ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಸಂಘ ಕಟ್ಟಿ ಕೆಲಸ ಕಳೆದುಕೊಂಡರು!

38 ವರ್ಷದ ಹಿಂದಿನ ಘಟನೆ ನೆನೆದು ಗದ್ಗದಿತರಾದ ವೀರನಾಗಯ್ಯ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ತೋವಿನಕೆರೆ (ತುಮಕೂರು ಜಿಲ್ಲೆ): ‘ಪೊಲೀಸರೆ ಆತುರಪಡಬೇಡಿ, ಪ್ರಚೋ ದನೆಗೆ ಒಳಗಾಗಬೇಡಿ. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಿ’ ಎಂದು ಮಾತು ಮುಗಿಸುವ ಮುನ್ನವೇ ಟಿ.ಕೆ. ವೀರನಾಗಯ್ಯ ಗದ್ಗದಿತರಾದರು. 

38 ವರ್ಷಗಳ ಹಿಂದೆ ಪೊಲೀಸರ ಸಂಘ ಕಟ್ಟಿದ ಆರೋಪದ ಮೇಲೆ ಕೆಲಸದಿಂದ ವಜಾಗೊಂಡವರು ವೀರನಾಗಯ್ಯ. ಮೂಲತಃ ಮಧುಗಿರಿ ತಾಲ್ಲೂಕಿನ ತಿಮ್ಲಾಪುರದ 82 ವರ್ಷದ ವೀರನಾಗಯ್ಯ ಈಗ ತುಮಕೂರಿನ ಮಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ.

ವೀರನಾಗಯ್ಯ 1958ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಜಿಲ್ಲೆಯಲ್ಲಿ ಸಂಘ ಕಟ್ಟಲು ಪ್ರಯತ್ನಿಸಿದರು ಎಂಬ ಕಾರಣಕ್ಕೆ ಅವರನ್ನು 1979ರಲ್ಲಿ  ಸೇವೆಯಿಂದ ವಜಾ ಮಾಡಲಾಯಿತು.

ಅಂದು ಧರ್ಮವೀರ ಆಯೋಗ ನೀಡಿದ್ದ ವರದಿಯಲ್ಲಿ ಐಪಿಎಸ್‌ ಅಧಿಕಾರಿಗಳನ್ನು ಹೊರತುಪಡಿಸಿ  ಕಾನ್‌ಸ್ಟೆಬಲ್‌ ಹಾಗೂ ಇನ್ನಿತರ ಅಧಿಕಾರಿಗಳು ಸಂಘ ರಚಿಸಿಕೊಳ್ಳಬಹುದೆಂದು ಹೇಳಿತ್ತು. ಹೀಗಾಗಿ ಅವರು ಕಾನ್‌ಸ್ಟೆಬಲ್‌ಗಳ ಸಂಘ ಕಟ್ಟಲು ಹೋಗಿ ಸಂಕಷ್ಟಗಳನ್ನೇ ಮೈಮೇಲೆ ಎಳೆದುಕೊಂಡರು. ಸತತ 28 ವರ್ಷದ ಅವರ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಗಲಿಲ್ಲ.

‘ಸಂಘ ಕಟ್ಟಲು ಅವಕಾಶ ಕೋರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆವು. ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ. ಸಂಘ ಕಟ್ಟಲು ನಿರ್ಧರಿಸಿದ್ದ ಕೇವಲ 15 ದಿನದಲ್ಲಿ ನಮ್ಮ ಕೈಗೆ ಸೇವೆಯಿಂದ ವಜಾ ಮಾಡಿದ್ದ ಆದೇಶ ಪತ್ರ ಬಂದಿತು. ಇದರಿಂದಾಗಿ ಹಲವು ಸಮಸ್ಯೆ ಎದುರಿ ಸಿದೆವು’ ಎಂದು ನೆನಪು ಬಿಚ್ಚಿಟ್ಟರು.

‘ಕೊಡಗಿನ ಕೆ.ಪಿ. ಕಾಳಪ್ಪ, ಶಿವಮೊಗ್ಗದ ಕೆ.ಬಿ.ಬಸವಂತಪ್ಪ,  ರೆಡ್ಡಿಹಳ್ಳಿ ಶೇಷಪ್ಪ, ಬೆಂಗಳೂರಿನ ಬಸವರಾಜಯ್ಯ, ಎನ್.ಎಸ್. ಕೃಷ್ಣಮೂರ್ತಿ, ಪಿ.ಎಚ್.ರಂಗನಾಥ ಮತ್ತು ನಾನು ಸೇರಿದಂತೆ ಏಳು ಮಂದಿ ಕೆಲಸದಿಂದ ವಜಾಗೊಂಡೆವು. ಅಂದು ಸರ್ಕಾರಿ ನೌಕರರ ಸಂಘ ನಮ್ಮ ಪರವಾಗಿತ್ತು. ಆದರೂ ಸರ್ಕಾರ ನಮ್ಮ ಪರ ನಿಲ್ಲಲಿಲ್ಲ’ ಎಂದರು.

‘ಅಂದಿನ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಬಿ.ಎನ್. ಗರುಡಾಚಾರ್ ನಮ್ಮ  ವಜಾದ ಪರವಾಗಿ ಇದ್ದರು. ಹೈಕೋರ್ಟ್‌ನಲ್ಲಿ ಈ ವಜಾ ಆದೇಶವನ್ನು ಪ್ರಶ್ನಿಸಿದೆವು. ರಾಜ್ಯಪಾಲರ ಗಮನಕ್ಕೆ ತರದೇ ಸರ್ಕಾರ ವಜಾ ಅದೇಶ ನೀಡಿರುವುದು ಸರಿಯಲ್ಲ.

ಆದರೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂಬ ಅರ್ಥದಲ್ಲಿ 1981ರಲ್ಲಿ ನ್ಯಾಯಾಲಯ ಆದೇಶ ನೀಡಿತು. ಮತ್ತೆ ಕೆಲಸಕ್ಕೆ ಸೇರಿದೆವು. ಆದರೆ ಕೆಲವು ದಿನಗಳಲ್ಲಿಯೇ ರಾಜ್ಯಪಾಲರ ಮೂಲಕ ಮತ್ತೆ ವಜಾ ಆದೇಶ ನೀಡಲಾಯಿತು. ಅಷ್ಟರಲ್ಲಿ ನಮ್ಮ ಕ್ಯೆಯಲ್ಲಿದ್ದ ಹಣ ಖಾಲಿಯಾಗಿತ್ತು’ ಎಂದು ಸಮಸ್ಯೆಗಳನ್ನು ಎದುರಿಸಿದ್ದನ್ನು ವಿವರಿಸಿದರು.

‘ವಜಾ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ  ಮೇಲ್ಮನವಿ ಸಲ್ಲಿಸಿದೆವು. ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ನೀಡಬಹುದಾದ ಸೌಲಭ್ಯಗಳ ಬಗ್ಗೆ ಸರ್ಕಾರ ಪರಿಶೀಲಿಸಬಹುದು ಎಂದು ತೀರ್ಪು ನೀಡಿತು’ ಎನ್ನುವಾಗ ಅವರ ಕಣ್ಣಾಲಿಗಳು ತುಂಬಿ ಬಂದವು. 

‘ವಜಾ ಆದಾಗಿನಿಂದ ಅಂದರೆ 1979ರಿಂದ 2007ರವರೆಗೆ  ಬಂದು ಹೋದ ಎಲ್ಲ ಮುಖ್ಯಮಂತ್ರಿಗಳು, ಗೃಹ ಸಚಿವರನ್ನು ಭೇಟಿ ಮಾಡಿ  ಸರ್ಕಾರದಿಂದ ಬರಬೇಕಾದ ಸೌಲಭ್ಯ ಕೊಡುವಂತೆ ಪರಿಪರಿಯಾಗಿ ಬೇಡಿ ಕೊಂಡರೂ  ಪ್ರಯೋಜನ ವಾಗಲಿಲ್ಲ’ ಎಂದರು.
– ಎಚ್.ಜೆ.ಪದ್ಮರಾಜು

*
ಗಂಡನ ಕಷ್ಟಕ್ಕೆ ಒಡವೆಗಳನ್ನು ಕೊಟ್ಟೆ. ಅವರ 24 ವರ್ಷದ ಸೇವೆಯನ್ನು ಸರ್ಕಾರ ಸ್ವಲ್ಪವೂ ಪರಿಗಣಿಸಲಿಲ್ಲ. ನಮಗೆ ಕನಿಷ್ಠ ಸೌಲಭ್ಯ ಸಹ ನೀಡಲಿಲ್ಲ
ಸಿದ್ದಗಂಗಮ್ಮ , ವೀರನಾಗಯ್ಯ ಅವರ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT