ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಸಭೆ ಏನು ಎತ್ತ?

ಅಕ್ಷರ ಗಾತ್ರ

‘ಮಮ್ಮಿ, ನಾಳೆ ಸ್ಕೂಲಲ್ಲಿ ‘ಪೆರೆಂಟ್ಸ್‌ ಮೀಟ್‌’ ಇದೆ. ನೀನು ಅಥವಾ ಪಪ್ಪಾ ಯಾರಾದ್ರೂ ಬರ್ಬೇಕು ಅಂತಾ ಮಿಸ್ ಹೇಳಿದಾರೆ’ ಎಂದು ನಿಮ್ಮ ಮಗು ಪ್ರತಿ ತಿಂಗಳಾಂತ್ಯಕ್ಕೆ ವರದಿ ಒಪ್ಪಿಸುತ್ತದೆ. ಈ ಕುರಿತು ಕ್ಲಾಸ್‌ ಡೈರಿಯಲ್ಲಿ ಆಯಾ ತರಗತಿಯ ‘ಮಿಸ್‌’ ಒಂದೆರಡು ದಿನ ಮುಂಚಿತವಾಗಿ ನೋಟ್‌ ಹಾಕಿ ‘ಮಿಟ್’ನ ಮನ್ಸೂಚನೆಯನ್ನೂ ನೀಡಿರುತ್ತಾರೆ.

‘ಪೋಷಕರ ಸಭೆಗೆ’ ಹಾಜರಾಗುವ ಬಹುತೇಕ ‘ಮಮ್ಮಿ’ಗಳು ಕೂಡ ಆಯಾ ಶಾಲೆಯ ಫ್ಯಾಷನ್, ಪ್ರೊಟೋಕಾಲ್, ಸ್ಟೇಟಸ್‌ಗೆ ತಕ್ಕಂತೆ ‘ಡ್ರೆಸ್‌’ ಮಾಡಿಕೊಂಡು ‘ಮೀಟಿಂಗ್’ಗೆ ಹಾಜರಾಗುತ್ತಾರೆ. ಅಲ್ಲಿ ಕೊಡುವ ಕಾಫಿ ಹೀರುತ್ತಾ, ತನ್ನಂತೆಯೇ ಮೀಟಿಂಗ್‌ಗೆ ಬಂದಿರುವ ಇತರ ಮಮ್ಮಿಗಳೊಡನೆ ಹರಟುತ್ತಾ, ತನ್ನ ಮಗುವನ್ನು ಅವರ ಮುಂದೆ ಹೊಗಳಿ, ಅವರ ಮಕ್ಕಳ ಹೊಗಳಿಕೆಯನ್ನು ಕೇಳಿ ಸಂತಸಪಡುತ್ತಾರೆ. ತಮ್ಮ ಮಗುವಿನ ದೌರ್ಬಲ್ಯ, ಸಮಸ್ಯೆಗಳನ್ನು ಮರೆಯುತ್ತಾರೆ.

ಅಲ್ಲದೆ, ಕ್ಲಾಸ್‌ ಟೀಚರ್‌ ಹೊಗಳುವ ತನ್ನ ಮಗುವಿನ ಸಾಮರ್ಥ್ಯ, ಪರಾಕ್ರಮಗಳ ಕುರಿತು ‘ಓ, ನಂಥಿಂಗ್‌ ಟು ಸೇ ಎಬೌಟ್‌ ಯುವರ್‌ ಚೈಲ್ಡ್‌, ಶಿ/ಹಿ ಇಸ್‌ ವೆರಿ ಸ್ಮಾರ್ಟ್‌ ಅಂಡ್ ಡಿಸಿಪ್ಲೇನ್ಡ್‌ ಎಂಬ ‘ಪಾಸಿಟಿವ್ ಫೀಡ್‌ಬ್ಯಾಕ್’ ಪಡೆದು, ಮನೆಗೆ ಮರಳುತ್ತಾರೆ. ಅಲ್ಲಿಗೆ ‘ಮೀಟಿಂಗ್’ ಮುಗಿಯಿತು! ಆದರೆ, ಅದೇ ದಿನ ಸಂಜೆ ಮಗು ಪುನಃ ಮೊಂಡಾಟ ತೋರಿದಾಗ, ಅಧ್ಯಯನದತ್ತ ಅವಧಾನ ಕೇಂದ್ರೀಕರಿಸದೇ ಇದ್ದಾಗ, ಹೋಂವರ್ಕ್‌ ಮಾಡಿಸಬೇಕು ಎಂದು ಕಾಯುತ್ತಿದ್ದರೂ ಎಷ್ಟೊತ್ತಾದರೂ ಆಟವನ್ನು ಬಿಟ್ಟು ಪಾಠದತ್ತ ಬರದೇ ಇದ್ದಾಗ, ಟಿ.ವಿ, ಕಂಪ್ಯೂಟರ್ ಅಥವಾ ಮೊಬೈಲ್ ಲೋಕದಲ್ಲಿ ಮುಳುಗಿದ್ದಾಗ ಮಮ್ಮಿಗೆ ಮಗುವಿನ ‘ಮಿಸ್’ ನೆನಪಾಗುತ್ತಾರೆ.

ಆಗ ಆ ‘ಮಿಸ್‌’ ಅನ್ನು ಹೊಗಳಬೇಕೋ, ತೆಗಳಬೇಕೋ ಅಥವಾ ‘ಮಿಸ್‌ಗೆ ಕಂಪ್ಲೆಂಟ್ ಮಾಡ್ತೀನಿ’ ಅಂತಾ ಮಗುವಿಗೆ ಹೆದರಿಕೆ ಹಾಕಿ ಅದನ್ನು ಒತ್ತಾಯಪೂರ್ವಕವಾಗಿ ಅಧ್ಯಯನದತ್ತ ಎಳೆದು ತರಬೇಕೋ ತಿಳಿಯುವುದಿಲ್ಲ. ಆಗ, ಮುಂದಿನ ಮೀಟಿಂಗ್‌ನಲ್ಲಿ ಮಗುವಿನ ಸಮಸ್ಯೆಗಳ ಕುರಿತು ಮಿಸ್‌ ಜತೆ ಚರ್ಚಿಸಲೇಬೇಕು ಎಂದು ನಿರ್ಧರಿಸುವ ಮಮ್ಮಿ, ಮತ್ತೆ ಮೀಟಿಂಗ್‌ಗೆ ಹೋದಾಗ ಆ ‘ಸಮಸ್ಯೆಯನ್ನು’ ಮರೆಯುತ್ತಾಳೆ ಅಥವಾ ಸಮಸ್ಯೆಯನ್ನು ಮರೆಯುವ ವಾತಾವರಣವನ್ನು ಶಾಲೆಯವರು ಸೃಷ್ಟಿಸಿರುತ್ತಾರೆ!

ಪೋಷಕರು ಏನು ಮಾಡಬೇಕು?
ಶಿಕ್ಷಕ– ಪೋಷಕರ ಸಭೆಯಲ್ಲಿ ಪೋಷಕರ ಪ್ರಮುಖ ಕರ್ತವ್ಯ ಎಂದರೆ, ಪ್ರಶ್ನಿಸುವುದು.. ತಮ್ಮ ಮಗುವಿನ ಸಾಧನೆ, ದೌರ್ಬಲ್ಯಗಳ ಕುರಿತು, ತಮಗಿರುವ ಸಂದೇಹಗಳ ಕುರಿತು ಪೋಷಕರು ಈ ಕೆಳಗೆ ಉಲ್ಲೇಖಿಸಿರುವ ಒಂದಿಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡು ಅವುಗಳಿಗೆ ಶಿಕ್ಷಕರಿಂದ ವಸ್ತುನಿಷ್ಠ ಉತ್ತರ ಪಡೆಯಬೇಕು.

* ಮಗುವಿನ ಶೈಕ್ಷಣಿಕ ಸಾಧನೆ ಹಾಗೂ ದೌರ್ಬಲ್ಯಗಳೇನು?
* ಮಗುವಿನ ಓದುವಿಕೆ, ಬರೆಯುವಿಕೆ ಹಾಗೂ ಗ್ರಹಿಸುವಿಕೆ ಹೇಗಿದೆ?
* ಕ್ರೀಡೆ, ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಗುವಿನ ಸಾಧನೆ ಏನು?, ತರಗತಿಯಲ್ಲಿ ಮಗುವಿನ ವರ್ತನೆ, ನೈತಿಕತೆ ಹೇಗಿದೆ?
* ಸಹಪಾಠಿಗಳು ಹಾಗೂ ಶಿಕ್ಷಕರೊಡನೆ ಮಗುವಿನ ಸಾಮಾಜಿಕ, ಭಾವನಾತ್ಮಕ ಸಂಬಂಧ ಹೇಗಿದೆ?
* ಪಠ್ಯಕ್ರಮ ಹಾಗೂ ಪರೀಕ್ಷಾ ಅಗತ್ಯಗಳಿಗೆ ಮಗುವಿನ ಸ್ಪಂದನೆ ಹೇಗಿದೆ?
* ಮನೆಗೆಲಸ ಹಾಗೂ ದತ್ತಕಾರ್ಯಗಳನ್ನು ಮಗು ಸಮಯಾನುಸಾರವಾಗಿ ಹಾಗೂ ತೃಪ್ತಿಕರವಾಗಿ ಮುಗಿಸುತ್ತಿದೆಯೇ?
* ಯಾವ ವಿಷಯ ಅಥವಾ ಕ್ಷೇತ್ರದಲ್ಲಿ ಮಗು ಸಮಸ್ಯೆ ಎದುರಿಸುತ್ತಿದೆ?
* ಬೋಧನೆ– ಕಲಿಕಾ ಪ್ರಕ್ರಿಯೆಯಲ್ಲಿ ಮಗುವಿನ ಪಾಲ್ಗೊಳ್ಳುವಿಕೆ ಹೇಗಿದೆ?
* ತರಗತಿಯಲ್ಲಿ ಮಗುವಿನ ಶೈಕ್ಷಣಿಕ, ಸಾಮಾಜಿಕ (Sociometri) ಸ್ಥಾನವೇನು?
* ಅವಧಾನ, ಆಸಕ್ತಿಗೆ ಕೇಂದ್ರೀಕರಣಕ್ಕೆ ಸಂಬಂಧಿಸಿ ಸಮಸ್ಯೆಗಳಿವೆಯೇ?
* ದೈಹಿಕ, ಆರೋಗ್ಯ ಸಂಬಂಧಿತ ಸಮಸ್ಯೆಗಳಿವೆಯೇ?
* ಮಗುವಿನ ಶಿಸ್ತು, ನಿಯಮಪಾಲನೆ, ಸಮಯಪಾಲನೆ ಸಮರ್ಪಕವಾಗಿದೆಯೇ?
* ಮನೆಯಲ್ಲಿ ನಾವು ಪೋಷಕರು ಮಗುವಿಗೆ ಮಾಡಬೇಕಾದ ಸಹಾಯವೇನು? ಮಗುವಿಗೆ ಸಂಬಂಧಿಸಿ, ಮತ್ತೇನಾದರೂ ವಿಶೇಷ, ಸಲಹೆ– ಸೂಚನೆಗಳಿವೆಯೇ?

ಶಿಕ್ಷಕರು ಏನು ಮಾಡಬೇಕು?
* ಶಿಕ್ಷಕರು ಸಭೆಗೆ ಅಗತ್ಯವಾದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರತಿ ಮಗುವಿನ ಪೋಷಕರ ಜತೆ ಚರ್ಚೆ ಅಗತ್ಯವಾಗಿರುವುದರಿಂದ ಪ್ರತಿ ಮಗುವಿನ ಕುರಿತು ವೈಯಕ್ತಿಕ ಕಾಳಜಿ ವಹಿಸಿ, ಆ ಮಗುವಿನ ಸಾಧನೆ, ದೌರ್ಬಲ್ಯ, ಗುಣಾವಗುಣಗಳನ್ನು ಗುರುತಿಸಿಕೊಂಡಿರಬೇಕು.

* ನಿಮ್ಮ ವಿದ್ಯಾರ್ಥಿ ‘ಪೋಷಕರ ಮಗು’ ಎಂಬುದನ್ನು ಮರೆಯಬಾರದು. ಪೋಷಕರೊಂದಿಗೆ ಸ್ನೇಹಭಾವದಿಂದ ವರ್ತಿಸಬೇಕು. ತಾಳ್ಮೆಯಿಂದ ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು. ಅವರ ಸಂದೇಹಗಳನ್ನು ಪರಿಹರಿಸಬೇಕು. ಯಾವುದೇ ಪೂರ್ವಾಗ್ರಹವಿಲ್ಲದೆ, ಮಗುವಿನ ಸಾಧನೆ, ದೌರ್ಬಲ್ಯ, ಗುಣಾವಗುಣಗಳನ್ನು ಪೋಷಕರೆದುರು ಬಿಚ್ಚಿಡಬೇಕು.

* ವಸ್ತುನಿಷ್ಠತೆಯ ಭರದಲ್ಲಿ ಪೋಷಕರ ಮನನೋಯುವಂತೆ, ಮಗುವಿನ ಕುರಿತು ಅವರ ವಿಶ್ವಾಸ ಕುಗ್ಗುವಂತೆ ‘ನಿಮ್ಮ ಮಗು ಸಮಸ್ಯಾತ್ಮಕವಾಗಿದೆ. ಅದನ್ನು ಸುಧಾರಿಸುವುದು ಸಾಧ್ಯವಿಲ್ಲ. ಎಲ್ಲದರಲ್ಲೂ ನಿಮ್ಮ ಮಗು ದಡ್ಡ’ ಎಂದು ಹೀಯಾಳಿಸಬಾರದು.

* ಮಗುವಿನ ಸಾಧನೆ, ವರ್ತನೆಯನ್ನು ಆಧರಿಸಿ ಅಥವಾ ಪೋಷಕರ ಸಾಮಾಜಿಕ, ಆರ್ಥಿಕ, ರಾಜಕೀಯ ಅಂತಸ್ತನ್ನು ಆಧರಿಸಿ, ಅವರನ್ನು ಹೊಗಳುವುದು ಅಥವಾ ತುಚ್ಛವಾಗಿ ಕಾಣುವುದು ಮಾಡಬಾರದು. ಎಲ್ಲ ಪೋಷಕರನ್ನೂ ಸಮಾನ ಗೌರವಾದರದಿಂದ ಕಾಣಬೇಕು.

ಮಗುವಿನ ವಿಕಾಸಕ್ಕೆ ಇಬ್ಬರ ಸಹಯೋಗ ಅಗತ್ಯ: ಮಗುವಿನ ಸರ್ವತೋಮುಖ ವಿಕಾಸಕ್ಕೆ ಶಿಕ್ಷಕ ಹಾಗೂ ಪೋಷಕರಿಬ್ಬರಲ್ಲಿ ಸಹಯೋಗ ಅಗತ್ಯವಾಗಿದೆ. ಸಭೆಯಲ್ಲಿ ಪಠ್ಯಕ್ರಮ, ಬೋಧನಾ ವಿಧಾನ, ಫಲಿತಾಂಶ ಕುರಿತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಇರುವ ಅತ್ಯಲ್ಪ ಅವಧಿಯಲ್ಲಿ ಮಗುವಿನ ವಿಕಾಸ ಕುರಿತು ಸೃಜನಾತ್ಮಕವಾಗಿ ಆಲೋಚಿಸಿ, ವಿಚಾರಗಳನ್ನು ಹಂಚಿಕೊಳ್ಳಬೇಕು. ಮೀಟಿಂಗ್‌ನಲ್ಲಿ ಮಗುವಿಗೂ ಮಾತನಾಡಲು ಅವಕಾಶ ಕೊಡಬೇಕು.

ಸಮಸ್ಯಗಳಿದ್ದರೆ ಏನು ಮಾಡಬೇಕು?: ಮನೆಯಲ್ಲಿ ಪೋಷಕರು ದೀರ್ಘಾವಧಿಯ ಅನಾರೋಗ್ಯಕ್ಕೆ ಈಡಾಗಿದ್ದರೆ, ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಈ ಮಗುವಿನತ್ತ ಹೆಚ್ಚಿನ ಗಮನವಹಿಸಲು ಸಾಧ್ಯವಾಗದಿದ್ದರೆ, ಪೋಷಕರು ವಿಚ್ಛೇದನ ತೆಗೆದುಕೊಂಡಿದ್ದರೆ, ಮಗು ಅನಾಥವಾಗಿದ್ದರೆ, ಮಗು ಪೋಷಕರ ಸುಪರ್ದಿಯಲ್ಲಿರದೆ ಸಂಬಂಧಿಕರ ಅಥವಾ ಪರಿಚಯದವರ ಮನೆಯಲ್ಲಿದ್ದರೆ ಈ ಕುರಿತು ಪೋಷಕರು/ಪಾಲಕರು ತಪ್ಪದೇ ಶಿಕ್ಷಕರಿಗೆ ಮಾಹಿತಿ ನೀಡಬೇಕು. ಇದರಿಂದ ಶಿಕ್ಷಕರು ಆ ಮಗುವಿನ ಕುರಿತು ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ.

‘ಮೋಬೈಲ್‌ ಮೀಟಿಂಗ್‌’ ಕೂಡ ಉಪಯುಕ್ತ
ಅಷ್ಟಕ್ಕೂ ಮೊಬೈಲ್‌ ಜತೆಗಿರುವ ಈ ಕಾಲದಲ್ಲಿ ಪೋಷಕರು ಹಾಗೂ ಶಿಕ್ಷಕರು ತಿಂಗಳ ಕೊನೆಯ ಮೀಟಿಂಗ್‌ಗೆ ಕಾಯಬೇಕಿಲ್ಲ. ಅಗತ್ಯ ಬಿದ್ದರೆ, ಒಂದು ಮೊಬೈಲ್ ಕರೆಯಲ್ಲಿಯೇ ‘ತುರ್ತು ಮಿಟಿಂಗ್’ ಮುಗಿಸಬಹುದು.

ತ್ರಿಕೋನಾತ್ಮಕ ಪ್ರಕ್ರಿಯೆ
‘ಪೋಷಕರ ಹಾಗೂ ಶಿಕ್ಷಕರ ಸಭೆ’ ‘ಶಿಕ್ಷಕ–ಮಗು–ಪೋಷಕ’ ಈ ಮೂವರ ತ್ರಿಕೋನಾತ್ಮಕ ಪ್ರಕ್ರಿಯೆ. ಇಲ್ಲಿ ಮಗುವಿನ ಸಮಸ್ಯೆಗಳು, ಸರ್ವತೋಮುಖ ವಿಕಾಸಕ್ಕೆ ಸಂಬಂಧಿಸಿ, ಶಿಕ್ಷಕರು ಹಾಗೂ ಪೋಷಕರು ಮುಕ್ತವಾಗಿ ಚರ್ಚಿಸಿ, ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ, ಅವುಗಳನ್ನು ಜಾರಿಗೆ ತರಲು ಶ್ರಮಿಸಬೇಕು.
– ಜೆನ್ನಿಫರ್ ರಾಜ್, ಮುಖ್ಯಶಿಕ್ಷಕಿ,
ಮರಿಮಲ್ಲಪ್ಪ ಆಂಗ್ಲ ಮಾಧ್ಯಮ
ಹಿರಿಯ ಪ್ರಾಥಮಿಕ ಶಾಲೆ, ಮೈಸೂರು


ಎಸ್‌ಡಿಎಂಸಿ ಪಾತ್ರ ಮಹತ್ವದ್ದು
ಸರ್ಕಾರಿ ಶಾಲೆಯಲ್ಲೂ ಸಮುದಾಯ ಹಾಗೂ ಪೋಷಕರನ್ನು ತೊಡಗಿಸಿ ಕೊಳ್ಳಲು ಎಸ್‌ಡಿಎಂಸಿಯನ್ನು ರಚಿಸಲಾಗಿದೆ. ಇದರ ಪದಾಧಿಕಾರಿ ಗಳು ಆಯಾ ಶಾಲೆಯ ಪೋಷಕರೇ ಆಗಿದ್ದು, ಅವರು ನಿಯಮಿತವಾಗಿ ತಮ್ಮ ಮಕ್ಕಳ ಅಧ್ಯಯನ ಮಾತ್ರವಲ್ಲದೆ, ಶಾಲೆಯ ಸಮಗ್ರ ವಿಕಾಸದ ಕುರಿತು ಚರ್ಚೆ ನಡೆಸಿ, ನಿರ್ಣಯ ಕೈಗೊಳ್ಳಲು ಅವಕಾಶವಿದೆ.
– ಅಜಿತ್‌ ಮನ್ನೀಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ,
ಮೂಡಲಗಿ ವಲಯ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT