ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆ ಎದುರೇ ಅಕ್ರಮ?

ಮೊಳಕಾಲ್ಮುರು: ಮರಳು ಬ್ಲಾಕ್‌ಗಳೇ ಇಲ್ಲ, ಮನೆ ಕಟ್ಟಲೂ ಸಮಸ್ಯೆ
Last Updated 26 ನವೆಂಬರ್ 2015, 11:03 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಕದ್ದುಮುಚ್ಚಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ತಾಲ್ಲೂಕಿನ ರಾಂಪುರದಲ್ಲಿ ಮಂಗಳವಾರ ಪೊಲೀಸರ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಕನ್ನಡಿಯಾಗಿದೆ’ ಎಂಬ ಮಾತುಗಳು ಕೇಳಿಬರುತ್ತಿವೆ.

ಮರಳಿಗೆ ಬಂಗಾರದ ಬೆಲೆ ಬಂದ ದಿನದಿಂದಲೂ ತಾಲ್ಲೂಕಿನಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದೆ. ಇದಕ್ಕೆ ಏಳು ವರ್ಷಗಳ ಹಿಂದೆ ವೆಂಕಟಾಪುರ ಬಳಿ ಜಿನಗಿಹಳ್ಳದಲ್ಲಿ ನಡೆದ ಮದುವೆ ದಿಬ್ಬಣ ಎತ್ತಿನಗಾಡಿ ದುರಂತದಲ್ಲಿ ಮೃತಪಟ್ಟ 22 ಮಂದಿ ಅಮಾಯಕರ ಸಾವು ಸಾಕ್ಷಿಯಾಗಿದೆ. ಆದರೂ, ‘ಸತ್ತವರು ಸತ್ತರು’ ಎಂದು ಮಾಡಿದ ನಿರ್ಲಕ್ಷ್ಯದ ಕಾರಣ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಿರುವ ಜತೆ ರಾಜಕೀಯ ಬಣ್ಣ ಬಳಿದುಕೊಳ್ಳಲು ಕಾರಣವಾಗಿದೆ ಎಂಬ ಆರೋಪಗಳನ್ನೂ ಹಲವರು ಮಾಡುತ್ತಿದ್ದಾರೆ.

ತಾಲ್ಲೂಕಿನ ಜಿನಗಿನಹಳ್ಳದ ಪಾತ್ರವೇ ಮರಳು ಗಣಿಗಾರಿಕೆಗೆ ಮುಖ್ಯ ವೇದಿಕೆ. ಅಶೋಕ ಸಿದ್ದಾಪುರ, ನಾಗ ಸಮುದ್ರ,  ದೇವಸಮುದ್ರ, ಚಿಕ್ಕೇರಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅಕ್ರಮ ಮರಳು ವಶ ಪ್ರಕರಣಗಳಿಂದ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ತಹಶೀಲ್ದಾರ್‌ ಕೊಟ್ರೇಶ್‌, ‘ತಾಲ್ಲೂಕಿನಲ್ಲಿ ಎಲ್ಲಿಯೂ ಮಾರಾಟಕ್ಕೆ ಮರಳು ಬ್ಲಾಕ್‌ಗಳನ್ನು ಗುರುತಿಸಿಲ್ಲ. ಹಿರೇಕೆರೆಹಳ್ಳಿ, ರಾಮಸಾಗರ, ಅಮಕುಂದಿ, ಸಿದ್ದಾಪುರ, ಭಟ್ರಹಳ್ಳಿ, ಶಿರೇಕೊಳ, ತಳವಾರಹಳ್ಳಿ ಮುಂತಾದ ಕಡೆ ಅಕ್ರಮ ಮರಳು ಸಂಗ್ರಹ ಕಂಡುಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಲೋಡ್‌ ಗಟ್ಟಲೆ ಮರಳು ಸಂಗ್ರಹ ಮಾಡುವು ದನ್ನು ನೋಡಿದಲ್ಲಿ ಹೊರಭಾಗಕ್ಕೆ ಸಾಗಣೆ ಮಾಡುವ ಅನುಮಾನ ಮೂಡುತ್ತದೆ’ ಎಂದು ಹೇಳಿದರು.

ದೇವಸಮುದ್ರ ಹೋಬಳಿಯಲ್ಲಿ ಹೆಚ್ಚು ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಪಂಚಾಯ್ತಿ ಸದಸ್ಯ ಎಚ್‌.ಟಿ. ನಾಗರೆಡ್ಡಿ ಅವರನ್ನು ಮಾತನಾಡಿಸಿ ದಾಗ, ‘ಜಿನಗಿಹಳ್ಳ ನದಿಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯು ವುದು ಸತ್ಯ. ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡವರು ಇದ್ದ ಸಾವಿರ ಲೆಕ್ಕದ ಮನೆ ನಿರ್ಮಾಣವೇ ಹೆಚ್ಚು. ಇದಕ್ಕೆ ಮರಳು ತೆಗೆದುಕೊಂಡ ಹೋಗುವುದಕ್ಕೆ ಅವಕಾಶ ನೀಡಬೇಕು. ಗುತ್ತಿಗೆದಾರರಿಗೂ ಸರ್ಕಾರ ಮರಳು ನೀಡಬೇಕು. ಆದರೆ ಇಲ್ಲಿಂದ ಬಳ್ಳಾರಿ, ಬೆಂಗಳೂರಿಗೆ ರಾತ್ರಿ ವೇಳೆ ಅಕ್ರಮ ಸಾಗಣೆ ಮಾಡುವುಕ್ಕೆ ಕಡಿವಾಣ ಹಾಕಬೇಕು’ ಎಂದರು.

ರಾಂಪುರ ಪ್ರತಿಭಟನೆ ವೇಳೆ ಪಕ್ಷವಾರು ನೋಡಿ ಮರಳು ಗಾಡಿ ಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಮುಖಂಡರೊಬ್ಬರು ಹೇಳಿಕೆ ನೀಡಿರು ವುದು ಎಲ್ಲಾ ಪಕ್ಷದವರೂ ಮರಳು ದಂಧೆಯಲ್ಲಿ ಇದ್ದಾರೆ ಎಂಬುದಕ್ಕೆ ಪುಷ್ಠಿ ನೀಡುತ್ತಿದೆ. ಈಗಾಗಲೇ ತಾಲ್ಲೂಕಿನಲ್ಲಿ 1,000 ಅಡಿ ಆಳಕ್ಕೆ ಕೊರೆದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದ್ದು ರಾಜಕೀಯವಾಗಿ ಹಾಗೂ ಸಾಮಾಜಿಕ ವಾಗಿ ಮರಳು ರಕ್ಷಣೆ ಮಾಡುವ ಮೂಲಕ ಅಂತರ್ಜಲ ಮತ್ತಷ್ಟು ಆಳಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು ಎಂಬುದು ಸಾರ್ವಜನಿಕರ ಮನವಿ.

ರಾಂಪುರ ಪೊಲೀಸ್‌ ಠಾಣೆ ವ್ಯಾಪ್ತಿ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಆದರೆ, ಬೆಂಗಳೂರಿಗೆ ಸಾಗಣೆ ಬಗ್ಗೆ ತಿಳಿದಿಲ್ಲ.
ಗುಡ್ಡಪ್ಪ,

ಪಿಎಸ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT