ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಸರ್ಪಗಾವಲಿನಲ್ಲಿ ಪತ್ರಿಕೆ ವಿತರಣೆ

ಇಂದಿರಾ ಹತ್ಯೆ ಮರುದಿನ ಸವಾಲಾಗಿದ್ದ ಪತ್ರಿಕಾ ವಿತರಣಾ ಕಾರ್ಯ
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಹೊಸಪೇಟೆ: ‘ಅದು 1984ರ ನವೆಂಬರ್‌ 1ರ ಬೆಳಿಗ್ಗೆ 6 ಗಂಟೆ. ನಮ್ಮ ಅಂಗಡಿ (ಶಾರದಾ ಪುಸ್ತಕಾಲಯ) ಎದುರು ಕಿಕ್ಕಿರಿದು ಜನ ಸೇರಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹಿಂದಿನ ದಿನ ಹತ್ಯೆ ಮಾಡಲಾಗಿತ್ತು. ಹತ್ಯೆಯ ಸುದ್ದಿ ಓದುವ ಸಲುವಾಗಿ ಪತ್ರಿಕೆ ಕೊಂಡೊಯ್ಯಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು. ಹೀಗಾಗಿ ಅಂದು ಪೊಲೀಸ್‌ ಬಿಗಿ ಭದ್ರತೆಯಲ್ಲಿ ಪತ್ರಿಕೆಗಳನ್ನು ವಿತರಿಸಬೇಕಾಯಿತು.’

ಕಳೆದ 40 ವರ್ಷಗಳಿಂದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆ ವಿತರಕರಾಗಿರುವ ವೆಂಕಟೇಶ್‌ ಅವರನ್ನು ಸೆಪ್ಟೆಂಬರ್ 4ರಂದು ‘ಪತ್ರಿಕಾ ವಿತರಕರ ದಿನ’ದ ಅಂಗವಾಗಿ ಮಾತಿಗೆ ಎಳೆದಾಗ ತಮ್ಮ ವೃತ್ತಿ ಬದುಕಿನ ಏರಿಳಿತಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಬಗೆ ಇದು.

‘ಪ್ರತಿದಿನ ಬರುವ 600 ಪತ್ರಿಕೆಗಳೊಂದಿಗೆ ಅಂದು ಹೆಚ್ಚುವರಿ 800 ಪತ್ರಿಕೆಗಳನ್ನು ಕಳುಹಿಸುವಂತೆ ಬೇಡಿಕೆ ಇಟ್ಟಿದ್ದೆವು. ಸಾಮಾನ್ಯವಾಗಿ ಪತ್ರಿಕೆ ಬಂಡಲ್‌ ಹೊತ್ತ ವಾಹನ ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಬರುತ್ತಿತ್ತು. ಆದರೆ ಅಂದು 10 ಗಂಟೆಯಾದರೂ ವಾಹನ ಬರಲೇ ಇಲ್ಲ. ಇತ್ತ ಅಂಗಡಿ ಎದುರು ಪತ್ರಿಕೆ ಕೊಂಡುಕೊಳ್ಳಲು ಜನಜಂಗುಳಿ ಹೆಚ್ಚಾಗಿತ್ತು. 11 ಗಂಟೆ ವೇಳೆಗೆ ವಾಹನ ಊರ ಹೊರ ವಲಯದಲ್ಲಿದೆ ಎಂಬುದನ್ನು ಅರಿತ ನಾವು ವಾಹನವನ್ನು ಮನೆ ಕಡೆಗೆ ತಿರುಗಿಸಿಕೊಂಡು ಹೋಗಿ ಅಲ್ಲಿಯೇ ಪತ್ರಿಕೆ ಇಳಿಸಿಕೊಂಡೆವು. ಆದರೆ, ಜನರು ಅಲ್ಲಿಗೂ ಓಡಿ ಬಂದರು. ನಂತರ ಪೊಲೀಸ್‌ ಸರ್ಪಗಾವಲಿನಲ್ಲಿ ಪತ್ರಿಕೆಗಳನ್ನು ವಿತರಿಸಬೇಕಾಯಿತು. ‘ಹೀಗೆ ಜನರು ಪತ್ರಿಕೆಗಳಿಗೆ ಕಾದು ಕುಳಿತುಕೊಳ್ಳುವ ಕಾಲವೊಂದಿತ್ತು’ ಎಂದ ಅವರು ‘ಇದೊಂದು ಅವಿಸ್ಮರಣೀಯ ಘಟನೆ’ ಸ್ಮರಿಸಿದರು.

‘ಬೆಳಗಿನ ಜಾವ 3 ಗಂಟೆಗೆ ನಮ್ಮ ತಂದೆ ವೀರಣ್ಣ ತೀರಿಕೊಂಡರು. ಆದರೆ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಲೇಬೇಕು. ಹೀಗಾಗಿ ತಂದೆಯ ಶವವನ್ನು ಮನೆಯಲ್ಲಿಟ್ಟುಕೊಂಡು ಓದುಗರ ಮನೆಗೆ ಪತ್ರಿಕೆ ಮುಟ್ಟಿಸಿ ಶವ ಸಂಸ್ಕಾರ ನೆರವೇರಿಸಿದೆವು’ ಎಂದು ವೆಂಕಟೇಶ್‌ ವಿವರಿಸಿದ್ದು ಅವರ ವೃತ್ತಿ ಪ್ರೇಮಕ್ಕೆ ಸಾಕ್ಷಿಯಾಗಿತ್ತು.

‘ಪ್ರಜಾವಾಣಿ’ ಆರಂಭದ ದಿನದಿಂದ ತಂದೆ ವೀರಣ್ಣ ಕುಡತಿನಿ ಅವರು ಹೊಸಪೇಟೆಯಲ್ಲಿ ಪತ್ರಿಕಾ ವಿತರಕರಾಗಿದ್ದರು. ಈ ಅವಿಭಕ್ತ ಕುಟುಂಬ 6 ದಶಕಗಳಿಂದ ಇದೇ ಕಾಯಕದಲ್ಲಿ ತೊಡಗಿದೆ. ಈ ಕಾರ್ಯಕ್ಕೆ ಕುಟುಂಬದ ಮಹಿಳೆಯರು ಕೈ ಜೋಡಿಸಿರುವುದು ವಿಶೇಷ. ಹಿರಿಯ ಸಹೋದರ ಹನುಮಂತಪ್ಪ ಅವರಿಂದ ಹಿಡಿದು ಕಾಲೇಜಿಗೆ ಹೋಗುವ ಮೊಮ್ಮಗ ವಾಗೀಶ್‌ ಕೂಡಾ ಪತ್ರಿಕಾ ವಿತರಣೆಯಲ್ಲಿಯೇ ತೊಡಗಿದ್ದು, ಕುಟುಂಬದ ಮಹಿಳೆಯರೂ ಇದೇ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಿಗ್ಗೆ 3 ಗಂಟೆಯಿಂದ ಆರಂಭವಾಗುವ ವೃತ್ತಿ ಬದುಕಿನಲ್ಲಿ ರಾತ್ರಿ 9 ಗಂಟೆವರೆಗೂ ಕುಟುಂಬದ ಸದಸ್ಯರು 3 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
*
ಪತ್ರಿಕೆಗಳ ವಿತರಣೆ ದಿನವೂ ಹೋರಾಟದ ಜೀವನ. ಪತ್ರಿಕೆ ಹಾಕುವ ಹುಡುಗರು ಹಾಗೂ ಓದುಗರೊಂದಿಗೆ ನಿತ್ಯವೂ ಸಂಘರ್ಷ ತಪ್ಪಿದ್ದಲ್ಲ. ನೋವಿರಲಿ, ನಲಿವಿರಲಿ ವೃತ್ತಿಯಿಂದ ವಿಮುಖರಾಗುವಂತಿಲ್ಲ.
– ಹನುಮಂತಪ್ಪ ಕುಡತಿನಿ
ವೆಂಕಟೇಶ್‌ ಸಹೋದರ
*

ಪತ್ರಿಕಾ ವಿತರಕರ ದಿನ ಏಕೆ?
2002ರಲ್ಲಿ ಮೈಸೂರು ನಗರದಲ್ಲಿ ತಂಗರಾಜು ಎಂಬ ವಿತರಕರೊಬ್ಬರು ಪತ್ರಿಕೆ ಹಂಚುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆಯಿತು. ಅಪಘಾತದಿಂದ ಅವರು ಸಾವನ್ನಪ್ಪಿದ್ದರು. ಪೊಲೀಸರಿಗೆ ದೂರು ಕೊಟ್ಟರೂ ಯಾವ ಪ್ರಯೋಜನವೂ ಆಗಲಿಲ್ಲ. ಈ ಘಟನೆಯಿಂದ ಎಚ್ಚೆತ್ತ ಮೈಸೂರು ನಗರ ಪತ್ರಿಕಾ ವಿತರಕರು ಸೇರಿ ಒಂದು ಸಂಘ ಸ್ಥಾಪಿಸಿದರು. ರಾಜ್ಯದಲ್ಲಿ ಬಲಾಢ್ಯ ಸಂಘ ಸ್ಥಾಪಿಸುವ ಗುರಿ ಹೊಂದಿದರು. ರಕ್ತನಿಧಿಯನ್ನೂ ಸ್ಥಾಪಿಸಿ ನೊಂದವರ, ಅಪಘಾತಕ್ಕೀಡಾದವರಿಗೆ ರಕ್ತದಾನ ಮಾಡುವ ಕೈಂಕರ್ಯಕ್ಕೆ ಮುಂದಾದರು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್‌ 4ರಂದು ಪತ್ರಿಕಾ ವಿತರಕರ ದಿನವನ್ನಾಗಿ ಆಚರಿಸತೊಡಗಿದರು. ಈಗ ರಾಜ್ಯದಾದ್ಯಂತ ಪತ್ರಿಕಾ ವಿತರಕರಿಗಿದು ಮಂಥನದ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT