ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರಿಗೆ ಬೇಕಿದೆ ಟ್ಯೂಷನ್!

Last Updated 4 ಜೂನ್ 2016, 19:30 IST
ಅಕ್ಷರ ಗಾತ್ರ

ಜೂನ್‌ ಆರಂಭದೊಂದಿಗೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಇದರೊಂದಿಗೆ ಅಮ್ಮಂದಿರು ಅಪ್ಪಂದಿರ ಕನವರಿಕೆ – ಚಡಪಡಿಕೆಗಳು ತೀವ್ರಗೊಂಡಿವೆ. ಈ ತೀವ್ರತೆಯ ಕೇಂದ್ರದಲ್ಲಿ ಇರುವುದು ಮುದ್ದುಮಕ್ಕಳು! ಹೆತ್ತವರ ಅತಿ ನಿರೀಕ್ಷೆಗಳು ಮಕ್ಕಳ ಪಾಲಿಗೆ ಹೇರಿಕೆಗಳಾಗಿ ಪರಿಣಮಿಸುವ ವೈರುಧ್ಯದ ಬಗ್ಗೆ ನಾವು ಯೋಚಿಸುವುದು ಕಡಿಮೆ.

‘ನಮ್ಮ ಬದುಕಿನ ಉದ್ದೇಶವೇ ಮಕ್ಕಳನ್ನು ಸುಖವಾಗಿಡುವುದು ಮತ್ತು ಅವರ ಬದುಕಿನ ನಾಳೆಗಳನ್ನು ಹಸನಾಗಿಸುವುದು’ ಎಂದು ನಂಬುವ ಪೋಷಕರು, ತಮಗರಿವಿಲ್ಲದಂತೆಯೇ ಮಕ್ಕಳ ಪಾಲಿಗೆ ‘ವಿಲನ್‌’ಗಳಾಗುತ್ತಾರೆ. ಈಗ ನಿಜವಾದ ಪಾಠ ಬೇಕಿರುವುದು ಎಳೆಯ ಕೂಸುಗಳನ್ನು ಹೊಂದಿರುವ ಯುವ ತಾಯಿತಂದೆಯರಿಗೆ.

ಪೋಷಕತ್ವ ಸತ್ವ: ಜಿಜ್ಞಾಸೆಯ ಸಿಕ್ಕುಗಳು
ಇವತ್ತು ಮಾರುಕಟ್ಟೆಯೇ ಮಹತ್ವಾಕಾಂಕ್ಷೆಯನ್ನು ಬಿತ್ತುತ್ತಿರುವುದು. ವಿದ್ಯಾಭ್ಯಾಸದ ಕಾಲದಲ್ಲಿ ಯಾವುದೇ ಒತ್ತಡ ಹಾಕದೆ ಜವಾಬ್ದಾರಿಯ ಜೊತೆಗೆ ಬದ್ಧತೆಯನ್ನು ಬೆಳೆಸುವ ಸವಾಲು ತಂದೆ ತಾಯಿಯರ ಮೇಲಿದೆ.

ನಮ್ಮ ಮಕ್ಕಳಿಗೆ ಬೇಕಿರುವುದು ಧನಾತ್ಮಕ ಉದಾಸೀನತೆ ಅಥವಾ ಒಳ ಬದುಕಿನ ಏಕಾಂತಕ್ಕೆ ಅನುವು ಮಾಡಿಕೊಡುವ ಬಿಡುವು. ಬೆಳಿಗ್ಗೆ ಶಾಲೆ, ಸಂಜೆ ಟ್ಯೂಷನ್ನು. ನಡುವಿನ ಬಿಡುವಿನಲ್ಲಿಯೇ ಸ್ಕೇಟಿಂಗ್ ಕ್ಲಾಸ್, ಭರತನಾಟ್ಯ. ಹೀಗಾದರೆ ಮಕ್ಕಳಿಗೆ ಸಹಜವಾಗಿಯೇ ಅಗತ್ಯವಿರುವ ಬಿಡುವು ಎಲ್ಲಿಂದ ಬರಬೇಕು? ಅವರನ್ನು ತಂತಾವೇ ಅರಳಲು ಬಿಡುವುದೇ ನನ್ನ ಪ್ರಕಾರ ನಿಜವಾದ ಪೋಷಕತ್ವ.

ಬಹುಮುಖ ಪ್ರತಿಭೆಯ ‘ಟೈಸನ್‌’ಗಳನ್ನು ತಯಾರು ಮಾಡಲು ಅಪ್ಪ ಅಮ್ಮಂದಿರು ಸಂಕಲ್ಪ ಮಾಡಿದಂತಿದೆ. ನಿರ್ದಿಷ್ಟ ವಿಷಯದ ಕುರಿತು ‘ಸ್ಕೋಪ್’ ಎಂದು ನಾವು ಸಿದ್ಧಾಂತ ಪ್ರತಿಪಾದಿಸುತ್ತೇವೆ. ಈ ಹರಹು ಅಥವಾ ಸ್ಕೋಪ್ ರೂಪಿಸಿರುವವರು ಯಾರು? ಇಂಥ ವಿಷಯಕ್ಕೇ ಭವಿಷ್ಯವಿದೆ ಎಂಬ ಅಭಿಪ್ರಾಯ ತುಂಬಿರುವವರು ಯಾರು? ಸಾಮಾನ್ಯವಾಗಿ ಮಗು ತನ್ನ ಹುಟ್ಟಿನಿಂದಲೇ ಧೈರ್ಯಶಾಲಿ ಆಗಿರುತ್ತದೆ.

ಕೈಗೆ ಹಾವು ಸಿಕ್ಕರೆ ಅದನ್ನು ಸಲೀಸಾಗಿ ಹಿಡಿದುಕೊಳ್ಳುವ ಮನಸ್ಥಿತಿ ಮಗುವಿನದು. ಅಂಥ ಮನಸ್ಸಿನಲ್ಲಿ ನಾವು ಭಯದ ಭಾವ ತುಂಬುತ್ತೇವೆ. ಆಮೇಲೆ, ಮಗುವಿಗೆ ‘ಹಾವೆಂದರೆ ಭಯ’ ಎಂಬ ಪ್ರಜ್ಞೆ ಜಾಗೃತವಾಗಿಬಿಡುತ್ತದೆ. ಓದಿನ ಆಯ್ಕೆಯ ವಿಷಯಕ್ಕೂ ಇದೇ ಪ್ರಕ್ರಿಯೆ ಅನ್ವಯವಾಗುವುದು. ಓದಿನ ಕುರಿತಂತೆ ಪ್ರೀತಿ ಬೆಳೆಸುವ ಬದಲು ನಾವು ಮಕ್ಕಳ ಮನಸ್ಸಿನಲ್ಲಿ ಭಯ – ಆತಂಕ ಬಿತ್ತುತ್ತಿದ್ದೇವೆ.

ಮೊನ್ನೆ ಮೊನ್ನೆಯವರೆಗೆ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆಯ ಬಿಡುವಿತ್ತು, ಅಲ್ಲವೇ? ಆಗ ಆಟದ ಮೈದಾನಗಳು ಮಕ್ಕಳಿಂದ ಗಿಜಿಗುಡುತ್ತಿದ್ದುವು. ಈಗ ಅಲ್ಲೆಲ್ಲಾ ಸೂತಕ. ಶಾಲಾ ಕಾಲೇಜು ಶುರುವಾದ ಮಾತ್ರಕ್ಕೆ ಆಟದ ಗೈರುಹಾಜರಿಯ ಇಂಥ ಸೂತಕ ಇರಕೂಡದು ಎನ್ನುವುದು ನನ್ನ ಭಾವನೆ. ಮನಸ್ಸು ನಿರ್ಭೀತವಾಗಿದ್ದರೆ ಮಾತ್ರ ಅದು ಮುಕ್ತ ಪರಿಶೋಧನೆಗೆ ತಹತಹಿಸಲು ಸಾಧ್ಯ.

ಅದನ್ನೇ ರವೀಂದ್ರನಾಥ ಟ್ಯಾಗೋರರು ‘ವೇರ್ ದಿ ಮೈಂಡ್ ಈಸ್ ವಿಥೌಟ್ ಫಿಯರ್’ ಎಂದು ಹೇಳಿದ್ದು. ನಮ್ಮಲ್ಲಿ ಬಹುತೇಕ ಪೋಷಕರು ಟ್ಯೂಷನ್, ಶಾಲಾ ಶಿಕ್ಷಣ ಮಾಫಿಯಾದ ಹಂಗಿಗೆ ಒಳಗಾಗಿಬಿಟ್ಟಿದ್ದಾರೆ.

ಮಕ್ಕಳು ತಮ್ಮ ಬೆನ್ನಮೇಲೆಯೇ ಪರೀಕ್ಷೆಯ ಭಾರ ಹೊತ್ತು ಸಾಗುವ ಪರಿಸ್ಥಿತಿ. ‘ಶಿಕ್ಷಣ ಪಡೆಯುವ ಮಕ್ಕಳನ್ನು ಸೃಷ್ಟಿಸುತ್ತಿದ್ದೇವೆ ವಿನಾ ಶಿಕ್ಷಿತ ಮಕ್ಕಳನ್ನಲ್ಲ’ ಎಂಬ ಮಾತೊಂದಿದೆ. ಎರಡರ ನಡುವಿನ ಸೂಕ್ಷ್ಮ ಗ್ರಹಿಸುವುದು ತುಂಬಾ ಮುಖ್ಯ.

ಪುಟ್ಟ ಮಗುವಿನ ಕೌನ್ಸೆಲಿಂಗ್
ಇತ್ತೀಚೆಗೆ ಒಬ್ಬರು ಫೋನ್ ಮಾಡಿ, ತಮ್ಮ ಮಗುವಿಗೆ ಕೌನ್ಸೆಲಿಂಗ್ ಮಾಡಬೇಕು ಎಂದು ಕೇಳಿಕೊಂಡರು. ಕರೆದುಕೊಂಡು ಬರುವಂತೆ ಹೇಳಿದೆ. ನಾನು ಆರಾಮ ಕುರ್ಚಿಯ ಮೇಲೆ ಕುಳಿತಿದ್ದೆ. ಅಪ್ಪ ಅಮ್ಮನ ಜೊತೆ ನಾಲ್ಕು ವರ್ಷದ ಮಗು ಬಂದಿದ್ದು ನೋಡಿ ನನಗೆ ಅಚ್ಚರಿ­ಯಾಯಿತು.

ಆ ಮಗು ಬಲು ಚುರುಕು. ಬಂದು ನನ್ನ ತೊಡೆಯ ಮೇಲೆ ಕುಳಿತುಕೊಂಡಿತು. ಸ್ವಲ್ಪಹೊತ್ತಿನಲ್ಲೇ, ಆರ್ಮ್ ರೆಸ್ಟ್ ಮೇಲೇರಿ ಮುಖದ ತುಂಬಾ ನಗು ತುಳುಕಿಸಿತು. ಆ ಆರೋಗ್ಯವಂತ ಮಗುವಿಗೆ ಏನು ಕೌನ್ಸೆಲಿಂಗ್ ಮಾಡುವುದು? ದೊಡ್ಡವರೇ ಸಲಹೆಗಳನ್ನು ಧಿಕ್ಕರಿಸುವ ಈ ಕಾಲಘಟ್ಟದಲ್ಲಿ, ಮುಗ್ಧ ಮಗುವಿಗೆ ಕೌನ್ಸೆಲಿಂಗ್ ಮಾಡಿಸಲೆಂದು ಕರೆದುಕೊಂಡು ಬಂದವರು ನನಗೆ ರಾಕ್ಷಸರಂತೆ ಕಂಡರು.

ಪ್ರೀ ನರ್ಸರಿ, ನರ್ಸರಿ, ಕಿಂಡರ್ ಗಾರ್ಟನ್, ಕಿರು ಪರೀಕ್ಷೆ, ಪ್ರಿಪರೇಟರಿ ಹೀಗೆ ಬಾಲ್ಯಾವಸ್ಥೆಯಲ್ಲೇ ಪರೀಕ್ಷೆಯ ವಿಶಾಲ ನೆರಳಿನಡಿ ಮಕ್ಕಳನ್ನು ನಿಲ್ಲಿಸುತ್ತಿದ್ದೇವೆ. ನನ್ನ ಸಂಬಂಧಿಕರೊಬ್ಬರು ತಮ್ಮ ಮಗುವನ್ನು ಮೂರೂವರೆ ಲಕ್ಷ ರೂಪಾಯಿ ಫೀಸು ತೆತ್ತು ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸಿದರು. ಆ ಮಗು ಲ್ಯಾಪ್‌ಟಾಪ್ ತೆಗೆದುಕೊಂಡು ಹೋಯಿತು. ಅದನ್ನು ಸಹಪಾಠಿಗಳು ಎತ್ತಿಕೊಂಡರು.

ಆ ಜಾಣಮಗುವಿಗೆ ಅದನ್ನು ಮರಳಿ ಪಡೆಯುವಷ್ಟು ಚಾಕಚಕ್ಯತೆ ಇದೆ. ಲ್ಯಾಪ್‌ಟಾಪ್‌ನ ಪರದೆಯ ಮೇಲೆ ಮಗುವಿನ ಕಣ್ಣುಕೋರೈಸುವ ಭವಿಷ್ಯ ಹೆತ್ತವರಿಗೆ ಕಾಣಿಸುತ್ತದೇನೊ! ಆದರೆ, ಅದರ ಬಾಲ್ಯ ಆ ಲ್ಯಾಪ್‌ಟಾಪ್‌ನ ಪರದೆಯಲ್ಲೇ ಎಲ್ಲೋ ಕಳೆದುಹೋಗುತ್ತಿದೆಯೇ ಎನ್ನುವುದು ನನ್ನ ಆತಂಕ.

ನನ್ನ ಅಣ್ಣನಿಗೆ ಅವಳಿ ಮಕ್ಕಳು. ಅವರಲ್ಲಿ ಒಬ್ಬಳು ಜರ್ಮನಿಗೆ ಹೊರಟಳು. ಅವಳಿಗೆ ತನ್ನ ಮಗು ಎಂಜಿನಿಯರಿಂಗ್ ಓದಬೇಕಾದರೆ ಆ ದೇಶದಲ್ಲಿಯೇ ಹತ್ತು ವರ್ಷ ವಾಸಿಸಲು ಅನುಮತಿಯ ಸರ್ಟಿಫಿಕೇಟ್ ಪಡೆಯುವುದು ಹೇಗೆ ಎಂಬ ಪ್ರಶ್ನೆ. ಈಗ ಒಂದನೇ ತರಗತಿಯಲ್ಲಿ ಓದುತ್ತಿರುವ ಮಗನನ್ನು ವಿದೇಶದಲ್ಲಿ ಎಂಜಿನಿಯರ್ ಮಾಡುವ ಇಷ್ಟು ದೊಡ್ಡ ದೂರದೃಷ್ಟಿ ನೋಡಿ ನನಗೆ ನಗು ಬಂತು.

ನನ್ನ ಅಣ್ಣ ತನ್ನ ಮಗಳನ್ನು ಬೆಳಿಗ್ಗೆ 5.30ಕ್ಕೆ ಎಬ್ಬಿಸಿ, ಓದಲು ಕೂರಿಸುತ್ತಿದ್ದ. ತಾನೇ ಕಾಫಿ ಮಾಡಿ ಅವಳಿಗೆ ಕೊಟ್ಟು, ಎದುರಲ್ಲಿ ಕುಳಿತು ‘ಯಾವ ಸಬ್ಜೆಕ್ಟ್ ಓದುತ್ತಿರುವೆ’ ಎಂದು ವಿಚಾರಿಸಿಕೊಳ್ಳುತ್ತಿದ್ದ. ಆ ವಿಷಯದಲ್ಲಿ ಎಷ್ಟು ಮಾರ್ಕ್ಸ್ ಬರುತ್ತದೆ ಎಂದು ಕೇಳಿ, ದಿನವೂ ಅದನ್ನು ರೆಕಾರ್ಡ್ ಮಾಡಿಕೊಳ್ಳುವುದೂ ಅವನಿಗೆ ರೂಢಿಯಾಗಿತ್ತು. ಅದನ್ನು ನಾನು ವಿರೋಧಿಸಿದಾಗ, ಮಗಳು ನನ್ನ ಸಲಹೆ ಕೇಳದಂತೆ ಬೇಲಿ ಹಾಕಿಬಿಟ್ಟ.

ಕೊಳ್ಳುಬಾಕತನದ ಕೆಡುಕು
ಮಕ್ಕಳ ಮೇಲಿನ ನಮ್ಮ ಹೇರಿಕೆಗಳಿಗೆಲ್ಲ ಏನು ಕಾರಣ ಎಂದು ಯೋಚಿಸಿದರೆ ‘ಕೆಟ್ಟ ಕೊಳ್ಳುಬಾಕತನ’ ಎಂಬ ಚುಟುಕಾದ ಉತ್ತರ ಸಿಕ್ಕೀತು. ನಗರೀಕರಣ, ಕೈಗಾರೀಕರಣ, ಜಾಗತೀಕರಣ, ಉದಾರೀಕರಣ ಇವೆಲ್ಲದರ ಫಲವೇ ಕೆಟ್ಟ ಕೊಳ್ಳುಬಾಕತನ.

‘ಪೋಷಕತ್ವ’ ಎಂದರೆ ಮಗುವಿಗೆ ತಿನ್ನಲು, ಓದಲು ಅವಕಾಶ ಕಲ್ಪಿಸಿ ಸಲಹುವುದಷ್ಟೇ ಅಲ್ಲ. ಬದುಕಿಗೆ ಅಣಿಯಾಗಲು ಮಗುವನ್ನು ರೂಪಿಸುವುದರಲ್ಲಿ ‘ಪೋಷಕತ್ವ’ದ ನಿಜ ಪರೀಕ್ಷೆ ಇದೆ. ಆದರೆ, ಕೆಟ್ಟ ಕೊಳ್ಳುಬಾಕತನದಿಂದಾಗಿ ‘ಪೊಲಿಟಿಕಲಿ ಕರೆಕ್ಟ್ ಚೈಲ್ಡ್’ ಅನ್ನು ನಾಡಿಗೆ ಕೊಡಲು ಎಲ್ಲ ಪೋಷಕರೂ ಟೊಂಕ ಕಟ್ಟಿದ್ದಾರೆ. ‘ಅಂಕಗಳೇ ಅಭಿವೃದ್ಧಿ’ ಎಂಬ ಸಂಕೇತ ಅಪ್ಪಿಕೊಂಡ ಮಂದಿ ಇವರು.

ಸಶಕ್ತ ಬದುಕಿಗೆ ತಮ್ಮ ಮಗುವನ್ನು ಎಷ್ಟು ಜನ ಸಿದ್ಧಗೊಳಿಸುತ್ತಿದ್ದಾರೆ? ಉತ್ತರ ನಿರಾಶೆ ಹುಟ್ಟಿಸುತ್ತದೆ. ನಾವೆಲ್ಲ ಮಕ್ಕಳನ್ನು ಸಿದ್ಧಗೊಳಿಸುತ್ತಿರುವುದು ಪರೀಕ್ಷೆಗಳಿಗೆ ಅಲ್ಲವೇ? ಕೊಳ್ಳುಬಾಕತನದ ಕೆಡುಕಿನ ಕವಲೇ ಕೆಟ್ಟ ಧಾವಂತ. ‘ಮಯ್ಯಾಸ್‌’ನವರು ಕೆಲವು ವರ್ಷಗಳ ಹಿಂದೆ ಐದು ರೂಪಾಯಿಗೆ ಒಂದು ಐಸ್‌ಕ್ರೀಂ ಪರಿಚಯಿಸಿದರು.

ನಾಳೆ ಇಲ್ಲವೇನೋ ಎನ್ನುವಂತೆ ಎಲ್ಲರೂ ಅದನ್ನು ಮುಗಿಬಿದ್ದು ಸವಿದರು. ಪರೀಕ್ಷೆಯ ಧಾವಂತವೂ ಹಾಗೆಯೇ. ಶಾಲೆಗೆ ಹೋಗಲು ಅಣಿಯಾಗಿ ಮೊದಲ ದಿನ ಸಮವಸ್ತ್ರ ತೊಟ್ಟಿದ್ದೇ ಪರೀಕ್ಷಾ ದೀಕ್ಷೆ ತೆಗೆದುಕೊಂಡಂತೆ. ಅಪ್ಪ ಒಂದು ದ್ವೀಪ, ಅಮ್ಮ ಇನ್ನೊಂದು ದ್ವೀಪ. ಈ ಎರಡು ದ್ವೀಪಗಳ ನಡುವೆ ಸಂಪರ್ಕ ಕಲ್ಪಿಸುವ ಹಡಗು ಮಗುವಾಗಬೇಕು ಎನ್ನುವುದು ಕವಿಯ ಆಶಯ.

ಆದರೆ, ಆಧುನಿಕ ಸಂದರ್ಭದಲ್ಲಿ ಮಗುವಿಗೂ ಒಂದು ದ್ವೀಪವಿದೆ. ಅದು ಪರೀಕ್ಷಾ ದ್ವೀಪದ ಪ್ರಪಂಚ. ಹೀಗಿರುವಾಗ ಅಗತ್ಯ ಧ್ಯಾನಸ್ಥ ಗುಣ ಬರುವುದಾದರೂ ಹೇಗೆ? ಬದುಕಿಗೆ ಅಣಿಯಾಗಲು ‘ಧ್ಯಾನಸ್ಥ ಗುಣ’ ಅತ್ಯವಶ್ಯಕ.

‘ಇಂಗ್ಲಿಷ್ ಕಲಿಯೋದೇ ಜಾಣತನ’ ಎನ್ನುವುದು ಇನ್ನೊಂದು ಜನಪ್ರಿಯ ನಂಬಿಕೆ. ಹಳ್ಳಿಗಳ ಮಕ್ಕಳು ಇಂಗ್ಲಿಷ್ ಕಲಿಯಲು ಹಂಬಲಿಸುವುದು ಕೂಡ ತಮ್ಮೂರಿನಿಂದ ಯಾವಾಗ ಹೊರಬರುತ್ತೇವೋ ಎನ್ನುವ ನಿರೀಕ್ಷೆಯಲ್ಲಿ. ‘ತಮ್ಮದು ಶ್ರೇಷ್ಠ ಶಿಕ್ಷಣ ಸಂಸ್ಥೆ’ ಎಂದು ಹೇಳಿಕೊಳ್ಳುವುದರಲ್ಲೇ ಒಂದು ಮುಗುಮ್ಮಾದ ಮೋಸವಿದೆ. ಗ್ರಾಮೀಣ ಪ್ರದೇಶಗಳಲ್ಲೂ ಕಾನ್ವೆಂಟ್‌ಗಳ ಭರಾಟೆ ಕಾಣಿಸುತ್ತಿದೆ.

ತಮ್ಮ ಶಾಲೆಗೆ ಸೇರಿಸುವಂತೆ ಮೊಬೈಲ್‌ಗಳಿಗೆ ಸಂದೇಶಗಳನ್ನು ಕಳುಹಿಸಿ ಗಾಳ ಹಾಕುವ ಅವುಗಳ ಕೊಳ್ಳುಬಾಕತನದ ಪ್ರಲೋಭನೆಗೆ ಹಳ್ಳಿಗರೂ ಸುಲಭವಾಗಿ ಸಿಲುಕಿಕೊಳ್ಳುತ್ತಿದ್ದಾರೆ.

ಭರವಸೆಯ ಕ್ಷೋಭೆ
‘ಹೆರಿಗೆಯ ನೋವೇ ಇಲ್ಲದ ಕಾಲಘಟ್ಟವಿದು’ ಎಂದು ಯಾರೋ ಒಬ್ಬರು ನನ್ನಲ್ಲಿ ಹೇಳಿದ್ದರು. ಇದು ಎಂಥ ರೂಪಕ? ಪೋಷಕತ್ವದ ದೃಷ್ಟಿಯಲ್ಲಿ ಇದು ತುಂಬಾ ಮಹತ್ವದ ಸಂಗತಿ. ಮಗುವಿನ ಹುಟ್ಟಿನಿಂದ ಹಿಡಿದು,

ಅದರ ಬದುಕನ್ನು ರೂಪಿಸುವ ಎಲ್ಲಾ ಹಂತಗಳನ್ನು ಅತಿಯಾದ ದೂರದೃಷ್ಟಿಯಿಂದ ಯೋಚಿಸುವುದರ ಫಲವೇ ಇವತ್ತಿನ ಶೈಕ್ಷಣಿಕ ವ್ಯವಸ್ಥೆ. ಇನ್ನೊಂದು ಕಡೆ ಪೋಷಕರ ಭರವಸೆಯ ಕ್ಷೋಭೆ. ಇಂಗ್ಲಿಷ್‌ನಲ್ಲಿ ಇದನ್ನು ‘ಕ್ರೈಸಿಸ್ ಆಫ್ ಕಾನ್ಫಿಡೆನ್ಸ್’ ಎನ್ನುತ್ತಾರೆ.

ನಾವು ಮಕ್ಕಳ ಜೊತೆ ಸ್ನೇಹಿತರ ಹಾಗೆ ಇದ್ದೇವೆ ಎಂದು ಎಷ್ಟೋ ಅಪ್ಪ–ಅಮ್ಮಂದಿರು ಹೇಳಿಕೊಳ್ಳುತ್ತಾರೆ. ನನ್ನ ಪ್ರಕಾರ ಅದು ತಪ್ಪು. ಪೋಷಕರು ಸ್ನೇಹಿತರಾಗಬೇಕಿಲ್ಲ; ಪೋಷಕರೇ ಆಗಬೇಕು. ಸೌಕರ್ಯ ಕಲ್ಪಿಸಿ, ಯಶಸ್ಸನ್ನು ನಿರೀಕ್ಷಿಸುತ್ತಾ ಪ್ರಲೋಭನೆಗಳ ಹೂತೋಟದಲ್ಲಿ ಮಕ್ಕಳನ್ನು ನಿಲ್ಲಿಸಿಬಿಟ್ಟರೆ ಏನು ಭಾಗ್ಯ?

ಸರಳ ಪೋಷಕತ್ವದ ಮಹತ್ವಾಕಾಂಕ್ಷೆಗಳೇ ಮಾಯವಾಗಿರುವ ಕಾಲಘಟ್ಟದಲ್ಲಿ ನಾವಿಂದು ಬದುಕುತ್ತಿದ್ದೇವೆ. ನಮ್ಮ ಮನೆಯ ಹತ್ತಿರ ನಡೆಯುವ ಟ್ಯೂಷನ್ಸ್ ನೋಡಿದರೆ, ಅಲ್ಲಿಗೆ ಬರುವ ಮಕ್ಕಳ ಪೋಷಕರಿಗೆ ‘ಟ್ಯೂಷನ್’ ಅಗತ್ಯವಿದೆ ಎನ್ನಿಸುತ್ತದೆ.

ಟ್ಯೂಷನ್‌ಗೆಂದು ಬರುವ ಮಕ್ಕಳನ್ನು, ನಾನು ಬಿಡುವು ಮಾಡಿಕೊಂಡು, ಅವರಿಗೆ ತಿಂಡಿ ಕೊಟ್ಟು ಮಾತನಾಡಿಸುತ್ತೇನೆ. ಅವರು ಹೇಳುವುದನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತೇನೆ. ಒಂದು ಮಗು, ‘ನೀವು ಯಾಕೆ ನನ್ನ ಪೇರೆಂಟ್ ಆಗಲಿಲ್ಲ’ ಎಂದು ಕೇಳಿಬಿಟ್ಟಿತು. ಕರುಳು ಚುರ್ರೆಂದಿತು.

ತಂತ್ರಜ್ಞಾನ ಪ್ರಣೀತ ವ್ಯವಸ್ಥೆಯಲ್ಲಿ ಯಾಂತ್ರಿಕ ಸವಲತ್ತುಗಳು ಮುಖ್ಯವಾಗಿವೆ. ಸಂವಹನ ಸಾಧ್ಯತೆಗಳು ವಿಸ್ತರಿಸಿಕೊಂಡಿರುವುದರಿಂದ ಜವಾಬ್ದಾರಿಯೇ ಇಲ್ಲದ ಸ್ವಾತಂತ್ರ್ಯ ಅನುಭವಿಸುವವರ ಸಂಖ್ಯೆ ದೊಡ್ಡದಾಗಿದೆ. ಆಧ್ಯಾತ್ಮಿಕ ಮೌಲ್ಯಗಳು ಕ್ಷೀಣಿಸುತ್ತಿರುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ.


ಪ್ರತಿಭಾ ಪ್ರದರ್ಶನ ಈ ಕಾಲದ ‘ಇಶ್ಯೂ’. ಅಮಾನವೀಯ ನೆಲೆಗಟ್ಟಿನಲ್ಲಿಯಾದರೂ ಅದನ್ನು ಸಾಧಿಸುವುದು ಹೇಗೆ ಎಂಬ ದಾರಿಗಳನ್ನು ಪೋಷಕರು ತಮಗೆ ಅರಿವೇ ಇಲ್ಲದೆಯೇ ಹುಡುಕತೊಡಗಿದ್ದಾರೆ ಎನಿಸುತ್ತದೆ. ಇಂಥ ಹುಡುಕಾಟದಲ್ಲಿ ನಿಜವಾದ ಅನ್ವೇಷಣೆಗೆ ಅವಕಾಶವೇ ಇಲ್ಲ.

ಅಪ್ಪ–ಅಮ್ಮ–ಮಕ್ಕಳ ನಡುವೆ ಸಂವಾದಗಳಿಲ್ಲ. ಮಕ್ಕಳನ್ನು ಅವರ ವಯಸ್ಸಿಗೂ ಮೀರಿ ಪ್ರಬುದ್ಧರನ್ನಾಗಿಸುವುದರಲ್ಲಿ ಪೋಷಕರಿಗೆ ಹೆಮ್ಮೆ. ಇವತ್ತು ಕಡಿಮೆ ಸರಾಸರಿ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಭವಿಷ್ಯವೇ ಇಲ್ಲ ಎನ್ನುವಂಥ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿಬಿಟ್ಟಿದೆ.

ಆಂಧ್ರದಲ್ಲಿ ಐದನೇ ತರಗತಿಯ ಓರ್ವ ವಿದ್ಯಾರ್ಥಿಗೆ ಪಿಯುಸಿ ನಂತರ ಬರೆಯುವ ಸಿ.ಇ.ಟಿ.ಗೆ ಅಣಿಯಾಗಲು ಅವಕಾಶ ಕಲ್ಪಿಸಿದ್ದಾರೆ. ವರ್ಷಕ್ಕೆ 300 ಕೋಟಿ ರೂಪಾಯಿಯಷ್ಟು ವಹಿವಾಟು ಇರುವ ಟ್ಯೂಷನ್ ಮಾಫಿಯಾ ಇದು. ವೈದ್ಯನೋ ಎಂಜಿನಿಯರ್ರೋ ಆಗಲು ಏಳು ವರ್ಷ ಹೆಣಗಾಡುತ್ತಾ, ಕೊನೆಗೆ ಬಾಲ್ಯವನ್ನು ಹೂತುಹಾಕಿಬಿಡುವ ಇಂಥ ಮಾದರಿಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳುವುದಾದರೂ ಹೇಗೆ?

ಅಪ್ಪ ಕಲಿಸಿದ ಪಾಠ
ನಾನು ಓದಿದ್ದು ಕಾರ್ಪೊರೇಷನ್ ಶಾಲೆಯಲ್ಲಿ. ನನ್ನ ಅಪ್ಪ ಎಂದೂ ‘ಹೀಗೇ ಆಗು’ ಎಂದು ತಾಕೀತು ಮಾಡಿದವರಲ್ಲ. ‘ಬದುಕುವುದನ್ನು ಕಲಿ’ ಎನ್ನುತ್ತಿದ್ದರಷ್ಟೆ. ಒಮ್ಮೆ ಪೋಸ್ಟ್ ಆಫೀಸ್‌ಗೆ ಹೋಗಿದ್ದೆ. ಅಲ್ಲಿ ಹತ್ತು ರೂಪಾಯಿ ಸಿಕ್ಕಿತು. ಅದನ್ನು ತೆಗೆದುಕೊಂಡು ಖುಷಿಯಿಂದ ಮನೆಗೆ ಬಂದೆ. ನನ್ನ ಕೈಲಿ ಹತ್ತು ರೂಪಾಯಿ ನೋಡಿದ ಅಪ್ಪ, ‘ಯಾರದ್ದು ಈ ದುಡ್ಡು’ ಎಂದು ಕೇಳಿದರು. ‘ಸಿಕ್ಕಿತು’ ಎಂದಾಕ್ಷಣ ಕಪಾಳಕ್ಕೆ ಬಾರಿಸಿದರು.

‘ಯಾರೋ ಕಳೆದುಕೊಂಡ ದುಡ್ಡು ಎತ್ತಿಕೊಂಡು ಬಂದಿರುವೆ. ಅದನ್ನು ಕಳೆದುಕೊಂಡವರು ಎಷ್ಟು ಸಂಕಟ ಪಡುತ್ತಿದ್ದಾರೋ? ಅವರಿಗೆ ಏನು ಕಷ್ಟವೋ? ಮೊದಲು ಹೋಗಿ ಕೊಟ್ಟು ಬಾ’ ಎಂದು ಗದರಿದರು.

ತಕ್ಷಣ ನಾನು ಪೋಸ್ಟ್ ಆಫೀಸ್‌ಗೆ ಓಡಿಹೋದೆ. ಮೂರು ಗಂಟೆ ಕಾದಮೇಲೆ ಒಬ್ಬರು ಅಜ್ಜ ಬಂದರು. ಅದು ಅವರು ಕಳೆದುಕೊಂಡಿದ್ದ ದುಡ್ಡು ಎಂದು ಗೊತ್ತಾಯಿತು. ಅವರ ಕೈಗೆ ಅದನ್ನು ಕೊಟ್ಟಮೇಲೆ ಅಪ್ಪ ಹೇಳಿದ ಮಾತಿನ ಅರ್ಥ ನನಗೆ ಆಯಿತು.

ದಾರಿ ಯಾವುದೆಂದರೆ...
ಹಾಗಿದ್ದರೆ ಉತ್ತಮ ಪೋಷಕತ್ವ ಎಂದರೆ ಹೇಗಿರಬೇಕು ಎಂಬ ಪ್ರಶ್ನೆ ಉಳಿಯುತ್ತದೆ. ಸಹಜವಾಗಿ ಹೂವು ಅರಳಲು ಬಿಡಬೇಕು; ಹಾಗೆಯೇ ಮಕ್ಕಳೂ. ಅವರ ಸಣ್ಣ ಖುಷಿಯಲ್ಲಿ ಭಾಗಿಯಾಗಬೇಕು. ಚಿಕ್ಕ ಸಾಧನೆಗೆ ಬೀಗಬೇಕು.

ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಹಾಗೆ ಅವರು ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ನಿರೀಕ್ಷೆಗಳ ರಾಶಿಯ ಮೇಲೆ ಕೂರಿಸಿ, ಅವರು ಅಲ್ಲಿಂದ ಜಾರಿಬಿಟ್ಟರೆ ಗದರಕೂಡದು. ಅವರ ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಪದೇಪದೇ ಕಲ್ಪಿಸಬೇಕು.

ಅವರಿಗೆ ಯಾವ್ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಲು ಬಿಡಬೇಕು. ಹಿಂದಿನ ಪ್ರಯತ್ನಕ್ಕಿಂತ ಈಗಿನದ್ದರಲ್ಲಿ ಅವರು ಎಷ್ಟು ಸುಧಾರಿಸಿದ್ದಾರೆ ಎನ್ನುವುದಕ್ಕೆ ಒತ್ತುನೀಡಬೇಕು. ಅಲ್ಲಿ ಸುಧಾರಣೆ ಆಗುತ್ತಿದ್ದರೆ ಮಗುವಿನ ಕಲಿಕೆ ಸರಿಯಾಗಿದೆ ಎಂದೇ ಅರ್ಥ. ಅದನ್ನು ಬಿಟ್ಟು, ಬೇರೆ ಮಕ್ಕಳ ಜೊತೆ ತುಲನೆ ಮಾಡಿ ಹೀಗಳೆಯಬಾರದು.

ನನ್ನ ಮಗಳು ಹುಟ್ಟಿದ ದಿನ ಒಂದು ಸಂಕಲ್ಪ ಮಾಡಿದ್ದೆ; ಯಾವುದೇ ಕಾರಣಕ್ಕೂ ಅವಳನ್ನು ನೋಯಿಸಬಾರದು ಎಂದು. ಅದನ್ನು ಪಾಲಿಸಿಕೊಂಡು ಬಂದ ಹೆಮ್ಮೆ ನನ್ನದು. ಅವಳನ್ನು ನೋಯಿಸಲು ನಮ್ಮ ಇಡೀ ಸಮಾಜ ಸಿದ್ಧ ಇರುವಾಗ ನಾನೂ ಏಕೆ ನೋಯಿಸಬೇಕು.
ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕರು ಆಪ್ತಸಮಾಲೋಚಕರು ಹಾಗೂ ಬೋಧಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT