ಜಂತರ್‌ ಮಂತರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತನಾಡುವಂತೆ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್‌ ಮತ್ತು ಸಚಿವಾಲಯದ ಕಾರ್ಯದರ್ಶಿ ಅಮರ್‌ ಸಿನ್ಹಾ ಅವರಿಗೆ ಸುಷ್ಮಾ ಸೂಚಿಸಿದ್ದಾರೆ.

ಸಣ್ಣ ಜಗಳ: ವಿ.ಕೆ. ಸಿಂಗ್‌
ಆಫ್ರಿಕಾ ಜನರ ಮೇಲೆ ನಡೆದಿರುವ ಹಲ್ಲೆಗೆ ಸಣ್ಣ ಜಗಳ ಕಾರಣ. ಆದರೆ ಮಾಧ್ಯಮ ಅದನ್ನು ದೊಡ್ಡ ಸಂಘರ್ಷ ಎಂಬಂತೆ ಬಿಂಬಿಸುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಹೇಳಿದ್ದಾರೆ.

‘ಮಾಧ್ಯಮ ಯಾಕೆ ಹೀಗೆ ಮಾಡುತ್ತಿದೆ? ಜವಾಬ್ದಾರಿಯುತ ಪ್ರಜೆಗಳಾಗಿ ಅವರ ಉದ್ದೇಶವನ್ನು ಪ್ರಶ್ನಿಸೋಣ’ ಎಂದು ಸಿಂಗ್‌ ಹೇಳಿದ್ದಾರೆ. ಬಿಇಎ ತಿರುಗೇಟು: ವಿ.ಕೆ. ಸಿಂಗ್‌ ಹೇಳಿಕೆಯನ್ನು ಸುದ್ದಿವಾಹಿನಿ ಸಂಪಾದಕರ ಸಂಘಟನೆ ಬ್ರಾಡ್‌ಕಾಸ್ಟ್‌ ಎಡಿಟರ್ಸ್‌ ಅಸೋಸಿಯೇಷನ್‌ (ಬಿಇಎ) ಖಂಡಿಸಿದ್ದು ಇದೊಂದು ‘ಅಸಂಗತ’ ಹೇಳಿಕೆ ಎಂದಿದೆ.

‘ಇಂತಹ ಅಸಂಗತ ಹೇಳಿಕೆಗಳನ್ನು ನೀಡುವುದು ಸಿಂಗ್‌ ಅವರ ಅಭ್ಯಾಸ. ಆದರೆ ಅದು ಪ್ರಜಾಪ್ರಭುತ್ವದ ಸ್ಫೂರ್ತಿಗೆ ವಿರುದ್ಧ’ ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಎನ್‌.ಕೆ.ಸಿಂಗ್‌ ಹೇಳಿದ್ದಾರೆ.

ಅಧಿಕಾರದಲ್ಲಿರುವವರ ತಾಳಕ್ಕೆ ತಕ್ಕಂತೆ ಮಾಧ್ಯಮ ಕುಣಿಯಲು ಇಲ್ಲಿ ಸೇನಾ ಆಡಳಿತ ಇಲ್ಲ ಎಂಬುದನ್ನು ವಿ.ಕೆ. ಸಿಂಗ್‌ ಅರ್ಥ ಮಾಡಿಕೊಳ್ಳಬೇಕು ಎಂದು ಬಿಇಎ ಹೇಳಿದೆ. ಭಾರತದ ಸಂವಿಧಾನದ ಬಗ್ಗೆ ಈ ಸಚಿವರಿಗೆ ಪ್ರಧಾನಿ ಪಾಠ ಮಾಡಬೇಕು ಎಂದೂ ಸಂಘಟನೆ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT